ಓದುಗರು ಬೆಳೆಸಿದ ನ್ಯೂಸ್‌ಕಾರ್ಕಳಕ್ಕೆ ಐದು ವರ್ಷ ತುಂಬಿತು

2020 ಅಕ್ಟೋಬರ್ 25ರಂದು ಕಾರ್ಕಳದಲ್ಲಿ ಉದ್ಘಾಟನೆಯಾದ ನ್ಯೂಸ್‌ಕಾರ್ಕಳಕ್ಕೆ ಇಂದಿಗೆ ಐದು ವರ್ಷ ತುಂಬಿತು. ನ್ಯೂಸ್‌ಕಾರ್ಕಳ ಲೋಕಾರ್ಪಣೆ ಸಮಾರಂಭದಲ್ಲಿ ದೀಪವನ್ನು ಬೆಳಗಿಸುವಾಗ ಕಾರ್ಕಳದ ಶಾಸಕ ವಿ. ಸುನಿಲ್ ಕುಮಾರ್, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.‌ ಎಂ. ಮೋಹನ್ ಆಳ್ವ ಅವರು ಜೊತೆಗೆ ನಿಂತು ದೀಪ ಹಚ್ಚಿದ ಕ್ಷಣ ಇನ್ನೂ ಕಣ್ಣ ಮುಂದೆ ಇದೆ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರ ಉಪಸ್ಥಿತಿ ಇತ್ತು.

ಕಾರ್ಕಳ, ಹೆಬ್ರಿ ತಾಲೂಕಿನ ಓದುಗರಿಗೆ ದಿನವೂ ಸ್ಥಳೀಯ, ರಾಜ್ಯ, ರಾಷ್ಟ್ರಮಟ್ಟದ ಸುದ್ದಿಗಳನ್ನು ಡಿಜಿಟಲ್ ಮಾಧ್ಯಮದ ಮೂಲಕ ತಲುಪಿಸುವ ಸಂಕಲ್ಪಕ್ಕೆ ಇಂದು ಐದು ವರ್ಷ ತುಂಬಿತು. ಸುದ್ದಿಗಳನ್ನು ನೀಡುವುದು ಮಾತ್ರವಲ್ಲ ಅಭಿಪ್ರಾಯಗಳನ್ನು ರೂಪಿಸುವ ಕಾಯಕಕ್ಕೂ ಐದು ವರ್ಷ ತುಂಬಿತು. ಸಂಪಾದಕೀಯ ಮತ್ತು ದೈನಂದಿನ ಕಾಲಂಗಳ ಮೂಲಕ ಓದುಗರ ಅಭಿರುಚಿಗೆ ತಕ್ಕಂತೆ ನೀಡುವ ಬರಹದ ದೀಕ್ಷೆಗೆ ಐದು ವರ್ಷ ತುಂಬಿತು. ಬ್ರೇಕಿಂಗ್ ನ್ಯೂಸ್‌ಗಳ ಮೊರೆ ಹೋಗಿ ಸಮಾಜವನ್ನು ಒಡೆಯದೇ ಸೌಹಾರ್ದ ಸಮಾಜವನ್ನು ನಿರ್ಮಿಸುವ ಕನಸುಗಳಿಗೆ ಐದು ವರ್ಷ ತುಂಬಿತು. ಸ್ಥಳೀಯ ಮತ್ತು ಹೊರಗಿನ ಅನೇಕ ಎಲೆಮರೆಯ ಬರಹಗಾರರನ್ನು ಹುಡುಕಿ ಅವರಿಗೆ ವೇದಿಕೆಯೊದಗಿಸುವ ಮನಸಿಗೆ ಐದು ವರ್ಷ ತುಂಬಿತು. ಕಾರ್ಕಳ, ಹೆಬ್ರಿ, ಮೂಡಬಿದಿರೆ ವ್ಯಾಪ್ತಿಯ ವಿಶೇಷ ಪ್ರತಿಭೆಗಳನ್ನು ಪರಿಚಯಿಸುವ ಕಾರ್ಯಕ್ಕೆ ಐದು ವರ್ಷ ತುಂಬಿತು. ಸ್ಥಳೀಯವಾದ ನೂರಾರು ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ನೇರಪ್ರಸಾರ ಮಾಡಿ ಜಾಗತಿಕ ಮಟ್ಟಕ್ಕೆ ತಲುಪಿಸುವ ಜಿದ್ದಿಗೆ ಇಂದು ಐದು ವರ್ಷ. ಹಲವು ವಿಶೇಷ ಸಂದರ್ಭಗಳಲ್ಲಿ ಆಕರ್ಷಕವಾದ ಪುರವಣಿಗಳನ್ನು ಹೊರತಂದು ಬಿತ್ತರಿಸುವ ಸೃಜನಶೀಲತೆಗೆ ಐದು ವರ್ಷ ತುಂಬಿತು.

