ಬೆಂಗಳೂರು : ನಾಳೆ ರಾತ್ರಿ ನಭೋ ಮಂಡಲದಲ್ಲಿ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ (ಖಗ್ರಾಸ ಚಂದ್ರ ಗ್ರಹಣ) ಸಂಭವಿಸಲಿದೆ. ಹುಣ್ಣಿಮೆಯ ಚಂದ್ರ ರಕ್ತಚಂದನದ ರೀತಿ ಗೋಚರಿಸಲಿದ್ದಾನೆ.
3 ಗಂಟೆ 29 ನಿಮಿಷಗಳ ಕಾಲ ಚಂದ್ರ ಗ್ರಹಣ
ಸೆ. 7ರ ರಾತ್ರಿ 09:57 ರಿಂದ ಸೆ. 8ರ ಬೆಳಿಗ್ಗೆ 01:26 ರವರೆಗೆ ಗ್ರಹಣ ಇರುತ್ತದೆ. ಚಂದ್ರಗ್ರಹಣದ ಒಟ್ಟು ಅವಧಿ 03 ಗಂಟೆ 29 ನಿಮಿಷಗಳಾಗಿವೆ. ಈ ವೇಳೆ ನಭದಲ್ಲಿ ನಡೆಯುವ ಭೂಮಿ, ಸೂರ್ಯ ಹಾಗೂ ಚಂದ್ರನ ನಡುವಿನ ನೆರಳಿನಾಟಕ್ಕೆ ಭಾರತ ಕೂಡ ಸಾಕ್ಷಿಯಾಗಲಿದೆ.
ಕೃಷ್ಣ ಮಠದಲ್ಲಿ ಮಂತ್ರ ಪಠಣ
ಚಂದ್ರಗ್ರಹಣ ಹಿನ್ನೆಲೆ ರಾಜ್ಯದಲ್ಲಿ ಬಹುತೇಕ ದೇವಾಲಯಗಳು ನಾಳೆ ಬಂದ್ ಇರಲಿದೆ. ಇತ್ತ ಉಡುಪಿಯಲ್ಲಿ ಖಗ್ರಾಸ ಚಂದ್ರ ಗ್ರಹಣ ಹಿನ್ನೆಲೆ ಕೃಷ್ಣ ಮಠದಲ್ಲಿ ಭಕ್ತರಿಂದ ಮಂತ್ರ ಪಠಣ ನಡೆಯಲಿದೆ. ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ 1008 ಕೃಷ್ಣ ಭಕ್ತರಿಂದ ಸ್ವಾಮಿ ಶ್ರೀ ಕೃಷ್ಣಾಯ ನಮಃ ಮಂತ್ರ ಜಪ ಪಠಣನೆ ನಡೆಯಲಿದೆ. ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರ ಮಾರ್ಗದರ್ಶನದಲ್ಲಿ ಲೋಕಕಲ್ಯಾಣಾರ್ಥ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗ್ರಹಣ ದೋಷಗಳ ಪರಿಹಾರಕ್ಕಾಗಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.









































































