ನಾಳೆಯಿಂದ ಎಸ್ಸೆಸೆಲ್ಸಿ ಪರೀಕ್ಷೆ : ಕಾರ್ಕಳದ 2760 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ

ಕಾರ್ಕಳ : ರಾಜ್ಯಾದ್ಯಂತ ನಾಳೆಯಿಂದ (ಮಾ. 18) ಏಪ್ರಿಲ್ 2ರವರೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯಲಿದ್ದು, ಕಾರ್ಕಳ-ಹೆಬ್ರಿ ತಾಲೂಕಿನ 29 ಸರಕಾರಿ ಪ್ರೌಢಶಾಲೆಗಳು, 12 ಅನುದಾನಿತ, 16 ಅನುದಾನ ರಹಿತ ಸೇರಿದಂತೆ 57 ಪ್ರೌಢಶಾಲೆಗಳ ಒಟ್ಟು 2760 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

2760 ವಿದ್ಯಾರ್ಥಿಗಳಲ್ಲಿ 1442 ವಿದ್ಯಾರ್ಥಿಗಳು ಮತ್ತು 1318 ವಿದ್ಯಾರ್ಥಿನಿಯರಿದ್ದಾರೆ. ಇವರಲ್ಲಿ 2654 ವಿದ್ಯಾರ್ಥಿಗಳು ಮೊದಲ ಬಾರಿ ಪರೀಕ್ಷೆ ಬರೆಯುವ (ಫ್ರೆಶರ್ಸ್) ರಾಗಿದ್ದಾರೆ. 46 ಮಂದಿ ವಿದ್ಯಾರ್ಥಿಗಳು ಪುನರಾವರ್ತಿತರಾಗಿದ್ದಾರೆ. 49 ವಿದ್ಯಾರ್ಥಿಗಳು ಖಾಸಗಿ ಪರೀಕ್ಷೆ ಬರೆಯುವವರಿದ್ದು, 11 ಮಂದಿ ಖಾಸಗಿ ಪುನರಾವರ್ತಿತರಿದ್ದಾರೆ. ‌

9 ಪರೀಕ್ಷಾ ಕೇಂದ್ರಗಳು
ಸ.ಪ.ಪೂ.ಕಾ. ಕಾರ್ಕಳ – 297 ವಿದ್ಯಾರ್ಥಿಗಳು, ಎಸ್‌ವಿಟಿ ಬಾಲಿಕಾ ಪ.ಪೂ.ಕಾ. ಕಾರ್ಕಳ – 313 ವಿದ್ಯಾರ್ಥಿಗಳು, ಶ್ರೀಮದ್‌ ಭುವನೇಂದ್ರ ಫ್ರೌಢಶಾಲೆ – 238 ವಿದ್ಯಾರ್ಥಿಗಳು, ಸುಂದರ ಪುರಾಣಿಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ – 288 ವಿದ್ಯಾರ್ಥಿಗಳು, ಸ.ಪ.ಪೂ.ಕಾ. ಹೆಬ್ರಿ – 439 ವಿದ್ಯಾರ್ಥಿಗಳು, ಸ.ಪ.ಪೂ.ಕಾ. ಬೈಲೂರು – 347 ವಿದ್ಯಾರ್ಥಿಗಳು, ಸ.ಪ.ಪೂ.ಕಾಲೇಜು ಬಜಗೋಳಿ – 299 ವಿದ್ಯಾರ್ಥಿಗಳು, ಸ.ಪ.ಪೂ.ಕಾಲೇಜು ಬೆಳ್ಮಣ್‌ – 280 ವಿದ್ಯಾರ್ಥಿಗಳು, ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಮುನಿಯಾಲು – 286 ವಿದ್ಯಾರ್ಥಿಗಳು ಸೇರಿದಂತೆ ಉಭಯ ತಾಲೂಕಿನಾದ್ಯಂತ 9 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಪೂರ್ವಸಿದ್ಧತೆ
ಈ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಇಲಾಖಾ ಅಧಿಕಾರಿಗಳಿಂದ ಸಿಸಿ ಕ್ಯಾಮರಾ ಅಳವಡಿಕೆ ಸೇರಿದಂತೆ ಮೂಲಭೂತ ಸೌಕರ್ಯಗಳ ಕುರಿತು ಪರೀಶೀಲನೆ ನಡೆಸಲಾಗಿದೆ. ಇನ್ನು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ಸೂಚನೆಯಂತೆ ತಾಲೂಕಿನ ಎಲ್ಲ ಶಾಲೆಗಳಲ್ಲಿ ಅಂತಿಮ ಪರೀಕ್ಷೆಗೆ ಬೇಕಾದ ಸಿದ್ಧತೆಗಳನ್ನು ಕಳೆದ ಒಂದು ವರ್ಷದಿಂದ ನಡೆಸಲಾಗಿದೆ. ವಿದ್ಯಾರ್ಥಿಗಳಲ್ಲಿ ಕಲಿಯುವ ಸಾಮರ್ಥ್ಯ ಹೆಚ್ಚಿಸಲು ಇಲಾಖೆಯ ಆದೇಶದಂತೆ ಮನೆ ಮನೆ ಭೇಟಿ ನೀಡಿ ಕಲಿಯುವ ವಾತಾವರಣ ಪರಿಶೀಲನೆ, ಶಾಲೆಯಲ್ಲಿ ವಿಷಯವಾರು ಗುಂಪು – ವಿಶೇಷ ಬೋಧನೆ, ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ, ಮೂರು ಪ್ರಿಪರೇಟರಿ ಪರೀಕ್ಷೆ ಸೇರಿದಂತೆ ಹಲವಾರು ಕ್ರಮಗಳನ್ನು ಕಾರ್ಕಳ ತಾಲೂಕಿನಾದ್ಯಂತ ಮಾಡಲಾಗಿದೆ.

