ಕರುಣಾಕರ್ ಶೆಟ್ಟಿ ಬೆಂಬಲ ಭವಿಷ್ಯ ಬದಲಿಸಿತು
ಬಡತನವನ್ನು ಬದಿಗೊತ್ತಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮೆರೆದ ಪ್ರತಿಭೆಯಿವರು. ಕೋರೋನಾ ಸಂದರ್ಭದಲ್ಲಿ ಬಾವಿ ತೋಡಿ ಸುದ್ದಿ ಮಾಡಿದ ಪರಿಶ್ರಮಿಯಿವರು. ಅವರೇ ನಮ್ಮೂರ ಸಾಧಕರು ಸರಣಿಯ ಇಂದಿನ ಅತಿಥಿ ಬೋಳ ಅಕ್ಷತಾ ಪೂಜಾರಿ. ಬೋಳ ಗ್ರಾಮದ ಹೊಸಮನೆಯ ಭೋಜ ಪೂಜಾರಿ ಹಾಗೂ ಪ್ರೇಮಾ ದಂಪತಿ ಪುತ್ರಿ.
ಬೆಳ್ಮಣ್‌ನ ಲಿಟ್ಲ್ ಫ್ಲವರ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಬೆಳ್ಮಣ್ ಪದವಿ ಪೂರ್ವ ಸರಕಾರಿ ಕಾಲೇಜಿನಲ್ಲಿ ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣ, ನಿಟ್ಟೆಯಲ್ಲಿ ಬಿ.ಕಾಂ, ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಸ್ನಾತಕೋತ್ತರ (ಎಂಎಚ್‌ಆರ್‌ಡಿ) ಪದವಿ ಪಡೆದಿದ್ದಾರೆ.

ಪದವಿ ಪೂರ್ವ ಶಿಕ್ಷಣ ಮುಗಿಸಿದ ಸಂದರ್ಭ ಪದವಿ ಶಿಕ್ಷಣ ಪಡೆಯಲು ಅಕ್ಷತಾರಿಗೆ ಆರ್ಥಿಕ ಸಂಕಷ್ಟ ಎದುರಾಯಿತು. ಹೀಗಾಗಿ ದುಡಿಮೆಗೆ ಗಮನ ನೀಡಿದರು. ಕೆಲ ಕಾಲ ಕಾರ್ಕಳದ ಸ್ಥಳೀಯ ಪತ್ರಿಕಾ ಕಚೇರಿಯಲ್ಲಿ ಕೆಲಸ ನಿರ್ವಹಿಸಿದರು. ಆ ವೇಳೆ ಪವರ್ ಲಿಫ್ಟಿಂಗ್ ಪ್ರಾಕ್ಟೀಸ್ ಜತೆಗೆ ಹೈನುಗಾರಿಕೆ, ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡರು.
ತಿರುವುದ ನೀಡಿದ ಸುದ್ದಿ
ಪತ್ರಿಕೆಯಲ್ಲಿ ನಿಟ್ಟೆ ಕಾಲೇಜಿನ ಸುದ್ದಿಯೊಂದು ಪ್ರಕಟವಾಗಿತ್ತು. ಕ್ರೀಡಾ ಪ್ರತಿಭೆಗಳಿಗೆ ರಿಯಾಯಿತಿ ಶುಲ್ಕದಲ್ಲಿ ಪದವಿ ಶಿಕ್ಷಣ ಒದಗಿಸುವುದಾಗಿ ಅದರಲ್ಲಿತ್ತು. ಅದನ್ನು ಓದಿದ ಅಕ್ಷತಾ ಅವರು ನೇರವಾಗಿ ನಿಟ್ಟೆ ಕಾಲೇಜಿಗೆ ತೆರಳಿ ದಾಖಲಾತಿ ಬಗ್ಗೆ ವಿಚಾರಿಸಿದರು. ಸ್ಫೋರ್ಟ್ಸ್ ಕೋಟಾದಲ್ಲಿ ಅರ್ಹತೆ ಇದ್ದಾಗಲೂ ಗ್ರೇಡ್‌ನಲ್ಲಿ ಕಡಿಮೆ ಅಂಕವಿದ್ದ ಕಾರಣ ಸೀಟ್ ಪಡೆಯುವಲ್ಲಿ ವಿಫಲರಾದರು. ಇದರಿಂದ ಅಕ್ಷತಾ ಅವರಿಗೆ ನಿರಾಶೆಯಾಯಿತು.
ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿದ್ದ ಕರುಣಾಕರ್ ಶೆಟ್ಟಿ ಅವರನ್ನು ಭೇಟಿಯಾದೆ. ತನ್ನನ್ನು ಪ್ರಾಂಶುಪಾಲರ ಕಚೇರಿಗೆ ಕರೆದುಕೊಂಡು ಹೋದ ಕರುಣಾಕರ್ ಶೆಟ್ಟಿ ಸರ್ ಅವರು ನನಗೆ ಸೀಟ್ ಕೊಡಿಸಿದರು. ಬಳಿಕ ಸೂಕ್ತ ತರಬೇತಿ, ಮಾರ್ಗದರ್ಶನದೊಂದಿಗೆ ನನ್ನ ಕ್ರೀಡಾ ಬದುಕಿಗೆ ಭದ್ರ ಅಡಿಪಾಯ ಹಾಕಿಕೊಟ್ಟರು. ಅವರ ಸಹಾಯ, ತರಬೇತಿ ಇಲ್ಲದೇ ಹೋಗಿದ್ದರೆ ನಾನಿವತ್ತು ಈ ಹಂತಕ್ಕೆ ತಲುಪಲು ಸುತಾರಾಂ ಸಾಧ್ಯವಾಗುತ್ತಿರಲಿಲ್ಲ. ಅವರೊಂದಿಗೆ ಶ್ಯಾಮ್ ಸುಂದರ್ ಭಟ್, ಜಿಮ್ ಮಾಲಕ ಈಶ್ವರ್ ಕಟೀಲ್, ಎಎಸ್ಐ ಆಗಿರುವ ವಿಜಯ್ ಕಾಂಚನ್ ಬೆಂಬಲ ಸದಾ ಸ್ಮರಣೀಯ ಎನ್ನುತ್ತಾರೆ ಅಕ್ಷತಾ.
ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಉಚಿತವಾಗಿ ಶಿಕ್ಷಣ ಪಡೆದಿರುತ್ತೇನೆ. ಶಿಕ್ಷಣ ಮತ್ತು ಕ್ರೀಡೆಗೆ ಆಳ್ವಾಸ್ ಸಂಸ್ಥೆ ಅಧ್ಯಕ್ಷರಾಗಿರುವ ಡಾ. ಎಂ. ಮೋಹನ್ ಆಳ್ವರು ನೀಡಿರುವ ಪ್ರೋತ್ಸಾಹ, ಸಹಕಾರವನ್ನೂ ನಾನು ಮರೆಯಲ್ಲ ಎನ್ನುತ್ತಾರೆ ಅಕ್ಷತಾ.
ಸಾಲು ಸಾಲು ಚಾಂಪಿಯನ್
2011ರ ಕಾಮನ್‌ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ, 2012ರಲ್ಲಿ ಏಷಿಯನ್ ಕೂಟದಲ್ಲಿ ಚಿನ್ನ, 2014ರಲ್ಲಿ ಅಮೆರಿಕದ ಲಾಸ್ ವೇಗಸ್‌ನಲ್ಲಿ ನಡೆದ ವಿಶ್ವ ಬೆಂಚ್‌ಪ್ರೆಸ್ ಚಾಂಪಿಯನ್‌ಷಿಪ್‌ನಲ್ಲಿ ಎರಡು ಚಿನ್ನ, 2018ರಲ್ಲಿ ದುಬೈನಲ್ಲಿ ನಡೆದ ಏಷ್ಯನ್ ಬೆಂಚ್‌ಪ್ರೆಸ್ ಚಾಂಪಿಯನ್‌ಷಿಪ್‌ನಲ್ಲಿ ಎರಡು ಚಿನ್ನ, 2022ರಲ್ಲಿ ಕಜಕಿಸ್ತಾನದಲ್ಲಿ ನಡೆದ ವಿಶ್ವ ಬೆಂಚ್‌ಪ್ರೆಸ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗಳಿಸಿದರು. 2024ರಲ್ಲಿ ದಕ್ಷಿಣ ಆಫ್ರಿಕಾದ ಪೊಚೆಫ್ಸ್ಟ್ರೂಮ್‌ನಲ್ಲಿ ನಡೆದ ಏಷ್ಯಾ- ಪೆಸಿಫಿಕ್-ಆಫ್ರಿಕನ್ ಪವರ್‌ಲಿಫ್ಟಿಂಗ್ ಮತ್ತು ಬೆಂಚ್‌ಪ್ರೆಸ್ ಚಾಂಪಿಯನ್ ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಅಕ್ಷತಾ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರು.
