ಕಾರ್ಕಳ : ಕಾರ್ಕಳ ಉಪವಿಭಾಗದ ಎಎಸ್‌ಪಿ ಡಾ. ಹರ್ಷ ಪ್ರಿಯಂವದಾ ಅವರು ಮುಂಭಡ್ತಿಗೊಂಡು ತೆರಳಿದ ಬಳಿಕ ಕಾರ್ಕಳದಲ್ಲಿ ಅಕ್ರಮ ಚಟುವಟಿಕೆಗಳು ಮತ್ತೆ ಗರಿಗೆದರಿದೆ. 2025ರ ಫೆಬ್ರವರಿಯಲ್ಲಿ ಡಾ. ಹರ್ಷ ಅವರು ಅಧಿಕಾರ ವಹಿಸಿದ ಬಳಿಕ ಉಪವಿಭಾಗದ ವ್ಯಾಪ್ತಿಯಲ್ಲಿ ಬಹುತೇಕವಾಗಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿತ್ತು. ಡಿ. 31ರಂದು ಅವರು ಸಿಐಡಿ ಎಸ್ಪಿಯಾಗಿ ಭಡ್ತಿಗೊಂಡ ಬಳಿಕ ಕೆಲವೊಂದು ಬಾರ್ ಆ್ಯಂಡ್ ರೆಸ್ಟೋರೆಂಟ್, ವೈನ್ ಶಾಪ್‌ಗಳು ನಿಯಮ ಮೀರಿ ಅಂದರೆ ಬೆಳ್ಳಂಬೆಳಗ್ಗೆಯೇ ತೆರೆದು ಗ್ರಾಹಕರಿಗೆ ಮದ್ಯ ನೀಡುತ್ತಿರುವ ಕುರಿತು ಆರೋಪ ಕೇಳಿಬರುತ್ತಿದೆ. ಡಾ. ಹರ್ಷ ಪ್ರಿಯಂ ಅವಧಿಯಲ್ಲಿ ಸರಕಾರದ ನಿಯಮದಂತೆಯೇ ಮದ್ಯದಂಗಡಿಗಳು ಕಾರ್ಯಾಚರಿಸುತ್ತಿದ್ದು, ಮಟ್ಕಾ ಸೇರಿದಂತೆ ಇತರ ಕೆಲವು ಕಾನೂನು ಬಾಹಿರ ಚಟುವಟಿಕೆಗಳು ಮತ್ತೆ ಪ್ರಾರಂಭಗೊಂಡಿದೆ ಎನ್ನಲಾಗುತ್ತಿದೆ.
ಸಿಎಲ್-7 ಅನುಮತಿ ಹೊಂದಿರುವ ಬಾರ್‌ಗಳು ಬೆಳಿಗ್ಗೆ 9ರಿಂದ ರಾತ್ರಿ 12 ಗಂಟೆವರೆಗೆ, ಸಿಎಲ್-9 ಪರವಾನಗಿ ಹೊಂದಿರುವ ಬಾರ್‌ಗಳು ಬೆಳಿಗ್ಗೆ 10ಗಂಟೆಯಿಂದ ರಾತ್ರಿ 11:30ವರೆಗೆ ವ್ಯವಹಾರ ನಡೆಸಬಹುದಾಗಿದೆ. ವೈನ್ ಶಾಪ್‌ಗಳು ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10:30ರವರೆಗೆ ನಿಯಮಪ್ರಕಾರ ಕಾರ್ಯನಿರ್ವಹಿಸಬಹುದಾಗಿದೆ. ಆದರೆ, ಕಾರ್ಕಳದಲ್ಲಿ ಕೆಲವೊಂದು ವೈನ್ ಶಾಪ್‌ಗಳು ಮುಂಜಾನೆಯೇ ತೆರೆದು ಮದ್ಯ ಮಾರಾಟ ಮಾಡಲಾಗುತ್ತಿದೆ ಎನ್ನುವ ದೂರುಗಳು ಕೇಳಿಬರುತ್ತಿವೆ. ಎಎಸ್‌ಪಿ ಡಾ. ಹರ್ಷ ಅವರು ಕಠಿಣ ನಿಯಮ ತಳೆದ ಪರಿಣಾಮ ನಿಯಮ ಬಾಹಿರ ವ್ಯವಹಾರಗಳು ಸಂಪೂರ್ಣವಾಗಿ ಹತೋಟಿಗೆ ಬಂದಿತ್ತು.





















