ಉಡುಪಿ : ನ್ಯಾಯಾಲಯದ ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ಈ ಹಿಂದೆ ಲೋಕ ಅದಾಲತ್ ಜಾರಿಗೆ ತರಲಾಗಿದ್ದು ಇದರ ಮುಂದುವರಿದ ಭಾಗವಾಗಿ ಇದೀಗ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಅಡಿಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಜು. 1 ರಿಂದ ಸೆ. 7 ರವರೆಗೆ 90 ದಿನಗಳ ವಿಶೇಷ ಮಧ್ಯಸ್ಥಿಕೆ ಅಭಿಯಾನವನ್ನು ಆರಂಭಿಸಿದೆ.
ಜಿಲ್ಲಾ ಹಾಗೂ ತಾಲೂಕು ಹಂತದ ನ್ಯಾಯಾಲಯಗಳಲ್ಲಿ ಚಾಲ್ತಿಯಲ್ಲಿರುವ ಕೌಟುಂಬಿಕ, ವೈವಾಹಿಕ, ಅಪಘಾತ ವಿಮಾ, ಚೆಕ್ ಅಮಾನ್ಯ, ವಾಣಿಜ್ಯ ಪ್ರಕರಣ, ಗ್ರಾಹಕರ ವ್ಯಾಜ್ಯಗಳು, ಸಾಲ ವಸೂಲಾತಿ, ಆಸ್ತಿ ವಿಭಾಗ, ಭೂಸ್ವಾಧೀನ ಸೇರಿದಂತೆ ಎಲ್ಲಾ ರೀತಿಯ ಸಿವಿಲ್ ಸ್ವರೂಪದ ಪ್ರಕರಣಗಳನ್ನು ಮಧ್ಯಸ್ಥಿಕೆ ಮುಖಾಂತರ ಇತ್ಯರ್ಥಪಡಿಸಲಿಕೊಳ್ಳಲು ಕಕ್ಷಿಗಾರರಿಗೆ ಸೂಕ್ತ ಮಾರ್ಗದರ್ಶನ ಮತ್ತು ವೇದಿಕೆಯನ್ನು ಕಲ್ಪಿಸಿಕೊಡಲಾಗುತ್ತಿದೆ.
ವಿವಾಹದ ಸಂಬಂಧವನ್ನು ಕಡಿದುಕೊಳ್ಳಲು ವಿಚ್ಚೇದನ ಪ್ರಕರಣಗಳೊಂದಿಗೆ ಜೀವನಾಂಶ ಕೋರಿಕೆ, ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ ಪ್ರಕರಣಗಳು ಸೇರಿಕೊಂಡಿರುತ್ತದೆ. ವಿಚ್ಚೇದನ ಪ್ರಕರಣದಲ್ಲಿ ದಂಪತಿಗಳನ್ನು ಒಂದುಗೂಡಿಸುವುದರಿಂದ ಸಾಕಷ್ಟು ಪ್ರಕರಣಗಳನ್ನು ಆರಂಭದಲ್ಲಿಯೇ ಅಂತ್ಯಗೊಳಿಸಲು ಈ ಯೋಜನೆ ಸಹಕಾರಿಯಾಗಲಿದೆ. ಇಲ್ಲವಾದಲ್ಲಿ ದಂಪತಿಗಳ ಕೋರಿಕೆಯ ಮೇರೆಗೆ ವಿಚ್ಚೇದನವನ್ನು ಪಡೆಯಬಹುದಾಗಿದೆ.

ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ ಬ್ಯಾಂಕ್, ಬಿಎಸ್ಎನ್ಎಲ್, ಬೆಸ್ಕಾಂ, ನಗರಸಭೆಗೆ ಸಂಬಂಧಿಸಿದ ವ್ಯಾಜ್ಯಗಳು ಹೆಚ್ಚಿರುತ್ತವೆ. ಕೆಲವೊಮ್ಮೆ ನ್ಯಾಯಾಲಯ ಮಧ್ಯಸ್ಥಿಕೆ ವಹಿಸಿ ಬ್ಯಾಂಕ್ ಸಾಲ ಹಾಗೂ ಬಡ್ಡಿ ಮರುಪಾವತಿ, ಬಿಲ್ಗಳ ಪಾವತಿಯಲ್ಲಿ ರಿಯಾಯಿತಿ ನೀಡುವಂತೆ ಮಾಡುತ್ತದೆ. ಇದರಿಂದ ಸಾರ್ವಜನಿಕರಿಗೆ ಹಾಗೂ ಸರಕಾರಿ ಸಂಸ್ಥೆಗಳಿಗೆ ಅನುಕೂಲವಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಜ್ಯ ಪ್ರಕರಣಗಳು ಸಹ ವಿಲೇವಾರಿಯಾಗುತ್ತವೆ.
ಸಂಬಂಧಗಳನ್ನು ಉಳಿಸಲು ಸಹಕಾರಿ
ಸುಪ್ರೀಂಕೋರ್ಟಿನ ಮಹತ್ವಕಾಂಕ್ಷೆ ಯೋಜನೆ ಇದಾಗಿದೆ. ಎರಡು ಕಕ್ಷಿಗಾರರು ಮಧ್ಯಸ್ಥಿಕೆದಾರರ ಸಮಕ್ಷಮದಲ್ಲಿ ಚರ್ಚಿಸಿ ರಾಜಿಗೆ ಸಿದ್ದವಿದ್ದಲ್ಲಿ ಕಾನೂನಾತ್ಮಕವಾಗಿ ನ್ಯಾಯವಾಗಿವೆಯೇ ಎಂಬುದನ್ನು ಪರಾಮರ್ಶಿಸಿ ನ್ಯಾಯಾಲಯದಿಂದ ಅಧಿಕೃತವಾಗಿ ಪ್ರಕರಣವನ್ನು ಇತ್ಯರ್ಥಪಡಿಸಲಾಗುತ್ತದೆ. ಮಧ್ಯಸ್ಥಗಾರಿಕೆ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಂಡರೆ ಸಮಯ, ಹಣದ ಉಳಿತಾಯವಾಗುತ್ತದೆ. ಜೊತೆಗೆ ಸಂಬಂಧಗಳನ್ನು ಉಳಿಸಿಕೊಂಡು, ಮುಂದುವರಿಸಲು ಈ ಯೋಜನೆ ಸಹಕಾರಿಯಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಯೋಗೇಶ್ ಹೇಳಿದರು.
ಜಿಲ್ಲೆಯಲ್ಲಿ ಈ ಯೋಜನೆಯ ಅಡಿಯಲ್ಲಿ ಇದುವರೆಗೆ ಒಟ್ಟು 443 ಪ್ರಕರಣಗಳು ಮಧ್ಯಸ್ಥಿಕೆ ಕೇಂದ್ರಕ್ಕೆ ನ್ಯಾಯಾಲಯವು ಶಿಫಾರಸು ಮಾಡಿದೆ. ಅದರಲ್ಲಿ 270 ಪ್ರಕರಣಗಳಲ್ಲಿ ಮಧ್ಯಸ್ಥಿಕೆ ಪ್ರಕ್ರಿಯೆ ಪೂರ್ಣಗೊಂಡು, 26 ಪ್ರಕರಣಗಳು ಇತ್ಯರ್ಥಗೊಂಡಿದೆ. ತಾಲೂಕುವಾರು ಉಡುಪಿ – 11, ಕುಂದಾಪುರ – 10, ಕಾರ್ಕಳ – 5 ಪ್ರಕರಣಗಳು ಇತ್ಯರ್ಥಗೊಂಡಿದೆ.






























