ಅಕ್ಷತಾ ಅವರನ್ನು ಅರಸಿ ಬಂದ ಪ್ರಶಸ್ತಿ
2014ರಲ್ಲಿ ರಾಜ್ಯ ಸರಕಾರ ಕೊಡಮಾಡುವ ಏಕಲವ್ಯ ಪ್ರಶಸ್ತಿಗೆ ಅಕ್ಷತಾ ಭಾಜನರಾಗಿದ್ದರು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕ್ರೀಡಾ ಮಂತ್ರಿ ಕೆ. ಅಭಯಚಂದ್ರ ಜೈನ್ ಪ್ರಶಸ್ತಿ ಹಸ್ತಾಂತರಿಸಿದ್ದರು. ಕರ್ನಾಟಕ ಪವರ್‌ಲಿಫ್ಟಿಂಗ್ ಅಸೋಸಿಯೇಷನ್ ನೀಡುವ ಕರ್ನಾಟಕ ಶಕ್ತಿನಾರಿ ಪ್ರಶಸ್ತಿ, ಆಫ್ರಿಕಾದಲ್ಲಿ ಬೆಸ್ಟ್ ಲಿಫ್ಟರ್ ಆಫ್ ದ ಟೂರ್ನಿ ಪ್ರಶಸ್ತಿ, ಕಲ್ಕೂರ ಯುವ ಸಾಧನಾ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಸನ್ಮಾನಗಳು ಅಕ್ಷತಾ ಅವರನ್ನು ಅರಸಿ ಬಂದಿದೆ.
ಕೋವಿಡ್ ಸಂದರ್ಭ ಬಾವಿ ಅಗೆದರು
ಲಾಕ್‌ಡೌನ್ ಸಂದರ್ಭದಲ್ಲಿ ದೇಶವೇ ಒಮ್ಮೆ ಸ್ತಬ್ಧವಾಗಿತ್ತು. ಕ್ರೀಡಾ ಚಟುವಟಿಕೆಗಳಿಗೆ ಅವಕಾಶ ಇರಲಿಲ್ಲ. ಈ ಸಮಯದಲ್ಲಿ ಅಕ್ಷತಾ ತಮ್ಮ ಮನೆ ಪಕ್ಕದಲ್ಲಿ ಸಹೋದರರೊಂದಿಗೆ ಸೇರಿ 25 ಅಡಿ ಆಳದ ಬಾವಿಯನ್ನು ತೋಡಿದ್ದರು. ಹಲವಾರು ವರ್ಷಗಳಿಂದ ಕಾಡುತ್ತಿದ್ದ ನೀರಿನ ಸಮಸ್ಯೆಗೆ ಇವರ ಶ್ರಮದ ಫಲವಾಗಿ ಪರಿಹಾರ ದೊರೆಯಿತು.
ಉದ್ಯೋಗಕ್ಕಾಗಿ ಅಲೆದಾಟ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಗೋಲ್ಡ್ ಮೆಡಲ್ ಪಡೆದರೂ ಇತರೆ ಕ್ರೀಡೆಗಳಂತೆ ಪವರ್‌ಲಿಪ್ಟಿಂಗ್‌ಗೆ ಸರಕಾರಿ, ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಕೋಟಾ ದೊರೆಯುತ್ತಿಲ್ಲ. ಅಕ್ಷತಾ ಸರಕಾರಿ ನೌಕರಿಗಾಗಿ ತನ್ನ ಚಿನ್ನದ ಪದಕಗಳನ್ನು ತೆಗೆದುಕೊಂಡು ಕಚೇರಿಯಿಂದ ಕಚೇರಿಗೆ ಅಲೆದಾಟ ನಡೆಸಿದ್ದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸಾಧಕಿಗೆ ಭವಿಷ್ಯ ರೂಪಿಸುವಲ್ಲಿ ಒಂದು ಉದ್ಯೋಗ ದೊರೆಯದಿರುವುದು ಖೇದಕರ. “ನಾನು ಸ್ಪರ್ಧೆಗೆ ಚಿನ್ನದ ಗುರಿಯೊಂದಿಗೆ ಹೋಗುತ್ತಿದ್ದೆ. ಚಿನ್ನದ ಪದಕ ಪಡೆಯುವಲ್ಲಿಯೂ ಯಶಸ್ವಿಯಾಗುತ್ತಿದ್ದರೂ ಉದ್ಯೋಗ ಗಿಟ್ಟಿಸುವಲ್ಲಿ ನಾನು ಫೇಲ್ ಆದೆ” ಎಂದು ಬೇಸರದಿಂದಲೇ ಹೇಳುತ್ತಾರೆ ಅಕ್ಷತಾ.
