ಕ್ವೀನ್ ಆಫ್ ಇಂಡಿಯನ್ ಮ್ಯೂಸಿಕ್ – ಎಂ. ಎಸ್. ಸುಬ್ಬಲಕ್ಷ್ಮಿ

ಪಂಡಿತ್ ನೆಹರೂ ಆಕೆಯನ್ನು ಕ್ವೀನ್ ಆಫ್ ಇಂಡಿಯನ್ ಮ್ಯೂಸಿಕ್ ಎಂದು ಕರೆದರು. ಲತಾ ಮಂಗೇಶ್ಕರ್ ತಪಸ್ವಿನಿ ಎಂದು ಕರೆದರು. ಬಡೆ ಗುಲಾಂ ಆಲಿಖಾನ್ ಸುಸ್ವರ ಲಕ್ಷ್ಮಿ ಎಂದು ಕರೆದರು. ಕಿರಣ್ ಆಮೊನಕರ್ ಸಂಗೀತದ ಎಂಟನೇ ಸ್ವರ ಎಂದು ಕರೆದರು. ಅಬ್ದುಲ್ ಕಲಾಂ ಅಮ್ಮಾ ಎಂದು ಕರೆದರು. ಇಷ್ಟೆಲ್ಲ ಉಪಾಧಿಗಳನ್ನು ತಮ್ಮದಾಗಿಸಿಕೊಂಡವರು ಭಾರತೀಯ ಸಂಗೀತದ ಮೇರು ರಾಯಭಾರಿಯೇ ಹೌದು.

ಅವರೇ ಎಂ. ಎಸ್. ಸುಬ್ಬುಲಕ್ಷ್ಮಿ
ಮಧುರೈ ಷಣ್ಮುಖವಡಿವು ಸುಬ್ಬಲಕ್ಷ್ಮಿ ಅವರ ಪೂರ್ಣ ಹೆಸರು. ಭಾರತದ ಸಂಗೀತ ಸಾಧಕರ ಪಟ್ಟಿಯಲ್ಲಿ ಹೊಳೆಯುವ ಒಂದು ಹೆಸರು ಎಂ ಎಸ್. ಸುಬ್ಬಲಕ್ಷ್ಮಿ. 88 ವರ್ಷ ಬದುಕಿದ್ದ ಮತ್ತು ತಮ್ಮ ಜೀವನದ ಬಹಳ ದೊಡ್ಡ ಭಾಗವನ್ನು ಸಂಗೀತದ ತಪಸ್ಸಿಗೆ ಮೀಸಲಾಗಿಟ್ಟ ಒಂದು ಹೊಳೆಯುವ ನಕ್ಷತ್ರ ಆಕೆ!

ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತ ಎರಡರಲ್ಲಿಯೂ ವಿಸ್ತಾರವಾದ ಕೃಷಿ ಮಾಡಿದ ಆಕೆ ತನ್ನ 11ನೆಯ ವಯಸ್ಸಿಗೆ ಸಂಗೀತ ಕಛೇರಿಯನ್ನು ಕೊಟ್ಟ ಪ್ರತಿಭಾವಂತೆ. ದೇಶದಾದ್ಯಂತ ಸಾವಿರಾರು ಶಾಸ್ತ್ರೀಯ ಸಂಗೀತ ಕಛೇರಿಗಳನ್ನು ಕೊಟ್ಟ ಎಂ. ಎಸ್. ಅವರು ಸಂಗೀತವನ್ನು ದೈವತ್ವಕ್ಕೆ ಏರಿಸಿದವರು. ಹಾಗೆಯೇ ಲಂಡನ್, ನ್ಯೂಯಾರ್ಕ್, ಕೆನಡಾ, ರಶಿಯಾ ಮೊದಲಾದ ರಾಷ್ಟ್ರಗಳಲ್ಲಿಯೂ ಅವರು ಶುದ್ಧ ಶಾಸ್ತ್ರೀಯ ಸಂಗೀತದ ಕಾರ್ಯಕ್ರಮಗಳನ್ನೇ ನೀಡಿದರು. 1966ರಲ್ಲಿ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಸಂಗೀತದ ಕಾರ್ಯಕ್ರಮ ಕೊಟ್ಟ ಮೊದಲ ಭಾರತೀಯರು ಎಂ. ಎಸ್! ರಾಮನ್ ಮ್ಯಾಗ್ಸೆಸೆ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಮೊದಲ ಭಾರತೀಯ ಸಂಗೀತ ಸಾಧಕಿ ಕೂಡ ಎಂ. ಎಸ್. ಅವರೇ! ಹೀಗೆ ಹಲವು ಪ್ರಥಮಗಳ ಹೆಸರು ಅದು ಖಂಡಿತವಾಗಿ ಎಂ. ಎಸ್. ಅವರೇ!

