ಸಂತ್ರಸ್ತೆ ಮಾಡುತ್ತಿರುವ ಆರೋಪ ಸುಳ್ಳು ಎಂದ ಸಹೋದರಿ !
ಮೂಡಬಿದಿರೆ : ಪೊಲೀಸ್ ಠಾಣೆಗೆ ದೂರು ಕೊಡಲು ಬಂದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊತ್ತಿರುವ ಮೂಡಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ವಿರುದ್ಧ ರಾಜ್ಯ ಮಹಿಳಾ ಆಯೋಗದಲ್ಲಿ ಸುಮೋಟೋ ಕೇಸ್ ದಾಖಲಾಗಿದೆ. ಸುಮೋಟೋ ಕೇಸ್ ದಾಖಲಿಸಿ ಮಂಗಳೂರು ಕಮೀಷನರ್ಗೆ ಪತ್ರ ಬರೆದಿರುವ ರಾಜ್ಯ ಮಹಿಳಾ ಆಯೋಗ ಎರಡು ವಾರದಲ್ಲಿ ವರದಿ ನೀಡುವಂತೆ ಸೂಚನೆ ನೀಡಿದೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ, ಸಂತ್ರಸ್ತೆ ಈ ಹಿಂದೆ ಜೂನ್ನಲ್ಲಿ ದೂರು ಕೊಟ್ಟಿದ್ದರು. ಅದರ ಪ್ರಕಾರ ಎಸ್ಪಿ ಅವರಿಗೆ ಪತ್ರ ಬರೆಯಲಾಗಿತ್ತು. ಅವರು ಸಾಕ್ಷ್ಯ ಇಲ್ಲ ಎಂದಿದ್ದರು ಆದರೆ, ಈಗ ಮತ್ತಷ್ಟು ಸಂತ್ರಸ್ತೆಯರು ಇದ್ದಾರೆ ಅಂತ ಗೊತ್ತಾಗ್ತಾ ಇದೆ. ಈ ಬಗ್ಗೆಯೂ ಎಸ್ಪಿ ಹಾಗೂ ಕಮೀಷನರ್ಗೆ ವರದಿ ಕೇಳಲಾಗಿದೆ. ಜೊತೆಗೆ ಇನ್ಸ್‌ಪೆಕ್ಟರ್ ವಿರುದ್ಧ ಏನು ಕ್ರಮ ಆಗಿದೆ ಎಂದು ಸಹ ಕೇಳಿದ್ದೇನೆ. ಮುಂದೆ ಏನು ವರದಿ ಕೊಡ್ತಾರೆ ಎಂದು ನೋಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಲೈಂಗಿಕ ಕಿರುಕುಳ ಆರೋಪ ಬಂದ ಹಿನ್ನೆಲೆ ಮಂಗಳೂರು ಉತ್ತರ ಎಸಿಪಿ ಕಚೇರಿಯಲ್ಲಿ ಸಂದೇಶ್ ಪಿ.ಜಿ ವಿಚಾರಣೆ ನಡೆಸಲಾಗಿದೆ. ಮಂಗಳೂರು ನಗರ ಉತ್ತರ ಎಸಿಪಿ ಶ್ರೀಕಾಂತ್ ಅವರು ವಿಚಾರಣೆ ನಡೆಸಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಮಂಗಳೂರು ಕಮೀಷನರ್ ಸೂಚನೆ ನೀಡಿದ್ದು, ಸುಮಾರು ಎರಡು ಗಂಟೆಗೂ ಹೆಚ್ಚು ಹೊತ್ತು ವಿಚಾರಣೆ ನಡೆಸಲಾಗಿದೆ.
ಆರೋಪ ಸುಳ್ಳು ಎಂದ ಸಂತ್ರಸ್ತೆ ಸಹೋದರಿ
ಸಂತ್ರಸ್ತೆ ಮಾಡಿರುವ ಆರೋಪ ಸುಳ್ಳು ಎಂದು ಸಂತ್ರಸ್ತೆಯ ಸಹೋದರಿ ಆರೋಪಿಸಿದ್ದು, ಈ ಮೂಲಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇನ್ಸ್‌ಪೆಕ್ಟರ್‌ನನ್ನು ಕೆಲಸದಿಂದ ತೆಗಿಸಲು ಈ ರೀತಿ ಮಾಡುತ್ತಿದ್ದಾಳೆ. ಇನ್ಸ್‌ಪೆಕ್ಟರ್ ಸಂದೇಶ್ ಮೊದಲು ಪರಿಚಯ ಇರಲಿಲ್ಲ, ಸ್ಟೇಷನ್ನಲ್ಲಿ ಹೋದಾಗಲೇ ಮಾತನಾಡಿರೋದು, ಕೌಟುಂಬಿಕ ಕಲಹದ ವಿಚಾರದಲ್ಲಿ ನಾನು ದೂರು ಕೊಟ್ಟಿದ್ದು. ಆಕೆ ಈ ವಿಚಾರದಲ್ಲಿ ಪ್ರವೇಶ ಮಾಡುವ ಅವಶ್ಯಕತೆ ಇರಲಿಲ್ಲ, ನನ್ನ ಗಂಡ ಮತ್ತು ಮಗನನ್ನು ಸಂತ್ರಸ್ತೆ ಮನೆಯಿಂದ ಕರೆದುಕೊಂಡು ಬರುವಂತೆ ದೂರು ನೀಡಿದ್ದೆ, ನನ್ನ ತಾಯಿಯನ್ನು ನೋಡೊಕೆ ಹೋದ ನನ್ನ ಗಂಡ ಮತ್ತು ಮಗನನ್ನು ವಾಪಸು ಬರೋದಕ್ಕೆ ಬಿಟ್ಟಿಲ್ಲ, ನನ್ನ ಗಂಡ, ಮಗ ಬೇಕು ಅಂತಾ ದೂರು ಕೊಟ್ಟಿದ್ದು ತಪ್ಪಾ.? ಎಂದು ಪ್ರಶ್ನಿಸಿದರು.



















