13 ವರ್ಷಗಳಿಂದ ಕೋಮಾದಲ್ಲಿದ್ದ ವ್ಯಕ್ತಿಗೆ ದಯಾಮರಣ – ಸುಪ್ರೀಂ ಐತಿಹಾಸಿಕ ತೀರ್ಪು

ದೆಹಲಿ : 13 ವರ್ಷಗಳಿಂದ ಕೋಮಾದಲ್ಲಿದ್ದ 31 ವರ್ಷದ ವ್ಯಕ್ತಿಗೆ ದಯಾಮರಣ ನೀಡಲು ಸುಪ್ರೀಂ ಕೋರ್ಟ್‌ ಒಪ್ಪಿಗೆ ನೀಡುವ ಮೂಲಕ ಐತಿಹಾಸಿಕ ತೀರ್ಪು ನೀಡಿದೆ.

ಬರೋಬ್ಬರಿ 13 ವರ್ಷಗಳಿಂದ ಯಾವುದೇ ಚೇತರಿಕೆಯಿಲ್ಲದೆ, ಕೋಮಾ ಸ್ಥಿತಿಯಲ್ಲಿರುವ ತನ್ನ ಮಗನಿಗೆ ದಯಾಮರಣಕ್ಕೆ ಅನುಮತಿ ನೀಡುವಂತೆ ಕೋರಿ ಪೋಷಕರು ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠ ಬುಧವಾರ(ಮಾ.11) ಘನತೆಯಿಂದ ಸಾಯುವ ಮೂಲಭೂತ ಹಕ್ಕನ್ನು ಗುರುತಿಸುವ 2018 ರ ಕಾಮನ್ ಕಾಸ್ ತೀರ್ಪಿನ ( 2023 ರಲ್ಲಿ ಮಾರ್ಪಡಿಸಿದ) ಕಾಯ್ದೆ ಅಡಿ ಮೊದಲ ಬಾರಿಗೆ ವ್ಯಕ್ತಿಯೊಬ್ಬರಿಗೆ ದಯಾಮರಣ ನೀಡಲು ತೀರ್ಪು ನೀಡಿದೆ.

ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಹರೀಶ್ ರಾಣಾ 2013 ರಲ್ಲಿ ಪೇಯಿಂಗ್ ಗೆಸ್ಟ್‌ನ ನಾಲ್ಕನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಈ ದುರಂತದಿಂದಾಗಿ ಆತನ ಮೆದುಳಿಗೆ ಗಾಯವಾಗಿ, ಆತ 100% ಕ್ವಾಡ್ರಾಪ್ಲೆಜಿಯಾದಿಂದಾಗಿ ಕೋಮಾ ಸ್ಥಿತಿಗೆ ಹೋಗಿದ್ದರು. ಬರೋಬ್ಬರಿ 13 ವರ್ಷಗಳಿಂದ ಈತನ ಸ್ಥಿತಿಯಲ್ಲಿ ಯಾವುದೇ ಸುಧಾರಣೆಗಳು ಕಾಣದೆ ಇದ್ದು, ಶಸ್ತ್ರಚಿಕಿತ್ಸೆಯ ಮೂಲಕ ಸ್ಥಾಪಿಸಲಾದ PEG ಟ್ಯೂಬ್‌ಗಳ ಮೂಲಕ ನೀಡಲಾಗುವ ಕ್ಲಿನಿಕಲಿ ಅಡ್ಮಿನಿಸ್ಟರಿಡ್ ನ್ಯೂಟ್ರಿಷನ್ (CAN) ನಿಂದ ಮಾತ್ರ ಆತನ ಜೀವ ಉಳಿದಿದೆ ಎಂದು ಪೋಷಕರು ತಿಳಿಸಿದ್ದಾರೆ.