ಕೇವಲ ಒಂದು ವೆಬ್ ಮಾಧ್ಯಮವಲ್ಲ
ನ್ಯೂಸ್‌ಕಾರ್ಕಳ ಆರಂಭವಾದಾಗ ಇದ್ದದ್ದು ಕಠಿಣವಾದ ಕೊರೊನಾ ಸಂಕಷ್ಟದ ಕಾಲ. ಆಗ ಜಾಹೀರಾತುಗಳನ್ನು ಪಡೆಯುವುದು ಭಾರೀ ಕಷ್ಟದ ಕೆಲಸ ಆಗಿತ್ತು. ಆದರೆ, ಆಗಲೂ ಸಂಪಾದಕ ಮಂಡಲಿಯ ಉತ್ಸಾಹ ಮತ್ತು ಬದ್ಧತೆಗಳು ತೀವ್ರವಾಗಿಯೇ ಇತ್ತು. ಆರಂಭದಲ್ಲಿ ಅನುಮಾನದಿಂದ ನೋಡಿದ ಹಲವಾರು ಮಂದಿ, ಅಪಮಾನಿಸುವ ಮಾತಾಡಿದ ಹತ್ತಾರು ಮಂದಿ ಇಂದು ನ್ಯೂಸ್‌ಕಾರ್ಕಳದ ಬಗ್ಗೆ ಅಭಿಮಾನದ ಮಾತಾಡುವ ಮಟ್ಟಕ್ಕೆ ಬೆಳೆದಿದೆ ಅನ್ನುವುದೇ ನಮಗೆ ಸಾರ್ಥಕತೆಯ ಕ್ಷಣ. ಮುಂಬೈ, ಬೆಂಗಳೂರು ಹಾಗೂ ವಿದೇಶಗಳಲ್ಲಿ ಇರುವ ಕಾರ್ಕಳಿಗರು ಅಭಿಮಾನದಿಂದ ಎತ್ತರಕ್ಕೆ ಬೆಳೆಸಿ್ ಮಾಧ್ಯಮವಿದು. ಪತ್ರಿಕಾರಂಗದಲ್ಲಿ ಏನೆಲ್ಲಾ ಸಾಧ್ಯತೆಗಳು ಇವೆಯೋ ಅವುಗಳನ್ನೆಲ್ಲ ಬಸಿದು ಹೊರತಂದು ಓದುಗರ ಮುಂದೆ ಇಡುವ ಪ್ರಾಮಾಣಿಕ ಪ್ರಯತ್ನವನ್ನು ನ್ಯೂಸ್‌ಕಾರ್ಕಳ ಆರಂಭದಿಂದಲೂ ಮಾಡಿದೆ. ಮುಂದೆಯೂ ಮಾಡಲಿದೆ. ಪತ್ರಿಕಾರಂಗವು ಇಂದು ಉದ್ಯಮವಾಗಿ ಬೆಳೆದಿರುವ ಈ ದಿನಗಳಲ್ಲಿ ವ್ಯವಹಾರವೇ ಮುಖ್ಯವಾಗದೇ ಜನಾಭಿಪ್ರಾಯವನ್ನು ರೂಪಿಸಿದ ಕೀರ್ತಿಯು ನ್ಯೂಸ್ ಕಾರ್ಕಳಕ್ಕೆ ಸಲ್ಲಲೇಬೇಕು. ರಾಜಕೀಯ ಪಕ್ಷಗಳ ನಡುವೆ ಬ್ಯಾಲೆನ್ಸ್ ಮಾಡುವ ಕಷ್ಟದ ಸವಾಲುಗಳ ನಡುವೆಯೂ ನ್ಯೂಸ್‌ಕಾರ್ಕಳ ತನ್ನ ಜವಾಬ್ದಾರಿಯನ್ನು ಮೆರೆದಿದೆ. ವಿವಾದಗಳನ್ನು ಕ್ರಿಯೇಟ್ ಮಾಡದೇ ಎಚ್ಚರಿಕೆಯಿಂದ ಪತ್ರಿಕಾ ಧರ್ಮವನ್ನು ಪಾಲಿಸಿ ಓದುಗರ ಮನ ಗೆದ್ದಿದೆ ಎಂದು ಯಾರಾದರೂ ಖಚಿತವಾಗಿ ಹೇಳಬಹುದು. ನ್ಯೂಸ್ ಕಾರ್ಕಳ ಪತ್ರಿಕೆಗೆ ಇಂದು ದೇಶ ವಿದೇಶಗಳಲ್ಲಿ ಲಕ್ಷಾಂತರ ಓದುಗರು ಇದ್ದಾರೆ ಎನ್ನುವುದು ಜನರ ಪ್ರೀತಿಯ ನಿಜವಾದ ಪ್ರತಿಬಿಂಬ ಎಂದು ಹೇಳಬಹುದು. ಒಂದು ಮಾಧ್ಯಮ ಐದು ವರ್ಷಗಳ ಕಾಲ ಜನಪ್ರೀತಿಯನ್ನು ಉಳಿಸಿಕೊಂಡು ಹೋಗುತ್ತಿದೆ ಎನ್ನುವುದು ಓದುಗರು ಅರ್ಹವಾಗಿ ನೀಡಿದ ಪ್ರಶಸ್ತಿ. ಅಷ್ಟರಮಟ್ಟಿಗೆ ಈ ಆರನೇ ವಾರ್ಷಿಕೋತ್ಸವ ಸಾರ್ಥಕ ಎನ್ನಬಹುದು.

