ಯಾವುದೇ ಒಂದು ಸ್ಥಿರಾಸ್ತಿ ಅಂದರೆ ಭೂಮಿ ಅಥವಾ ಕಟ್ಟಡದ ಸಂಪೂರ್ಣ ಮಾಲಿಕತ್ವವನ್ನು ನಿರ್ಧರಿಸುವ ಸಂದರ್ಭದಲ್ಲಿ ಅದಕ್ಕೆ ಸಂಬಂಧಪಟ್ಟ ವ್ಯಕ್ತಿಯು ಹೊಂದಿರುವ ಹಕ್ಕಿನ ಸ್ವರೂಪ ಮತ್ತು ಸ್ವಾಧೀನತೆ ಇವೆರಡೂ ಅತ್ಯಂತ ಪ್ರಮುಖವಾದ ಅಂಶಗಳಾಗಿರುತ್ತದೆ. ಈ ಕಾರಣದಿಂದಾಗಿ ಒಬ್ಬ ವ್ಯಕ್ತಿ ತಾನು ಯಾವುದೇ ಸ್ಥಿರಾಸ್ತಿಯ ಮೇಲೆ ಹಕ್ಕನ್ನು ಹೊಂದಿದಾಕ್ಷಣ ತಾನು ಹಕ್ಕು ಹೊಂದುವ ಸ್ಥಿರಾಸ್ತಿಗೆ ಸಂಬಂಧಪಟ್ಟ ಎಲ್ಲಾ ಕಂದಾಯ ದಾಖಲೆಗಳನ್ನು ಸಾಧ್ಯವಾದಷ್ಟು ಬೇಗನೇ ತನ್ನ ಹೆಸರಲ್ಲಿ ಬದಲಾಯಿಸಿಕೊಳ್ಳುವುದು ಹಾಗೂ ತನ್ನ ಹೆಸರಿನ ಸ್ಥಿರಾಸ್ತಿ ಅಥವಾ ಕಟ್ಟಡಕ್ಕೆ ಸಂಬಂಧಪಟ್ಟ ತೀರ್ವೆ ಮತ್ತು ತೆರಿಗೆಯನ್ನು ಸರಕಾರಕ್ಕೆ ನೇರವಾಗಿ ತನ್ನ ಹೆಸರಿನಲ್ಲಿಯೇ ಪಾವತಿಸುವುದು ಅತ್ಯಾವಶ್ಯಕವಾಗಿರುತ್ತದೆ. ಈ ರೀತಿಯಾಗಿ ಕಂದಾಯ ದಾಖಲೆಗಳನ್ನು ಬದಲಾಯಿಸುವ ಪ್ರಕ್ರಿಯೆಗೆ ಕನ್ನಡ ಪದದಲ್ಲಿ ಖಾತಾ ತಬ್ದೀಲಿ ಅಥವಾ ಇಂಗ್ಲೀಷ್ ಪದದಲ್ಲಿ ಮ್ಯುಟೇಶನ್ ಎನ್ನಲಾಗುತ್ತದೆ.
ಯಾವುದೇ ಒಂದು ಕೃಷಿ ಸ್ಥಿರಾಸ್ತಿಗೆ ಸಂಬಂಧಪಟ್ಟ ಕಂದಾಯ ದಾಖಲೆಗಳ ಪೈಕಿ ಆರ್.ಟಿ.ಸಿ ಅಂದರೆ ಪಹಣಿ ಪತ್ರ ಎಂಬ ಕಂದಾಯ ದಾಖಲೆಯು ಬಹಳ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಈ ದಾಖಲೆಯು ಕೃಷಿ ಭೂಮಿಯ ಸ್ವಾಧೀನತೆಯನ್ನು ಹೊಂದಿರುವ ವ್ಯಕ್ತಿಯನ್ನು ನಿರ್ಧರಿಸುವಲ್ಲಿ ಮಹತ್ವವನ್ನು ಹೊಂದಿರುತ್ತದೆ. ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ಕಲಂ 128ರ ಪ್ರಕಾರ ಯಾವುದೇ ಒಬ್ಬ ವ್ಯಕ್ತಿಯು ತಾನು ಕೃಷಿ ಸ್ಥಿರಾಸ್ತಿಯ ಮೇಲಿನ ಯಾವುದೇ ರೀತಿಯ ಹಕ್ಕು, ಸ್ವಾಧೀನತೆ, ಮತ್ತಿತರ ರೀತಿಯ ಯಾವುದೇ ಕಾನೂನುಬದ್ಧ ಹಿತಾಸಕ್ತಿಯನ್ನು ಹೊಂದಿದಾಕ್ಷಣ ಈ ಕುರಿತು ಸೂಕ್ತ ದಾಖಲೆಗಳೊಂದಿಗೆ ಸಂಬಂಧಪಟ್ಟ ತಹಸೀಲ್ದಾರ್‌ರವರಿಗೆ ಲಿಖಿತವಾಗಿ ತಿಳಿಸುವುದರಿಂದ ಅವರು ಅದಕ್ಕೆ ಸಂಬಂಧಪಟ್ಟ ಆರ್.