ಟಿಕ್ ಟಿಕ್ ಟಿಕ್ ಟಿಕ್ ಓಡುತಿದೆ ಕಾಲ

(ನಿನ್ನೆಯ ಸಂಚಿಕೆಯಿಂದ ಮುಂದುವರೆದಿದೆ).

ನಿನ್ನೆ ಸಮಯ ನಿರ್ವಹಣೆಯ ಬಗ್ಗೆ ವಿಸ್ತಾರವಾಗಿ ಬರೆದಿದ್ದೆ. ಇಂದು ಲೆಜೆಂಡ್ ವ್ಯಕ್ತಿಗಳ ಸಮಯ ಬದ್ಧತೆಯ ಬಗ್ಗೆ ಬರೆಯಬೇಕು. ಯಾರು ಸಮಯವನ್ನು ಗೌರವಿಸುತ್ತಾರೋ ಅವರು ಹೆಚ್ಚು ಸಕ್ಸೆಸ್ ಆಗುತ್ತಾರೆ ಎಂದು ಅವರೆಲ್ಲರೂ ಸಾಬೀತು ಪಡಿಸಿದವರು. ತಾವು ಸಮಯವನ್ನು ಪಾಲಿಸಿದ್ದು ಮಾತ್ರವಲ್ಲ ಬೇರೆಯವರ ಸಮಯವನ್ನು ಕೂಡ ಅಷ್ಟೇ ಚೆನ್ನಾಗಿ ಗೌರವಿಸಿದವರು. ಅವರ ಬಗ್ಗೆ ಓದುತ್ತಾ ಮುಂದಕ್ಕೆ ಹೋಗೋಣ.

೧) ಸರ್ ಎಂ ವಿಶ್ವೇಶ್ವರಯ್ಯ.

ಸರ್ ಎಂ. ವಿ. ಅವರು ಮೈಸೂರು ದಿವಾನರಾಗಿ ಇದ್ದಾಗಲೂ ಅಥವಾ ನಿವೃತ್ತರಾದ ನಂತರವೂ ಸಮಯವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿದ್ದರು. ಒಂದು ಕಡೆಯೂ ಎಂ. ವಿ. ಅವರು ಲೇಟ್ ಮಾಡಿ ಹೋದ ಉದಾಹರಣೆ ದೊರೆಯುವುದಿಲ್ಲ. ಸಮಯಕ್ಕೆ ಸಾಕಷ್ಟು ಮೊದಲು ಅವರು ಸಭಾಂಗಣಕ್ಕೆ ಬಂದು ಕುಳಿತುಬಿಡುತ್ತಿದ್ದರು. ಕಾರ್ಯಕ್ರಮವು ಸಮಯಕ್ಕೆ ಸರಿಯಾಗಿ ಆರಂಭ ಆಗದೇ ಇದ್ದರೆ ಸಿಡುಕಿ ಎದ್ದು ಹೋಗುತ್ತಿದ್ದರು. ಇದು ಅವರ ಕೈ ಕೆಳಗಿನ ಅಧಿಕಾರಿಗಳಿಗೆ ಎಷ್ಟೋ ಬಾರಿ ಬಿಸಿ ತುಪ್ಪ ಆಗುತ್ತಿತ್ತು. ಆದರೆ ಸರ್. ಎಂ. ವಿ. ಸಮಯದಲ್ಲಿ ಎಂದೂ ಕಾಂಪ್ರೋ ಆಗಲೇ ಇಲ್ಲ!

ಒಮ್ಮೆ ಏನಾಯಿತೆಂದರೆ….
ಒಬ್ಬ ಪತ್ರಕರ್ತ ಅವರ ಸಂದರ್ಶನಕ್ಕೆ ಸಮಯ ಕೇಳಿದ್ದ. ಸರ್ ಒಪ್ಪಿ ಸಂಜೆ ಐದು ಘಂಟೆಗೆ ಬರಲು ಹೇಳಿದ್ದರು. ಆತನಿಗೆ ಸರ್ ಸ್ವಭಾವ ಗೊತ್ತಿತ್ತು. ಆತ 15 ನಿಮಿಷ ಮೊದಲೇ ಬಂದು ಕಾದು ಕೂತಿದ್ದನು. ಆಗ ಅವರ ಆಪ್ತ ಕಾರ್ಯದರ್ಶಿ ಸರ್. ಎಂ. ವಿ. ಈಗ ಮಲಗಿದ್ದಾರೆ, ಸಮಯಕ್ಕೆ ಸರಿಯಾಗಿ ಬರುತ್ತಾರೆ, ಆತಂಕ ಮಾಡಬೇಡಿ ಎಂದನು.
ಏನು ಆಶ್ಚರ್ಯ ಎಂದರೆ ಸರ್. ಎಂ. ವಿ. ಅವರು ಎದ್ದು 15 ನಿಮಿಷಗಳ ಒಳಗೆ ಫ್ರೆಶ್ ಆಗಿ ತಮ್ಮ ಎಂದಿನ ಸೂಟು ಬೂಟು ಸಹಿತ ಆ ಪತ್ರಕರ್ತನ ಎದುರು ಸಂದರ್ಶನಕ್ಕೆ ಬಂದು ಕೂತಾಗಿತ್ತು!

