ಶಿವಾಜಿಯ ವ್ಯಕ್ತಿತ್ವ ಸಮಸ್ತ ಭಾರತಕ್ಕೆ ಹೆಮ್ಮೆಯ ಗುರುತು – ಪ್ರದೀಪ್ ಆರ್.

ಕಾರ್ಕಳ : ಶಿವಾಜಿಯ ವ್ಯಕ್ತಿತ್ವ ಸಮಸ್ತ ಭಾರತಕ್ಕೆ ಹೆಮ್ಮೆಯ ಗುರುತು. ಅವರ ವಿಚಾರಧಾರೆಗಳನ್ನು ನಮ್ಮ ಕಾರ್ಯದಲ್ಲಿ ಅಳವಡಿಸಿಕೊಳ್ಳಬೇಕು. ಹಾಗಾದಾಗ ಮಾತ್ರ ಆಚರಣೆ ಅರ್ಥಪೂರ್ಣ ಎಂದು ತಹಶೀಲ್ದಾರ್ ಪ್ರದೀಪ್ ಆರ್. ಅಭಿಪ್ರಾಯಪಟ್ಟರು.

ಅವರು ಫೆ. 19ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲೂಕು ಆಡಳಿತ ಕಾರ್ಕಳ, ಕ್ಷತ್ರಿಯ ಮರಾಠ ಸಮಾಜ ರಿ. ಕಾರ್ಕಳ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ರಿ. ತಾಲೂಕು ಘಟಕ ಕಾರ್ಕಳ ಇದರ ಸಂಯುಕ್ತ ಆಶ್ರಯದಲ್ಲಿ ತಾ. ಪಂ. ಸಭಾಂಗಣದಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಂಗವಾಗಿ ವಿಶೇಷ ಉಪನ್ಯಾಸ ನೀಡಿದ ಜಿಸಿಐ ಭಾರತ ರಾಷ್ಟ್ರೀಯ ತರಬೇತುದಾರ ಸುಧಾಕರ್ ಎಂ. ಪೂಜಾರಿ, ಶಿವಾಜಿ‌ ಮಹಾರಾಜ್ ಸಾಮಾನ್ಯ ವ್ಯಕ್ತಿಯಾಗಿದ್ದುಕೊಂಡು ಅಸಾಮಾನ್ಯ ‌ಸಾಧನೆ ಮಾಡಿದವರು. ತಾಯಿ ಜಿಜಾಬಾಯಿ ನೀಡಿದ ಪ್ರೀತಿ, ಶಿಕ್ಷಣ, ಬೆಳೆದ ವಾತಾವರಣ,‌‌ ಜೀವಾನುಭವ ಶಿವಾಜಿಗೆ ಅಸಾಮಾನ್ಯ ಸಾಧನೆ ಮಾಡುವಂತೆ ಪ್ರೇರಣೆ ನೀಡಿದೆ. ಭಯವಿದ್ದಲ್ಲಿ ಯಶಸ್ಸು ಸಾಧ್ಯವಿಲ್ಲ. ‌ಅಂತೆಯೇ ನಿರ್ಭಿತಿಯಿಂದ ಹೋರಾಡಿದ ವ್ಯಕ್ತಿತ್ವ ಶಿವಾಜಿ. ಅಲ್ಲದೆ ಭಯದಿದ ಹೊರಬರಬೇಕಾದರೆ ವಿಷಯವನ್ನು ಅಧ್ಯಯನದೊಂದಿಗೆ ಅರ್ಥಮಾಡಿಕೊಳ್ಳಬೇಕು ಎಂಬುದನ್ನೂ ಅವರು ತಮ್ಮ ಹೋರಾಟದ ಬದುಕಿನ ಮೂಲಕ ಜನತೆಗೆ ತಿಳಿಸಿಕೊಟ್ಟಿದ್ದಾರೆ ಎಂದರು.

