ಬಿ. ಎಲ್. ಸಂತೋಷ್ ದಿಕ್ಸೂಚಿ ಭಾಷಣ – ದೋಸೆ ಕ್ಯಾಂಪ್
ಕಾರ್ಕಳ : ಅಟಲ್ ಬಿಹಾರಿ ವಾಜಪೇಯಿ ಅವರ ಜನಶತಾಬ್ದಿಯ ಪ್ರಯುಕ್ತ ಕಾರ್ಕಳ ಬಿಜೆಪಿ ವತಿಯಿಂದ ಡಿ. 25ರಂದು ತಾಲೂಕು ಕಚೇರಿ ಬಳಿಯಿರುವ ಅಟಲ್ ಉದ್ಯಾನವನದಲ್ಲಿ ಅಟಲ್ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ನವೀನ್ ನಾಯಕ್ ತಿಳಿಸಿದ್ದಾರೆ.
ಅವರು ಡಿ.23ರಂದು ಸುದ್ದಿಗೋಷ್ಠಿ ನಡೆಸಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ಸಂಜೆ 4:30ಕ್ಕೆ ಪಾರ್ಕ್‌ನಲ್ಲಿರುವ ವಾಜಪೇಯಿ ಅವರ ಮೂರ್ತಿಗೆ ಪುಷ್ಪಾರ್ಚನೆ ನಡೆಯಲಿದೆ. 5 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ವಾಜಪೇಯಿ ಅವರ ಜೀವನ ಚರಿತ್ರೆಯನ್ನು ಬಿಂಬಿಸುವ ವಿಡಿಯೋ ಪ್ರದರ್ಶನ, ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ದೇಶಭಕ್ತಿ ಬಿಂಬಿಸುವ ಸಮೂಹ ಗೀತೆಗಳ ಗಾಯನ ಹಾಗೂ ವಿವಿಧ ಭಾವಭಕ್ತಿ ಕಾರ್ಯಕ್ರಮಗಳು ಜರುಗಲಿವೆ. ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕ ಸುನಿಲ್ ಕುಮಾರ್, ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು ಸೇರಿದಂತೆ ಹಿರಿಯ ನಾಯಕರು ಭಾಗವಹಿಸಲಿದ್ದು, ಕಾರ್ಕಳ ತಾಲೂಕು ವ್ಯಾಪ್ತಿಯ ಬೂತ್ ಮಟ್ಟದಿಂದ ಹಿಡಿದು ಹಿರಿಯ ಕಾರ್ಯಕರ್ತರು ಸೇರಿದಂತೆ 2500ಕ್ಕೂ ಅಧಿಕ ಕಾರ್ಯಕರ್ತರೂ ಪಾಲ್ಗೊಳ್ಳಲಿದ್ದಾರೆ. ಪರಿಸರ ಪ್ರೇಮಿಯಾಗಿದ್ದ ಅಟಲ್ ಅವರ ನೆನಪಿನಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ವರ್ಷಪೂರ್ತಿ ಈ ಅಭಿಯಾನ ಮುಂದುವರಿಯಲಿದೆ. ವಿಶೇಷವಾಗಿ ಕಾರ್ಯಕ್ರಮದಲ್ಲಿ ದೋಸೆ ಕ್ಯಾಂಪ್ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹಾವೀರ ಹೆಗ್ಡೆ, ಬಿಜೆಪಿ ಯುವಮೋರ್ಚಾ ರಾಜ್ಯ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ, ಕಾರ್ಕಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬೋಳ ಸತೀಶ್ ಪೂಜಾರಿ, ಕಾರ್ಕಳ ಯುವಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ ಉಪಸ್ಥಿತರಿದ್ದರು.
