ಇದರಿಂದಾಗಿ ಪೋಷಕರು 2024ರಲ್ಲಿ ದೆಹಲಿ ಹೈಕೋರ್ಟ್‌ಗೆ ಹೋಗಿ ನಿಷ್ಕ್ರಿಯ ದಯಾಮರಣಕ್ಕೆ ಅನುಮತಿ ಕೋರಿದರು. ಅರ್ಜಿದಾರರು ಮಾರಕ ಅನಾರೋಗ್ಯದಿಂದ ಬಳಲುತ್ತಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತ್ತು. ಹಾಗಾಗಿ ಪೋಷಕರು ಸುಪ್ರೀಂ ಕೋರ್ಟ್‌ ಮೇಟ್ಟಿಲೇರಿದ್ದರು, ಆದಾಗ್ಯೂ, ಆಗಸ್ಟ್ 2024 ರಲ್ಲಿ ಸುಪ್ರೀಂ ಕೋರ್ಟ್ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ನಿರಾಕರಿಸಿದ್ದು, ಅರ್ಜಿದಾರರ ಚಿಕಿತ್ಸೆಯ ವೆಚ್ಚವನ್ನು ಭರಿಸುವಂತೆ ಉತ್ತರ ಪ್ರದೇಶ ರಾಜ್ಯಕ್ಕೆ ನಿರ್ದೇಶನ ನೀಡಿತ್ತು. ಇದರಿಂದಾಗಿ 2025ರಲ್ಲಿ ಮತ್ತೆ ಅರ್ಜಿದಾರರು ರೋಗಿಯ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಸುಧಾರಣೆಗೆ ಯಾವುದೇ ಅವಕಾಶವಿಲ್ಲ ಎಂದು ಸಾಬೀತು ಪಡಿಸಲುಬೇಕಾದ ವಿವಿಧ ಅರ್ಜಿಗಳನ್ನು ನೀಡಿದ್ದರು.

ಇದರಿಂದಾಗಿ ಸುಪ್ರಿಂ ಕೋರ್ಟ್‌ ಕೋಮಾದಲ್ಲಿರುವ ವ್ಯಕ್ತಿಗೆ ಸಂಬಂಧಿಸಿದ ಆರೋಗ್ಯವನ್ನು ಪರೀಕ್ಷಿಸಲು ಪ್ರಾಥಮಿಕ ವೈದ್ಯಕೀಯ ಮಂಡಳಿಯನ್ನು ರಚಿಸುವಂತೆ ನಿರ್ದೇಶಿಸಿತ್ತು. ಈ ಮಂಡಳಿಯ ವರದಿ ಕೋಮಾದಲ್ಲಿರುವ ವ್ಯಕ್ತಿ ಚೇತರಿಸಿಕೊಳ್ಳುವ ಸಾಧ್ಯತೆಗಳು ತೀರಾ ಕಡಿಮೆಯಿದ್ದು, ಉಸಿರಾಟಕ್ಕಾಗಿ ಟ್ರಾಕಿಯೊಸ್ಟೊಮಿ ಟ್ಯೂಬ್ ಮತ್ತು ಆಹಾರಕ್ಕಾಗಿ ಗ್ಯಾಸ್ಟ್ರೋಸ್ಟೊಮಿಯೊಂದಿಗೆ ಹಾಸಿಗೆಯ ಮೇಲೆ ಮಲಗಿದ್ದಾನೆ. ಅಲ್ಲದೆ, ಇದರಿಂದಾಗಿ ಆತನಿಗೆ ಹುಣ್ಣುಗಳು ಸಹ ಆಗಿವೆ ಎಂದು ವರದಿ ನೀಡಿದ್ದರು.