೨) ಜನರಲ್ ಕಾರ್ಯಪ್ಪ

ಸಮಯದ ಬದ್ಧತೆಯಲ್ಲಿ ಫೀಲ್ಡ್ ಮಾರ್ಷಲ್ ಜನರಲ್ ಕಾರ್ಯಪ್ಪ ಅವರದ್ದು ಅನನ್ಯ ಮಾದರಿ. ಅವರು ನಿವೃತ್ತಿ ಆಗಿ ಕೊಡಗಿನಲ್ಲಿ ಇದ್ದಾಗ ನಡೆದ ಒಂದು ಘಟನೆ. ಯಾವುದೋ ರಾಷ್ಟ್ರಮಟ್ಟದ ಒಂದು ಸುದ್ದಿಪತ್ರಿಕೆಯ ವರದಿಗಾರ ಅವರ ಸಂದರ್ಶನಕ್ಕೆ ಅನುಮತಿ ಕೇಳಿ ಕಾರ್ಯಪ್ಪ ಒಪ್ಪಿದ್ದರು. ಸಂಜೆ ಐದು ಘಂಟೆಗೆ ಸಂದರ್ಶನ ನಿಗದಿ ಆಗಿತ್ತು. ಕಾರ್ಯಪ್ಪ ಹೊತ್ತಿಗೆ ಸರಿಯಾಗಿ ಡ್ರಾಯಿಂಗ್ ರೂಮಿನಲ್ಲಿ ಬಂದು ಕೂತಾಗಿತ್ತು. ಆ ಪತ್ರಕರ್ತ ಯಾವುದೋ ಕಾರಣಕ್ಕೆ 15 ನಿಮಿಷ ಲೇಟ್ ಆಗಿ ಬಂದಿದ್ದ.

ಕಾರ್ಯಪ್ಪ ಹೀಗೆ ಗುಡುಗಿದರು!
ಹೋಗಯ್ಯ ಹೋಗು. ನಿನಗೆ ಸಮಯದ ಬಗ್ಗೆ ಬದ್ಧತೆಯಿಲ್ಲ. ನೀನು ಲೇಟ್ ಆಗುವಾಗ ಫೋನ್ ಮಾಡಿ ಆದರೂ ಹೇಳಬಹುದಾಗಿತ್ತು. ನೀನು ಬೇರೆಯವರ ಸಮಯವನ್ನು ಗೌರವ ಕೊಡುವುದನ್ನು ಮೊದಲು ಕಲಿಯಬೇಕು. ನಿನಗೆ ನಾನು ಸಂದರ್ಶನ ಕೊಡುವುದಿಲ್ಲ ಹೋಗು ಎಂದರು. ಸ್ವಲ್ಪ ಹೊತ್ತಿನ ನಂತರ ಅದೇ ಪತ್ರಿಕೆಯ ಪ್ರಧಾನ ಸಂಪಾದಕರು ದೆಹಲಿಯಿಂದ ಕರೆ ಮಾಡಿ ಸಾರಿ ಸರ್ ಅಂದರು. ಆದರೂ ಕಾರ್ಯಪ್ಪ ಆ ಪತ್ರಿಕೆಗೆ ಮುಂದೆ ಸಂದರ್ಶವನ್ನೇ ಕೊಡಲಿಲ್ಲ!

ಆಳ್ವಾಸ್ ಎಂಬ ದೊಡ್ಡ ಬ್ರಾಂಡ್!

