ಕುಂದೇಶ್ವರ ಸಮ್ಮಾನ್ ಪ್ರಶಸ್ತಿಗೆ ಕಾವ್ಯಶ್ರೀ ಅಜೀರು ಆಯ್ಕೆ

ಉಮೇಶ್ ಮಿಜಾರ್ ಗೆ ಕಲಾಭೂಷಣ ಪ್ರಶಸ್ತಿ

ಮಂಗಳೂರು : ಕಾರ್ಕಳ ಹಿರ್ಗಾನ ಶ್ರೀ ಕುಂದೇಶ್ವರ ಕ್ಷೇತ್ರದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಶ್ರೀ ಕುಂದೇಶ್ವರ ಸಮ್ಮಾನ್ ಪ್ರಶಸ್ತಿಗೆ ಯಕ್ಷರಂಗದ ಅಗ್ರಮಾನ್ಯ ಮಹಿಳಾ ಭಾಗವತರಾದ ಕಾವ್ಯಶ್ರೀ ಅಜೇರು ಅವರನ್ನು ಆಯ್ಕೆ ಮಾಡಲಾಗಿದೆ.
ಶ್ರೀ ಕುಂದೇಶ್ವರ ದೇಗುಲದ ಧರ್ಮದರ್ಶಿಯಾಗಿ, ಯಕ್ಷಗಾನ ಮೇಳ ಸಂಘಟಕ, ಕಲಾವಿದ, ಅರ್ಥಧಾರಿಯಾಗಿದ್ದ ದಿ. ರಾಘವೇಂದ್ರ ಭಟ್ ಸ್ಮರಣಾರ್ಥ ಕ್ಷೇತ್ರದ ವತಿಯಿಂದ ಪ್ರತಿ ವರ್ಷ ಪ್ರಶಸ್ತಿ ನೀಡಲಾಗುತ್ತಿದೆ. ಜ.23ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಆಯ್ಕೆ ಸಮಿತಿ ಸಂಚಾಲಕ ಜಿತೇಂದ್ರ ಕುಂದೇಶ್ವರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ವರ್ಷಾವಧಿ ಜಾತ್ರೆ
ಶ್ರೀ ಕುಂದೇಶ್ವರ ಕ್ಷೇತ್ರದಲ್ಲಿ ಜ. 21ರಿಂದ 23ರವರೆಗೆ ವರ್ಷಾವಧಿ ಜಾತ್ರೆ ನಡೆಯಲಿದ್ದು, ಜ. 23ರಂದು ರಾತ್ರಿ 7 ಗಂಟೆಯಿಂದ ರಾಮಚಂದ್ರ ಭಟ್ ಎಲ್ಲೂರು ನಿರ್ದೇಶನದಲ್ಲಿ ಕದ್ರಿ ಮಹಿಳಾ ಯಕ್ಷಕೂಟದವರಿಂದ ಮಹಿಳಾ ಯಕ್ಷಗಾನ, ನಮ್ಮ ಬೆದ್ರ ತಂಡದವರಿಂದ ತುಳು ನಾಟಕ ಪ್ರದರ್ಶನಗೊಳ್ಳಲಿದೆ. ಇದೇ ಸಂದರ್ಭ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಹಿಂದೆ ಸಾಲಿಗ್ರಾಮ ಮೇಳದ ಸಂಚಾಲಕ ಕಿಶನ್ ಹೆಗ್ಡೆ, ರಮೇಶ್ ಭಂಡಾರಿ, ಪಟ್ಲ ಸತೀಶ್ ಶೆಟ್ಟಿ, ಶಶಿಕಾಂತ್ ಶೆಟ್ಟಿ ಕಾರ್ಕಳ, ರಾಘವೇಂದ್ರ ಮಯ್ಯ, ಕಟೀಲು ಶ್ರೀಹರಿ ನಾರಾಯಣದಾಸ ಆಸ್ರಣ್ಣ, ಲೋಕೇಶ್ ಮಚ್ಚೂರು ಮೊದಲಾದವರಿಗೆ ಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.

ರಂಗಭೂಮಿ ಕಲಾವಿದರಿಗೆ ನೀಡಲಾಗುವ ಕುಂದೇಶ್ವರ ಕಲಾಭೂಷಣ ಪ್ರಶಸ್ತಿಯನ್ನು ಈ ಬಾರಿ ಉಮೇಶ್ ಮಿಜಾರು ಅವರಿಗೆ ಪ್ರದಾನ ಮಾಡಲಾಗುವುದು. ಸಮಾರಂಭದ ಬಳಿಕ ನಮ್ಮ ಬೆದ್ರ ಕಲಾವಿದರಿಂದ ವೈರಲ್ ವೈಶಾಲಿ ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಜಿತೇಂದ್ರ ಅವರು ತಿಳಿಸಿದರು.