ಉತ್ತಮ ಫಲಿತಾಂಶದ ನಿರೀಕ್ಷೆ
ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಉತ್ತಮ ರೀತಿಯಲ್ಲಿ ಪರೀಕ್ಷಾ ಪೂರ್ವಸಿದ್ಧತೆಗಳನ್ನು ನಡೆಸಲಾಗಿದೆ. ಕಳೆದ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಾರ್ಕಳ ತಾಲೂಕು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿತ್ತು. ಈ ಬಾರಿ ಅದಕ್ಕಿಂತ ಉತ್ತಮ ಫಲಿತಾಂಶದ ನಿರೀಕ್ಷೆಯಲಿದ್ದೇವೆ.|
-ಗಿರಿಜಮ್ಮ
ಕ್ಷೇತ್ರ ಶಿಕ್ಷಣಾಧಿಕಾರಿ

ಸಹಾಯವಾಣಿ
ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು, ಪೋಷಕರಲ್ಲಿರುವ ಯಾವುದೇ ಸಂದೇಹ, ಗೊಂದಲ, ಆತಂಕ ಪರಿಹರಿಸಲು ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿ ಸಹಾಯವಾಣಿಯನ್ನು ಪ್ರಾರಂಭಿಸಿದ್ದು, ಎಸ್.ಎಸ್.ಎಲ್.ಸಿ. ಪರೀಕ್ಷೆ ಕುರಿತಾದ ಯಾವುದೇ ಗೊಂದಲ ಮಾಹಿತಿಗೆ 080 -23310075/76 ಅಥವಾ 9480695373 (ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಕಾರ್ಕಳ)ಸಂಪರ್ಕಿಸಬಹುದಾಗಿದೆ.

ವೇಳಾಪಟ್ಟಿ
ಮಾರ್ಚ್ 18: ಪ್ರಥಮ ಭಾಷೆ
ಮಾರ್ಚ್ 23: ವಿಜ್ಞಾನ
ಮಾರ್ಚ್ 25: ದ್ವಿತೀಯ ಭಾಷೆ
ಮಾರ್ಚ್ 28: ಗಣಿತ
ಮಾರ್ಚ್ 30: ತೃತೀಯ ಭಾಷೆ
ಏಪ್ರಿಲ್ 02: ಸಮಾಜ ವಿಜ್ಞಾನ































































































error: Content is protected !!
Scroll to Top