ಸ್ವರಾಜ್ಯ ಪರಿಕಲ್ಪನೆ
ಶಿವಾಜಿ ಭಾರತ ದೇಶಕ್ಕೆ ನೀಡಿದ ಕೊಡುಗೆ ಅಪಾರ. ಮತ್ತೊಬ್ಬರಿಗೆ ಅಡಿಯಾಳು ಆಗದೆ ನಮ್ಮ ನಾಯಕತ್ವದೊಂದಿಗೆ ನಮ್ಮ ವ್ಯವಸ್ಥೆಯನ್ನು ಮುಂದುವರಿಸುಕೊಂಡು ಹೋಗುವುದೆ ನಿಜವಾದ ಸ್ವರಾಜ್ಯ.‌ ಇಂತಹ ಸ್ವರಾಜ್ಯ ಪರಿಕಲ್ಪನೆಯನ್ನು ಭಾರತದಲ್ಲಿ ಹುಟ್ಟು ಹಾಕಿದ ಮೊದಲ ವ್ಯಕ್ತಿ ಶಿವಾಜಿ. ಅವರ ನಾಯಕತ್ವ ಗುಣ, ಸಾಹಸ ಜೀವನ, ಆಡಳಿತ ಕಾರ್ಯವೈಖರಿಯನ್ನು ಸಮಸ್ತ ದೇಶದ‌ ಜನತೆ ಸ್ಮರಿಸುವಂತಹದ್ದು ಎಂದು ಹೇಳಿದರು.

ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಗಿರೀಶ್ ರಾವ್ ಮಾತನಾಡಿ, ಬಡ ಕುಟುಂಬದಲ್ಲಿ ಜನಿಸಿ ಸಮಸ್ತ ದೇಶವನ್ನು ಒಗ್ಗೂಡಿಸಿದ ಇತಿಹಾಸ ಶಿವಾಜಿ ಮಹಾರಾಜರದ್ದಾಗಿದೆ. ಅವರದ್ದು ಒಂದು ಜನಾಂಗ ಅಥವಾ ಜಾತಿಗೆ‌ ಸೀಮಿತವಾದ ವ್ಯಕ್ತಿತ್ವವಲ್ಲ. ಅವರು ನಡೆದು ಬಂದ ದಾರಿ, ಸಮಾಜಕ್ಕೆ ನೀಡಿದ ಮೌಲ್ಯ ಅನುಕರಣೀಯ ಎಂದರು.

ಪ್ರೇರಣಾದಾಯಕ ಜೀವನ– ಕೀರ್ತನ್‌ ಕುಮಾರ್‌ ಲಾಡ್
ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ರಿ. ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ ಕೆ. ಬಿ. ಕೀರ್ತನ್ ಕುಮಾರ್ ಲಾಡ್ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜ್ ಸ್ವರಾಜ್ಯದ ಪರಿಕಲ್ಪನೆಯನ್ನು ಜನರಲ್ಲಿ ಬಿತ್ತಿ ಅದನ್ನು ಸಾಕಾರಗೊಳಿಸಿದವರು. ಅವರೊಬ್ಬ ಅತ್ಯುತ್ತಮ‌ ಆಡಳಿತಗಾರ,‌ ಚತುರ ಸಂಘಟಕ. ಒಬ್ಬ ಸರದಾರನ ಮಗನಾಗಿ ಮರಾಠ ಸಾಮ್ರಾಜ್ಯದೊಂದಿಗೆ ಭಾರತದ ಅಧಿಪತ್ಯವನ್ನು ಹೊಂದಿದದ್ದು ಎಂದಿಗೂ ಸ್ಮರಣೀಯ ಮತ್ತು ಅವರ ಜೀವನಮೌಲ್ಯ ಪ್ರೇರಣಾದಾಯಕ ಎಂದರು.

ಕಾರ್ಯಕ್ರಮದಲ್ಲಿ ಮರಾಠ ಸಮುದಾಯದ ಮುಖಂಡರು, ವಿವಿಧ ಇಲಾಖಾಧಿಕಾರಿಗಳು ಪಾಲ್ಗೊಂಡಿದ್ದರು. ಪುಷ್ಪಾ ಪ್ರಾರ್ಥಿಸಿದರು. ಕಂದಾಯ ನಿರೀಕ್ಷಕ ರಿಯಾಜ್ ಕಾರ್ಯಕ್ರಮ ನಿರ್ವಹಿಸಿದರು.











































error: Content is protected !!
Scroll to Top