ಪರೀಕ್ಷೆಯ ಹೊತ್ತಿನಲ್ಲಿ ಮನೆಗಳಲ್ಲಿ ಅಘೋಷಿತ ಕರ್ಫ್ಯೂ ಜಾರಿ !

ನಮ್ಮ ಮಕ್ಕಳು ರೇಸಿಗೆ ನಿಂತ ಕುದುರೆಗಳೇ ?

ಶಿಕ್ಷಣ ವ್ಯವಸ್ಥೆಯ ವರ್ತುಲದಲ್ಲಿ ಪರೀಕ್ಷೆ ಒಂದು ಭಾಗ ಮಾತ್ರ. ಪರೀಕ್ಷೆಗಳೇ ಶಿಕ್ಷಣವಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣ ಎಂದರೆ ಕೇವಲ ಪರೀಕ್ಷೆಗಳೇ ಎಂಬ ತೀರ್ಮಾನಕ್ಕೆ ಸರಕಾರ, ಇಲಾಖೆ, ಪೋಷಕರು ಎಲ್ಲರೂ ಬಂದ ಹಾಗೆ ಆಗಿದೆ!
ಅದರ ನೇರ ಒತ್ತಡವು ವಿದ್ಯಾರ್ಥಿಗಳ ಮೇಲೆ ಬಿದ್ದು ಹಲವು ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತಿದೆ. ಶಿಕ್ಷಕರು, ಪೋಷಕರು ಎಲ್ಲರೂ ದಿನ ಬೆಳಿಗ್ಗೆ ಎದ್ದು ರಾತ್ರಿಯ ತನಕ ಪರೀಕ್ಷೆ, ಪರೀಕ್ಷೆ ಎಂದು ಮಾತನಾಡಿದರೆ ಮಕ್ಕಳ ಪರಿಸ್ಥಿತಿ ಹೇಗಿರಬಹುದು ?

ಎರಡು ಪರೀಕ್ಷೆಗಳ ಮೇಲೆ ಮಾತ್ರ ಅತಿಯಾದ ಫೋಕಸ್ !
ಇತ್ತೀಚಿನ ವರ್ಷಗಳಲ್ಲಿ ಎಸ್ಸೆಸೆಲ್ಸಿ ಮತ್ತು ಪಿಯುಸಿ ಎಂಬ ಎರಡು ಪರೀಕ್ಷೆಗಳ ಮೇಲೆ ಮಾತ್ರ ಎಲ್ಲರ ಫೋಕಸ್ ಇರುವ ಕಾರಣ ಆ ಎರಡು ಹಂತದ ವಿದ್ಯಾರ್ಥಿಗಳ ಮೇಲೆ ಅವರಿಗೆ ಇಷ್ಟವಿಲ್ಲದಿದ್ದರೂ ಒತ್ತಡ ಏರ್ಪಡುತ್ತದೆ. ಸಣ್ಣ ಪ್ರಮಾಣದ ಒತ್ತಡವನ್ನು ಮಕ್ಕಳು ಸಹಿಸಿಕೊಳ್ಳುತ್ತಾರೆ. ಆದರೆ, ಆ ಒತ್ತಡ ಮಿತಿ ಮೀರಿತು ಅಂತಾದರೆ ? ಆಗ ಪೋಷಕರ ಬಿಪಿ, ಶುಗರ್ ಎಲ್ಲವೂ ಏರುಪೇರು ಆಗುತ್ತದೆ. ಮನೆಯಲ್ಲಿ ಅಘೋಷಿತ ಕರ್ಫ್ಯೂ ಘೋಷಣೆ ಆಗುತ್ತದೆ! ನೆಂಟರು, ಅತಿಥಿಗಳು ಮನೆಗೆ ಬಾರದಿರುವ ಹಾಗೆ ಒಪ್ಪಂದಗಳು ನಡೆಯುತ್ತವೆ. ಪರೀಕ್ಷೆ ಬರೆಯುವ ಮಗುವನ್ನು ಕೋಣೆಯ ಒಳಗೆ ಕೂಡಿ ಹಾಕಿ ಓದು, ಓದು ಎಂದು ಒತ್ತಡ ಹಾಕುವುದನ್ನು ಹೆತ್ತವರು ತಮಗೆ ಅರಿವಿಲ್ಲದೆ ಮಾಡುತ್ತಾ ಹೋಗುತ್ತಾರೆ. ಮಗುವಿನ ಸಣ್ಣ ಪುಟ್ಟ ಬಿಡುವು, ಮನರಂಜನೆ, ಆಟ, ಗೆಳೆತನ ಎಲ್ಲದಕ್ಕೂ ಕತ್ತರಿ ಬೀಳುತ್ತವೆ. ಇದರ ಒಟ್ಟು ಪರಿಣಾಮ ಏನೆಂದರೆ ಮಗು ಓದುವ ವಿಷಯಗಳನ್ನು ಪ್ರೀತಿ ಮಾಡುವುದನ್ನು ಬಿಟ್ಟು ಓದಬೇಕಲ್ಲ ಎಂದು ಮನಸಿನೊಳಗೆ ಬೈಯ್ಯುತ್ತ ಓದುವ ಅಭ್ಯಾಸಕ್ಕೆ ಇಳಿಯುತ್ತದೆ. ಪರೀಕ್ಷೆಗಳಲ್ಲಿ ಒಂದೊಂದು ಅಂಕ ಕಡಿಮೆ ಆದರೂ ಹೆತ್ತವರು, ಶಿಕ್ಷಕರು ಎಲ್ಲರೂ ಒಂದಿಷ್ಟು ಬೈದು, ಹಂಗಿಸಿ, ಅಪಮಾನ ಮಾಡಿ ಮಗುವಿನ ಮಾನಸಿಕ ನೆಮ್ಮದಿ ಕೆಡಿಸುತ್ತಾರೆ. ಮಗುವಿಗೆ ಒಂದಿಷ್ಟು ಲಂಚ ಕೊಟ್ಟು ( ಬೈಕು, ಮೊಬೈಲ್ ಇತ್ಯಾದಿ) ಓದಲು ಪ್ರೇರೇಪಿಸುವ (?) ಪೋಷಕರೂ ಇದ್ದಾರೆ. ಇವೆಲ್ಲವೂ ಯಶಸ್ಸಿಗೆ ಇರುವ ಅಡ್ಡ ಮಾರ್ಗಗಳು.

