ಅಜೆಕಾರು ಪೊಲೀಸರ ಕ್ಷಿಪ್ರ ಕಾರ್ಯಾಚರಣೆ – ಶಿರ್ಲಾಲು ಹಟ್ಟಿಯಿಂದ ದನ ಕಳ್ಳತನಗೈದ ಆರೋಪಿಗಳ ಬಂಧನ

ಕಾರ್ಕಳ : ಶಿರ್ಲಾಲು ಗ್ರಾಮದ ಜಯಶ್ರೀ ಎಂಬಾವರಿಗೆ ತಲವಾರು ಝಳಪಿಸಿ ಅವರ ಮನೆಯ ಕೊಟ್ಟಿಗೆಯಿಂದ ದನ ಕಳ್ಳತನಗೈದ ಮೂವರು ಆರೋಪಿಗಳನ್ನು ವಾರದೊಳಗೆ ಬಂಧಿಸುವಲ್ಲಿ ಅಜೆಕಾರು ಪೊಲೀಸರು ಯಶಸ್ವಿಯಾಗಿದ್ದಾರೆ. ನಲ್ಲೂರು ಗ್ರಾಮದ ಬೋರ್ಕಟ್ಟೆ ದಡ್ಡಕಜೆಯ ಮೊಹಮ್ಮದ್ ಯೂನಿಸ್ (31), ಮೂಡುಬಿದ್ರೆ ತಾಲೂಕು ಕಲ್ಲಬೆಟ್ಟು ಗ್ರಾಮದ ನೀರಲ್ಕೆ ಮೊಹಮ್ಮದ್ ನಾಸೀರ್ (28) ಹಾಗೂ ಮಿಜಾರು ಹಂಡೇಲು ಮನೆ ಮೊಹಮ್ಮದ್ ಇಕ್ಬಾಲ್ (29) ಎಂಬವರನ್ನು ಅ. 5ರಂದು ಬಂಧಿಸಿದ್ದು, ಇದರೊಂದಿಗೆ 2 ತಲುವಾರು, 5 ಮೊಬೈಲ್‌, ಮಾರುತಿ ಸ್ವಿಫ್ಟ್‌ ಹಾಗೂ ಮಹೇಂದ್ರ ಬೋಲೆರೋ ಕಾರನ್ನು ಪೊಲೀಸರು ವಶಕ್ಕೆ ಪಡೆದಿರುತ್ತಾರೆ.
ಸೆ. 28ರಂದು ರಾತ್ರಿ 2 ಗಂಟೆಯ ಸುಮಾರಿಗೆ ಜಯಶ್ರೀ ಅವರ ಮನೆಯ ದನದ ಕೊಟ್ಟಿಗೆಯಿಂದ ಅಂದಾಜು 35 ಸಾವಿರ ರೂ. ಮೌಲ್ಯದ 3 ಹಸುಗಳನ್ನು ಕಳ್ಳತನ ಮಾಡಿದ್ದು ಈ ಕುರಿತು ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಾರ್ಕಳ ಎಎಸ್‌ಪಿ ಡಾ. ಹರ್ಷಾ ಪ್ರಿಯಂವದಾ ಮಾರ್ಗದರ್ಶನದಲ್ಲಿ, ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್. ನೇತೃತ್ವದಲ್ಲಿ ಅಜೆಕಾರು ಠಾಣಾ ಪಿ.ಎಸ್.ಐ. ಮಹೇಶ್‌ ಟಿ.ಎಂ. ತಂಡ ಆರೋಪಿಗಳ ಪತ್ತೆಗಾಗಿ ಶೋಧ ನಡೆಸಿತ್ತು. ಸಿಸಿಟಿವಿ ಪರೀಶೀಲನೆ ಸೇರಿದಂತೆ ಎಲ್ಲ ಆಯಾಮಗಳಿಂದಲೂ ತನಿಖೆ ನಡೆದಿತ್ತು.
ಕಾರ್ಯಾಚರಣೆಯಲ್ಲಿ ಅಜೆಕಾರು ಠಾಣೆಯ ಸತೀಶ್ ಬೆಳ್ಳೆ, ಪ್ರದೀಪ್ ಶೆಟ್ಟಿ, ಮೂರ್ತಿ ಕೆ., ಹೆಬ್ರಿ ಠಾಣಾಯ ಸುಜೀತ್ ಕುಮಾರ್, ಕಾರ್ಕಳ ಗ್ರಾಮಾಂತರ ಠಾಣೆಯ ಮಹಾಂತೇಶ್, ವೃತ್ತ ನಿರೀಕ್ಷಕರ ಕಚೇರಿಯ ವಿಶ್ವನಾಥ, ಶಶಿಕುಮಾರ್, ಎಸ್‌ಪಿ ಕಚೇರಿಯ ತಾಂತ್ರಿಕ ಸಿಬ್ಬಂದಿ ದಿನೇಶ್ ಮತ್ತು ನಿತೀನ್ ಭಾಗವಹಿಸಿದ್ದರು.
ಕ್ಷಿಪ್ರ ಕಾರ್ಯಾಚರಣೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ್ ಐ.ಪಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಧಾಕರ್ ಎಸ್ ರವರು ಅಭಿನಂದಿಸಿರುತ್ತಾರೆ.
ಮೊಹಮ್ಮದ್ ನಾಸೀರ್ ವಿರುದ್ಧ ಈಗಾಗಲೇ ಮಂಗಳೂರು, ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ಠಾಣೆಗಳಲ್ಲಿ ಒಟ್ಟು 11 ಪ್ರಕರಣ ದಾಖಲಾಗಿತ್ತು. ಮೊಹಮ್ಮದ್ ಯೂನಿಸ್ ವಿರುದ್ಧ ಕಾರ್ಕಳ ಹಾಗೂ ಬಜ್ಪೆ ಠಾಣೆಯಲ್ಲಿ 2 ಪ್ರಕರಣ ದಾಖಲಾಗಿತ್ತು.









































































































error: Content is protected !!
Scroll to Top