ಕಂದಾಯ ನ್ಯಾಯಾಲಯಗಳ ಕಾರ್ಯನಿರ್ವಹಣೆ
ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 61ರಲ್ಲಿ ನಿರ್ಧಿಷ್ಟ ಪಡಿಸಿರುವಂತೆ ಕೆಲವೊಂದು ವಿವಾದಿತ ವಿಷಯಗಳನ್ನು ನಿರ್ಧರಿಸಲು ಅಥವಾ ತೀರ್ಮಾನಿಸಲು ಕಂದಾಯ ಅಧಿಕಾರಿಗಳು ಮತ್ತು ಕಂದಾಯ ನ್ಯಾಯಾಲಯಗಳು ವಿಶೇಷವಾದ ಅಧಿಕಾರವನ್ನು ಹೊಂದಿರುತ್ತದೆ. ಕಂದಾಯ ಅಧಿಕಾರ ವ್ಯಾಪ್ತಿಯೊಳಗಿನ ವಿಷಯಗಳನ್ನು ಅಥವಾ ವಿವಾದಗಳನ್ನು ತೀರ್ಮಾನಿಸುವ ಅಧಿಕಾರವು ಸಿವಿಲ್ ನ್ಯಾಯಾಲಯಗಳ ವ್ಯಾಪ್ತಿಯಲ್ಲಿ ಬರುವುದಿಲ್ಲ. ಯಾವುದೇ ಸರಕಾರಿ ಅಧಿಕಾರಿಯಿಂದ ಅಥವಾ ಇತರ ವ್ಯಕ್ತಿಯಿಂದ ಸರಕಾರಕ್ಕೆ ಬಾಕಿಯಾಗಿರುವ ಹಣವನ್ನು ಭೂ ಕಂದಾಯದ ಹಣವನ್ನು ವಸೂಲು ಮಾಡುವ ರೀತಿಯಲ್ಲಿ ವಸೂಲು ಮಾಡುವ ಮತ್ತು ಈ ಬಗ್ಗೆ ಸೂಕ್ತ ವ್ಯವಹರಣೆಗಳನ್ನು ನಡೆಸುವ ಹಾಗೂ ಅಗತ್ಯವುಳ್ಳ ಸಂದರ್ಭದಲ್ಲಿ ಸರಕಾರದ ಸ್ವತ್ತಿನ ವಸೂಲಿಗಾಗಿ ಬಾಕಿದಾರನನ್ನು ಅಪರಾಧಿಯೆಂದು ಘೋಷಿಸಿ ಆತನ ಸ್ವತ್ತನ್ನು ಮುಟ್ಟುಗೋಲು ಹಾಕಿಕೊಳ್ಳಲು ವಾರಂಟನ್ನು ಹೊರಡಿಸುವ ವಿಶೇಷ ಅಧಿಕಾರವನ್ನು ಸಂಬಂಧಪಟ್ಟ ಕಂದಾಯ ಸರಹದ್ದಿನ ಜಿಲ್ಲಾಧಿಕಾರಿಯವರು ಹೊಂದಿರುತ್ತಾರೆ.
ಭೂ ಕಂದಾಯ ಅಧಿನಿಯಮದ ವ್ಯಾಪ್ತಿಯೊಳಗಿನ ಕೆಲವೊಂದು ವಿಷಯಗಳನ್ನು ಮತ್ತು ವಿವಾದಗಳನ್ನು ಇತ್ಯರ್ಥಗೊಳಿಸಲು ಕಂದಾಯ ಅಧಿಕಾರಿಗಳು ಕಂದಾಯ ನ್ಯಾಯಾಲಯವನ್ನು ನಡೆಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಭೂ ಕಂದಾಯ ಅಧಿನಿಯಮದಲ್ಲಿ ವಿವರಿಸಿದ ಕೆಲವೊಂದು ವಿಷಯಗಳಿಗೆ ಸಂಬಂಧಪಟ್ಟಂತೆ ರಾಜ್ಯ ಸರಕಾರದ ಅಥವಾ ಖಾಸಗಿ ವ್ಯಕ್ತಿಗಳ ನಡುವೆ ಉದ್ಭವಿಸುವ ವಿಚಾರಗಳನ್ನು ಅಥವಾ ವಿವಾದವನ್ನು ತೀರ್ಮಾನಿಸುವುದಕ್ಕಾಗಿ ಕಂದಾಯ ಅಧಿಕಾರಿಗಳು ಕಂದಾಯ ನ್ಯಾಯಾಲಯವಾಗಿ ಕೆಲಸ ಮಾಡಬೇಕಾಗುತ್ತದೆ.

