ಆಹಾರ – ಜೀವನ ಶೈಲಿ ಹೀಗಿರಲಿ
ಇತ್ತೀಚಿನ ದಿನಗಳಲ್ಲಿ ಡಿಟಾಕ್ಸ್ ಪದದ ಬಳಕೆ ಎಲ್ಲೆಡೆ ಕೇಳಿ ಬರುತ್ತಿದೆ. ಜನತೆ ಆರೋಗ್ಯಕರ ಜೀವನ ಶೈಲಿಯನ್ನು ಪಾಲಿಸುತ್ತಿದ್ದಾರೆ. ಜಂಕ್ ಫುಡ್ ನಿಂದ ಆಗುವ ದುಷ್ಪರಿಣಾಮಗಳಿಂದ ಬದಲಾಗುತ್ತಿರುವ ಜೀವನ ಶೈಲಿಯಿಂದ ಜನರು ಎಚ್ಚೆತ್ತುಕೊಳ್ಳುತ್ತಿದ್ದಾರೆ. ಆರೋಗ್ಯದಿಂದಿರಲು ದಿನಾಲು ಒಳ್ಳೆಯ ಆಹಾರ – ವಿಹಾರ ಪಾಲಿಸುವುದರ ಜೊತೆಗೆ ಡಿಟಾಕ್ಸ್ ಮಾಡುವುದು ಕೂಡ ಮುಖ್ಯ. ಇದರ ಬಗ್ಗೆ ತಿಳಿದುಕೊಳ್ಳೋಣ.
ಡಿಟಾಕ್ಸ್ ಎಂದರೇನು ?
ನಮ್ಮ ದಿನನಿತ್ಯದ ಆಹಾರ ಪದ್ಧತಿ, ಜೀವನ ಶೈಲಿಯಿಂದ ಸಾಕಷ್ಟು ಹಾನಿಕಾರಕ ಅಂಶಗಳು ನಮ್ಮ ದೇಹದಲ್ಲಿ ಸೇರಿರುತ್ತದೆ. ನಮ್ಮ ಮನಸ್ಸಿನಲ್ಲಿ ಆಗುವ ಋಣಾತ್ಮಕ ಚಿಂತನೆಗಳು ಇದೆಲ್ಲವನ್ನು ಹೊರಹಾಕುವ ಪ್ರಕ್ರಿಯೆಯನ್ನು ಡಿಟಾಕ್ಸ್ ಅಥವಾ ದೇಹ ಹಾಗೂ ಮನಸ್ಸು ಶುದ್ಧೀಕರಿಸುವ ಪ್ರಕ್ರಿಯೆ ಎಂದು ಕರೆಯುತ್ತಾರೆ.

ದೇಹದ ಡಿಟಾಕ್ಸ್ ಹೇಗೆ ಮಾಡುವುದು ?
ದಿನಾಲು ಬಿಸಿಯಾದ, ಶುಚಿಯಾದ ಸುಪಾಚ್ಯ ಆಹಾರವನ್ನು ಸೇವಿಸಿ. ಹಾಲು, ಬೆಣ್ಣೆ, ಮೊಸರು, ಮಜ್ಜಿಗೆ, ಹಣ್ಣು, ತರಕಾರಿ ಋತುಗಳ ತಕ್ಕಂತೆ ಆಹಾರವನ್ನು ಸೇವಿಸುವುದು, ಅಕ್ಕಿ, ಬಾರ್ಲಿ, ಹೆಸರುಬೇಳೆ, ವಿವಿಧ ಕಾಳುಗಳು, ಶುಂಠಿ, ಅರಿಶಿನ, ಕರಿಮೆಣಸು, ಚಕ್ಕೆ ಉಪಯೋಗಿಸುವುದು, ಜೀರಿಗೆ, ಕೊತ್ತಂಬರಿ, ಮೆಂತೆ ಯಾವುದಾದರೂ ಒಂದನ್ನು ರಾತ್ರಿ ನೀರಿನಲ್ಲಿ ನೆನೆಸಿ ಮರುದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ದೇಹ ಶದ್ಧಿಯಾಗುವುದು. ನೆಲ್ಲಿಕಾಯಿ, ತ್ರಿಫಲ, ಗಿಡಮೂಲಿಕೆಗಳಿಂದ ತಯಾರಿಸಿದ ಚಹಾ ಅಥವಾ ಕಷಾಯ ದೇಹಕ್ಕೆ ಹಿತಕರ.