ಆಕೆಗೆ ಸಂಗೀತ ಎಂದರೆ ಆಧ್ಯಾತ್ಮ
ಆಕೆಯ ಸಂಗೀತದ ಕಾರ್ಯಕ್ರಮಗಳನ್ನು ನೋಡಿದವರು ಅದು ಆಧ್ಯಾತ್ಮದ ಪ್ರವಾಹ ಎಂದು ಕರೆದಿದ್ದಾರೆ. ಚಂದವಾದ ಕಾಂಜೀವರಂ ಸೀರೆ ಉಟ್ಟು, ಕೈ ತುಂಬಾ ಬಳೆ, ತಲೆ ತುಂಬ ಏಕಾಂಬರದ ಹೂವಿನ ಮಾಲೆ, ಹಣೆಯಲ್ಲಿ ದುಂಡನೆಯ ಕುಂಕುಮದ ಬೊಟ್ಟು…ಧರಿಸಿ ಆಕೆ ವೇದಿಕೆಯಲ್ಲಿ ತಂಬೂರಿಗೆ ಕೈ ಮುಗಿದು, ತನ್ನ ಸಹಕಲಾವಿದರಿಗೆ ನಮಸ್ಕರಿಸಿ ಹಾಡಲು ತೊಡಗಿದರೆ ಎದುರು ಕೂತು ಕೇಳುವ ಪ್ರೇಕ್ಷಕರಿಗೆ ಸ್ವರ್ಗವೇ ಭೂಮಿಗೆ ಇಳಿದಷ್ಟು ಫೀಲ್ ಆಗುತ್ತಿತ್ತು. ಆಕೆಯು ಹಾಡಿದ ವೆಂಕಟೇಶ್ವರ ಸುಪ್ರಭಾತದ ಮೂಲಕವೇ ಈಗಲೂ ತಿರುಪತಿ ದೇವಳದ ಬಾಗಿಲು ತೆರೆಯುವುದು! ತಿರುಪತಿ ದೇವಾಲಯವು ಆಕೆಯನ್ನು ಆಸ್ಥಾನ ವಿದುಷಿ ಎಂದು ಕರೆಯಿತು. ಜಾಲತಾಣಗಳಲ್ಲಿ ಕೋಟಿ ಕೋಟಿ ಮಂದಿ ಈಗಲೂ ಕೇಳುತ್ತಿರುವ ಅವರ ಭಜ ಗೋವಿಂದಮ್, ವಿಷ್ಣು ಸಹಸ್ರನಾಮ, ಮೀನಾಕ್ಷಿ ಪಂಚರತ್ನಮ್ ಇವುಗಳು ಅದ್ಭುತವಾದ ಪ್ರಸ್ತುತಿಗಳು. ತಮಿಳು ಮತ್ತು ಹಿಂದಿಯಲ್ಲಿ ಮೀರಾಬಾಯಿ ಸಿನೆಮಾ ಬಂದಾಗ ಅದರಲ್ಲಿ ಮೀರಾ ಪಾತ್ರವನ್ನು ವಹಿಸಿದ್ದು ಮಾತ್ರವಲ್ಲ ಆ ಸಿನೆಮಾದ ಎಲ್ಲ ಮೀರಾ ಭಜನಗಳನ್ನು ಸ್ವತಃ ಎಂ. ಎಸ್. ಅವರೇ ಹಾಡಿದ್ದಾರೆ. ಅವುಗಳನ್ನು ಒಮ್ಮೆ ನೀವು ಕೇಳಿ ನೋಡಿದರೆ ನಿಮಗೆ ಎಂ. ಎಸ್. ಅವರ ಸಂಗೀತದ ತಾಕತ್ತು ಅರಿವಾಗುತ್ತದೆ.