ಮಗು ತನ್ನ ಮಿತಿಗಳನ್ನು ಅರ್ಥ ಮಾಡಿಕೊಂಡು ಅದರದ್ದೇ ಆದ ವೇಗದಲ್ಲಿ, ಅದರದ್ದೇ ಆದ ವಿಧಾನದಲ್ಲಿ, ಸ್ವಂತ ಆಸಕ್ತಿಯಲ್ಲಿ ಓದಬೇಕು ಎನ್ನುತ್ತದೆ ಮನಶ್ಶಾಸ್ತ್ರ.

ಜಗತ್ತಿನ ಪ್ರತಿಯೊಂದು ಮಗುವೂ ಅನನ್ಯ. ಆದರೆ ಸ್ಪರ್ಧೆಗೆ ನಿಂತ ಹೆತ್ತವರಿಗೆ ಮಕ್ಕಳು ಕೇವಲ ಕಂಬಳದ ಕೋಣಗಳು ಮತ್ತು ರೇಸಿಗೆ ನಿಂತ ಕುದುರೆಗಳು ಎಂಬಂತಾಗಿದೆ. ಮಕ್ಕಳ ಮಾರ್ಕ್ಸ್‌, ಗ್ರೇಡ್‌ಗಳನ್ನು, ರ್‍ಯಾಂಕ್ ಗಳನ್ನು ತಮ್ಮ ಪ್ರೆಸ್ಟೀಜ್ ಎಂದು ಭಾವಿಸಿಕೊಂಡ ಪೋಷಕರಿಗೆ ಮಕ್ಕಳ ಒತ್ತಡ ಅರ್ಥವಾಗುವುದಿಲ್ಲ.
ಮಕ್ಕಳು ಸ್ವಂತ ಆಸಕ್ತಿಯಿಂದ ಮನೆಯಲ್ಲಿ ಓದುವ ವಾತಾವರಣವನ್ನು ಖಾತರಿ ಪಡಿಸುವುದು ಹೆತ್ತವರ ಕರ್ತವ್ಯ. ʼನಮ್ಮ ಪ್ರೀತಿ ನಿನ್ನ ಮಾರ್ಕ್‌ಗಳಿಗೆ ಡಿಪೆಂಡ್ ಆಗಿಲ್ಲ ಮಗು’ ಎಂದು ಹೆತ್ತವರು ಗಟ್ಟಿಯಾಗಿ ಹೇಳಬೇಕು. ‘ನೀನು ಯಾರ ಜೊತೆಗೂ ಸ್ಪರ್ಧೆಗೆ ಇಳಿಯುವುದು ಬೇಡ ಮಗು, ನಿನ್ನ ಮಿತಿಗಳನ್ನು ಅರ್ಥ ಮಾಡಿಕೊಂಡು ಓದು’ ಎಂದು ಮತ್ತೆ ಮತ್ತೆ ಹೇಳಬೇಕು. ಓದಲು ಬೇಕಾದ ಸೌಕರ್ಯಗಳನ್ನು ಒದಗಿಸಬೇಕಾದದ್ದು ಹೆತ್ತವರ ಕರ್ತವ್ಯ. ಮಕ್ಕಳನ್ನು ಓದು ಎಂದು ಕೋಣೆಯ ಒಳಗೆ ಕೂಡಿ ಹಾಕಿ ಹೊರಗೆ ಕೂತು ಟಿವಿಯಲ್ಲಿನ ರಿಯಾಲಿಟಿ ಶೋ, ಧಾರಾವಾಹಿಗಳನ್ನು ಮತ್ತು ನ್ಯೂಸ್ ಚಾನೆಲ್‌ಗಳನ್ನು ನೋಡುವ ಪೋಷಕರೂ ಇದ್ದಾರೆ. ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಓದಲು ಕೂತ ಮಕ್ಕಳ ಮುಂದೆ ಕೂತು ಮನೆಯ ಕಷ್ಟಗಳನ್ನು ಹೇಳುತ್ತಾ ಕಣ್ಣೀರು ಹಾಕುವ ಪೋಷಕರ ಸಂಖ್ಯೆಯೂ ತುಂಬಾ ಹೆಚ್ಚಿದೆ. ಮಕ್ಕಳಿಗೆ ಎಲ್ಲವೂ ಅರ್ಥ ಆಗುತ್ತದೆ. ‘ನಾನು ತ್ಯಾಗ ಮಾಡ್ತಾ ಇದ್ದೇನೆ ಮಗಾ’ ಎಂದು ಪದೇ ಪದೇ ಹೆತ್ತವರು ಹೇಳುವ ಅಗತ್ಯವೇ ಇಲ್ಲ.