ಏನು ಸೇವಿಸಬಾರದು ?
ಜಂಕ್ ಫುಡ್, ಫ್ರಿಜ್ಜಿನಲ್ಲಿ ಇಟ್ಟ ಆಹಾರ, ಸಕ್ಕರೆ, ಮೈದಾ ಸೇವಿಸದೇ ಇರುವುದು ಒಳ್ಳೆಯದು. ಹೊಟ್ಟೆ ತುಂಬ ಊಟ ಮಾಡುವುದು, ಹಿಂದಿನ ಊಟ ಜೀರ್ಣವಾಗದೇ ಪುನಃ ಊಟ ಮಾಡುವುದು, ಹಸಿಯದೇ ಇದ್ದಾಗ ಆಹಾರ ಸೇವಿಸುವುದು ಹಿತಕರವಲ್ಲ. ವಾರಕ್ಕೊಮ್ಮೆ ಉಪವಾಸ ದೇಹವನ್ನು ಶುದ್ಧ ಮಾಡುತ್ತದೆ. ಆಯುರ್ವೇದ ವೈದ್ಯರ ಸಲಹೆಯಂತೆ ಋತುಗಳ ಅನುಸಾರ ಪಂಚಕರ್ಮ ಮಾಡಿಸುವುದು ಉತ್ತಮ.
ಜೀವನಶೈಲಿಯಲ್ಲಿ ಬದಲಾವಣೆ
ಸೂರ್ಯೋದಯಕ್ಕಿಂತ ಬೇಗ ಎದ್ದು ದಿನಿತ್ಯ ವ್ಯಾಯಾಮ, ಯೋಗಾಸನ, ಪ್ರಕೃತಿಯಲ್ಲಿ ನಡಿಗೆ, ನೃತ್ಯ, ಪ್ರಾಣಾಯಾಮ, ಅಭ್ಯಂಗ ಸ್ನಾನ ಮಾಡುವುದು ಉತ್ತಮ. ದೇಹಕ್ಕೆ ಒಳ್ಳೆಯ ನಿದ್ದೆ ಕೂಡ ಅವಶ್ಯಕ.
ಅಂಗ ಶುದ್ಧೀಕರಣ
ಯಕೃತ್ ಶುದ್ಧಿಗೆ ಜಿಡ್ಡಿನ ಪದಾರ್ಥ ಕಡಿಮೆ ಮಾಡುವುದು, ಹಸಿರು ತರಕಾರಿ, ಕಹಿ ಆಹಾರ ಸೇವಿಸುವುದು. ಮೂತ್ರಪಿಂಡ ಶುದ್ಧಿಗಾಗಿ ಸಾಕಷ್ಟು ನೀರು ಕುಡಿಯವುದು ಒಳ್ಳೆಯದು. ಕರುಳ ಶುದ್ದಿಗೆ ವಾರಕ್ಕೊಮ್ಮೆ ಉಪವಾಸ, ಅಧಿಕ ತಿನ್ನದೇ ಇರುವುದು, ಆಹಾರ ಕ್ರಮವನ್ನು ಪಾಲಿಸುವುದು ಅವಶ್ಯಕ. ಶ್ವಾಸಕೋಶದ ಶುದ್ಧಿಗೆ ಆಹಾರದಲ್ಲಿ ಅರಿಶಿನ ಸೇವನೆ, ಪ್ರಾಣಾಯಾಮ ಮಾಡುವುದು ಹಿತಕರ. ಮನಸ್ಸು ಶುದ್ಧಿಗೆ ಪ್ರಾಣಯಾಮ, ಧ್ಯಾನ, ಪ್ರಕೃತಿಯಲ್ಲಿ ನಡಿಗೆ, ಡಿಜಿಟಲ್ ಮಾಧ್ಯಮಗಳಿಂದ ದೂರವಿರುವುದು ಜ್ಞಾನೇಂದ್ರಿಯಗಳ ಹಿತ ಬಳಕೆ. ಡಿಟಾಕ್ಸ್ ದೊಡ್ಡ ವಿಷಯವೇನಲ್ಲ, ಆದರೆ ಅತಿ ಅವಶ್ಯಕ.






