ನೂರಾರು ಚಾರಿಟಿಯ ಶೋಗಳು
ಸಂಗೀತದ ಮೂಲಕ ಬಂದ ದುಡ್ಡು ಮತ್ತು ಕೀರ್ತಿಗಳನ್ನು ಆಕೆ ತನ್ನ ಸ್ವಂತಕ್ಕೆ ಬಳಸಿಕೊಂಡ ಉದಾಹರಣೆಗಳು ನಮಗೆ ದೊರೆಯುವುದಿಲ್ಲ. ನೂರಾರು ಚಾರಿಟಿ ಶೋಗಳನ್ನು ದೇಶದಾದ್ಯಂತ ನೀಡಿದ ಕೀರ್ತಿ ಅವರದ್ದು. ಸಂಗೀತದ ಮೂಲಕ ಸಂಗ್ರಹ ಮಾಡಿದ ಒಂದು ಕೋಟಿಗೂ ಅಧಿಕ ದುಡ್ಡನ್ನು ಅವರು ಚಾರಿಟಿಗೆ ದಾನ ಮಾಡಿದ್ದಾರೆ! ವೆಂಕಟೇಶ್ವರ ಸುಪ್ರಭಾತ ಮತ್ತು ಇತರ ಹಲವು ಹಾಡುಗಳ ಮೂಲಕ ಬಂದ ರಾಯಲ್ ಆದಾಯವನ್ನು ಅವರು ಚಾರಿಟಿ ಉದ್ದೇಶಕ್ಕೆ ಖರ್ಚು ಮಾಡಿದ್ದಾರೆ. ತನಗೆ ತನ್ನ ಶಿಷ್ಯರಿಂದ ಗುರುದಕ್ಷಿಣೆಯಾಗಿ ಬಂದ ಅಷ್ಟೂ ಚಿನ್ನದ ಆಭರಣಗಳನ್ನು ಭಾರತೀಯ ಸೇನೆಗೆ ದಾನ ಮಾಡಿದ ಮಹಾಮಾತೆ ಎಂ. ಎಸ್. ಅವರು! ಅವರ ಸೇವಾ ಮನೋಭಾವದ ನೂರಾರು ನಿದರ್ಶನಗಳು ನಮಗೆ ದೊರೆಯುತ್ತವೆ.

