ಭಾರತ ಬದಲಾದರು ವಂದೇ ಮಾತರಂ ಬದಲಾಗಲಿಲ್ಲ – ಕೋಟ ಶ್ರೀನಿವಾಸ್ ಪೂಜಾರಿ
ಕಾರ್ಕಳ : ಭಾರತ ಆರ್ಥಿಕವಾಗಿ ಉದ್ಯಮ, ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಮರ್ಥವಾಗಿ, ಸಮೃದ್ಧವಾಗಿ, ಸ್ವಾಭಿಮಾನಿಯಾಗಿ ಹಾಗೂ ಶಕ್ತಿಶಾಲಿಯಾಗಿ ಬೆಳೆದು ನಿಂತಿದೆ. ಇಂದು ಭಾರತ ಬದಲಾದರು, ವಂದೇ ಮಾತರಂ ಬದಲಾಗದೆ ಕೋಟಿ ಕೋಟಿ ಭಾರತೀಯರಲ್ಲಿ ಇಂದಿಗೂ ಅನುರಣಿಸುತ್ತಿದೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆದ ವಂದೇ ಮಾತರಂ -150 ಐತಿಹಾಸಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್ ಮಾತನಾಡಿ, ದೇವರ ಬಗ್ಗೆ ಭಜನೆ ಭಕ್ತಿಗೀತೆ ಹೇಗೆ ಮುಖ್ಯವಾಗುವುದೋ, ಅದೇ ರೀತಿ ದೇಶದ ಬಗ್ಗೆ ಭಕ್ತಿ ಬೇಕು ಅಂದರೆ ವಂದೇ ಮಾತರಂ ಗೀತೆಯನ್ನು ಹೃದಯಪೂರ್ವಕವಾಗಿ ನಮಗೆ ನಾವೇ ಅರ್ಪಿಸಿಕೊಳ್ಳಬೇಕು. ರಾಷ್ಟ್ರ ಭಕ್ತಿಯನ್ನು ಉದ್ದೀಪನಗೊಳಿಸುವ ವಂದೇ ಮಾತರಂ ಗೀತೆ ನಮ್ಮ ದ್ವನಿಯಾಗಿದೆ. ಕೋಟ್ಯಾಂತರ ಭಾರತೀಯರ ಮಂತ್ರ ಶಕ್ತಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಂದೇ ಮಾತರಂನ್ನು ಸಾಮೂಹಿಕವಾಗಿ ಹಾಡಿ, ಸ್ವದೇಶಿ ಮಂತ್ರ ಪ್ರಮಾಣ ವಚನ ಸ್ವೀಕರಿಸಿದರು. ಈ ಸಂದರ್ಭ ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿಯವರು, ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನೇಶ್ ಎಂ. ಕೊಡವೂರ್, ಉಪಪ್ರಾಂಶುಪಾಲ ಸಾಹಿತ್ಯ ಉಪಸ್ಥಿತರಿದ್ದರು. ಉಪನ್ಯಾಸಕ ಸಂತೋಷ್ ನೆಲ್ಲಿಕಾರು ಸ್ವಾಗತಿಸಿದರು. ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥೆ ಸಂಗೀತಾ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ಪಿ.ಆರ್.ಒ. ಜ್ಯೋತಿ ಪದ್ಮನಾಭ ಭಂಡಿ ವಂದಿಸಿದರು.






