ಟಿ.ಸಿಯಲ್ಲಿ ಸ್ಥಿರಾಸ್ತಿಯ ಮೇಲೆ ಹಕ್ಕು ಹೊಂದಿರುವ ವ್ಯಕ್ತಿಯ ಹೆಸರು, ವಿವರ, ತೀರ್ವೆ ಮೊತ್ತ, ಹಕ್ಕನ್ನು ಹೊಂದಿದ ಮೂಲ, ಮಣ್ಣಿನ ಮತ್ತು ಭೂಮಿಯ ಸ್ವರೂಪ, ಬೆಳೆಗಳ ವಿವರ ಇತ್ಯಾದಿ ವಿವರಗಳನ್ನು ನಮೂದಿಸಿ ಖಾತೆದಾರನಿಗೆ ಅಂದರೆ ಭೂ ಮಾಲೀಕನಿಗೆ ನೀಡಬೇಕಾಗುತ್ತದೆ. ಆದರೆ ಕೃಷಿ ಸ್ಥಿರಾಸ್ತಿಯನ್ನು ರಿಜಿಸ್ಟರ್ ದಾಖಲೆ ಮೂಲಕ ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಗೆ ಪರಾಭಾರೆ ಅಂದರೆ ವರ್ಗಾವಣೆ ಮಾಡಿದ ಸಂದರ್ಭದಲ್ಲಿ ಖಾತಾ ತಬ್ದೀಲಿಯನ್ನು ಮಾಡಲು ಯಾವುದೇ ಪ್ರತ್ಯೇಕ ಆರ್ಜಿ ಸಲ್ಲಿಕೆಯ ಅಗತ್ಯ ಇರುವುದಿಲ್ಲ.
ಭೂಮಿಯ ಮಾಲೀಕನು ತನ್ನ ಜೀವಿತ ಕಾಲದಲ್ಲಿ ಆತನ ಸ್ಥಿರಾಸ್ತಿಯ ಮುಂದಿನ ವಾರೀಸುದಾರರನ್ನು ನಿರ್ಧರಿಸದೇ ಮೃತಪಟ್ಟಲ್ಲಿ ಆತನ ಹೆಸರಿನಲ್ಲಿ ಉಳಿಯುವ ಎಲ್ಲಾ ಸ್ಥಿರಾಸ್ತಿಗಳಿಗೆ ಆತನ ಎಲ್ಲಾ ವಾರೀಸುದಾರರು ಜಂಟಿ ಹಕ್ಕನ್ನು ಹೊಂದುವುದರಿಂದ ಅದಕ್ಕೆ ಸಂಬಂಧಪಟ್ಟ ಆರ್.ಟಿ.ಸಿ ಮತ್ತಿತರ ಕಂದಾಯ ದಾಖಲೆಗಳನ್ನು ಮೃತ ವ್ಯಕ್ತಿಯ ಎಲ್ಲಾ ವಾರೀಸುದಾರರ ಹೆಸರಿಗೆ ಜಂಟಿಯಾಗಿ ತಬ್ದೀಲಿ ಅಂದರೆ ಬದಲಾವಣೆ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಕಂದಾಯ ಖಾತಾ ಬದಲಾವಣೆಗಾಗಿ ಮೃತ ವ್ಯಕ್ತಿಯ ಎಲ್ಲಾ ವಾರೀಸುದಾರರ ಪರವಾಗಿ ಯಾರಾದರೂ ಒಬ್ಬ ವ್ಯಕ್ತಿ ಖಾತಾ ತಬ್ದೀಲಿಗಾಗಿ (ಜಂಟಿ ಖಾತೆ) ಸಂಬಂಧಪಟ್ಟ ತಹಸೀಲ್ದಾರರವರಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಆದರೆ ಈ ಸಂದರ್ಭದಲ್ಲಿ ಖಾತಾ ತಬ್ದೀಲಿ ಅರ್ಜಿಯೊಂದಿಗೆ ಮೃತ ವ್ಯಕ್ತಿಯ ಮರಣ ಪ್ರಮಾಣ ಪತ್ರ, ಮೃತ ವ್ಯಕ್ತಿಯ ವಾರೀಸುದಾರರ ಹೆಸರು, ಮೃತವ್ಯಕ್ತಿಯೊಂದಿಗೆ ಅರ್ಜಿದಾರನ ಸಂಬಂಧ ಮತ್ತಿತರ ವಿವರಗಳನ್ನು ಒಳಗೊಂಡ ವಾರೀಸುತನದ ಪ್ರಮಾಣ ಪತ್ರವನ್ನು ಸಲ್ಲಿಸುವ ಮೂಲಕ ಸ್ಥಿರಾಸ್ತಿಯ ಆರ್.ಟಿ.ಸಿ. ಅಥವಾ ಮತ್ತಿತರ ಕಂದಾಯ ದಾಖಲೆಗಳನ್ನು ಮೃತವ್ಯಕ್ತಿಯ ಎಲ್ಲಾ ವಾರೀಸುದಾರರ ಜಂಟಿ ಹೆಸರಿನಲ್ಲಿ ಪಡೆಯಬಹುದಾಗಿದೆ. ಮೃತ ವ್ಯಕ್ತಿಯು ತನ್ನ ಜೀವಿತ ಕಾಲದಲ್ಲಿ ತನ್ನ ಆಸ್ತಿಯ ಮುಂದಿನ ವಾರೀಸುದಾರಿಕೆಯ ಬಗ್ಗೆ ಸೂಕ್ತ ದಾಖಲೆಗಳನ್ನು ಬರೆಸಿಟ್ಟಿದ್ದ ಸಂದರ್ಭದಲ್ಲಿ ಅಂತಹ ದಾಖಲೆಯ ಆಧಾರದಲ್ಲಿ ಸ್ಥಿರಾಸ್ತಿಯ ಕಂದಾಯ ದಾಖಲೆಗಳನ್ನು ಕಂದಾಯ ಅಧಿಕಾರಿಗಳು ಬದಲಾಯಿಸಬಹುದಾಗಿದೆ. ಆದರೆ ವೀಲುನಾಮೆಯ ಆಧಾರದಲ್ಲಿ ಕಂದಾಯ ಅಧಿಕಾರಿಗಳು ಖಾತೆಯನ್ನು ಬದಲಾಯಿಸುವ ಸಂದರ್ಭದಲ್ಲಿ ಮೃತ ವ್ಯಕ್ತಿಯ ಎಲ್ಲಾ ವಾರೀಸುದಾರರ ಲಿಖಿತ ಒಪ್ಪಿಗೆಯು ಕಡ್ಡಾಯವಾಗಿ ಬೇಕಾಗಿರುತ್ತದೆ. ಕಾರಣ ಯಾವುದೇ ಒಂದು ವಿವಾದಿತ ವೀಲುನಾಮೆಯ ನೈಜತೆಯನ್ನು ನಿರ್ಧರಿಸುವ ಅಧಿಕಾರವನ್ನು ಕಂದಾಯ ಅಧಿಕಾರಿಗಳು ಹೊಂದಿರುವುದಿಲ್ಲ. ವಿವಾದಿತ ವೀಲುನಾಮೆಯ ನೈಜತೆಯನ್ನು ನಿರ್ಧರಿಸುವ ಹಕ್ಕನ್ನು ಕೇವಲ ಸಿವಿಲ್ ನ್ಯಾಯಾಲಯ ಮಾತ್ರ ಹೊಂದಿರುತ್ತದೆ. ಕೃಷಿಯೇತರ ಭೂಮಿಯು ಮತ್ತು ಕಟ್ಟಡಕ್ಕೆ ಸಂಬಂಧಪಟ್ಟ ಖಾತೆಯನ್ನು ಬದಲಾಯಿಸುವ ಅಧಿಕಾರ ಆಯಾ ಸರಹದ್ದಿನ ಪಂಚಾಯತ್, ಪುರಸಭೆ, ನಗರ ಪಾಲಿಕೆ ಅಥವಾ ಮಹಾ ನಗರ ಪಾಲಿಕೆಯ ಸಂಬಂಧಪಟ್ಟ ಕಂದಾಯ ಅಧಿಕಾರಿಯವರು ಹೊಂದಿರುತ್ತಾರೆ.





















