ಚಳಿಗಾಲದಲ್ಲಿ ತ್ವಚೆಯ ಆರೈಕೆ

ಚಳಿಗಾಲದಲ್ಲಿ ಕಾಡುವ ಸಮಸ್ಯೆಗಳು ಅಷ್ಟಿಷ್ಟಲ್ಲ. ಒಣ ಚರ್ಮ, ಒಡೆದ ಹಿಮ್ಮಡಿ, ಒರಟು ತುಟಿಗಳು ದೊಡ್ಡ ಸಮಸ್ಯೆಯಾಗಿ ಕಾಣುತ್ತದೆ. ಚರ್ಮದ ಆರೈಕೆಯೇ ದೊಡ್ಡ ಸವಾಲು ಈ ಚಳಿಗಾಲದಲ್ಲಿ. ವಾತ ದೋಷವು ಪ್ರಬಲವಾಗಿರುವುದರಿಂದ ವಾತಾವರಣವು ರೂಕ್ಷವಾಗಿರುತ್ತದೆ. ಇದರ ಪರಿಣಾಮ ತ್ವಚೆಯ ಸಮಸ್ಯೆಗಳು ಜಾಸ್ತಿಯಾಗುವುದು. ಇದಕ್ಕೆ ಉತ್ತಮ ಉಪಾಯ ತಿಳಿದುಕೊಳ್ಳೋಣ.

ಚಳಿಗೆ ನೀರು ಕುಡಿಯಲು ಮರೆತು ಹೋಗುತ್ತೇವೆ ಒಣ ಚರ್ಮದಿಂದ ರಕ್ಷಿಸಲು ಮೊದಲು ನೀರು ಕುಡಿಯಿರಿ. ಆಹಾರದಲ್ಲಿ ಸ್ನಿಗ್ಧ ಪದಾರ್ಥವನ್ನು ಬಳಸಿ. ತುಪ್ಪ, ಬೆಣ್ಣೆ, ಎಣ್ಣೆಯನ್ನು ಬಳಸಿ. ಈ ಕಾಲದಲ್ಲಿ ನಮ್ಮ ಜಠರಾಗ್ನಿಯು ತೀಕ್ಷ್ಣವಿರುವುದರಿಂದ ತಿಂದಂತಹ ಆಹಾರ ಬೇಗ ಜೀರ್ಣವಾಗುತ್ತದೆ. ಆದರೆ, ಸೇವಿಸುವ ಆಹಾರ ನಮ್ಮ ದೇಹ ಪ್ರಕೃತಿಗೆ ತಕ್ಕಂತೆ ಇರಲಿ. ಅತಿಯಾಗಿ ಸೇವಿಸುವುದು ಒಳ್ಳೆಯದಲ್ಲ.

ಆಹಾರವು ಬಿಸಿಯಾಗಿರಲಿ. ಬೇಯಿಸಿ ಸೇವಿಸಿದರೆ ಉತ್ತಮ. ಸ್ವಲ್ಪ ಜಿಡ್ಡಿನ ಅಂಶ ಕೂಡಿರಲಿ. ಮಸಾಲೆ ಪದಾರ್ಥಗಳಾದ ಲವಂಗ, ಜೀರಿಗೆ, ಚಕ್ಕೆ, ಶುಂಠಿ, ಅರಶಿನ ಬಳಸಬಹುದು. ಈರುಳ್ಳಿ, ಕ್ಯಾರೆಟ್, ಪಾಲಕ್, ಬೆಳ್ಳುಳ್ಳಿ, ಕರಿಮೆಣಸು, ಮೆಂತ್ಯೆ, ಬಾರ್ಲಿ, ಅಕ್ಕಿ, ಗೋಧಿ, ಬೇಳೆ, ಹಾಲು ಬಳಸಿ. ಬಿಸಿಯಾದ ತರಕಾರಿ ಸೂಪುಗಳನ್ನು ಸೇವಿಸಿ. ಅರಿಶಿನ ಹಾಲು ಸೇವಿಸುವುದು ಹಿತಕರ. ಹಣ್ಣುಗಳನ್ನು ಸೇವಿಸಿ. ಜೇನುತುಪ್ಪ, ಬೆಲ್ಲ ಒಳ್ಳೆಯದು. ಶುಂಠಿ ಕಷಾಯ ಅಥವಾ ತುಳಸಿಯ ಕಷಾಯ ಒಳ್ಳೆಯದು.

ಸ್ನಾನದ ನೀರಿಗೆ ನಾಲ್ಕೈದು ಹನಿ ಬೇವಿನ ಎಣ್ಣೆ ಹಾಕಿ. ಚರ್ಮದ ಸೋಂಕನ್ನು ತಡೆಗಟ್ಟಬಹುದು. ಹೊರಗೆ ಹೋಗುವಾಗ ಸ್ವೆಟರ್, ಕ್ಯಾಪ್ ಧರಿಸಿ ಥಂಡಿ ಆಗದಂತೆ ಎಚ್ಚರ ವಹಿಸಿ.

