ತೆಳ್ಳಾರು ಶ್ರೀ ಮಹಾಗಣಪತಿ ದೇವಸ್ಥಾನ – ಸಪ್ತಮ ವಾರ್ಷಿಕ ಉತ್ಸವ ನಾಳೆ ಸಂಪನ್ನ

ಕಾರ್ಕಳ : ತೆಳ್ಳಾರು ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗ-ದಾರಗ ಆದಿ ಆಲಡೆ ಕ್ಷೇತ್ರದ ಸಪ್ತಮ ವಾರ್ಷಿಕ ಉತ್ಸವ ಜ. 25 ರಂದು ಪ್ರಾರಂಭಗೊಂಡಿದ್ದು ನಾಳೆ (ಜ. 30)ಸಮಾಪನಗೊಳ್ಳಲಿದೆ. ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವೇದಮೂರ್ತಿ ಕೆ. ರಾಜೇಶ್‌ ನಡ್ಯಂತಿಲ್ಲಾಯರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರುತ್ತಿವೆ.

ಕಣ್ಮನ ಸೆಳೆದ ಅಲಂಕಾರ
ವಾರ್ಷಿಕ ಉತ್ಸವ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷವಾಗಿ ಹೂವಿನ ಅಲಂಕಾರ ಭಕ್ತರ ಮನಸೂರೆಗೊಳ್ಳುವಂತಿತ್ತು. ದೇವಸ್ಥಾನದ ಪ್ರವೇಶ ದ್ವಾರ, ಗರ್ಭಗುಡಿ ಸುತ್ತಮುತ್ತ ಮಾಡಲಾದ ಬಣ್ಣಬಣ್ಣದ ಹೂವಿನ ಶೃಂಗಾರ ಬಹಳ ಆಕರ್ಷಣೀಯವಾಗಿತ್ತು. ಅಬ್ಬಗ ದಾರಗ ಗುಡಿ ಮುಂಭಾಗವೂ ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿತ್ತು. ಜಲದುರ್ಗಾ ದ್ವಾರದಿಂದಲೆ ರಸ್ತೆಯ ಇಕ್ಕೆಲ ಕೇಸರಿಮಯವಾಗಿ ಭಕ್ತಾದಿಗಳನ್ನು ಆಕರ್ಷಿಸಿ, ವಿದ್ಯುತ್‌ ದೀಪಾಲಂಕಾರದಿಂದ ಜಗಮಗಿಸುತ್ತಿತ್ತು.

ಸಿರಿಜಾತ್ರೆ
ಜ. 28ರಂದು ರಾತ್ರಿ ಉತ್ಸವ ಬಲಿ, ಆಲಡೆ ಕ್ಷೇತ್ರದಲ್ಲಿ ಅಬ್ಬಗ-ದಾರಗ ಸಹಿತ ಕುಮಾರ ದರ್ಶನ ಸೇವೆ, ಬಳಿಕ ಶ್ರೀ ದೇವರಿಗೆ ವಿಶೇಷ ಭೂತಬಲಿ ಹಾಗೂ ಕವಾಟ ಬಂಧನ ನಡೆಯಿತು.

