‌ಮಾಧ್ಯಮದ ಮುಂದೆ ಪ್ರಿಯಾಂಕ್ ಖರ್ಗೆಗೆ ಮಾತನಾಡುವ ಚಟ

ತಾಕತ್ತಿದ್ದರೆ ಆರ್‌ಎಸ್‌ಎಸ್‌ ಬ್ಯಾನ್‌ ಮಾಡಿ – ಶಾಸಕ ಸುನಿಲ್‌ ಕುಮಾರ್‌ ಸವಾಲು

ಉಡುಪಿ : ತನ್ನ ಇಲಾಖಾ ವೈಫಲ್ಯವನ್ನು ಮರೆಮಾಚಲು ಸಚಿವ ಪ್ರಿಯಾಂಕ ಖರ್ಗೆ ಮಾಧ್ಯಮದ ಮುಂದೆ ಆರ್‌ಎಸ್‌ಎಸ್‌ ವಿರುದ್ಧ ಮಾತನಾಡುವ ಚಾಳಿ ಹೊಂದಿದ್ದಾರೆ. ಮುಖ್ಯಮಂತ್ರಿಗೆ ಪ್ರಿಯಾಂಕ ಖರ್ಗೆ ಪತ್ರ ಬರೆದಿರುವುದು ಕೂಡ ಅವಿವೇಕಿತನ. ತಾಕತ್ತಿದ್ದರೆ ಆರ್‌ಎಸ್‌ಎಸ್‌ ಬ್ಯಾನ್‌ ಮಾಡಿ ತೋರಲಿ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್‌ ಕುಮಾರ್‌ ಸಚಿವರಿಗೆ ಸವಾಲೆಸೆದರು.
ಅವರು ಅ. 12ರಂದು ಕಾರ್ಕಳದಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿ, ಆರ್‌ಎಸ್‌ಎಸ್‌ ವ್ಯಕ್ತಿ ನಿರ್ಮಾಣದ ಜೊತೆಗೆ ರಾಷ್ಟ್ರನಿರ್ಮಾಣ ಕಾರ್ಯ ಮಾಡುತ್ತಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯನ್ನು ಸಮರ್ಪಕವಾಗಿ ನಿಭಾಯಿಸಲು ವಿಫಲರಾಗಿರುವ ಪ್ರಿಯಾಂಕ್‌ ಖರ್ಗೆ ಕಳೆದ ಎರಡೂವರೆ ವರ್ಷಗಳಲ್ಲಿ ಜನರಿಗೆ ಹತ್ತಿರವಾಗಿರುವ ಯಾವೊಂದು ಕಾರ್ಯ ಮಾಡಿಲ್ಲ. ಕನಿಷ್ಠ ಪಕ್ಷ ಪ್ರತಿ ಜಿಲ್ಲಾ ಪ್ರವಾಸವನ್ನೂ ಮಾಡದ ಪ್ರಿಯಾಂಕ್‌ ಖರ್ಗೆಗೆ ಪಂಚಾಯತ್‌ಗಳಿಗೆ ಅನುದಾನ ಒದಗಿಸಿಲ್ಲ. ರಾಜ್ಯದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಸತ್ತು ಹೋಗಿದೆ. ಆರ್‌ಎಸ್‌ಎಸ್‌ ಟೀಕೆ ಮಾಡುವ ಮೂಲಕ ತಾನು ಜೀವಂತವಾಗಿದ್ದೀನಿ ಎಂಬುದನ್ನು ಪ್ರಿಯಾಂಕ್‌ ಖರ್ಗೆ ನಿರೂಪಿಸುತ್ತಿದ್ದಾರೆ ಎಂದು ಸುನಿಲ್‌ ಕುಮಾರ್‌ ಟೀಕಿಸಿದರು.

ಅಧಿಕಾರ ಶಾಶ್ವತವಲ್ಲ
ತಂದೆ ಎಐಸಿಸಿ ಅಧ್ಯಕ್ಷರಾಗಿದ್ದಾರೆ, ತಾನು ಮಂತ್ರಿಯಾಗಿದ್ದೇನೆ ಎಂಬ ಅಧಿಕಾರದ ಮದದಿಂದ ಪ್ರಿಯಾಂಕ ಖರ್ಗೆ ಸೊಕ್ಕಿನ ಮಾತುಗಳನ್ನಾಡುತ್ತಿದ್ದಾರೆ. ನಿಮ್ಮ ತಂದೆ ಗೃಹ ಸಚಿವರಾಗಿದ್ದಾಗ ಆರ್‌ಎಸ್‌ಎಸ್‌ ಅನ್ನು ಏನು ಮಾಡೋಕೂ ಸಾಧ್ಯವಾಗಿಲ್ಲ ಎಂದು ಗುಡುಗಿದ ಸುನಿಲ್‌ ಕುಮಾರ್‌ ಅಧಿಕಾರ ಶಾಶ್ವತವಲ್ಲ. ನೀವು ಶಾಶ್ವತವಲ್ಲ. ಆದರೆ, ಆರ್‌ಎಸ್‌ಎಸ್‌ ವಿಚಾರ ಮಾತ್ರ ಎಂದೆಂದಿಗೂ ಶಾಶ್ವತ ಎಂದರು.

ನಿಯಂತ್ರಣವಿಲ್ಲ
ರಾಜ್ಯದಲ್ಲಿ ಕೆಟ್ಟ ಸರಕಾರವಿದೆ. ಮುಖ್ಯಮಂತ್ರಿಯವರಿಗೆ ಸಚಿವರ ಮೇಲೆ ನಿಯಂತ್ರಣ ಇಲ್ಲ. ಯಾವೊಂದು ಜನಪರ ಯೋಜನೆಯೂ ಇಲ್ಲ, ರಾಜ್ಯದಾದ್ಯಂತ ರಸ್ತೆಗಳು ಗುಂಡಿಗಳಿಂದ ಕೂಡಿದೆ. ಇದೆಲ್ಲವನ್ನೂ ಮರೆಮಾಚುವ ಉದ್ದೇಶದಿಂದ ಪ್ರಿಯಾಂಕ ಖರ್ಗೆ ಮಾತನಾಡುತ್ತಿದ್ದಾರೆ ಎಂದು ಸುನಿಲ್‌ ಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ, ಬಿಜೆಪಿ ನಗರಾಧ್ಯಕ್ಷ ನಿರಂಜನ್ ಜೈನ್ ಉಪಸ್ಥಿತರಿದ್ದರು.









































































































error: Content is protected !!
Scroll to Top