ವಿಶೇಷ ಪುರವಣಿಗಳು
ನ್ಯೂಸ್ ಕಾರ್ಕಳ ಕೇವಲ ವೆಬ್ ಪತ್ರಿಕೆಯಾಗಿ ಮಾತ್ರ ಉಳಿಯದೆ ಐದು ವರ್ಷಗಳ ಅವಧಿಯಲ್ಲಿ 7 ಅತ್ಯಂತ ಆಕರ್ಷಕವಾದ ಮತ್ತು ಬಹುವರ್ಣದ ಪುರವಣಿಗಳನ್ನು ಪ್ರಕಟಿಸಿ ಓದುಗರಿಗೆ ಸಮರ್ಪಿಸಿದೆ. ದೀಪಾವಳಿಯ ಹಬ್ಬದ ಸಂಭ್ರಮವನ್ನು ನೂರ್ಮಡಿಗೊಳಿಸುವ ಎರಡು ವಿಶೇಷ ಸಂಚಿಕೆಗಳು ಹಬ್ಬದ ಕೊಡುಗೆಗಳಾಗಿ ಓದುಗರಿಗೆ ಸಮರ್ಪಿತವಾಗಿವೆ. ಒಂದು ಸಂಗ್ರಹ್ಯವಾದ ಸಂಚಿಕೆಯು ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಅನಾವರಣ ಆಗಿದೆ. ಅಯೋಧ್ಯೆಯ ಶ್ರೀರಾಮನ ದೇಗುಲದ ಉದ್ಘಾಟನೆಗೆ ಪೂರಕವಾಗಿ ಅಯೋಧ್ಯಾ ಪಥ ಎಂಬ ಅರ್ಥಪೂರ್ಣ ಹೊತ್ತಗೆಯು ಲೋಕಾರ್ಪಣೆ ಆಗಿದೆ. ಕಾರ್ಕಳದ ಮಾರಿಗುಡಿಯ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶದ ಸಂಭ್ರಮವನ್ನು ಹೆಚ್ಚಿಸುವ ವಿಶೇಷ ಪುರವಣಿಯು ನೂರಾರು ಮನೆಗಳನ್ನು ತಲುಪಿದೆ. ಈ ಎಲ್ಲಾ ಸಂಚಿಕೆಗಳಿಗೆ ಕಲಶಪ್ರಾಯವಾಗಿ ಆಧುನಿಕ ಮೂಡುಬಿದಿರೆಯ ಶಿಲ್ಪಿ ಡಾ. ಮೋಹನ್ ಆಳ್ವ ಅವರ ಬದುಕಿನ ಸಂಪೂರ್ಣ ಚಿತ್ರಣವನ್ನು ನೀಡುವ ಸ್ಮರಣೀಯ ಸಂಚಿಕೆ ʼಸವ್ಯಸಾಚಿ’ಯು 208 ಪುಟಗಳನ್ನು ಹೊಂದಿದ್ದು ಬಹುವರ್ಣದಿಂದ ಕಂಗೊಳಿಸಿ ಎಲ್ಲರ ಮನಸನ್ನು ಗೆದ್ದಿದೆ. ಇದು ಡಿಜಿಟಲ್ ಮಾಧ್ಯಮದ ಕ್ಷೇತ್ರದಲ್ಲಿ ಒಂದು ಐತಿಹಾಸಿಕ ಹೆಜ್ಜೆಯಾಗಿದೆ. ಈ ಮಹತ್‌ ಕಾರ್ಯಕ್ಕೆ ಅವಕಾಶ ಮಾಡಿಕೊಟ್ಟಿರುವ ಜ್ಞಾನಸುಧಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿಯ ಅವರ ಉದಾರತೆಗೆ ನ್ಯೂಸ್ ಕಾರ್ಕಳವು ಧನ್ಯವಾದ ಹೇಳುತ್ತದೆ.