ಆರ್ಥಿಕ ಸಹಕಾರ
ವಿದೇಶದಲ್ಲಿ ಆಯೋಜನೆಗೊಳ್ಳುವ ಲಿಫ್ಟಿಂಗ್ ಕೂಟಗಳಿಗೆ ಹಾಜರಾಗುವಾಗ ‘ಪವರ್ ಲಿಫ್ಟಿಂಗ್ ಇಂಡಿಯಾ’ ಸಂಸ್ಥೆಯು ಸ್ಫರ್ಧಿಗಳಿಗೆ ಅನುಮತಿ ಮತ್ತು ಮಾರ್ಗದರ್ಶನ ಮಾಡುತ್ತದೆ. ಆದರೆ, ಪ್ರಯಾಣ ಮತ್ತು ಇತರ ಖರ್ಚುಗಳಿಗೆ ಸಂಸ್ಥೆಯಿಂದಾಗಲಿ ಅಥವಾ ಸರಕಾರದಿಂದಾಗಲಿ ಆರ್ಥಿಕ ಬೆಂಬಲ ಲಭಿಸುವುದಿಲ್ಲ. ಹೀಗಾಗಿ ಕ್ರೀಡಾಪಟುಗಳೇ ಹಣ ಹೊಂದಿಸಬೇಕಾದ ಅನಿವಾರ್ಯತೆ ಇದೆ. ಆಗೆಲ್ಲ ಅಕ್ಷತಾರ ನೆರವಿಗೆ ಬರುವುದು ಗೆಳೆಯರು ಮತ್ತು ಕ್ರೀಡಾ ಸಂಘಟನೆಗಳು. ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘ, ಕಾರ್ಕಳ ಗಣೇಶೋತ್ಸವ ಸಮಿತಿ, ಬಸ್ ಏಜೆಂಟರ ಬಳಗ, ಶುಭದ ರಾವ್, ಉದಯ ಶೆಟ್ಟಿ ಮುನಿಯಾಲು, ಸತೀಶ್ ಪೂಜಾರಿ ಬೋಳ, ಸುಪ್ರೀತ್ ಶೆಟ್ಟಿ ಕೆದಿಂಜೆ ಸಹಕಾರವನ್ನು ಸ್ಮರಿಸುವ ಅಕ್ಷತಾ ಬೋಳ ಅವರು ಮಾಜಿ ಶಾಸಕ ಗೋಪಾಲ ಭಂಡಾರಿ ಅವರು ತಾನು ಸ್ಪರ್ಧೆಗಾಗಿ ವಿದೇಶಕ್ಕೆ ತೆರಳುತ್ತಿದ್ದ ವೇಳೆ ಹಾರೈಕೆಯೊಂದಿಗೆ ಪ್ರತಿ ಬಾರಿ 10 ಸಾವಿರ ರೂ. ನೀಡಿ ನೆರವಾಗಿದ್ದರು ಎಂದು ನೆನಪಿಸುತ್ತಾರೆ.
ಹಸೆಮಣೆ ಏರಲಿದ್ದಾರೆ
ಅಕ್ಷತಾ ಅವರು ನ. 24ರಂದು ಪ್ರಶಾಂತ್ ಅವರೊಂದಿಗೆ ಹಸೆಮಣೆ ಏರಲಿದ್ದು, ಬಂಟ್ವಾಳ ತಾಲೂಕು ಸಿದ್ದಕಟ್ಟೆಯ ಹರ್ಷ ಸಭಾಭವನದಲ್ಲಿ ವಿವಾಹ ನೆರವೇರಲಿದೆ.





















