ದಿ ಕೇರಳ ಸ್ಟೋರಿ – 2 ಬಿಡುಗಡೆಗೆ ಹೈಕೋರ್ಟ್ ತಡೆ

ಕೊಚ್ಚಿ : ದಿ ಕೇರಳ ಸ್ಟೋರಿ 2 ಚಿತ್ರದ ಪ್ರದರ್ಶನಕ್ಕೆ ಕೇರಳ ಹೈಕೋರ್ಟ್ ತಡೆ ನೀಡಿದೆ. ಚಿತ್ರದ ಸೆನ್ಸಾರ್ ಪ್ರಮಾಣಪತ್ರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ.

ಗುರುವಾರ ನಡೆದ ವಿಚಾರಣೆಯಲ್ಲಿ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರು, ಚಿತ್ರವನ್ನು ಅದರ ಮೂಲ ನಿಗದಿತ ಬಿಡುಗಡೆ ದಿನಾಂಕವಾದ ಫೆಬ್ರವರಿ 27ರಂದು ಬಿಡುಗಡೆ ಮಾಡಲು ಅವಕಾಶ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ವಿಚಾರಣೆ ವೇಳೆ ಸೆನ್ಸಾರ್ ಮಂಡಳಿಯ ಕಾರ್ಯವೈಖರಿಯನ್ನು ಪ್ರಶ್ನಿಸಿದ ನ್ಯಾಯಾಲಯ, ಮಂಡಳಿ ನಿಯಮಗಳನ್ನು ಪಾಲಿಸಿರುವುದೇ ಎಂಬ ಅನುಮಾನ ವ್ಯಕ್ತಪಡಿಸಿ, ಮಂಡಳಿಯು ತನ್ನ ವಿವೇಚನೆಯನ್ನು ಸಮರ್ಪಕವಾಗಿ ಅನ್ವಯಿಸಿರುವುದು ಕಾಣುತ್ತಿಲ್ಲ ಎಂದು ನ್ಯಾಯಾಲಯ ತೀಕ್ಷ್ಣವಾಗಿ ಉಲ್ಲೇಖಿಸಿತು.

ಈ ವಾರದ ಆರಂಭದಲ್ಲಿ ಕೇರಳ ಸ್ಟೋರಿ 2 ಚಿತ್ರದ ಸೆನ್ಸಾರ್ ಪ್ರಮಾಣಪತ್ರವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು. ಬುಧವಾರ ನಡೆದ ವಿಚಾರಣೆಯಲ್ಲಿ ಅರ್ಜಿದಾರರು ವ್ಯಕ್ತಪಡಿಸಿದ ಕಳವಳಗಳು ಬಹುಶಃ ನಿಜವಾಗಿರಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

ಕಾಮಾಖ್ಯ ನಾರಾಯಣ್ ಸಿಂಗ್ ನಿರ್ದೇಶನದ ಮತ್ತು ವಿಪುಲ್ ಅಮೃತ್ಲಾಲ್ ಶಾ ನಿರ್ಮಾಣದ ಈ ಚಿತ್ರದಲ್ಲಿ, ಯುವ ಹಿಂದೂ ಮಹಿಳೆಯರನ್ನು ಅಂತರಧರ್ಮೀಯ ವಿವಾಹಗಳಿಗೆ ಆಮಿಷವೊಡ್ಡಿ, ಬಳಿಕ ಅವರ ಮೇಲೆ ಹಲ್ಲೆ ನಡೆಸಿ, ಹಕ್ಕುಗಳನ್ನು ಕಸಿದುಕೊಂಡು ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಲಾಗುತ್ತದೆ ಎಂಬ ಕಥಾವಸ್ತು ಇದೆ ಎಂದು ಹೇಳಲಾಗಿದೆ. ಚಿತ್ರದ ಟ್ರೇಲರ್ ಬಿಡುಗಡೆಯಾದ ಬಳಿಕ ಕಥಾಹಂದರವು ವಿವಾದಕ್ಕೆ ಕಾರಣವಾಗಿತ್ತು. ಕೇರಳವನ್ನು ನಕಾರಾತ್ಮಕವಾಗಿ ಚಿತ್ರಿಸಲಾಗಿದೆ ಎಂಬ ಆರೋಪಗಳೂ ಕೇಳಿಬಂದಿತ್ತು.

ಜೀವಶಾಸ್ತ್ರಜ್ಞ ಶ್ರೀದೇವ್ ನಂಬೂದಿರಿ ಅವರು ಚಿತ್ರದ ಕಥಾಹಂದರವು ರಾಜ್ಯದ ಸಾಮಾಜಿಕ ಸೌಹಾರ್ದತೆಗೆ ಹಾನಿ ಉಂಟುಮಾಡಬಹುದು ಎಂದು ಆಕ್ಷೇಪಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಅವರ ಅರ್ಜಿಯ ಮೇರೆಗೆ ನ್ಯಾಯಾಲಯ ಈ ವಿಚಾರವನ್ನು ಕೈಗೆತ್ತಿಕೊಂಡಿತ್ತು.
ಅರ್ಜಿಯ ಹಿನ್ನೆಲೆಯಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್ಸಿ) ಮತ್ತು ಚಿತ್ರದ ನಿರ್ಮಾಪಕರಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.

ಕೇರಳ ಹೈಕೋರ್ಟ್‌ನ ಏಕ ಸದಸ್ಯರಿದ್ದ ಪೀಠದ ಆದೇಶವನ್ನು ಪ್ರಶ್ನಿಸಿ ʼಕೇರಳ ಸ್ಟೋರಿ 2ʼನ ನಿರ್ಮಾಪಕರು ಹೈಕೋರ್ಟ್‌ನ ಉನ್ನತ ಪೀಠದಲ್ಲಿ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಳಂಬವಿಲ್ಲದೆ ವಿಚಾರಣೆ ನಡೆಸುವಂತೆ ಹಾಗೂ ವಿವರವಾದ ಆದೇಶವನ್ನು ತ್ವರಿತವಾಗಿ ಬಿಡುಗಡೆ ಮಾಡುವಂತೆ ಕೋರಲಾಗಿದೆ ಎಂದು ತಿಳಿದು ಬಂದಿದೆ.







































error: Content is protected !!
Scroll to Top