ನಮ್ಮೂರ ಸಾಧಕರು – ಸುಧೀರ್‌ ಶೆಟ್ಟಿ ಯರ್ಲಪಾಡಿ


ಕ್ರೀಡೆಯೊಂದಿಗೆ ಕಲಿಕೆಗೂ ಇರಲಿ ಆದ್ಯತೆ

ಯರ್ಲಪಾಡಿ, ದಟ್ಟ ಕಾನನದಿಂದ ಕೂಡಿರುವ ಕಾರ್ಕಳ ತಾಲೂಕಿನ ಒಂದು ಪುಟ್ಟ ಹಳ್ಳಿ. ಈ ಹಳ್ಳಿಯ ಬಡಕುಟುಂಬದ ಬಾಲಕನೋರ್ವ ತನ್ನ ಕಠಿಣ ಪರಿಶ್ರಮ, ಆತ್ಮವಿಶ್ವಾಸ, ನಿರಂತರ ಅಭ್ಯಾಸದಿಂದಲೇ ಇಂದು ಅಂತಾರಾಷ್ಟ್ರೀಯ ಮಟ್ಟದ ವಾಲಿಬಾಲ್‌ ಆಟಗಾರನಾಗಿ ಪ್ರಸಿದ್ಧರಾಗಿದ್ದಾರೆ. ಅವರೇ ಸುಧೀರ್‌ ಶೆಟ್ಟಿ ಯರ್ಲಪಾಡಿ.
ಹೊಸಮಾರು ರವಿ ಶೆಟ್ಟಿ ಹಾಗೂ ಸುಮಿತ್ರಾ ದಂಪತಿ ಪುತ್ರನಾಗಿ 1997ರಲ್ಲಿ ಜನಿಸಿದ ಸುಧೀರ್‌ ಶೆಟ್ಟಿ ಅವರು ಈ ಸಂಚಿಕೆಯ “ನಮ್ಮೂರ ಸಾಧಕರು”.

ಭಾರತೀಯ ಕ್ರಿಕೆಟ್‌ ತಂಡದ ಮಾಜಿ ಆಟಗಾರ ರವಿಶಾಸ್ತ್ರಿ ಮೂಲ ಇದೇ ಊರು. ಖ್ಯಾತ ಪತ್ರಕರ್ತ ಮನೋಹರ್‌ ಪ್ರಸಾದ್‌ ಅವರೂ ಇದೇ ಮಣ್ಣಿನವರು. ಇವರ ಜೊತೆ ಈ ಊರಿನ ಹೆಸರು ಬೆಳಗಿದ ಇನ್ನೋರ್ವ ಪ್ರತಿಭಾವಂತ ಸಾಧಕ ಸುಧೀರ್‌ ಶೆಟ್ಟಿ. ರಾಷ್ಟ್ರೀಯ, ಅಂತಾರಾಷ್ಟ್ರೀಯ ವಾಲಿಬಾಲ್‌ ಪಂದ್ಯಾಟಗಳಲ್ಲಿ ಭಾಗವಹಿಸಿ ಹುಟ್ಟೂರಿಗೆ ಕೀರ್ತಿ ತಂದವರು.

ಶಿಕ್ಷಣ
ಸುಧೀರ್‌ ಅವರು ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯರ್ಲಪಾಡಿಯಲ್ಲಿ , ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಬೈಲೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪೂರೈಸಿರುತ್ತಾರೆ. ಅನಂತರ ಪದವಿ ವ್ಯಾಸಂಗವನ್ನು ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯಲ್ಲಿ ಮಾಡಿರುತ್ತಾರೆ.