ಇದಾದ ಬಳಿಕ ನ್ಯಾಯಾಲಯ ಮತ್ತೆ ಈ ವ್ಯಕ್ತಿಯ ಆರೋಗ್ಯವನ್ನು ಮರುಪರಿಶೀಲನೆ ಮಾಡುವಂತೆ ಏಮ್ಸ್‌ ರಚಿಸಿದ ಸೆಕೆಂಡರಿ ಮೆಡಿಕಲ್ ಬೋರ್ಡ್‌ಗೆ ಆದೇಶ ನೀಡಿತ್ತು. ಈ ವರದಿಯು ಅದೇ ಉತ್ತರವನ್ನು ನೀಡಿದ್ದು, ಇದನ್ನು ಪರಿಶೀಲಿಸಿದ ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯಪೀಠ ದಯಾಮರಣಕ್ಕೆ ಅನುಮತಿ ನೀಡಿ ಮಹತ್ತರ ತೀರ್ಪು ಹೊರಡಿಸಿದೆ. ಅಲ್ಲದೆ, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಸಮಗ್ರ ಕಾನೂನನ್ನು ತರಬೇಕೆಂದು ಶಿಫಾರಸು ಮಾಡಿದೆ.

ಅಲ್ಲದೆ, ಪ್ರಾಥಮಿಕ ಮತ್ತು ಮಾಧ್ಯಮಿಕ ಮಂಡಳಿಗಳು ಜೀವರಕ್ಷಕ ಸಾಧನಗಳನ್ನು ಹಿಂತೆಗೆದುಕೊಳ್ಳುವುದನ್ನು ಪ್ರಮಾಣೀಕರಿಸಿದಾಗ, ನ್ಯಾಯಾಲಯದ ಹಸ್ತಕ್ಷೇಪದ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಆದಾಗ್ಯೂ, ಇದು ಮೊದಲ ನಿದರ್ಶನವಾಗಿದ್ದು, ಈ ಪ್ರಕ್ರಿಯೆಯನ್ನು ಮಾಡುವಾಗ ಜೀವರಕ್ಷಕ ಸಾಧನಗಳನ್ನು ಹಿಂತೆಗೆದುಕೊಳ್ಳುವುದನ್ನು ಗೌರವಯುತ ರೀತಿಯಲ್ಲಿ ಮಾಡಬೇಕು ಎಂದು ನ್ಯಾಯಾಲಯ ಹೇಳಿದ್ದು, ಇದಕ್ಕೆ ಕೆಲ ನಿರ್ದೇಶನಗಳನ್ನು ಸಹ ನೀಡಿದೆ.

ರೋಗಿಗೆ ನೀಡಲಾಗುವ CAN ಸೇರಿದಂತೆ ವೈದ್ಯಕೀಯ ಚಿಕಿತ್ಸೆಯನ್ನು ಹಿಂಪಡೆಯಲಾಗುತ್ತದೆ ಅಥವಾ ತಡೆಹಿಡಿಯಲಾಗುತ್ತದೆ. 30 ದಿನಗಳ ಮರುಪರಿಶೀಲನಾ ಅವಧಿಯನ್ನು ಮನ್ನಾ ಮಾಡಲಾಗಿದೆ.
AIIMS ರೋಗಿಗೆ ತನ್ನ ಉಪಶಾಮಕ ಆರೈಕೆ ಕೇಂದ್ರಕ್ಕೆ ಪ್ರವೇಶವನ್ನು ನೀಡಿ, ಜೀವರಕ್ಷಕಗಳನ್ನು ತೆಗೆಯುವ ಪ್ರಕ್ರಿಯೆ ಸರಾಗವಾಗಿ ಜಾರಿಯಾಗುವಂತೆ ಮಾಡಬೇಕು, ಮತ್ತು ಇದಕ್ಕೂ ಮುನ್ನ ಅರ್ಜಿದಾರರನ್ನು ನಿವಾಸದಿಂದ ಉಪಶಾಮಕ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಲು AIIMS ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು.
ಘನತೆಯನ್ನು ಕಾಪಾಡಿಕೊಳ್ಳಲು ಸೂಕ್ತವಾದ ಯೋಜನೆಯೊಂದಿಗೆ ಜೀವಾಧಾರಕವನ್ನು ಹಿಂತೆಗೆದುಕೊಳ್ಳಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂಬುದು ಸೇರಿದಂತೆ ಕೆಲ ಸೂಚನೆಗಳನ್ನು ನೀಡಿದೆ.







































































































error: Content is protected !!
Scroll to Top