ಕರ್ನಾಟಕ ಭಿಕ್ಷಾಟನೆ ನಿಷೇಧ ಅಧಿನಿಯಮ 1975

ವ್ಯಕ್ತಿಗಳು ಭಿಕ್ಷೆ ಬೇಡುವುದನ್ನು ನಿಷೇಧಿಸಿ, ಸಾರ್ವಜನಿಕವಾಗಿ ಭಿಕ್ಷೆ ಬೇಡುವ ಭಿಕ್ಷುಕರನ್ನು ಬಂಧಿಸಿ ಅವರಿಗೆ ಸೂಕ್ತ ತರಬೇತಿ, ಆಶ್ರಯ ಮತ್ತಿತರ ರೀತಿಯ ಪರಿಹಾರಗಳನ್ನು ನೀಡುವ ಉದ್ದೇಶದಿಂದ ಕರ್ನಾಟಕ ಭಿಕ್ಷಾಟನೆ ನಿಷೇಧ ಅಧಿನಿಯಮ 1975 ಎಂಬ ಕಾನೂನು ದಿನಾಂಕ 06-06-1975 ರಿಂದ ನಮ್ಮ ರಾಜ್ಯದಲ್ಲಿ ಜಾರಿಯಲ್ಲಿರುತ್ತದೆ. ಈ ಕಾನೂನಿನ ಪ್ರಕಾರ ಭಿಕ್ಷಾಟನೆ ಅಂದರೆ ಭಿಕ್ಷೆಯನ್ನು ಬೇಡುವ ಉದ್ದೇಶದಿಂದ ಹಣಕ್ಕಾಗಿ, ಆಹಾರಕ್ಕಾಗಿ ಅಥವಾ ಬಟ್ಟೆ ಬರೆ ಮುಂತಾದ ವಸ್ತುಗಳಿಗಾಗಿ ಯಾವುದೇ ಒಬ್ಬ ಪುರುಷ ಅಥವಾ ಮಹಿಳೆಯು ನೇರವಾಗಿ ಅಥವಾ ಪರೋಕ್ಷವಾಗಿ ಅಂದರೆ ಹಾಡುವ ಅಥವಾ ಕುಣಿಯುವ ಮೂಲಕವಾಗಲಿ, ಭವಿಷ್ಯವನ್ನು ಹೇಳುವ ಮೂಲಕವಾಗಲಿ ಅಥವಾ ತನ್ನ ಕೈ ಚಳಕ ಮಾಡಿ ತೋರಿಸುವ ಮೂಲಕವಾಗಲಿ ಅಥವಾ ವಸ್ತುಗಳನ್ನು ಮಾರಾಟ ಮಾಡುವ ಮೂಲಕವಾಗಲಿ ಅಥವಾ ಇತರ ಯಾವುದೇ ಸೋಗಿನಿಂದ ಸಾರ್ವಜನಿಕ ಸ್ಥಳದಲ್ಲಿ ಭಿಕ್ಷೆಯನ್ನು ಯಾಚಿಸುವ ಅಥವಾ ಸ್ವೀಕರಿಸುವ ಮತ್ತು ಈ ಉದ್ದೇಶಕ್ಕಾಗಿ ಯಾವುದೇ ಸಾರ್ವಜನಿಕ ಸ್ಥಳವನ್ನು ಪ್ರವೇಶಿಸುವ, ಭಿಕ್ಷೆಯನ್ನು ಪಡೆಯುವ ಉದ್ದೇಶದಿಂದ ಮನುಷ್ಯ ಅಥವಾ ಪ್ರಾಣಿಯನ್ನು ವಿಕೃತಿ ಅಥವಾ ಅಂಗವಿಕಲತೆಯನ್ನು ಹೊಂದಿರುವಂತೆ ತೋರಿಸುವ ಅಥವಾ ಪ್ರದರ್ಶಿಸುವ ಮತ್ತು ತನಗೆ ಜೀವನದ ನಿರ್ವಹಣೆಗಾಗಿ ಯಾವುದೇ ರೀತಿಯ ಮೂಲವಿಲ್ಲದೆ ಕೇವಲ ಭಿಕ್ಷಾಟನೆ ಮೂಲಕ ತನ್ನ ಜೀವನವನ್ನು ಸಾಗಿಸುತ್ತಿರುವುದಾಗಿ ತಿಳಿಸಿ ಸಾರ್ವಜನಿಕ ಸ್ಥಳದಲ್ಲಿ ಅಲೆದಾಡುವ ಇತ್ಯಾದಿ ಕೃತ್ಯಗಳು ಶಿಕ್ಷಾರ್ಹ ಅಪರಾಧವಾಗಿರುತ್ತದೆ.

ಈ ರೀತಿಯ ಅಪರಾಧವನ್ನು ನಡೆಸುವ ವ್ಯಕ್ತಿಯನ್ನು ಸಂಬಂಧಪಟ್ಟ ವ್ಯಾಪ್ತಿಯ ಪೋಲೀಸ್ ಅಧಿಕಾರಿಯು ಬಂಧಿಸಿ ಆತನನ್ನು ವಿಚಾರಣೆಗೆ ಒಳಪಡಿಸಿ 24 ಗಂಟೆ ಸಮಯದ ಒಳಗಾಗಿ ಸಂಬಂಧಪಟ್ಟ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅಂದರೆ ತಹಶೀಲ್ದಾರ್ ಅಥವಾ ನ್ಯಾಯಿಕ ಮ್ಯಾಜಿಸ್ಟ್ರೇಟ್ (ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್) ಸಮಕ್ಷಮ ಹಾಜರು ಪಡಿಸಬೇಕಾಗಿರುತ್ತದೆ. ಈ ರೀತಿಯಾಗಿ ಭಿಕ್ಷಾಟನೆಯ ಆಪಾದನೆ ಹೊಂದಿರುವ ವ್ಯಕ್ತಿಯ ಮೇಲಿನ ಆಪಾದನೆಯು ಪ್ರಕರಣದ ತನಿಖೆಯ ಸಂದರ್ಭದಲ್ಲಿ ರುಜುವಾತಾದಲ್ಲಿ ಸೂಕ್ತ ಆದೇಶದ ಮೂಲಕ ನ್ಯಾಯಾಧೀಶರು ಅಂತಹ ವ್ಯಕ್ತಿಯನ್ನು ಗರಿಷ್ಠ 12 ತಿಂಗಳ ಅವಧಿಗೆ ಮೀರದಂತೆ ಸರಕಾರದ ನಿಯಂತ್ರಣಕೊಳಪಟ್ಟ ಪರಿಹಾರ ಕೇಂದ್ರದಲ್ಲಿ ಬಂಧನದಲ್ಲಿರಿಸುವಂತೆ ಆದೇಶಿಸುವ ಅಧಿಕಾರವನ್ನು ನ್ಯಾಯಾಧೀಶರು ಹೊಂದಿರುತ್ತಾರೆ. ಆದರೆ ಯಾವುದೇ ಧರ್ಮಕ್ಕೆ ಸೇರಿದ ಒಬ್ಬ ಧಾರ್ಮಿಕ ಭಿಕ್ಷಾ ಕೇಂದ್ರ ಪರಿಹಾರ ಸಮಿತಿಯಿಂದ ಲೈಸೆನ್ಸ್ ಅನ್ನು ಪಡೆದು ರೂಢಿ ಅಥವಾ ಧರ್ಮದ ಮೂಲಕ ಅನುಮೋದಿಸಲಾದ ಯಾವುದೇ ಧಾರ್ಮಿಕ ವ್ರತ ಅಥವಾ ಕರ್ತವ್ಯದ ನಿರ್ವಹಣೆಯಲ್ಲಿ ಉಪದ್ರವಕಾರಿಯಾಗದೇ ಖಾಸಗಿ ಅಥವಾ ಸಾರ್ವಜನಿಕ ಸ್ಥಳದಲ್ಲಿ ಭಿಕ್ಷೆಯನ್ನು ಸಂಗ್ರಹಿಸಿದರೆ ಅಥವಾ ಯಾವುದೇ ಧಾರ್ಮಿಕ ಅಥವಾ ಜಾತ್ಯತೀತ ಸಾರ್ವಜನಿಕ ಸಂಸ್ಥೆಗಾಗಿ ಅಥವಾ ಸಾರ್ವಜನಿಕರ ಒಳಿತಿಗಾಗಿ ಯಾವುದೇ ಉದ್ದೇಶವನ್ನು ವೃದ್ಧಿಗೊಳಿಸುವುದಕ್ಕಾಗಿ ನಗದಾಗಿ ಅಥವಾ ವಸ್ತು ರೂಪದಲ್ಲಿ ವಂತಿಗೆಗಳನ್ನು ಸಂಗ್ರಹಿಸಿದಲ್ಲಿ ಅಥವಾ ಒಬ್ಬ ವಿದ್ಯಾರ್ಥಿಯು ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸುವುದಕ್ಕಾಗಿ ಸಾರ್ವಜನಿಕರಿಂದ ಹಣವನ್ನು ಕೇಳಿ ಸಂಗ್ರಹಿಸುವ ಪ್ರಸಂಗಗಳು ಮೇಲ್ಕಾಣಿಸಿದ ಕಾನೂನಿನ ನಿಯಮಾನುಸಾರದ ಚೌಕಟ್ಟಿನ ವ್ಯಾಪ್ತಿಯಲ್ಲಿ ಬರುವುದಿಲ್ಲ ಮತ್ತು ಇದನ್ನು ಭಿಕ್ಷಾಟನೆ ಎಂದು ಪರಿಗಣಿಸಲಾಗುವುದಿಲ್ಲ.











































error: Content is protected !!
Scroll to Top