ನೂರಾರು ಸ್ಥಿರ ಶೀರ್ಷಿಕೆಗಳು
ಪ್ರೇಕ್ಷಕರ ನಾಡಿಮಿಡಿತವನ್ನು ಗಮನಿಸಿ ಕಾಲಕಾಲಕ್ಕೆ ಹಲವಾರು ಸ್ಥಿರ ಶೀರ್ಷಿಕೆಗಳನ್ನು ರೂಪಿಸಿತು. ಕಾರ್ಕಳ ಮತ್ತು ಹೆಬ್ರಿಯ ಭವ್ಯವಾದ ದೇಗುಲ ಮತ್ತು ದೈವಾಲಯಗಳನ್ನು ಪರಿಚಯಿಸುವ ಅಭಿಯಾನವು ಜನಪ್ರಿಯವಾಯಿತು. ಗ್ರಾಮೀಣ ಮತ್ತು ನಗರದ ಸಮಸ್ಯೆಗಳಿಗೆ ಕನ್ನಡಿ ಹಿಡಿಯುವ ನೂರಾರು ವರದಿಗಳು ಪರಿಣಾಮಕಾರಿಯಾಗಿ ಮೂಡಿಬಂದವು. ಕಾರ್ಕಳ ಮತ್ತು ಹೆಬ್ರಿಯ ಲೆಜೆಂಡ್‌ಗಳನ್ನು ಜಗತ್ತಿಗೆ ಪರಿಚಯಿಸುವ ಸರಣಿಯೂ ಜನಪ್ರಿಯತೆ ಪಡೆದಿದೆ. ನವರಾತ್ರಿಯ ಸಂದರ್ಭದಲ್ಲಿ ಪ್ರತೀ ದಿನವೂ ವಿವಿಧ ಭಜನಾ ಮಂಡಳಿಗಳು ನೀಡುವ ಭಜನಾ ಸಂಕೀರ್ತನದ ಪ್ರಸಾರ, ಕಾರ್ಕಳದ ಸೈನಿಕರನ್ನು, ಸ್ವಾತಂತ್ರ್ಯ ಹೋರಾಟಗಾರರನ್ನು ಓದುಗರಿಗೆ ಪರಿಚಯ ಮಾಡುವ ಲೇಖನ ಪ್ರಕಟ ಮಾಡಿದೆ. ಕಾರ್ಕಳದ ವಿವಿಧ ಶೈಕ್ಷಣಿಕ, ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮ, ಜಾತ್ರೆ ಉತ್ಸವಗಳ ನೇರ ಪ್ರಸಾರ ಮಾಡಿದೆ. ಸುದ್ದಿಗಳನ್ನು ನೀಡುವಾಗ ಅವಸರ ಮಾಡದೇ ಪತ್ರಿಕಾಧರ್ಮದ ಒರೆಗೆ ಹಚ್ಚಿ ಪ್ರಸಾರ ಮಾಡುವ ಕಾರಣ ಓದುಗರ ನಂಬಿಕೆಯನ್ನು ಇಷ್ಟು ವರ್ಷ ಉಳಿಸಿಕೊಂಡು ಹೋಗಲು ಸಾಧ್ಯವಾಗಿದೆ. ನ್ಯೂಸ್ ಕಾರ್ಕಳ ಪರಿಚಯ ಮಾಡಿದ ಮುದ್ದುಕೃಷ್ಣ ಸ್ಪರ್ಧೆಯು ಇಂದಿಗೂ ಅದೇ ಜನಪ್ರಿಯತೆಯನ್ನು ಉಳಿಸಿಕೊಂಡು ಬಂದಿದೆ. ಜ್ಞಾನಸುಧಾ ಸಂಸ್ಥೆಯ ಬ್ರ್ಯಾಂಡ್ ಕಾರ್ಯಕ್ರಮ ಮೌಲ್ಯಸುಧಾದ ನೇರ ಪ್ರಸಾರದ ಮೂಲಕ ನ್ಯೂಸ್‌ಕಾರ್ಕಳ ಒಂದು ಬ್ರ್ಯಾಂಡ್‌ ವ್ಯಾಲ್ಯೂ ದೊರೆತಿದೆ.

