ಆಪರೇಷನ್‌ ಸಿಂಧೂರ – ಇಂದು ಲೋಕಸಭೆಯಲ್ಲಿ 16 ಗಂಟೆಗಳ ಮ್ಯಾರಥಾನ್‌ ಚರ್ಚೆ

ದೆಹಲಿ : ಇಂದು ಲೋಕಸಭೆಯಲ್ಲಿ ʻಆಪರೇಷನ್‌ ಸಿಂಧೂರʼ ಕುರಿತು 16 ಗಂಟೆಗಳ ಕಾಲ ಮ್ಯಾರಥಾನ್‌ ಚರ್ಚೆ ನಡೆಯಲಿದೆ. ಮಧ್ಯಾಹ್ನ 12 ಗಂಟೆಯಿಂದ ಚರ್ಚೆ ಪ್ರಾರಂಭವಾಗಲಿದ್ದು, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಚರ್ಚೆ ಶುರು ಮಾಡಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಆಪರೇಷನ್‌ ಸಿಂಧೂರ ಕುರಿತು ಲೋಕಸಭೆಯಲ್ಲಿ 16 ಗಂಟೆ ಹಾಗೂ ರಾಜ್ಯಸಭೆಯಲ್ಲಿ 9 ಗಂಟೆಗಳ ಕಾಲ ಚರ್ಚೆಗೆ ಸಮಯ ನಿಗದಿಪಡಿಸಲಾಗಿದೆ. ಇಂದು ಲೋಕಸಭೆಯಲ್ಲಿ ಚರ್ಚೆ ನಡೆಯಲಿದ್ದು, ಪ್ರಧಾನಿ ಮೋದಿ ಸಹ ತಮ್ಮ ವಾದ ಮಂಡಿಸಲಿದ್ದಾರೆ ಎಂದು ವರದಿಯಾಗಿದೆ.

ಸಂಸತ್‌ ಮೂಲಗಳ ಪ್ರಕಾರ, ರಾಜನಾಥ್‌ ಸಿಂಗ್‌ ಅವರು, ಸಿಡಿಎಸ್ ಜನರಲ್ ಅನಿಲ್ ಚೌಹಾಣ್, ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಮತ್ತು ಮೂರು ಸೇನಾಪಡೆಗಳ ಮುಖ್ಯಸ್ಥರೊಂದಿಗೆ ಹಲವು ಸುತ್ತಿನ ಸಭೆಗಳನ್ನು ನಡೆಸಲಿದ್ದಾರೆ. ಈ ಸಭೆಯಲ್ಲಿ ಸರ್ಕಾರದ ಕಾರ್ಯತಂತ್ರಗಳನ್ನು ಅಂತಿಮಗೊಳಿಸಲಾಗುತ್ತದೆ.

ಏಪ್ರಿಲ್‌ 22ರ ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ಮೇ 7ರ ತಡರಾತ್ರಿ ಭಾರತ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ನಡೆಸಿತ್ತು. ರಾತ್ರೋ ರಾತ್ರಿ ನಡೆಸಿದ್ದ ದಾಳಿಯಲ್ಲಿ ನಿಷೇಧಿತ ಮೂರು ಉಗ್ರ ಸಂಘಟನೆಗಳಾದ ಜೈಶ್‌ ಎ ಮೊಹಮ್ಮದ್‌, ಲಷ್ಕರ್‌ ಎ ತೈಬಾ (LET) ಮತ್ತು ಹಿಜ್ಬುಲ್‌ ಮುಜಾಹಿದ್ದೀನ್‌ ಉಗ್ರರ ಪ್ರಧಾನ ಕಚೇರಿಗಳು ಧ್ವಂಸವಾಗಿದ್ದವು. ಪಾಕಿಸ್ತಾನ ಮತ್ತು ಪಾಕ್ ಅಕ್ರಮಿತ ಕಾಶ್ಮೀರದಲ್ಲಿರುವ 9 ಅಡಗುತಾಣಗಳ ಮೇಲೆ ಭಾರತೀಯ ವಾಯು ಸೇನೆ ದಾಳಿ ನಡೆಸಿತ್ತು. ಇದಾದ ಬಳಿಕ ಪಾಕ್‌ ಭಾರತದ ಮೇಲೆ ಮಿಸೈಲ್‌ ದಾಳಿಗೆ ಮುಂದಾಯಿತು. ಆದರೆ, ಭಾರತೀಯ ಸೇನೆಗಳು ಪಾಕ್‌ ಮಿಸೈಲ್‌ಗಳ ದಾಳಿಯನ್ನ ವಿಫಲಗೊಳಿಸಿದವು.

ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಬಗ್ಗೆ ಹಲವು ಅನುಮಾನಗಳನ್ನ ವ್ಯಕ್ತಪಡಿಸಿದ್ದ ವಿಪಕ್ಷಗಳು ಚರ್ಚೆಗೆ ಪಟ್ಟು ಹಿಡಿದಿದ್ದವು. ಪ್ರಧಾನಿ ಮೋದಿ ವಿದೇಶಿ ಪ್ರವಾಸದಲ್ಲಿದ್ದ ಕಾರಣ, ಚರ್ಚೆಯನ್ನು ಒಂದು ವಾರ ಮುಂದೂಡಲಾಗಿತ್ತು. ಇದೀಗ ಪ್ರಧಾನಿ ವಿದೇಶಿ ಪ್ರವಾಸ ಮುಗಿಸಿ ವಾಪಸ್‌ ಆದ ಬೆನ್ನಲ್ಲೇ ಚರ್ಚೆಗೆ ತಯಾರಿ ನಡೆದಿದೆ.

a href="#" target="_blank">







































error: Content is protected !!
Scroll to Top