ಕಾರ್ಕಳದ ಅಭಿವೃದ್ಧಿಗೆ ಅಡ್ದಗಾಲು ಹಾಕದಿರಿ

ಬಾಯಿಚಪಲಕ್ಕಾಗಿ ಪತ್ರಿಕಾ ಹೇಳಿಕೆ ನೀಡದಿರಿ – ಕಾಂಗ್ರೆಸ್‌ಗೆ ರವೀಂದ್ರ ಮೊಯ್ಲಿ ಮನವಿ

ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಮಂದಿ ಚುನಾಯಿತರಾಗಿ ಶಾಸಕರಾಗಿದ್ದಾರೆ. ಅವರಲ್ಲಿ ಕರ್ನಾಟಕದ ಮುಖ್ಯಮಂತ್ರಿ ಪದವಿ ಅಲಂಕರಿಸಿದವರಿದ್ದಾಗ್ಯೂ ಕಾರ್ಕಳ ಕ್ಷೇತ್ರದ ಅಭಿವೃದ್ಧಿ ಕಂಡದ್ದು 2004ರಲ್ಲಿ ವಿ. ಸುನಿಲ್ ಕುಮಾರ್ ಶಾಸಕರಾಗಿ ಆಯ್ಕೆಯಾದ ತರುವಾಯ ಎನ್ನುವುದು ನಿರ್ವಿವಾದ‌ ಎಂದು ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ತಿಳಿಸಿದರು.
ಕಾರ್ಕಳ ಕ್ಷೇತ್ರವನ್ನು ಶೈಕ್ಷಣಿಕ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಭಿವೃದ್ಧಿಯತ್ತ ಕೊಂಡೊಯ್ಯಬೇಕೆಂಬ ನಿಟ್ಟಿನಲ್ಲಿ ಸುನಿಲ್‌ ಕುಮಾರ್‌ ಹಲವಾರು ಯೋಜನೆ ಹಾಕಿಕೊಂಡರು. ಶೈಕ್ಷಣಿಕ ಹಬ್ ಆಗಿ ಮಾಡಬೇಕೆನ್ನುವ ಮಹದಾಸೆಯಿಂದ ಈ ಹಿಂದೆ ಬಿಜೆಪಿ ನೇತೃತ್ವದ ಸರಕಾರವಿದ್ದಾಗ ಕಾರ್ಕಳ ತಾಲೂಕಿನಲ್ಲಿ 40 ಸೀಟುಗಳ ಬಿ.ಎಸ್ಸಿ ನರ್ಸಿಂಗ್ ಕಾಲೇಜನ್ನು ಪ್ರಾರಂಭಿಸಲಾಗಿರುತ್ತದೆ. ಸರಕಾರದ ಅಧೀನ ಕಾರ್ಯದರ್ಶಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು 16-03-2023ರಂದು ಮೂಲಭೂತ ಸೌಕರ್ಯಗಳಿಗೆ ಅನುದಾನ ಬರಿಸುವಂತೆ ಆದೇಶ ಹೊರಡಿಸಿರುತ್ತಾರೆ. ಆದರೆ ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ತಂದ ಅನಂತರ ಈ ಎಲ್ಲ ಅಭಿವೃಧಿ ಯೋಜನೆಗಳು ಕುಂಠಿತವಾಗಿದೆ. ಈಗಿನ ಕಾಂಗ್ರೆಸ್‌ ಸರಕಾರ ಅನುದಾನಗಳನ್ನು ತಡೆ ಹಿಡಿದಿರುವ ಪರಿಣಾಮ ವಿಧ್ಯಾರ್ಥಿಗಳು ನಾನಾ ಸಮಸ್ಯೆಗಳನ್ನು ಅನುಭವಿಸುವಂತಾಗಿದೆ.

ಕಾಂಗ್ರೆಸ್‌ ಸರಕಾರದಿಂದ ಸ್ಪಂದನೆಯಿಲ್ಲ
ಪ್ರಸ್ತುತ ಕಾರ್ಕಳ ನರ್ಸಿಂಗ್ ಕಾಲೇಜಿನಲ್ಲಿ ಮೂರು ಬ್ಯಾಚ್‌ನಲ್ಲಿ ನೂರಕ್ಕೂ ಅಧಿಕ ವಿಧ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಈಗಾಗಲೇ ನರ್ಸಿಂಗ್ ಕಾಲೇಜು ನಿರ್ಮಾಣದ ಉದ್ದೇಶಕ್ಕೆ ಕಾರ್ಕಳ ಕಸಬಾ ಗ್ರಾಮದ ಸರ್ವೆ ನಂಬ್ರ 610/3 ಪಿ 1 ವಿಸ್ತೀರ್ಣ 2 ಎಕ್ರೆ ಜಮೀನನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಹೆಸರಿನಲ್ಲಿ ಕಾಯ್ದಿರಿಸಿದೆ. ಕಾರ್ಕಳದ ಶಾಸಕರು ಈಗಾಗಲೇ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು, ಸರಕಾರದ ಮುಖ್ಯ ಕಾರ್ಯದರ್ಶಿಗಳು, ವೈದ್ಯಕೀಯ ಸಚಿವರಾದ ಡಾ. ಶರಣ ಪ್ರಕಾಶ್ ಪಾಟಿಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರಿಗೆ ಕಳೆದ ಎರಡು ವರ್ಷಗಳಿಂಧ ಹಲವಾರು ಬಾರಿ ಲಿಖಿತ ಪತ್ರದ ಮುಖೇನ ಮನವಿ ಸಲ್ಲಿಸಿದ್ದರೂ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿರುವುದಿಲ್ಲ.

