ಅಲ್ಪಾಯುಷಿಯಾದರೂ ಜಗತ್ತನ್ನು ಬೆಳಗಿದ ಲೆಜೆಂಡಗಳು!
ಹಿಂದಿಯಲ್ಲಿ ಅಮೂಲ್ಯವಾದ ಕವಿತೆಗಳನ್ನು, ಶಾಯರಿಗಳನ್ನು ಬರೆದಿರುವ ಖ್ಯಾತ ಸಾಹಿತಿ ಗುಲ್ಜಾರ್ ಅವರು ನೂರಾರು ಹಿಂದೀ ಸಿನೆಮಾಗಳಿಗೆ ಅದ್ಭುತ ಸಂಭಾಷಣೆಗಳನ್ನು ಬರೆದಿದ್ದಾರೆ. ಆ ಸಂಭಾಷಣೆಗಳ ಮೂಲಕ ಅವರು ಶ್ರೇಷ್ಠವಾದ ಜೀವನ ಮೌಲ್ಯಗಳನ್ನು ವಿಶ್ವಕ್ಕೆ ಪರಿಚಯ ಮಾಡಿದ್ದಾರೆ. ಅವರು 70ರ ದಶಕದ ಬೆಸ್ಟ್ ಹಿಂದಿ ಸಿನೆಮಾ ಆನಂದನಲ್ಲಿ ಬರೆದ ಒಂದು ಸಾಲು ನನಗೆ ತುಂಬಾ ಪ್ರೇರಣೆ ಕೊಟ್ಟಿದೆ.
ಜಿಂದಗೀ ಬಡೀ ಹೊನಿ ಚಾಹಿಯೇ, ಲಂಬಿ ನಹೀ…
ಬದುಕು ದೊಡ್ಡದಾಗಿರಬೇಕು, ದೀರ್ಘವಾಗಿ ಅಲ್ಲ ಎಂಬುದು ಇದರ ಅರ್ಥ. ಬದುಕು ಚಿಕ್ಕದಾದರೂ ಪರವಾಗಿಲ್ಲ, ಆದರೆ ಬದುಕಿನ ಒಂದೊಂದು ಕ್ಷಣವನ್ನೂ ಆನಂದಿಸಲು ನಮಗೆ ಸಾಧ್ಯವಾಗಬೇಕು ಎನ್ನುವುದು ಆಶಯ. ಸಾವು ಯಾವಾಗ ಬೇಕಾದರೂ ನಮ್ಮ ಬದುಕನ್ನು ಕೊನೆಗೊಳಿಸಬಹುದು. ಆದರೆ ಅದಕ್ಕಾಗಿ ಆತಂಕ ಮಾಡಿಕೊಳ್ಳದೆ ಸಾವನ್ನೂ ನಗುಮುಖದಲ್ಲಿ ಸ್ವಾಗತಿಸಿ ಸಂಭ್ರಮಿಸಲು ಸಾಧ್ಯವಾದರೆ ಆ ಬದುಕು ನಿಜವಾಗಿಯೂ ಸಾರ್ಥಕವಾಗುತ್ತದೆ.

ಸತ್ತ ಮೇಲೆ ಸಮಾಧಿಯಲ್ಲಿ ಮಲಗುವುದು ಇದ್ದೇ ಇದೆ. ಬದುಕಿದ್ದಾಗ ಕಂಡ ಕನಸುಗಳನ್ನು ಪೂರ್ತಿ ಮಾಡೀರೋ ಎಂದು ಹೇಳಿದ ಕನ್ನಡದ ಲೆಜೆಂಡ್ ನಟ ಮತ್ತು ನಿರ್ದೇಶಕ ಶಂಕರನಾಗ್ ಬದುಕು ಮುಗಿಸಿದ್ದು 46ನೇ ವರ್ಷಕ್ಕೆ! ಆದರೆ ಅವರು ತಮ್ಮ ನೂರು ವರ್ಷಗಳ ಕನಸು ಮತ್ತು ಸಾಧನೆಗಳನ್ನು ಕನ್ನಡದ ಮನಸುಗಳನ್ನು ಧಾರೆ ಎರೆದದ್ದು ಅದು ಅದ್ಭುತವೇ! ಆದ್ದರಿಂದ ಶಂಕರನಾಗ್ ಕನ್ನಡದ ಅಲ್ಪಾಯುಷಿ ಲೆಜೆಂಡ್ ಎಂದು ಹೇಳಬಹುದು. ಹಾಗೆಯೇ ಸಾಧನೆ ಮಾಡಿ ಅಲ್ಪಾಯುಷ್ಯದಲ್ಲಿ ನಿರ್ಗಮಿಸಿದ ನೂರಾರು ಲೆಜೆಂಡ್ ವ್ಯಕ್ತಿಗಳು ನಮಗೆ ಭಾರೀ ದೊಡ್ಡ ಪ್ರೇರಣೆ ನೀಡಿದ್ದಾರೆ. ಅವರಲ್ಲಿ ಕೆಲವರ ಪಟ್ಟಿ ಇಲ್ಲಿದೆ….