ಒಮ್ಮೆ ಏನಾಯಿತೆಂದರೆ…
ತಮಿಳುನಾಡಿನ ಒಂದು ಊರಿನಲ್ಲಿ ಎಂ. ಎಸ್. ಒಂದು ಸುಂದರವಾದ ಕಛೇರಿಯನ್ನು ಕೊಟ್ಟರು. ಆಗ ಅವರಿಗೆ 70 ವರ್ಷ ದಾಟಿತ್ತು. ಅಂದವರು ಮೈಮರೆತು ಹಾಡಿದರು. ಎರಡು ಘಂಟೆಯ ತನ್ನ ಕಾರ್ಯಕ್ರಮವನ್ನು ಮುಗಿಸಿ ಅವರು ಊಟ ಮಾಡಿ ತನ್ನ ಕೊಠಡಿಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದರು. ರಾತ್ರಿ ಸುಮಾರು 10 ಘಂಟೆಗೆ ಯಾರೋ ಬಾಗಿಲು ಬಡಿದ ಸದ್ದು ಕೇಳಿತು. ಆಕೆ ಹೋಗಿ ಬಾಗಿಲು ತೆರೆದರು. ಅಲ್ಲಿ ತುಂಬಾ ಪ್ರಾಯ ಆದ ಗಂಡ ಮತ್ತು ಹೆಂಡತಿ ನಿಂತಿದ್ದರು. ಅವರ ಮುಖದಲ್ಲಿ ಆಯಾಸ ಮತ್ತು ದಣಿವು ಎದ್ದು ಕಾಣುತ್ತಿತ್ತು. ಆ ದಂಪತಿಗಳು ಮೆತ್ತನೆಯ ಧ್ವನಿಯಲ್ಲಿ ‘ ಅಮ್ಮಾ, ನಿಮ್ಮ ಕಛೇರಿ ನೋಡಲೆಂದು ಎಂಟು ಕಿಲೋಮೀಟರ್ ನಡೆದುಕೊಂಡು ಬಂದೆವು. ತಲುಪುವಾಗ ತಡವಾಯಿತು. ನಿಮ್ಮ ಕಛೇರಿ ಮಿಸ್ ಆಯಿತು. ಕಡೆಯ ಪಕ್ಷ ನಿಮ್ಮ ಪಾದಸ್ಪರ್ಷ ಮಾಡಿ ಹಿಂದೆ ಹೋಗುತ್ತೇವೆ’ ಎಂದು ಬಗ್ಗಿದರು. ಎಂ. ಎಸ್. ಅವರಿಗೆ ಪಾದಸ್ಪರ್ಷ ಮಾಡಲು ಅನುಮತಿ ಕೊಡಲಿಲ್ಲ. ಅವರನ್ನು ಕೋಣೆಯ ಒಳಗೆ ಕರೆದುಕೊಂಡು ಹೋದರು. ಚಾಪೆ ಹಾಕಿ ಕೂರಿಸಿದರು. ಅವರಿಗೆ ಮೊದಲು ಊಟ ತರಿಸಿಕೊಟ್ಟರು. ಮತ್ತೆ ಕೋಣೆಯ ಮೂಲೆಯಲ್ಲಿ ಇದ್ದ ತಂಬೂರಿಯನ್ನು ಶ್ರುತಿ ಮಾಡಿ ತಾವೂ ನೆಲದ ಮೇಲೆ ಕೂತರು. ಆ ದಿನ ಅವರು ಸಂಗೀತ ಕಛೇರಿಯಲ್ಲಿ ಹಾಡಿದ ಎರಡು ಅದ್ಭುತವಾದ ಹಾಡುಗಳನ್ನು ಆ ಇಬ್ಬರು ಪ್ರೇಕ್ಷಕರಿಗೆ ಮತ್ತೆ ಮೈದುಂಬಿ ಹಾಡಿದರು! ಆ ದಂಪತಿಗಳು ಮೈಮರೆತು ಎಂ. ಎಸ್. ಹಾಡುವುದನ್ನು ಕೇಳಿ ಆನಂದಬಾಷ್ಪ ಸುರಿಸಿದರು ಮತ್ತು ಅವರಿಗೆ ನಮಸ್ಕರಿಸಿ ಬೀಳ್ಕೊಟ್ಟರು!

ತಮ್ಮ ಪತಿ ಕೆ. ಸದಾಶಿವಂ ಅವರು ಅಗಲಿದ ನಂತರ ಎಂ. ಎಸ್. ಅವರು ಸಾರ್ವಜನಿಕ ಕಾರ್ಯಕ್ರಮಗಳನ್ನು ನಿಲ್ಲಿಸಿಯೇ ಬಿಟ್ಟರು. 2004ರ ಡಿಸೆಂಬರ್ 11ರಂದು ಅವರು ತಮ್ಮ 88ನೇ ವರ್ಷದಲ್ಲಿ ನಾದಲೀನರಾದರು.

ಭಾರತೀಯ ಸಂಗೀತದ ಇತಿಹಾಸವನ್ನು ಯಾವ ಬಿಂದುವಿನಿಂದ ಬರೆಯಲು ಹೊರಟರೂ ಭಾರತರತ್ನ ಎಂ. ಎಸ್. ಸುಬ್ಬುಲಕ್ಷ್ಮಿ ಅವರ ಹೆಸರು ಮೊದಲ ಪುಟದಲ್ಲಿಯೇ ಬರುತ್ತದೆ.









































































































error: Content is protected !!
Scroll to Top