ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯನ್ನು ನಿಷೇಧಿಸುವ ಕಾಯ್ದೆ 2004

ಸಾಲ ನೀಡುವಿಕೆ ಹಾಗೂ ಸಾಲ ಪಡೆದುಕೊಳ್ಳುವಿಕೆ ಇವೆರಡೂ ವಾಣಿಜ್ಯ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯವಹಾರದ ಪ್ರಮುಖ ಅಂಗವಾಗಿರುತ್ತದೆ. ಸಾಲ ನೀಡುವ ವ್ಯಕ್ತಿಯು ಸಾಲ ಪಡಕೊಂಡವನಿಂದ ತಾನು ನೀಡಿದ ಸಾಲದ ಅಸಲು ಮೊಬಲಗಿನ ಮೇಲೆ ನಿರ್ದಿಷ್ಟ, ನ್ಯಾಯೋಚಿತ ಮತ್ತು ಸಮಂಜಸವಾದ ದರದ ಬಡ್ಡಿ ವಿಧಿಸಿ ವಸೂಲು ಮಾಡುವ ಕ್ರಮವು ಕಾನೂನು, ನೀತಿ ಮತ್ತು ಮಾನವೀಯತೆಯ ದೃಷ್ಟಿಯಿಂದ ನ್ಯಾಯೋಚಿತವಾಗಿರುತ್ತದೆ. ಆದರೆ ಯಾವುದೇ ವ್ಯಕ್ತಿ ತಾನು ಇತರರಿಗೆ ನೀಡುವ ಸಾಲದ ಮೇಲೆ ತಾನು ಇಷ್ಟಪಟ್ಟಂತೆ ಮಿತಿಮೀರಿದ ಬಡ್ಡಿ ವಿಧಿಸಿ ಸಾಲವನ್ನು ಅಕ್ರಮವಾಗಿ ಹಾಗೂ ಕಾನೂನು ಬಾಹಿರವಾಗಿ ವಸೂಲು ಮಾಡುವ ಕ್ರಮವು ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯನ್ನು ನಿಷೇಧಿಸುವ ಕಾಯ್ದೆ 2004 ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುತ್ತದೆ.

ಕೆಲವು ಸಂದರ್ಭಗಳಲ್ಲಿ ತಮ್ಮ ಅಗತ್ಯದ ಖರ್ಚುಗಳಿಗಾಗಿ ಜನರು ಅನಿವಾರ್ಯವಾಗಿ ಮಿತಿಮೀರಿದ ಬಡ್ಡಿ ವಿಧಿಸುವವರಿಂದ ಸಾಲ ಪಡೆದು ಮತ್ತು ಈ ಸಂದರ್ಭದಲ್ಲಿ ತಾನು ಸರಿಯಾಗಿ ಯೋಚನೆ ಮಾಡದೇ ತನ್ನ ಬ್ಯಾಂಕ್ ಖಾತೆಗೆ ಸಂಬಂಧಪಟ್ಟ ಸಹಿ ಮಾಡಿದ ಖಾಲಿ ಚೆಕ್‌ಗಳನ್ನು ಅಂದರೆ ದಿನಾಂಕ, ಮೊತ್ತ ಮತ್ತಿತರ ವಿವರಗಳನ್ನು ನಮೂದಿಸದೆ ಅಥವಾ ತಮ್ಮ ಜಮೀನಿಗೆ ಅಥವಾ ಸ್ವತ್ತಿಗೆ ಸಂಬಂಧಪಟ್ಟ ದಾಖಲೆಗಳನ್ನು ಸಾಲ ನೀಡುವವರಿಗೆ ಅನಧಿಕೃತವಾಗಿ ನೀಡಿ ಆ ನಂತರ ಬಹಳ ಕಷ್ಟವನ್ನು ಅನುಭವಿಸುವ ಮತ್ತು ತಮ್ಮ ಮನೆ ಮತ್ತು ಇತರ ಸ್ವತ್ತುಗಳನ್ನು ಸಮಾಜದಲ್ಲಿ ಹೊಂದಿರುವ ಗೌರವ ಮತ್ತು ಮರ್ಯಾದೆಯೊಂದಿಗೆ ಕಳಕೊಂಡು ಅಕ್ರಮ ಬಡ್ಡಿ ವಸೂಲು ಮಾಡುವ ವ್ಯಕ್ತಿಗಳ ಶೋಷಣೆಗೆ ಒಳಗಾಗುವ ಅನೇಕ ಪ್ರಸಂಗಗಳನ್ನು ನಾವು ನೋಡಿರಬಹುದು. ಈ ರೀತಿಯ ಶೋಷಣೆಯಿಂದ ಮುಗ್ಧ ಜನರನ್ನು ರಕ್ಷಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರಕಾರವು ಮಿತಿಮೀರಿದ ಬಡ್ಡಿಯನ್ನು ವಿಧಿಸುವವರಿಗೆ ಕಠಿಣ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯನ್ನು ನಿಷೇಧಿಸುವ ಕಾಯ್ದೆಯನ್ನು 2004ರಲ್ಲಿ ಜಾರಿಗೆ ತಂದಿದೆ. ಸಾಲದ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಲೇವಾದೇವಿದಾರರ ಅಧಿನಿಯಮ 1961 ಎಂಬ ಕಾನೂನು ಸಹಾ ನಮ್ಮ ರಾಜ್ಯದಲ್ಲಿ ಜಾರಿಯಲ್ಲಿದ್ದು ಈ ಕಾನೂನಿನ ಪ್ರಕಾರ ರಾಜ್ಯ ಸರ್ಕಾರವು ನಿಗದಿಪಡಿಸಿದ ಬಡ್ಡಿ ದರಕ್ಕಿಂತ ಹೆಚ್ಚಿನ ದರದ ಬಡ್ಡಿಯನ್ನು ವಸೂಲು ಮಾಡುವುದು ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ಕ್ರಮವಾಗಿದ್ದು ಇದನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗುತ್ತದೆ. ಮಾತ್ರವಲ್ಲದೆ ಈ ರೀತಿಯಾಗಿ ಸಾಲ ಅಥವಾ ಅದರ ಮೇಲಿನ ಬಡ್ಡಿಯನ್ನು ವಸೂಲು ಮಾಡುವ ಸಲುವಾಗಿ ಸಾಲ ಪಡೆದಾತನಿಗೆ ಅಥವಾ ಆತನ ಮನೆಯವರಿಗೆ ಸಾಲ ನೀಡಿದ ವ್ಯಕ್ತಿ ಅಥವಾ ಆತನ ಜನರು ಯಾವುದೇ ರೀತಿಯ ಬೆದರಿಕೆ ಒಡ್ಡಿದರೆ, ಹಲ್ಲೆ ನಡೆಸಿದರೆ ಅಥವಾ ಯಾವುದೇ ರೀತಿಯ ಕಾನೂನು ಬಾಹಿರವಾದ ಕ್ರಮಕೈಗೊಂಡರೆ ಅಂತಹ ವ್ಯಕ್ತಿಯ ವಿರುದ್ಧ ಬೆದರಿಕೆಗೆ ಅಥವಾ ಹಲ್ಲೆಗೆ ಒಳಗಾದ ವ್ಯಕ್ತಿಯು ಸರಕಾರದ ಪೋಲಿಸ್ ಮತ್ತಿತರ ಇಲಾಖಾಧಿಕಾರಿಗಳಿಗೆ ಅಥವಾ ನ್ಯಾಯಾಲಯಕ್ಕೆ ದೂರನ್ನು ಸಲ್ಲಿಸಿ ಕಾನೂನು ಕ್ರಮಕೈಗೊಳ್ಳಲು ಅವಕಾಶವಿದೆ. ಅಧಿಕ ಬಡ್ಡಿ ವಸೂಲಾತಿಗಾಗಿ ಮೇಲ್ಕಾಣಿಸಿದ ಕಾನೂನನ್ನು ಉಲ್ಲಂಘಿಸಿ ಸಾಲ ನೀಡಿದ ವ್ಯಕ್ತಿಯು ಸಾಲ ಪಡಕೊಂಡ ವ್ಯಕ್ತಿಯನ್ನು ಪೀಡಿಸಿದರೆ ಅಥವಾ ತೊಂದರೆ ನೀಡಿದರೆ ಅಥವಾ ಈ ಕುರಿತು ದುಷ್ಪ್ರೇರಣೆ ನೀಡಿದರೆ ಅಂತಹ ವ್ಯಕ್ತಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಮೇಲ್ಕಾಣಿಸಿದ ಕಾನೂನಿನ ಅಡಿಯಲ್ಲಿ ಅವಕಾಶವಿರುತ್ತದೆ. ಮಾತ್ರವಲ್ಲದೆ ಸಾಲ ಅಥವಾ ಅದರ ಮೇಲಿನ ಬಡ್ಡಿ ಹಣದ ಮರುಪಾವತಿಗಾಗಿ ಅಥವಾ ಭದ್ರತೆಗಾಗಿ ಒತ್ತಾಯದಿಂದ ಅಥವಾ ಬಲಾತ್ಕಾರದಿಂದ ಸಾಲ ಪಡಕೊಂಡವನ ಚರ ಅಥವಾ ಸ್ಥಿರ ಸ್ವತ್ತನ್ನು ಅಥವಾ ಆಸ್ತಿಯನ್ನು ಸಾಲ ನೀಡಿರುವ ವ್ಯಕ್ತಿ ಈ ಮೊದಲೇ ತನ್ನ ಸ್ವಾಧೀನತೆಗೆ ಪಡೆದುಕೊಂಡಿದ್ದರೆ ಸಂಬಂಧಪಟ್ಟ ನ್ಯಾಯಾಲಯವು ಅಂತಹ ಸ್ವತ್ತಿನ ಅಥವಾ ಆಸ್ತಿಯ ಸ್ವಾಧೀನವನ್ನು ಸಾಲ ಪಡಕೊಂಡಾತನಿಗೆ ವಾಪಸ್ಸು ಕೊಡಿಸುವ ಬಗ್ಗೆ ಸೂಕ್ತ ಆದೇಶ ನೀಡುವ ಅಧಿಕಾರ ಹೊಂದಿರುತ್ತದೆ. ಸಾಲ ಪಡಕೊಂಡ ವ್ಯಕ್ತಿ ಅಥವಾ ಆತನ ಕುಟುಂಬದ ಯಾವುದೇ ಸದಸ್ಯ ಸಾಲ ನೀಡಿದವನಿಂದ ಅಥವಾ ಆತನ ಜನರಿಂದ ಸಾಲ ವಸೂಲಾತಿ ಬಗ್ಗೆ ಬೆದರಿಕೆ, ಒತ್ತಾಯ, ಶೋಷಣೆ ಅಥವಾ ತೊಂದರೆಗಳಿಂದ ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಇವೆಲ್ಲಕ್ಕೂ ಸಾಲ ನೀಡಿದ ವ್ಯಕ್ತಿಯೇ ಜವಾಬ್ದಾರನಾಗುತ್ತಾನೆ ಮತ್ತು ಇಂತಹ ಸಂದರ್ಭದಲ್ಲಿ ಸಾಲ ಪಡಕೊಂಡವನ ಆತ್ಮಹತ್ಯೆಗೆ ತಾನು ಕಾರಣವಲ್ಲ ಎಂಬುದನ್ನು ಸಾಬೀತು ಪಡಿಸುವ ಸಂಪೂರ್ಣ ಜವಾಬ್ದಾರಿ ಮತ್ತು ಹೊಣೆಗಾರಿಕೆಯು ಸಾಲ ನೀಡಿದ ವ್ಯಕ್ತಿಯ ಮೇಲೆ ಇರುತ್ತದೆ.





























































































error: Content is protected !!
Scroll to Top