ನಾಡಿನಾದ್ಯಂತ 70ನೇ ಕನ್ನಡ ರಾಜ್ಯೋತ್ಸವ ಆಚರಣೆ : ಗಣ್ಯರಿಂದ ಶುಭಾಶಯ

ಬೆಂಗಳೂರು : ರಾಜ್ಯದಾದ್ಯಂತ 70ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಸೇರಿದಂತೆ ಗಣ್ಯಾತಿ ಗಣ್ಯರು ನಾಡಿನ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು,ಕನ್ನಡ ರಾಜ್ಯೋತ್ಸವ ಎನ್ನುವುದು ಕೇವಲ ಉತ್ಸವ ಅಲ್ಲ. ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿರುವ ಕನ್ನಡಿಗರು ಕನ್ನಡದ ಕರುಳಬಳ್ಳಿಯ ಮೂಲಕ ಒಗ್ಗೂಡಿದ ಪವಿತ್ರ ದಿನ. ಇಂತಹದ್ದೊಂದು ಕನ್ನಡದ ಕನಸು ಸಾಕಾರಗೊಳ್ಳಲು ನಿಸ್ವಾರ್ಥದಿಂದ ಶ್ರಮಿಸಿದ ಲಕ್ಷಾಂತರ ಕನ್ನಡಾಭಿಮಾನಿಗಳ ಶ್ರಮ, ತ್ಯಾಗ, ಬಲಿದಾನಗಳನ್ನು ಈ ದಿನ ಹೆಮ್ಮೆಯಿಂದ ಸ್ಮರಿಸೋಣ. ಕನ್ನಡದ ಭಾಷೆಗೆ ತನ್ನದೇ ಆದ ಅಸ್ಮಿತೆಯಿದೆ. ಅದು ಬಹುತ್ವವನ್ನು ಗೌರವಿಸುವ ಮತ್ತು ಒಕ್ಕೂಟದ ಹಿತವನ್ನು ಕಾಯುವ ಬಾಳನೋಟದ ಅಸ್ಮಿತೆ. ಇದು ಪಂಪನಿಂದ ಕುವೆಂಪು ವರೆಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆದುಬಂದಿರುವ ಜೀವನದರ್ಶನ. ಇದನ್ನೇ ಪಂಪ “ಮಾನವ ಕುಲ ತಾನೊಂದೇ ವಲಂ” ಎಂದು ಹೇಳಿದ್ದು. ಕನ್ನಡ ಭಾಷೆ ಎನ್ನುವುದು ಕೇವಲ ವರ್ಣಮಾಲೆ ಅಲ್ಲ. ಅದು ಕೇವಲ ಶಬ್ದ-ವಾಕ್ಯಗಳಲ್ಲ. ಭಾಷೆಯಲ್ಲಿ ಅದನ್ನಾಡುವ ಮನುಷ್ಯನ ಆಳವಾದ ಭಾವನೆಗಳಿರುತ್ತವೆ, ಪರಸ್ಪರ ಸಂಬಂಧಗಳಿರುತ್ತವೆ, ತನ್ನತನದ ಪ್ರಜ್ಞೆ ಇರುತ್ತದೆ. ಅದು ನಮ್ಮ ಸಂಸ್ಕೃತಿ, ಇತಿಹಾಸ, ನೆಲ-ಜಲದ ಸಂಪತ್ತು ಸೇರಿದಂತೆ ಎಲ್ಲವನ್ನೂ ಒಳಗೊಂಡ ಅಸ್ಮಿತೆ ಎಂದು ಶುಭಾಶಯ ಕೋರಿದ್ದಾರೆ.