ಸಿವಿಲ್ ನ್ಯಾಯಾಲಯಗಳು ಸಿವಿಲ್ ವಿವಾದಗಳಿಗೆ ಸಂಬಂಧಪಟ್ಟ ದಾವೆಯನ್ನು ನಿರ್ಧರಿಸುವ ಸಂದರ್ಭದಲ್ಲಿ ಸಿವಿಲ್ ಪ್ರೊಸೀಜರ್ ಕೋಡ್‌ನ ಕಲಂ 151ರ ಪ್ರಕಾರ ಹೊಂದಿರುವ ವಿಶೇಷ ವಿವೇಚನಾ ಅಧಿಕಾರದಂತೆ ಕಂದಾಯ ಅಧಿಕಾರಿಗಳು ಸಹಾ ಕಂದಾಯ ನ್ಯಾಯಾಲಯವನ್ನು ನಡೆಸುವ ಸಂದರ್ಭದಲ್ಲಿ ನ್ಯಾಯದಾನದ ಉದ್ದೇಶಗಳಿಗಾಗಿ ಅಗತ್ಯವಿರಬಹುದಾದಂತಹ ಸೂಕ್ತ ಆದೇಶಗಳನ್ನು ಮಾಡುವ ಮತ್ತು ಕಂದಾಯ ನ್ಯಾಯಾಲಯದ ಕಾರ್ಯವಿಧಾನಗಳು ದುರುಪಯೋಗವಾಗುವುದನ್ನು ತಡೆಗಟ್ಟಲು ಕಂದಾಯ ನ್ಯಾಯಾಲಯದ ಅಂತರ್ನಿಹಿತ ಅಧಿಕಾರವನ್ನು ಬಳಸುವುದಕ್ಕಾಗಿ ಭೂ ಕಂದಾಯ ಅಧಿನಿಯಮದ ಕಲಂ 25ರ ಪ್ರಕಾರದ ವಿಶೇಷ ವಿವೇಚನಾ ಅಧಿಕಾರವನ್ನು ಕಂದಾಯ ಅಧಿಕಾರಿಗಳು ಹೊಂದಿರುತ್ತಾರೆ. ಸಾಮಾನ್ಯವಾಗಿ ಕಂದಾಯ ಪ್ರಕರಣಗಳ ವಿಚಾರಣೆಯನ್ನು ನಡೆಸುವ ಸಂಧರ್ಭದಲ್ಲಿ ಕಂದಾಯ ತನಿಖಾಧಿಕಾರಿಯು ತಾನು ನಡೆಸುವ ತನಿಖೆಯ ಸ್ಧಳವನ್ನು ತನ್ನ ಅಧಿಕಾರ ವ್ಯಾಪ್ತಿಯೊಳಗಿನ ಸ್ಥಳೀಯ ಪ್ರದೇಶದಲ್ಲಿ ನಡೆಸಬೇಕಾಗುತ್ತದೆ. ಆದರೆ ಕೆಲವು ವಿಶೇಷ ಸಂಧರ್ಭಗಳಲ್ಲಿ ಕಂದಾಯ ತನಿಖಾಧಿಕಾರಿಯು ತನ್ನ ಮೇಲಾಧಿಕಾರಿಯ ನಿರ್ದೇಶನ ಅಥವಾ ಅನುಮತಿಯ ಮೇರೆಗೆ ತನ್ನ ಕೇಂದ್ರ ಕಾರ್ಯ ಸ್ಥಳದ ಸ್ಥಳೀಯ ಸರಹದ್ದಿನ ಹೊರಗಡೆ ತನ್ನ ಅಧಿಕಾರ ವ್ಯಾಪ್ತಿಯೊಳಗಿನ ಯಾವುದೇ ಪ್ರದೇಶದಲ್ಲಿ ಕಂದಾಯ ಪ್ರಕರಣಗಳ ತನಿಖೆಯನ್ನು ನಡೆಸಬಹುದಾಗಿದೆ. ಯಾವುದೇ ಪ್ರಕರಣಗಳ ತನಿಖೆಯನ್ನು ನಡೆಸುವ ಸಂಧರ್ಭದಲ್ಲಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಿತಾಸಕ್ತಿ ಹೊಂದಿರುವ ಎಲ್ಲಾ ಪಕ್ಷಗಾರರಿಗೆ ಕಂದಾಯ ತನಿಖಾಧಿಕಾರಿಯು ವೈಯಕ್ತಿಕ ನೋಟೀಸ್ ಜಾರಿ ಮಾಡಿ ಬಹಿರಂಗವಾಗಿ ವಿಚಾರಣೆಯನ್ನು ನಡೆಸಿ ತೀರ್ಮಾನವನ್ನು ಬಹಿರಂಗವಾಗಿ ನ್ಯಾಯಾಲಯದಲ್ಲಿ ಪಕ್ಷಗಾರರಿಗೆ ಓದಿ ಹೇಳಿ ಅವರ ಸಹಿಯನ್ನು ಪಡೆಯಬೇಕಾಗುತ್ತದೆ. ಈ ರೀತಿಯಾಗಿ ಕಂದಾಯ ಪ್ರಕರಣಗಳನ್ನು ನಡೆಸುವ ಸಂದರ್ಭದಲ್ಲಿ ಕಂದಾಯ ತನಿಖಾಧಿಕಾರಿಯು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾಕ್ಷವನ್ನು ದಾಖಲಿಸಿಕೊಳ್ಳುವ ಮತ್ತು ದಸ್ತಾವೇಜುಗಳನ್ನು ಪಡೆದು ಪರಿಶೀಲಿಸುವ ಮತ್ತು ಅಗತ್ಯವಿದ್ದಲ್ಲಿ ದಸ್ತಾವೇಜುಗಳನ್ನು ಹಾಜರು ಪಡಿಸುವುದಕ್ಕಾಗಿ ಯಾವುದೇ ವ್ಯಕ್ತಿ ಅಥವಾ ಸಾರ್ವಜನಿಕ ಕಚೇರಿ ಅಥವಾ ಅಧಿಕಾರಿಗೆ ಸಮನ್ಸ್ ನೀಡುವ ಅಧಿಕಾರವನ್ನು ಹೊಂದಿರುತ್ತಾರೆ. ಯಾವುದೇ ಕಂದಾಯ ಪ್ರಕರಣವನ್ನು ತನಿಖೆ ನಡೆಸುವ ಸಂಧರ್ಭದಲ್ಲಿ ತನಿಖಾಧಿಕಾರಿಯು ಸೂಕ್ತ ಕಾರಣ ನೀಡಿ ತನ್ನ ಮೇಲಾಧಿಕಾರಿಯ ಅನುಮತಿಯ ಅಥವಾ ಆದೇಶದ ಮೇರೆಗೆ ಪ್ರಕರಣವನ್ನು ತನ್ನ ಅಧಿಕಾರ ವ್ಯಾಪ್ತಿಯ ಹೊರಗಿನ ಬೇರೆ ಯಾವುದಾದರೂ ಸೂಕ್ತ ಕಂದಾಯ ಅಧಿಕಾರಿಗೆ ವರ್ಗಾಯಿಸುವ ಅಧಿಕಾರವನ್ನು ಹೊಂದಿರುತ್ತಾರೆ.
ಕಂದಾಯ ತನಿಖಾಧಿಕಾರಿಯು ಸೂಕ್ತ ವಿಚಾರಣೆಯ ಮೂಲಕ ನಿರ್ಧರಿಸಿ ಮಾಡುವ ಪ್ರತಿಯೊಂದು ತೀರ್ಮಾನಗಳು ಸದರಿ ನ್ಯಾಯಾಧಿಕರಣದ ಮಟ್ಟಿಗೆ ಅಂತಿಮವಾಗಿರುತ್ತದೆ ಮತ್ತು ಕಂದಾಯ ತನಿಖಾಧಿಕಾರಿ ಅಥವಾ ಕಂದಾಯ ನ್ಯಾಯಾಲಯವು ಮಾಡುವ ಆದೇಶ ಅಥವಾ ತೀರ್ಮಾನವನ್ನು ಸಿವಿಲ್ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶ ಇರುವುದಿಲ್ಲ. ಆದರೆ ಕಂದಾಯ ತನಿಖಾಧಿಕಾರಿಯ ಯಾವುದೇ ಆದೇಶವನ್ನು ಸಂಬಂಧಪಟ್ಟ ಕಂದಾಯ ನ್ಯಾಯಾಲಯಗಳಲ್ಲಿ ಕಾಲ ಪರಿಮಿತಿಯ ನಿಗದಿತ ಅವಧಿಯೊಳಗಾಗಿ ಕಂದಾಯ ಅಪೀಲು ದಾಖಲು ಮಾಡಿ ಪ್ರಶ್ನಿಸಿ ಸೂಕ್ತ ನಿವೃತ್ತಿಯನ್ನು ಹೊಂದುವ ಅವಕಾಶವನ್ನು ಪ್ರತಿಯೊಬ್ಬ ಭಾದಿತ ವ್ಯಕ್ತಿಯು ಹೊಂದಿರುತ್ತಾನೆ.





