ಆಪಥ್ಯ – ಐಸ್ ಕ್ರೀಮ್, ಕೋಲ್ಡ್ ಡ್ರಿಂಕ್‌, ಫ್ರಿಡ್ಜ್‌ನಲ್ಲಿಟ್ಟ ಆಹಾರ ಸೇವಿಸುವುದು ಅಹಿತಕರ.

ತ್ವಚೆಯ ರಕ್ಷಣೆಗೆ ಹೀಗೆ ಮಾಡಿ
ತ್ವಚೆಯ ರಕ್ಷಣೆಗೆ ಎಣ್ಣೆಯಿಂದ ಅಭ್ಯಂಗ ಮಾಡಿ. ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ. ದಿನಾಲು ಆಗದಿದ್ದರೆ ವಾರಕ್ಕೆ ಎರಡು ಸಲವಾದರೂ ಮಾಡಿ. ಇದರಿಂದ ಚರ್ಮದ ಶುಷ್ಕತೆ ಕಡಿಮೆ ಮಾಡಿ ಚರ್ಮದ ರಕ್ಷಣೆ ಮಾಡುತ್ತದೆ. ಚರ್ಮದ ಕಾಂತಿಯು ಕೂಡ ಹೆಚ್ಚುತ್ತದೆ.

ಮೂಗಿಗೆ ಎರಡೆರಡು ಬಿಂದು ತುಪ್ಪವನ್ನು ಬೆಳಿಗ್ಗೆ ಎದ್ದ ತಕ್ಷಣ ಹಾಕಿ. ಹತ್ತಿ ಬಟ್ಟೆಯನ್ನು ಧರಿಸಿ. ಕಡ್ಡಾಯವಾಗಿ ವ್ಯಾಯಾಮ ಮಾಡಿ. ಪ್ರಾಣಾಯಾಮದಲ್ಲಿ ಕಪಾಲಭಾತಿ, ಬಸ್ತ್ರಿಕಾ, ಸೂರ್ಯಭೇದನ, ನಾಡಿಶೋಧನ ಚಳಿಗಾಲದಲ್ಲಿ ಒಳ್ಳೆಯದು. ಯೋಗಾಸನಗಳಲ್ಲಿ ಭುಜಂಗಾಸನ, ಧನುರಾಸನ, ವೀರಭದ್ರಾಸನ ಮಾಡೋದು ಒಳ್ಳೆಯದು. ಇದರೊಟ್ಟಿಗೆ ಸೂರ್ಯ ನಮಸ್ಕಾರ ದಿನಾಲು ಮಾಡುವುದು ಒಳ್ಳೆಯದು.

ಕಡ್ಲೆ ಹಿಟ್ಟು, ಅರಿಶಿನ, ಜೇನುತುಪ್ಪ, ನಿಂಬೆಹಣ್ಣು, ಹಾಲು ಬೆರೆಸಿ ಫೇಸ್ ಪ್ಯಾಕ್ ಮಾಡಿ ಹಚ್ಚಿರಿ. ಒಣಗಿದ ನಂತರ ಉಗುರು ಬೆಚ್ಚ ನೀರಿನಿಂದ ತೊಳೆಯಿರಿ. ಹಾಲು ಹಾಗೂ ಸೌತೆಕೆಯ ರಸವನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. ಒಣಗಿದ ಮೇಲೆ ಮುಖವನ್ನು ತೊಳೆಯಿರಿ. ಅಲೋವೆರಾ ರಸವನ್ನು ಹಚ್ಚುವುದರಿಂದ ತ್ವಚೆಯ ಹೊಳಪು ಹೆಚ್ಚುತ್ತದೆ ಹಾಗೂ ಶುಷ್ಕತೆ ಕಡಿಮೆಯಾಗುತ್ತದೆ.

ತುಟಿಗೆ ತೆಂಗಿನ ಎಣ್ಣೆ ಅಥವಾ ಜೇನುತುಪ್ಪವನ್ನು ಹಚ್ಚಬಹುದು. ಟೊಮೆಟೊ ರಸವನ್ನು ಮುಖಕ್ಕೆ ಹಚ್ಚಿ ಒಣಗಿದ ನಂತರ ತೊಳೆದುಕೊಳ್ಳಿ. ಇದನ್ನು ದಿನಾಲು ಹಚ್ಚಬಹುದು. ತೆಂಗಿನ ಕಾಯಿಯನ್ನು ರುಬ್ಬಿ ಅದರ ರಸವನ್ನು ತೆಗೆದು ಮುಖಕ್ಕೆ ಹಚ್ಚಿದರೆ ಒಳ್ಳೆಯದು. ಸಾಬೂನಿನ ಬದಲು ಕಡ್ಲೆಹಿಟ್ಟು ಅಥವಾ ಹೆಸರು ಬೇಳೆ ಹಿಟ್ಟನ್ನು ಉಪಯೋಗಿಸಿ.







































error: Content is protected !!
Scroll to Top