ಭಜನ್‌ ಸಂಧ್ಯಾ
ಖ್ಯಾತ ಗಾಯಕ ಪದ್ಮಶ್ರೀ ಪಂಡಿತ್‌ ಎಂ. ವೆಂಕಟೇಶ್‌ ಕುಮಾರ್‌ ಅವರಿಂದ ಭಜನ್‌ ಸಂಧ್ಯಾ (ಭಕ್ತಿ ಸಂಗೀತಾ ಕಾರ್ಯಕ್ರಮ) ನಡೆಯಿತು. ಕಾರ್ಯಕ್ರಮದಲ್ಲಿ ಕಾರ್ಕಳ ತಾಲೂಕಿನ ಪ್ರಸಿದ್ಧ ಗಾಯಕರು ಪಾಲ್ಗೊಂಡಿದ್ದರು. ವೆಂಕಟೇಶ್‌ ಅವರ ಭಕ್ತಿ ಭಾವದ ಗಾಯನ ನೆರೆದಿದ್ದ ಜನರನ್ನು ಮಂತ್ರಮುಗ್ಧಗೊಳಿಸಿತು. ಭಕ್ತಿ ಭಾವಪರವಶರಾದ ಭಡ್ತಗಡಣ ಭಕ್ತಿ ಸಾಗರದಲ್ಲಿ ಮಿಂದೆದ್ದರು.
ಜ್ಞಾನಸುಧಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಸುಧಾಕರ್‌ ಶೆಟ್ಟಿ ವಿದ್ಯಾ ದಂಪತಿ, ಹಿರಿಯ ಉದ್ಯಮಿ ಬೋಳ ಪ್ರಭಾಕರ್‌ ಕಾಮತ್‌, ಅಂತಾರಾಷ್ಟ್ರೀಯ ಕ್ರೀಡಾಪಟು ರೋಹಿತ್‌ ಕುಮಾರ್‌ ಕಟೀಲ್‌, ಖ್ಯಾತ ಹಿಂದೂಸ್ತಾನಿ ಗಾಯಕಿ ಮಹಾಲಕ್ಷ್ಮೀ ಶೆಣೈ, ಉದ್ಯಮಿಗಳಾದ ಅನಂತಕೃಷ್ಣ ಶೆಣೈ ರೆಂಜಾಳ, ನರಸಿಂಹ ಪೈ ಪಾಲಾಡ್ಕ, ಗಿರೀಶ್‌ ಶೆಟ್ಟಿ ತೆಳ್ಳಾರು, ಸುದೇಶ್‌ ಶೆಟ್ಟಿ ತೆಳ್ಳಾರು, ರಾಮಚಂದ್ರ ಪಾಟ್ಕರ್‌, ಎಸ್‌ಕೆಪಿಎ ಮಾಜಿ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್‌ ಜೈನ್‌, ಸಂತೋಷ್‌ ರೆಂಜಾಳ, ಮೋಹನ್‌ ಕಾರ್ಕಳ, ನಿವೃತ್ತ ಸೈನಿಕ ಪ್ರವೀಣ್‌ ಕುಕ್ಕುಂದೂರು, ಹಿಂದೂ ಸಂಘಟನೆ ಪ್ರಮುಖರಾದ ಸುನಿಲ್‌ ಕೆ.ಆರ್, ಮಹೇಶ್‌ ಶೆಣೈ ಬೈಲೂರು, ಗುರುಪ್ರಸಾದ್ ನಾರಾವಿ ಮೊದಲಾದವರು ಈ ಸಂದರ್ಭದಲ್ಲಿದ್ದರು.

ಅಚ್ಚುಕಟ್ಟುತನ
ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಮಹೇಶ್‌ ಶೆಟ್ಟಿ ಕುಡುಪುಲಾಜೆ ಅವರ ನೇತೃತ್ವದಲ್ಲಿ ಊರವರ ಸಹಕಾರದೊಂದಿಗೆ ಒಟ್ಟು 5 ದಿನಗಳ ಕಾಲ ನಡೆದ ಉತ್ಸವ ಅತ್ಯಂತ ಅಚ್ಚುಕಟ್ಟಾಗಿ ನೆರವೇರಿತು. ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗಿದ್ದು ತೆಳ್ಳಾರಿನ ಯುವಕರು, ಸ್ವಯಂ ಸೇವಕರು ಈ ನಿಟ್ಟಿನಲ್ಲಿ ಬಹಳ ಶಿಸ್ತು ಹಾಗೂ ಆಸ್ಥೆಯಿಂದ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂತು. ಅರ್ಚಕರಾದ ರಾಘವೇಂದ್ರ ಭಟ್‌ ಮತ್ತು ಗುತ್ತು ಬರ್ಕೆಯವರ ನೇತೃತ್ವದಲ್ಲಿ ವೈದಿಕ ಕಾರ್ಯಗಳು ಜರುಗಿತು. ಐದು ದಿನಗಳ ಕಾಲವೂ ಬೆಳಿಗ್ಗೆ ಹಾಗೂ ಸಂಜೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

ಸಿಡಿಮದ್ದು ಪ್ರದರ್ಶನ
ಆಗಸದಲ್ಲಿ ಬಣ್ಣದ ಚಿತ್ತಾರ ಮೂಡಿಸಿದ ಸಿಡಿಮುದ್ದು ಪ್ರದರ್ಶನ ನೆರೆದವರ ಮನೆಸೂರೆಗೊಂಡಿತು. ಅತ್ಯಾಕರ್ಷಕ ಸಿಡಿಮುದ್ದು, ಚೆಂಡೆ, ವಾದ್ಯಗಳ ಮೇಳ ಉತ್ಸವಕ್ಕೆ ಮೆರುಗು ನೀಡಿತ್ತು. ಜಗಮಗಿಸುವ ಲೈಟಿಂಗ್ಸ್‌ ಎಲ್ಲವೂ ಉತ್ಸವದ ವೈಭವಕ್ಕೆ ಸಾಕ್ಷಿಯಾಗಿತ್ತು.

ಚಿತ್ರ : ರಾಮಕೃಷ್ಣ ತೆಳ್ಳಾರು (ಶಿವಗುರು ಸ್ಟುಡಿಯೋ)









































































































error: Content is protected !!
Scroll to Top