ಸ್ಥೈರ್ಯ ಕುಸಿಯದಿರಲಿ
ವಿದ್ಯಾರ್ಥಿಗಳ ಧೈರ್ಯ, ಆತ್ಮವಿಶ್ವಾಸ, ನಂಬಿಕೆ ಒಂದಿಷ್ಟೂ ಕುಸಿಯದ ಹಾಗೆ ಜಾಗರೂಕತೆ ಮಾಡಬೇಕಾದ್ದು ಪೋಷಕರೇ. ಧೈರ್ಯ ತುಂಬಿಸುವ ಮಾತುಗಳು, ಮುಖವಾಡ ಇಲ್ಲದ ಪ್ರೀತಿ, ಮಕ್ಕಳು ಮನಸ್ಸು ಬಿಚ್ಚಿ ಮಾತಾಡುವ ಸ್ವಾತಂತ್ರ್ಯ ಇವೆಲ್ಲವನ್ನೂ ಪೋಷಕರೇ ಖಾತರಿ ಮಾಡಬೇಕು. ಏಕೆಂದರೆ ಪರೀಕ್ಷೆಯಲ್ಲಿ ಒಂದಿಷ್ಟು ಮಾರ್ಕ್ ಕಡಿಮೆಯಾದರೂ ಜಗತ್ತು ಮುಳುಗಿ ಹೋಗುವುದಿಲ್ಲ. ಆದರೆ, ಮಗುವಿನ ಮನೋಬಲ ಕುಸಿದರೆ ಮುಂದೆ ರಿಪೇರಿ ಮಾಡಲು ಸಾಧ್ಯವೇ ಇಲ್ಲ. ಹೆಚ್ಚಿನ ಹೆತ್ತವರು ಮಕ್ಕಳಿಂದ ಅತಿಯಾಗಿ ನಿರೀಕ್ಷೆ ಮಾಡುವುದನ್ನೇ ಪ್ರೀತಿ ಎಂದು ಭಾವಿಸುತ್ತಾರೆ. ಇದು ಸರಿಯಲ್ಲ. ಹೆತ್ತವರ ಅತಿಯಾದ ಕೆಲವು ನಿರೀಕ್ಷೆಗಳೇ ಇವತ್ತು ಮಕ್ಕಳ ಒತ್ತಡಕ್ಕೆ ಕಾರಣವಾಗಿದೆ. ಮಕ್ಕಳಿಗೆ ಒತ್ತಡ ಹಾಕದೇ ಓದುವ ವಾತಾವರಣ ಕಲ್ಪಿಸಿಕೊಟ್ಟರೆ, ಮಕ್ಕಳು ಬಾಯಿಪಾಠ ಮಾಡದೇ ಖುಷಿಯಿಂದ ಓದಲು ಕಲಿತರೆ ನಮ್ಮ ಮಕ್ಕಳು ಈಗ ಪಡೆಯುವುದಕ್ಕಿಂತ ಹೆಚ್ಚು ಅಂಕಗಳನ್ನು ಪಡೆಯುತ್ತಾರೆ ಅನ್ನುವುದು ಭರತವಾಕ್ಯ. ಪೋಷಕರು ಗೆದ್ದರೆ ಮಕ್ಕಳೂ ಗೆದ್ದಂತೆ.









































































































error: Content is protected !!
Scroll to Top