ಮಾಹಿತಿ ಕೊರತೆಯೋ – ಪ್ರಚಾರದ ತೆವಲೋ
ಕಾರ್ಕಳ ನರ್ಸಿಂಗ್ ಕಾಲೇಜಿಗೆ ಅಗತ್ಯವಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿ ಮಾಡುವ ಬಗ್ಗೆಯು ಕೂಡ ಸಂಬಂಧಪಟ್ಟ ಸಚಿವರಿಗೆ ಮತ್ತು ಇಲಾಖೆಗೆ ಹಲವಾರು ಬಾರಿ ಶಾಸಕರು ಪತ್ರ ಬರೆದಿದ್ದಾರೆ. ಶಾಸಕರ ಮುತುವರ್ಜಿಯಿಂದ ಕೆಲವು ಖಾಸಗಿ ಕಂಪೆನಿಗಳು ತಮ್ಮ ಸಿಎಸ್‌ಆರ್ ಫಂಡಿನ ಮೂಲಕ ಕಾಲೇಜಿನ ಮೂಲಭೂತ ಸೌಕರ್ಯಗಳಿಗೆ ಅನುದಾನ ಒದಗಿಸಿರುತ್ತಾರೆ. ಮುಖ್ಯವಾಗಿ ಬೋಳಾಸ್ ಕಂಪೆನಿ ಸುಮಾರು 25 ಲಕ್ಷ ರೂ., ಎಂ.ಆರ್.ಪಿ.ಎಲ್. ಸಂಸ್ಥೆ 8.13 ಲಕ್ಷ ರೂ., ರೋಟರಿ ಸಂಸ್ಥೆ ಕಾರ್ಕಳ 62 ಸಾವಿರ ರೂ. ಮತ್ತು ಆರೋಗ್ಯ ಇಲಾಖೆ 3 ಲಕ್ಷ ರೂ. ಹಾಗೂ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯನ್ನು ಕಾಲೇಜಿನ ಮೂಲಭೂತ ಸೌಕರ್ಯಗಳಿಗೆ ವಿನಿಯೋಗಿಸಲಾಗಿದೆ. ಕಾಲೇಜು ಅಭಿವೃದ್ಧಿ ಬಗ್ಗೆ ನಿರಂತರವಾಗಿ ಶಾಸಕರು ಪ್ರಯತ್ನಿಸುತ್ತಿದ್ದರೂ ಬ್ಲಾಕ್ ಕಾಂಗ್ರೆಸ್ಸಿನ ಅಧ್ಯಕ್ಷರು ಮಾಹಿತಿ ಕೊರತೆಯಿಂದಾಗಿಯೋ ಅಥವಾ ಪ್ರಚಾರದ ತೆವಲಿನಿಂದಾಗಿಯೋ ಕಾರ್ಕಳದ ಶಾಸಕರನ್ನು ದೂಷಿಸುವ ಪ್ರವೃತ್ತಿಯಿಂದ ಪ್ರತಿಕ್ರಿಯೆ ನೀಡಿರುವುದು ಸಮಂಜಸವಲ್ಲ.

ಇನ್ನಾದರೂ ಕಾರ್ಕಳ ಕಾಂಗ್ರೆಸ್ ನಾಯಕರು ಕಾರ್ಕಳದ ಅಭಿವೃದ್ಧಿಗೆ ಅಡ್ದಗಾಲು ಹಾಕದೇ ಅದರಲ್ಲಿಯೂ ಮುಖ್ಯವಾಗಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಕಾರ್ಕಳದ ನರ್ಸಿಂಗ್ ಕಾಲೇಜಿಗೆ ಬೇಕಾಗುವ ಮೂಲಭೂತ ಸೌಕರ್ಯ ಒದಗಿಸುವ ಬಗ್ಗೆ ತಮ್ಮ ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟು ಕಾರ್ಕಳದ ಅಭಿವೃದ್ಧಿಗೆ ಸಹಕಾರ ನೀಡಿ, ಬಾಯಿಚಪಲಕ್ಕಾಗಿ ಹೇಳಿಕೆಯನ್ನು ನೀಡುವುದನ್ನು ನಿಲ್ಲಿಸಿ ಎಂದು ರವೀಂದ್ರ ಮೊಯ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









































































































error: Content is protected !!
Scroll to Top