ಕಾವ್ಯಶ್ರೀ ಅಜೇರು ಕುರಿತು
ತಮ್ಮ 9ನೇ ವಯಸ್ಸಿನಲ್ಲೇ ಯಕ್ಷಗಾನ ಭಾಗವತಿಕೆಯನ್ನು ಕಲಿಯಲು ಆರಂಭಿಸಿದ ಕಾವ್ಯಶ್ರೀ, ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಂತಹ ದಿಗ್ಗಜರಿಂದ ಮಾರ್ಗದರ್ಶನ ಪಡೆದವರು. 21 ವರ್ಷಗಳಿಂದ ಯಕ್ಷಗಾನ ಭಾಗವತಿಕೆಯಲ್ಲಿ ತೊಡಗಿಸಿಕೊಂಡಿರುವ ಕಾವ್ಯಶ್ರೀ ಅವರು, ತೆಂಕುತಿಟ್ಟು ಯಕ್ಷಗಾನ ರಂಗದ ಅಗ್ರಮಾನ್ಯ ಮಹಿಳಾ ಭಾಗವತರಾಗಿ ಗುರುತಿಸಿಕೊಂಡಿದ್ದಾರೆ. ಮಂಗಳೂರು ಆಕಾಶವಾಣಿಯ ‘ಬಿ’ ಗ್ರೇಡ್ ಕಲಾವಿದೆಯಾಗಿರುವ ಅವರು ದೂರದರ್ಶನ ಹಾಗೂ ಚಂದನ ವಾಹಿನಿಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ತೆಂಕು ಮತ್ತು ಬಡಗು ಉಭಯ ತಿಟ್ಟುಗಳಲ್ಲೂ ಪ್ರೌಢಿಮೆ ಹೊಂದಿರುವ ಕಾವ್ಯ ಶ್ರೀ ಎರಡೂ ಶೈಲಿಗಳ ಪ್ರಸಿದ್ಧ ಭಾಗವತರೊಂದಿಗೆ ಜುಗಲ್ಬಂದಿ ನಡೆಸಿ ಸೈ ಎನಿಸಿಕೊಂಡಿದ್ದಾರೆ.
ಕಾವ್ಯಶ್ರೀ ಅವರು ಕೇವಲ ಹವ್ಯಾಸಿ ಕಲಾವಿದೆಯಾಗಿ ಉಳಿಯದೇ, ಕಟೀಲು ಮೇಳ, ಬಪ್ಪನಾಡು ಮೇಳ, ಹೊಸನಗರ ಮೇಳ ಸೇರಿದಂತೆ ಕರಾವಳಿಯ ಪ್ರಸಿದ್ಧ ಯಕ್ಷಗಾನ ಮೇಳಗಳಲ್ಲಿ ಅತಿಥಿ ಕಲಾವಿದೆಯಾಗಿ ಭಾಗವಹಿಸಿ ಸಾವಿರಾರು ಪ್ರದರ್ಶನಗಳನ್ನು ನೀಡಿದ್ದಾರೆ. ಮುಂಬೈ, ಪುಣೆ, ದೆಹಲಿ, ಹೈದರಾಬಾದ್ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಕಲಾ ಸೇವೆ ಸಲ್ಲಿಸಿದ್ದಾರೆ. ಬಿ.ಇಡಿ ಹಾಗೂ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಶಾಸ್ತ್ರೀಯ ಸಂಗೀತದಲ್ಲಿ ಜೂನಿಯರ್ ಶ್ರೇಣಿ. ಕಾವ್ಯ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಅಜೇರು ಶ್ರೀಪತಿ ನಾಯಕ್ ಮತ್ತು ಉಮಾ ದಂಪತಿ ಪುತ್ರಿ

ಉಮೇಶ್ ಮಿಜಾರು ಕುರಿತು
ಬಡತನದ ಕಾರಣದಿಂದ 9ನೇ ತರಗತಿಗೆ ಶಿಕ್ಷಣ ಮೊಟಕುಗೊಳಿಸಿ ಉದ್ಯೋಗಕ್ಕಾಗಿ ಮುಂಬೈಗೆ ವಲಸೆ ಹೋದವರು ಉಮೇಶ್‌ ಮಿಜಾರು. ಹೋಟೆಲ್ ಕಾರ್ಮಿಕರಾಗಿ ದುಡಿಯುತ್ತಲೇ ರಂಗಭೂಮಿಯತ್ತ ಆಕರ್ಷಿತರಾದ ಅವರು ಮುಂಬೈನಲ್ಲಿ ಮಹಿಳಾ ಪಾತ್ರದ ಮೂಲಕ ಮೊದಲ ಬಾರಿ ಬಣ್ಣ ಹಚ್ಚಿದರು. ಅನಂತರ ನಾಟಕ ರಚನೆ ಹಾಗೂ ಹಾಸ್ಯ ನಟನೆಯಲ್ಲಿ ತೊಡಗಿಸಿಕೊಂಡ ಉಮೇಶರು 1996ರಲ್ಲಿ ‘ನಮ್ಮ ಕಲಾವಿದೆರ್ ಬೆಳ್ಳಿ’ ತಂಡವನ್ನು ಕಟ್ಟಿ ಯಶಸ್ವಿ ಸಂಘಟಕರಾದರು. ಅನೇಕ ತುಳು ನಾಟಕಗಳನ್ನು ರಚಿಸಿ ನಿರ್ದೇಶಿಸಿರುವ ಇವರ ಖ್ಯಾತಿ ರಂಗಭೂಮಿಯಿಂದ ಬೆಳ್ಳಿಪರೆದೆಗೂ ವಿಸ್ತರಿಸಿತು.
35 ವರ್ಷಗಳ ಕಲಾ ಬದುಕಿನಲ್ಲಿ 80 ತುಳು ಸಿಸಿಮಾಗಳಲ್ಲಿ, ಆರು ಕನ್ನಡ ಸಿನಿಮಾ, ಆರು ಧಾರಾವಾಹಿಗಳಲ್ಲಿ ನಟಿಸಿರುವ ಉಮೇಶ್ ಮಿಜಾರ್ ಅವರು ಅಭಿನಯಿಸಿರುವ ತುಳು ನಾಟಕಗಳು ಅನೇಕ.









































































































error: Content is protected !!
Scroll to Top