ಎಲ್ಲವೂ ಓದುಗರಿಗೆ ಸಮರ್ಪಿತ
ಐದು ವರ್ಷ ತುಂಬಿದ ಸುಸಂದರ್ಭದಲ್ಲಿ ನ್ಯೂಸ್‌ಕಾರ್ಕಳ ಬೆಳೆದಿರುವ ರೀತಿಗೆ ವಿಸ್ಮಯವು ಮೂಡಿದರೆ ಅದಕ್ಕೆ ಲಕ್ಷಾಂತರ ಓದುಗರೇ ಕಾರಣ. ಹಾಗೆಯೇ ಜಾಹೀರಾತುದಾರರು ನ್ಯೂಸ್‌ ಕಾರ್ಕಳದ ಜೋಳಿಗೆ ತುಂಬಿಸಿದ ಕಾರಣಕ್ಕೆ ಅವರಿಗೂ ಧನ್ಯವಾದಗಳು. ಆರಂಭದಿಂದಲೂ ನ್ಯೂಸ್‌ಕಾರ್ಕಳ ಕೈ ಹಿಡಿದ, ಬೆನ್ನು ತಟ್ಟಿದ, ತಪ್ಪು ಮಾಡಿದಾಗ ತಿದ್ದಿದ, ಒಳ್ಳೆಯ ಕೆಲಸ ಮಾಡಿದಾಗ ಪ್ರಶಂಸೆ ವ್ಯಕ್ತಪಡಿಸಿದ, ನ್ಯೂಸ್‌ಕಾರ್ಕಳದ ಆಡಳಿತ ನಿರ್ದೇಶಕರಾದ ಪದ್ಮಪ್ರಸಾದ್ ಜೈನ್ ಅವರಿಗೆ, ವ್ಯವಸ್ಥಾಪಕ ನಿರ್ದೇಶಕರಾದ ರಾಮಚಂದ್ರ ಬರೆಪ್ಪಾಡಿ, ನಾನು ಸೇರಿದಂಥೆ ನ್ಯೂಸ್‌ಕಾರ್ಕಳದ ಬೆನ್ನಿಗೆ ನಿಂತಿರುವ ಮಾರ್ಗದರ್ಶಕ ಮಂಡಳಿಯ ಗುಣಪಾಲ್‌ ಜೈನ್‌, ಮಹೇಶ್‌ ಶೆಟ್ಟಿ ಕುಡುಪುಲಾಜೆ, ಕೀರ್ತನ್‌ ಕುಮಾರ್‌, ಉಮೇಶ್‌ ಕೋಟ್ಯಾನ್‌, ಸಿಯಾ ಸಂತೋಷ್ ನಾಯಕ್‌, ಸಂದೀಪ್‌ ಕೋಟ್ಯಾನ್‌, ಸುಶಾಂತ್‌, ಬಜಗೋಳಿ, ರಾಜೇಶ್‌ ಲೋಬೋ, ಅರುಣ್‌ ಮಾಂಜ, ಸಿಬ್ಬಂದಿ ವರ್ಗ, ಎಲ್ಲರಿಗೂ ಈ ಸಂದರ್ಭದಲ್ಲಿ ಶುಭಾಶಯಗಳು. ನ್ಯೂಸ್ ಕಾರ್ಕಳ ನೂರ್ಕಾಲ ಬಾಳಲಿ.





























































































































error: Content is protected !!
Scroll to Top