ವಿವಾದಾಸ್ಪದ ದಸ್ತಾವೇಜುಗಳು

ಯಾವುದೇ ಪ್ರಕರಣದ ತನಿಖೆ ನಡೆಯುವ ಸಂದರ್ಭದಲ್ಲಿ ವಿವಾದಿತ ಅಥವಾ ಪ್ರಶ್ನಾತೀತ ಬರವಣಿಗೆ ಮತ್ತು ಲಿಖಿತ ಪುರಾವೆಗಳನ್ನು ಅಂದರೆ ವಿವಾದಾಸ್ಪದ ದಸ್ತಾವೇಜು ಅಂದರೆ ದಾಖಲೆಗಳನ್ನು ಹೆಚ್ಚಿನ ಸಂದರ್ಭಗಳಲ್ಲಿ ವಿಧಿವಿಜ್ಞಾನ ತಜ್ಞರ ಅಭಿಪ್ರಾಯಗಳ ಮೂಲಕ ರುಜುವಾತು ಪಡಿಸಬೇಕಾಗುತ್ತದೆ. ವಿವಾದಿತ ದಸ್ತಾವೇಜುಗಳನ್ನು ವೈಜ್ಞಾನಿಕವಾಗಿ ಎರಡು ವಿಧಾನಗಳಿಂದ ಪರೀಕ್ಷಿಸಬೇಕಾಗುತ್ತದೆ. ಮೊದಲನೆಯ ವಿಧಾನ ವಿವಾದಿತ ದಾಖಲೆಯನ್ನು ಬರೆಯಲು ಉಪಯೋಗಿಸಿದ ವಸ್ತುಗಳಾದ ಕಾಗದ, ಮಸಿ ಅಂದರೆ ಶಾಯಿ, ಪೆನ್ನಿನ ಸ್ವರೂಪ, ಪೆನ್ಸಿಲ್, ಟೈಪ್‌ರೈಟರ್ ಇತ್ಯಾದಿಗಳ ಭೌತಿಕ ಮತ್ತು ರಾಸಾಯನಿಕ ವಿಶ್ಲೇಷಣೆ ಇತ್ಯಾದಿ ಮತ್ತು ಎರಡನೆಯದಾಗಿ ವಿವಾದಿತ ದಾಖಲೆಯನ್ನು ಬರೆದ ವ್ಯಕ್ತಿಯ ಗುರುತಿಸುವಿಕೆ ಅಂದರೆ ಅದನ್ನು ಬರೆದವರು ಯಾರು ಎಂಬುದನ್ನು ಪರೀಕ್ಷಿಸುವ ವಿಧಾನದ ಮೂಲಕ.

ಪ್ರಶ್ನಾತೀತ ದಸ್ತಾವೇಜಿನ ಕಾಗದ ಮತ್ತು ಅಂಗೀಕೃತ ದಸ್ತಾವೇಜಿನ ಕಾಗದಗಳು ಒಂದೇ ಮೂಲದಿಂದ ಬಂದಿವೆಯೋ ಇಲ್ಲವೊ ಎಂಬುದನ್ನು ಅವುಗಳ ಕಾಗದದ ಹೊರ ಮೈ, ಕಾಗದದ ತೂಕ, ದಪ್ಪ, ವರ್ಣ, ನಾರು ಪದಾರ್ಥಗಳ ಸಂಯೋಜನೆ, ಪಾರದರ್ಶಕ ಪ್ರಮಾಣಗಳ ವಿಶ್ಲೇಷಣೆಯಿಂದ ಕಂಡು ಹಿಡಿಯಬಹುದಾಗಿದೆ. ಕಾಗದದ ಮೇಲೆ ಬರೆಯಲು ಗಾಲ್, ಲಾಗವುಡ್, ಕಾರ್ಬನ್ ನೆಗ್ರೊಸಿನ್ ಮತ್ತು ಇಂಡಿಯನ್ ಮಸಿಯನ್ನು ಬಳಸುತ್ತಾರೆ. ಆದ್ದರಿಂದ ಈ ಮಸಿಯನ್ನು ರಾಸಾಯನಿಕ ವಿಶ್ಲೇಷಣೆಯಿಂದ ಆ ದಸ್ತಾವೇಜುಗಳಲ್ಲಿ ಯಾವ ಪ್ರಕಾರದ ಮಸಿಯನ್ನು ಉಪಯೋಗಿಸಿದ್ದಾರೆ ಎಂಬುದು ಗೊತ್ತಾಗುತ್ತದೆ. ಬರಹವನ್ನು ಬೇರೆ ಮಸಿಯಿಂದ ಅಂದರೆ ಶಾಯಿಯಿಂದ ತಿದ್ದಿದ್ದರೆ ಅದನ್ನು ಕಂಡು ಹಿಡಿದು ಆ ಕಾಗದದ ಮೇಲೆ ಸುಮಾರು ಎಷ್ಟು ವರುಷದ ಅಥವಾ ಸಮಯದ ಹಿಂದೆ ಬರೆದಿರಬಹುದೆಂಬುದನ್ನು ನಿರ್ಣಯಿಸಬಹುದಾಗಿದೆ. ಪ್ರಶ್ನಾತೀತ ಮತ್ತು ಅಂಗೀಕೃತ ಬರಹಗಳು ಒಂದೇ ಕಾಲಕ್ಕೆ ಬರೆಯಲಾಗಿತ್ತೇ ? ಅಥವಾ ಹೇಗೆ ಎಂಬ ಪ್ರಶ್ನೆಗೆ ಉತ್ತರವನ್ನೂ ಕೂಡ ಪಡೆಯಬಹುದು. ಪೆನ್ನು, ಪೆನ್ಸಿಲ್‌ಗಳ ವೈಯಕ್ತಿಕ ಲಕ್ಷಣಗಳಿಂದ ಬರಹಕ್ಕೆ ಇಂತಹದೇ ಉಪಕರಣವನ್ನು ಬಳಸಿದ್ದಾರೆಂದು ಗುರುತಿಸಬಹುದಾಗಿದೆ.

ಟೈಪರೈಟರಿನಿಂದ ಟೈಪ್ ಮಾಡಿದ ದಸ್ತಾವೇಜುಗಳನ್ನು ಸಹ ಕುರಿತಾಗಿ ಇಂತಹದ್ದೇ ಟೈಪ್‌ರೈಟರ್‌ನಿಂದ ಟೈಪ್ ಮಾಡಿದ್ದಾರೆಂದು ಪತ್ತೆ ಹಚ್ಚಬಹುದಾಗಿದೆ. ಸಾಮಾನ್ಯವಾಗಿ ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ವಿಭಿನ್ನ ಶೈಲಿ ಅಥವಾ ರೀತಿಯಲ್ಲಿ ಬರಹದ ಅಕ್ಷರಗಳನ್ನು ಬರೆಯುತ್ತಾನೆ. ಆತನ ಬರವಣಿಗೆಯಲ್ಲಿ ತನ್ನ ಮನಸ್ಸಿನಲ್ಲಿ ಅವನ ಅಕ್ಷರಗಳು ಸ್ಥಿರವಾಗಿರುತ್ತವೆ. ಅವನು ತನಗೆ ಅರಿವಿಲ್ಲದೇ ಅಕ್ಷರಗಳನ್ನು ತನ್ನದೇ ಆದ ಕಲಾತ್ಮಕ ರೀತಿಯಲ್ಲಿ ಬರೆಯುತ್ತಿರಬಹುದು. ಅಂದರೆ, ಅವನ ಅಕ್ಷರಗಳ ಬಾಲ, ಕುಣಿಕೆ, ತಲೆ, ಮತ್ತು ಅಕ್ಷರಗಳ ಜೋಡನೆಗಳು ಎದ್ದು ಕಾಣುವಂತೆ ಇರಬಹುದು. ವ್ಯಕ್ತಿಯು ಬರೆಯವಾಗ ಅವನ ಮುಂಗೈ ಮಾಂಸ, ಸ್ನಾಯು ಮತ್ತು ಪೆನ್ನು ಹಿಡಿಯುವಿಕೆಗಳ ಆಧಾರದಿಂದ ತನ್ನ ವ್ಯಕ್ತಿಗತ ಒತ್ತಡವನ್ನು ಉಪಯೋಗಿಸಿರುತ್ತಾನೆ. ಅವನ ಬರಹಗಳ ಕೋನವು ಬಲಗಡೆ, ಎಡಗಡೆ, ಅಥವಾ ನೇರವಾಗಿರಬಹುದು. ಬರಹಗಳ ಅಕ್ಷರಗಳ ಇಲ್ಲವೆ ಶಬ್ದಗಳ ನಡುವಿನ ಅಂತರವೂ ಒಂದು ನಿಯಮಿತವಾಗಿರುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ವ್ಯಕ್ತಿಯು ಬರೆಯುವಾಗ ತನ್ನದೇ ವಿಶೇಷ ಶೈಲಿಯನ್ನು ರೂಢಿ ಮಾಡಿಕೊಂಡಿರುತ್ತಾನೆ. ವ್ಯಕ್ತಿಯು ರೂಢಿಮಾಡಿಕೊಂಡಿರುವ ಲಕ್ಷಣಗಳನ್ನು ಅವನ ಬರಹದಲ್ಲಿ ಗುರುತಿಸಬೇಕಾಗುತ್ತದೆ. ಇವುಗಳ ಪರೀಕ್ಷೆಯಿಂದ ಆ ಬರಹವು ಇಂತಹದೇ ವ್ಯಕ್ತಿಯದೆಂದು ನಿರ್ಧರಿಸಬಹುದಾಗಿದೆ. ಆದ್ದರಿಂದ ಎರಡು ಬರಹಗಳನ್ನು ಪರೀಕ್ಷಿಸುವಾಗ ಅಕ್ಷರಗಳಲ್ಲಿಯ ಅಂತರ, ಪೆನ್ನಿನ ಒತ್ತಡ, ಅಕ್ಷರಗಳ ಕೋನ, ಅಕ್ಷರಗಳ ಬಾಲ, ಮೇಲಿನ ಮತ್ತು ಕೆಳಗಿನ ಸಾಲಿನ ಅಂತರ, ದೀರ್ಘಗಳು, ಒತ್ತಾಕ್ಷರಗಳು, ಅಕ್ಷರಗಳ ಜೋಡನೆಯ ನಮೂನೆ ಕೊಂಬುಗಳು, ಪೆನ್ನು ಒತ್ತುವಿಕೆ, ವಿರಾಮ ಚಿನ್ಹೆಗಳ ಮಾದರಿ, ಅಕ್ಷರಗಳ ಸಾಮಾನ್ಯ ಮಾದರಿ, ಬರವಣಿಗೆಯ ವೇಗ, ಅಕ್ಷರಗಳ ಸಾಲುಗಳ ವೈಶಿಷ್ಟ್ಯತೆ, ಅಕ್ಷರಗಳ ಪ್ರಾರಂಭ ಮತ್ತು ಕೊನೆ, ಕೈ ನಡುಗುವಿಕೆ, ಬರೆದ ನಂತರ ಅಕ್ಷರಗಳ ಜೋಡಣೆ ಮುಂತಾದ ಅಕ್ಷರಗಳ ವಿಶ್ಲೇಷಣೆಯನ್ನು ‘ಅಕ್ಷರಗಳ ರೂಪ ಅಥವಾ ಆಕಾರ ಶಾಸ್ತ್ರದಿಂದ ಗುರುತಿಸಲಾಗುತ್ತದೆ. ಹೆಚ್ಚು ಶಿಕ್ಷಣ ಹೊಂದಿದ ವ್ಯಕ್ತಿಯ ಬರವಣಿಗೆಯ ವೇಗವು ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಯಾವುದೇ ವ್ಯಕ್ತಿ ಬೇರೆಯವರ ಬರಹ ನಕಲು ಮಾಡುವಾಗ ಆಗಲೀ, ಇಲ್ಲವೆ ತಮ್ಮ ಬರಹ ಗುರುತು ಸಿಗಬಾರದೆಂದು ಬರೆಯಲು ಪ್ರಯತ್ನಿಸಿದಾಗ ಮೊದ ಮೊದಲು ಆ ಬರಹವು ಬೇರೆಯಾಗಿ ಕಾಣಿಸಬಹುದು. ಆದರೆ ಕೆಲವೊಂದು ವಾಕ್ಯಗಳನ್ನು ಬರೆದ ನಂತರ, ಆ ವ್ಯಕ್ತಿ ತನಗೆ ಅರಿವಿಲ್ಲದಂತೆಯೇ ತನ್ನ ವೈಯಕ್ತಿಕ ಬರಹದ ಶೈಲಿಯನ್ನು ಮುಂದುವರೆಸುತ್ತಾನೆ. ಅವನು ಬೇರೆ ಬೇರೆ ಗಾತ್ರದ ಅಕ್ಷರಗಳನ್ನು ಬರೆಯಲು ಪ್ರಯತ್ನಿಸಿದಾಗಲೂ ಸಹ ಅವನ ಬರಹವನ್ನು ಗುರುತಿಸಬಹುದು. ಎರಡನೆಯ ಪ್ರಕಾರದ ಬರಹದ ವಿಶ್ಲೇಷಣೆಯನ್ನು ಅಕ್ಷರಗಳ ಅಳತೆ ಶಾಸ್ತ್ರ ದಿಂದ ಮಾಡಲಾಗುತ್ತದೆ. ಇಲ್ಲಿ ಅಕ್ಷರಗಳನ್ನು ಅಳತೆ ಮಾಡಿ ಅವುಗಳಲ್ಲಿನ ಸಂಬಂಧ ಪ್ರಮಾಣವನ್ನು ಕಂಡುಹಿಡಿಯಲಾಗುತ್ತದೆ. ಅಕ್ಷರಗಳ ಅಳತೆಗಳ ಪ್ರಮಾಣಗಳು ಆ ವ್ಯಕ್ತಿಯ ವೈಯಕ್ತಿಕ ಬರಹದ ಲಕ್ಷಣಗಳಾಗಿರುತ್ತವೆ. ಆದ್ದರಿಂದ ವ್ಯಕ್ತಿಯ ಕೈ ಬರಹವನ್ನು ಗುರುತಿಸುವಾಗ ಅವನ ವೈಯಕ್ತಿಕ ಬರಹದ ಲಕ್ಷಣಗಳನ್ನು ಕಂಡುಹಿಡಿದು ಅವು ಕುರಿತಾದ ವ್ಯಕ್ತಿಯ ಬರವಣಿಗೆಯಲ್ಲಿ ಇದೆಯೋ ಅಥವಾ ಇಲ್ಲವೋ ಎಂಬುದನ್ನು ಗುರುತಿಸಬೇಕಾಗುತ್ತದೆ. ಇಂಥ ಲಕ್ಷಣಗಳು ಸಾಕಷ್ಟು ಪ್ರಮಾಣದಲ್ಲಿದ್ದು, ಕೆಲವು ಪ್ರಕರಣಗಳಲ್ಲಿ ಅಪರಾಧಿ ತನ್ನ ಅಪರಾಧವನ್ನು ಮರೆಮಾಚುವ ದುರುದ್ದೇಶದಿಂದ ಕೆಲವು ಪ್ರಾಮುಖ್ಯವಾದ ಲಿಖಿತ ದಾಖಲೆಯ ಅಂಶವನ್ನು ಸುಟ್ಟು ಹಾಕಿರಬಹುದು. ಅಂಥ ಸಮಯದಲ್ಲಿ ಆ ಸುಟ್ಟುಹೋದ ಕಾಗದದ ಭೌತಿಕ ಸ್ವರೂಪದ ಪ್ರಕಾರ ರಾಸಾಯನಿಕ ವಿಧಾನದಿಂದ ಅದರಲ್ಲಿಯ ಬರಹವನ್ನು ಓದುವಂತೆ ಮಾಡಬಹುದು. ಉದಾಹರಣೆಗೆ ಸುಟ್ಟ ಕಾಗದವನ್ನು ಗಾಜಿನ ಮೇಲೆ ಇಟ್ಟು ಸೈಲ್ಯುಲೈಟ್ ಇಲ್ಲವೆ ಕ್ಲೊರಲ್ ಹೈಡ್ರೇಟ್ ದ್ರಾವಣವನ್ನು ಸಿಂಪಡಿಸಿ ಮೃದುಮಾಡಿ ನಂತರ ಇನ್‌ಫ್ರಾರೆಡ್ ಕಿರಣದಿಂದ ಫೋಟೋ ತೆಗೆದು ಅದರಲ್ಲಿ ಬರಹವನ್ನು ಓದಬಹುದಾಗಿದೆ. ಕೆಲವೊಮ್ಮೆ ಅಪರಾಧಿಗಳು ಯಾರಿಗೂ ತಿಳಿಯದಂತೆ ಅಗೋಚರ ಮಸಿಯಿಂದ ಬರೆದು ಸಂದೇಶ ಕಳಿಸುತ್ತಾರೆ ಇವುಗಳ ಗೋಚರತೆಯನ್ನು ಶಾಖದಿಂದಾಗಲೀ ಅಥವಾ ಕಾಗದವನ್ನು ನೀರಿನಲ್ಲಿ ತೋಯಿಸುವುದರಿಂದಾಗಲಿ ಅದನ್ನು ಓದಬಹುದು. ತಿದ್ದಲ್ಪಟ್ಟ ಹಾಗೂ ಅಳುಕಿಸಲ್ಪಟ್ಟ ಅಥವಾ ಮಸಿ ಚೆಲ್ಲಿದ ದಾಖಲೆಯನ್ನು ಸೂಕ್ಷ್ಮದರ್ಶಕದಲ್ಲಿ ಅಥವಾ ಇನ್‌ಫ್ರಾರೆಡ್ ಕಿರಣಗಳ ಸಹಾಯದಿಂದ ಛಾಯಾಚಿತ್ರ ತೆಗೆದು ಓದಬಹುದು.

ನ್ಯಾಯಾಲಯಗಳು ವಿವಾದಾತ್ಮಕ ಕೈಬರಹಗಳನ್ನು ತಜ್ಞರಿಗೆ ಕಳಿಸುವಾಗ, ಪರೀಕ್ಷಿಸಬೆಕಾದ ವ್ಯಕ್ತಿಯ ಬರಹವನ್ನು ವಿವಾದಿತ ಕೈ ಬರಹದೊಂದಿಗೆ ಮತ್ತು ಸಂಬಂಧಪಟ್ಟ ವ್ಯಕ್ತಿಯ ಸಹಿಯೊಂದಿಗೆ ಕಳಿಸಬೇಕಾಗುತ್ತದೆ. ಈ ರೀತಿಯಾಗಿ ಸಹಿಗಳನ್ನು ನ್ಯಾಯಾಧೀಶರ ಮುಂದೆಯೇ ಪಡೆಯಬೇಕಾಗುತ್ತದೆ. ಈ ಕುರಿತು ತಜ್ಞರ ವರದಿ ನ್ಯಾಯಾಲಯಕ್ಕೆ ಬಂದ ನಂತರ ನ್ಯಾಯಾಲಯವು ತಜ್ಞರ ವರದಿಯನ್ನು ಕೂಲಂಕುಷವಾಗಿ ವಿಚಾರಿಸಿ, ತಜ್ಞರ ಅಭಿಪ್ರಾಯ ಪಡೆದು ಸೂಕ್ತ ನಿರ್ಧಾರವನ್ನು ಹೊಂದಬೇಕಾಗುತ್ತದೆ.















































































error: Content is protected !!
Scroll to Top