ವಾಲಿಬಾಲ್‌ ಆಸಕ್ತಿ
ಬಾಲ್ಯದಲ್ಲೇ ಕ್ರೀಡೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಸುಧೀರ್‌ ಅವರು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಗ್ರಾಮೀಣ ಮಟ್ಟದ ವಾಲಿಬಾಲ್‌ ಪಂದ್ಯಾಟಗಳಲ್ಲಿ ಯರ್ಲಪಾಡಿ ತಂಡವನ್ನು ಪ್ರತಿನಿಧಿಸುತ್ತಿದ್ದರು. ಪದವಿ ಶಿಕ್ಷಣದ ಅವಧಿಯಲ್ಲಿ ಆಳ್ವಾಸ್‌ ವಾಲಿಬಾಲ್‌ ತಂಡ, ಅನಂತರ ಮಂಗಳೂರು ವಿಶ್ವವಿದ್ಯಾಲಯ ಪರವಾಗಿ ಆಡುತ್ತಿದ್ದರು. ಬಳಿಕ ಕರ್ನಾಟಕ ರಾಜ್ಯ ವಾಲಿಬಾಲ್‌ ತಂಡಕ್ಕೆ ಆಯ್ಕೆಯಾಗಿ ಪ್ರಸ್ತುತ ಭಾರತೀಯ ವಾಲಿಬಾಲ್ ತಂಡ ಹಾಗೂ ಭಾರತೀಯ ರೈಲ್ವೇ ತಂಡದ ಪರವಾಗಿ ಆಡುತ್ತಿದ್ದಾರೆ.
ದುಬೈ, ಕುವೈಟ್‌, ಕತಾರ್‌, ಮಲೇಶಿಯಾ, ಜರ್ಮನಿ ಸೇರಿದಂತೆ ವಿದೇಶಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಸುಧೀರ್‌ ಹೆಗ್ಡೆ 2024ರಲ್ಲಿ ಜರ್ಮನಿಯಲ್ಲಿ ನಡೆದ ವರ್ಲ್ಡ್‌ ರೈಲ್ವೇಸ್ ಚಾಂಪಿಯನ್‌ಶಿಪ್‌ನಲ್ಲಿ ಇಂಡಿಯನ್‌ ರೈಲ್ವೇಸ್ ತಂಡ ಪ್ರಥಮ ಸ್ಥಾನ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ವೃತ್ತಿ ಜೀವನ
ರಾಜ್ಯ ತಂಡಕ್ಕೆ ಆಯ್ಕೆಯಾದ ಬಳಿಕ ಸುಧೀರ್‌ ಅವರಿಗೆ ಕ್ರೀಡಾ ಕೋಟದಡಿ ಭಾರತೀಯ ರೈಲ್ವೇಯಲ್ಲಿ ಉದ್ಯೋಗ ಅರಸಿ ಬಂತು. ಸುಧೀರ್‌ ಅವರು ಪ್ರಸ್ತುತ ಹುಬ್ಬಳ್ಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಬಾಲ್ಯದಲ್ಲಿ ನಮ್ಮೂರಿನ ವಾಲಿಬಾಲ್‌ ಅಂಗಣದಲ್ಲಿ ಆಡುತ್ತಿದ್ದೆ. ಆಗ ಊರವರು ನೀಡಿದ ಪ್ರೋತ್ಸಾಹ ಸದಾ ಸ್ಮರಣೀಯ. ಬಳಿಕ ಆಳ್ವಾಸ್‌ ವಿದ್ಯಾಸಂಸ್ಥೆಯಲ್ಲಿ ಡಾ. ಮೋಹನ್‌ ಆಳ್ವ ಸರ್‌ ಅವರು ನನಗೆ ಆಳ್ವಾಸ್‌ನಲ್ಲಿ ಉಚಿತ ಶಿಕ್ಷಣದ ಅವಕಾಶ ಕಲ್ಪಿಸಿದರು.‌ ನಾನಿಂದು ಈ ಹಂತಕ್ಕೆ ಬೆಳೆಯುವಲ್ಲಿ ಪ್ರಮುಖ ಕಾರಣರು ಆಳ್ವಾಸ್‌ ವಿದ್ಯಾಸಂಸ್ಥೆಯಲ್ಲಿ ಅಂದು ಕೋಚ್‌ ಆಗಿದ್ದ ಪಂಪಾವತಿ ಅವರು. ಅವರು ನನ್ನನ್ನು ಕ್ರೀಡಾಪಟುವಾಗಿ ರೂಪಿಸಿದವರು, ಬದುಕಿರುವವರೆಗೆ ಅವರನ್ನು ಮರೆಯಲ್ಲ ಎನ್ನುವ ಸುಧೀರ್‌ ಅವರು ರಜೆಯಲ್ಲಿ ಊರಿಗೆ ಬಂದಾಗ ಆಳ್ವಾಸ್‌ಗೆ ಭೇಟಿ ನೀಡುವ ಪರಿಪಾಠ ಹೊಂದಿದ್ದಾರೆ.

ನಳಿನಿ ಎಸ್.‌ ಸುವರ್ಣ



































































































error: Content is protected !!
Scroll to Top