ಅಲ್ಪಾಯುಷಿ ಸಾಧಕರು!
೧) ಇಡೀ ಜಗತ್ತನ್ನು ಗೆದ್ದು ಪೂರ್ವ ಮತ್ತು ಪಶ್ಚಿಮಗಳನ್ನು ಬೆಸೆಯುವ ಕನಸು ಕಂಡ ಅಲೆಕ್ಸಾಂಡರ್ ಬದುಕಿದ್ದು 32 ವರ್ಷ ಮಾತ್ರ!
೨) ಫ್ರೆಂಚ್ ಸೇನೆಯನ್ನು ವಿಜಯದ ಕಡೆಗೆ ಮುನ್ನಡೆಸಿದ ಜೋನ್ ಆಫ್ ಆರ್ಕ್ ಬದುಕು ಮುಗಿಸಿದ್ದು 19ನೆಯ ವರ್ಷಕ್ಕೆ!
೩) ಜಗತ್ತಿನಲ್ಲಿ ಕ್ರಿಶ್ಚಿಯನ್ ಧರ್ಮವನ್ನು ದೊಡ್ಡ ಮಟ್ಟದಲ್ಲಿ ಪ್ರಸಾರ ಮಾಡಿದ ದೇವದೂತ ಜೀಸಸ್ ಕ್ರೈಸ್ಟ್ ಬದುಕಿದ್ದು 34 ವರ್ಷ ಮಾತ್ರ!
೪) ಕನ್ನಡದ ಲೆಜೆಂಡ್ ನಟ ಪುನೀತ್ ರಾಜಕುಮಾರ್ ನಮ್ಮನ್ನು ಅಗಲಿದ್ದು ಕೇವಲ 46ನೆಯ ವರ್ಷದಲ್ಲಿ. ಅವರು ಬದುಕಿದ್ದಾಗ ಅಜ್ಞಾತವಾಗಿದ್ದ ಅವರ ದೊಡ್ಡ ಮಟ್ಟದ ಸೇವಾ ಚಟುವಟಿಕೆಗಳು ನಮ್ಮ ಅರಿವಿಗೆ ಬಂದದ್ದು ಅವರು ಅಗಲಿದ ನಂತರವೇ!
೫) ಕನ್ನಡದ ಕವಿ ಚಕ್ರವರ್ತಿ, ಶ್ರೇಷ್ಟವಾದ ರಾಮ ಪಟ್ಟಾಭಿಶೇಕ, ರಾಮಾಶ್ವಮೇಧ, ಅದ್ಭುತ ರಾಮಾಯಣ ಕೃತಿಗಳನ್ನು ಲೋಕಕ್ಕೆ ಸಮರ್ಪಣೆ ಮಾಡಿದ ಮುದ್ದಣನ ಬದುಕು ಅಂತ್ಯವಾದದ್ದು 31ನೆಯ ವರ್ಷಕ್ಕೆ!
೬) ಇಂಗ್ಲೆಂಡಿನ ಅದ್ಭುತ ರೋಮ್ಯಾಂಟಿಕ್ ಕವಿ ಜಾನ್ ಕೀಟ್ಸ್ ನಮ್ಮನ್ನು ಅಗಲಿದ್ದು 26ನೆಯ ವರ್ಷಕ್ಕೆ!
೭) ಗಣಿತದ ಮೇರು ಪ್ರತಿಭೆ, ತನ್ನ ಮೇಧಾಶಕ್ತಿಯಿಂದ ಗಣಿತದ ಜಗತ್ತನ್ನು ಶ್ರೀಮಂತಗೊಳಿಸಿದ ಶ್ರೀನಿವಾಸ್ ರಾಮಾನುಜನ್ 33ನೆಯ ವರ್ಷಕ್ಕೇ ಜಗತ್ತಿಗೆ ವಿದಾಯ ಹೇಳಿದ್ದು ಬಹಳ ದೊಡ್ಡ ದುರಂತ.
೮) ಕನ್ನಡದ ಅತೀ ಶ್ರೇಷ್ಟ ಕಾದಂಬರಿಗಳನ್ನು ಬರೆದ ತ್ರಿವೇಣಿಯವರು ಬದುಕಿಗೆ ಚುಕ್ಕೆ ಇಟ್ಟದ್ದು 35ನೆಯ ವರ್ಷಕ್ಕೆ!
೯) ಮ್ಯಾಂಡೊಲಿನ್ ಸಾಮ್ರಾಟ್ ಎಂದು ಎಲ್ಲರಿಂದ ಕರೆಸಿಕೊಂಡ ಯು ಶ್ರೀನಿವಾಸ್ ಮ್ಯಾಂಡೊಲಿನ್ ಕೆಳಗಿಟ್ಟು ನಿರ್ಗಮಿಸಿದ್ದು 45ನೆಯ ವರ್ಷಕ್ಕೆ!
೧೦) ಹಿಂದೂ ಧರ್ಮ ಮತ್ತು ಭಾರತದ ಅಸ್ಮಿತೆಯನ್ನು ಜಗತ್ತಿಗೆ ಪರಿಚಯ ಮಾಡಿದ ಸ್ವಾಮೀ ವಿವೇಕಾನಂದರು ಕಾವಿಯೊಂದಿಗೆ ನಿರ್ಗಮಿಸಿದ್ದು 39ನೆಯ ವರ್ಷಕ್ಕೆ!
೧೧) ರಾಕ್ ಅಂಡ್ ರೋಲನ್ನು ಕ್ರಾಂತಿಕಾರಿ ಮಟ್ಟದಲ್ಲಿ ವಿಶ್ವಕ್ಕೆ ಪರಿಚಯ ಮಾಡಿಕೊಟ್ಟ ಜಿಮ್ ಹ್ಯಾಂಡ್ರಿಕ್ 30ನೆಯ ವರ್ಷಕ್ಕೇ ತನ್ನ ಬದುಕಿನ ವ್ಯವಹಾರ ಮುಗಿಸಿದ್ದರು!
೧೨) ಸ್ವಾಭಿಮಾನಿ ಹೋರಾಟದ ಮೂಲಕ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೆಡ್ಡು ಹೊಡೆದು ನಿಂತ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಬದುಕಿನ ವ್ಯಾಪಾರವನ್ನು ಮುಗಿಸಿದ್ದು 30ನೇ ವರ್ಷಕ್ಕೆ ಅಂದರೆ ನಂಬಲು ನಮಗೆ ಕಷ್ಟವಾಗುತ್ತದೆ!
೧೩) ಜಗತ್ತಿನ ಅತ್ಯಂತ ಕಿರಿಯ ಕ್ರಾಂತಿಕಾರಿ ಭಾರತದಲ್ಲಿ ಇದ್ದು ಸೂರ್ಯ ಮುಳುಗದ ಬ್ರಿಟಿಷ್ ಸಾಮ್ರಾಜ್ಯದ ರೆಕ್ಕೆಗಳನ್ನು ಕತ್ತರಿಸಿದ ಕರ್ಥಾರ್ ಸಿಂಘ್ ಸರಭಾ ತನ್ನ ಆತ್ಮಾರ್ಪಣೆ ಮಾಡಿದಾಗ ಅವರ ವಯಸ್ಸು 19 ಮಾತ್ರ!
೧೪) ಭಾರತದ ನಾಲ್ಕು ಮೂಲೆಗಳಲ್ಲಿ ನಾಲ್ಕು ಚತುರಾಮ್ನಾಯ ಪೀಠಗಳನ್ನು ಕಾಲ್ನಡಿಗೆಯಲ್ಲಿ ಸಂಚರಿಸಿ ಸ್ಥಾಪನೆ ಮಾಡಿದ ಮಹಾನ್ ಆಧ್ಯಾತ್ಮ ಗುರುಗಳು ಶಂಕರಾಚಾರ್ಯ ಅವರು ಕೇವಲ 32 ವರ್ಷ ಬದುಕಿದ್ದರು!
೧೫) ಇಂಗ್ಲೆಂಡಿನ ಮಣ್ಣಿನಲ್ಲಿ ಬ್ರಿಟಿಷ್ ಅಧಿಕಾರಿ ಸಾಂಡರ್ಸನನ್ನು ಶೂಟ್ ಮಾಡಿ ಸಾಯಿಸಿದ ಮತ್ತು ಜಲಿಯನ್ ವಾಲಾ ಹತ್ಯಾಖಾಂಡಕ್ಕೆ ಸೇಡು ತೀರಿಸಿಕೊಂಡ ಖುದಿರಾಮ ಬೋಸ್ 19ನೆಯ ವರ್ಷಕ್ಕೆ ತಾಯಿ ಭಾರತಿಯ ಪಾದಗಳಿಗೆ ಸಮರ್ಪಣೆ ಆದದ್ದು ಸಣ್ಣ ಸಾಧನೆ ಅಲ್ಲವೇ ಅಲ್ಲ!
(ನಾಳೆಗೆ ಮುಂದುವರೆಯುತ್ತದೆ)