ಕನ್ನಡಿಗರಿಗೆ ಕನ್ನಡದಲ್ಲೇ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಇಂದು ನಾವು ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವಾಗ, ಕರ್ನಾಟಕದ ಜನರಿಗೆ ಪ್ರತೀಕವಾಗಿರುವ ಶ್ರೇಷ್ಠತೆ ಮತ್ತು ಶ್ರಮಶೀಲ ಸ್ವಭಾವವನ್ನು ನಾವು ಆಚರಿಸುತ್ತೇವೆ. ಸಾಹಿತ್ಯ, ಕಲೆ, ಸಂಗೀತ ಮತ್ತಿತರ ಕ್ಷೇತ್ರಗಳಲ್ಲಿ ಪ್ರತಿಫಲಿಸುವ ಕರ್ನಾಟಕದ ಶ್ರೀಮಂತ ಸಂಸ್ಕೃತಿಯನ್ನು ಸಹ ನಾವು ಆಚರಿಸುತ್ತೇವೆ. ಈ ರಾಜ್ಯವು ಜ್ಞಾನದಲ್ಲಿ ಅಡಗಿರುವ ಪ್ರಗತಿಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ರಾಜ್ಯದ ಜನರು ಸಂತೋಷ ಮತ್ತು ಆರೋಗ್ಯದಿಂದ ಇರಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಕೇಂದ್ರ ಸಚಿವ ಅಮಿತ್ ಶಾ ಕೂಡ ಕನ್ನಡದಲ್ಲೇ ಪೋಸ್ಟ್ ಮಾಡಿದ್ದು, ಕರ್ನಾಟಕದ ಸಹೋದರ ಸಹೋದರಿಯರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕರ್ನಾಟಕವು ಕಲೆ, ನಾವೀನ್ಯತೆ ಮತ್ತು ಕಲಿಕೆಯ ಶ್ರೀಮಂತ ಪರಂಪರೆಯನ್ನು ಹೊಂದಿದ್ದು, ಇಲ್ಲಿನ ಜನರು ನಮ್ಮ ಸಂಸ್ಕೃತಿ ಮತ್ತು ರಾಷ್ಟ್ರದ ಪ್ರಗತಿಗೆ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ರಾಜ್ಯವು ಸದಾ ಸಮೃದ್ಧಿ ಮತ್ತು ವೈಭವದೊಂದಿಗೆ ಅಭಿವೃದ್ಧಿ ಪಥದತ್ತ ಸಾಗಲಿ ಎಂದು ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪೋಸ್ಟ್ ಮಾಡಿ, ಕನ್ನಡ ಎಂದರೆ ಅಮೃತ ಕರುನಾಡ ಮಣ್ಣೇ ಶ್ರೀಗಂಧ”. ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡ ನೆಲ, ಜಲ, ನಾಡು, ನುಡಿ, ಇತಿಹಾಸ, ಪರಂಪರೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸಂಕಲ್ಪ ಮಾಡೋಣ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂದು ಹೇಳಿದ್ದಾರೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಪೋಸ್ಟ್ ಮಾಡಿ, ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ ಸಾಲನ್ನು ಹಾಕಿ, ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಎಲ್ಲ ಮಹನೀಯರನ್ನು ಸ್ಮರಿಸುತ್ತ, ನನ್ನೆಲ್ಲ ಪ್ರೀತಿಯ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು. ಸವಿಗನ್ನಡದ ಕಂಪು ನಿತ್ಯ ಪಸರಿಸಲಿ. ಪ್ರತಿ ಮನೆ-ಮನವೂ ಕನ್ನಡವಾಗಲಿ. ಜೈ ತಾಯಿ ಭುವನೇಶ್ವರಿ. ಸಿರಿಗನ್ನಡಂ ಗೆಲ್ಗೆ. ಸಿರಿಗನ್ನಡಂ ಬಾಳ್ಗೆ ಎಂದು ಹೇಳಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಅವರು ಟ್ವೀಟ್ ಮಾಡಿ, ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡ ನಾಡಿನ ವೈಭವ, ಕಲೆ, ಸಾಹಿತ್ಯ, ಸಂಸ್ಕೃತಿ ಎಲ್ಲವೂ ಅನನ್ಯ. ಈ ಹೆಮ್ಮೆಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಸಂಕಲ್ಪ ಮಾಡೋಣ ಎಂದು ಹೇಳಿದ್ದಾರೆ.









































error: Content is protected !!
Scroll to Top