ಮೂಡಬಿದ್ರೆಯಲ್ಲಿ ಡಾಕ್ಟರ್ ಮೋಹನ್ ಆಳ್ವ ಅವರು ಆಳ್ವಾಸ್ ಎಂಬ ಬಹಳ ದೊಡ್ಡ ಶೈಕ್ಷಣಿಕ ಬ್ರಾಂಡ್ ಕಟ್ಟಿದ ಕತೆಯನ್ನು ತುಂಬಾ ಬಾರಿ ಬರೆದಿದ್ದೇನೆ. ಅದೇ ಡಾಕ್ಟರ್ ಆಳ್ವರ ಇನ್ನೊಂದು ಬಹಳ ದೊಡ್ಡ ಬದ್ಧತೆ ಇರುವುದು ಸಮಯದ ಬಗ್ಗೆ. ಆಳ್ವರು ಮೂವತ್ತು ವರ್ಷಗಳ ಅವಧಿಯಲ್ಲಿ ತಮ್ಮ ಶೈಕ್ಷಣಿಕ ಸಂಸ್ಥೆಗಳಲ್ಲಿ ಮಹಾ ಮಹಾ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಆಳ್ವಾಸ್ ನುಡಿಸಿರಿ, ವಿರಾಸತ್, ಕೃಷಿ ಮೇಳ, ಸಾಹಿತ್ಯ ಸಮ್ಮೇಳನ, ಮೆಗಾ ಉತ್ಸವಗಳು, ಸ್ವಾತ್ವಂತ್ತ್ರೋತ್ಸವ, ಕ್ರಿಸ್ಮಸ್, ಇಫ್ತಾರ್ ಕೂಟ, ದೀಪಾವಳಿ ಏನೆಲ್ಲ ಮಾಡಿದ್ದಾರೆ. ಅವರ ವಿದ್ಯಾರ್ಥಿಗಳ ನೂರಾರು ಕಾರ್ಯಕ್ರಮಗಳನ್ನು ದೇಶದಾದ್ಯಂತ ಮಾಡಿದ್ದಾರೆ. ಆದರೆ ಅವರ ಒಂದೇ ಒಂದು ಕಾರ್ಯಕ್ರಮ ಲೇಟ್ ಆದ್ದದ್ದು ಇಲ್ಲವೇ ಇಲ್ಲ! ಅವರ ಇನ್ನೊಂದು ಬದ್ಧತೆ ಎಂದರೆ ಸಮಯಕ್ಕೆ ಸರಿಯಾಗಿ ಆರಂಭ ಮಾಡುವುದು ಮಾತ್ರವಲ್ಲ, ಸಮಯಕ್ಕೆ ಸರಿಯಾಗಿ ಮುಗಿಸುವುದು ಕೂಡ! ಆಳ್ವರು ಯಾವ ಅತಿಥಿಗಳನ್ನೂ ಕಾಯುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ. ವೇದಿಕೆಯಲ್ಲಿ ಯಾವುದೇ ಅತಿಥಿಗಳ ಭಾಷಣದ ಸಮಯ ಮುಗಿಯಿತು ಎಂದಾದರೆ ಅವರಿಗೆ ಮಾತ್ರ ಕಾಣುವಂತೆ ರೆಡ್ ಲೈಟ್ ಮಿನುಗುತ್ತದೆ!

ಆಳ್ವರ ಈ ಬದ್ಧತೆಯಿಂದ ಪ್ರೇರಣೆ ಪಡೆದು ಅವರ ವಿದ್ಯಾಸಂಸ್ಥೆಯ ಸಣ್ಣ ದೊಡ್ಡ ಯಾವ ಕಾರ್ಯಕ್ರಮವೂ ಒಂದು ನಿಮಿಷ ವಿಳಂಬ ಆಗುವುದಿಲ್ಲ! ತಡವಾಗಿ ಮುಗಿಯುವುದಿಲ್ಲ!

ಟಿವಿಎನ್ ಮೂರ್ತಿ ಎಂಬ ಜೆಸಿಐ ನಾಯಕನ ಬದ್ಧತೆ!

1999ರಲ್ಲಿ ಜೆಸಿಐ ವಲಯ 14ರ (ಕರ್ನಾಟಕದ ಅರ್ಧ ಭಾಗ) ಅಧ್ಯಕ್ಷ ಆಗಿದ್ದ, ಮುಂದೆ ಜೆಸಿಐ ರಾಷ್ಟೀಯ ಅಧ್ಯಕ್ಷರೂ ಆದ ತುಮಕೂರಿನ ಟಿ. ವಿ. ಎನ್. ಮೂರ್ತಿಯವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದ ಸಮಯದ ಬದ್ಧತೆಯು ನನಗೆ ವಿಸ್ಮಯವನ್ನು ಮೂಡಿಸಿತ್ತು. ಅವರ ಅಧಿಕಾರದ ಅವಧಿಯಲ್ಲಿ ಅವರು ಒಂದು ಕಾರ್ಯಕ್ರಮಕ್ಕೂ ಲೇಟ್ ಆಗಿ ಹೋದ ಉದಾಹರಣೆ ಇಲ್ಲ! ಕಾರ್ಯಕ್ರಮ ನಿಗದಿತ ಸಮಯಕ್ಕೆ ಆರಂಭವಾಗಬೇಕು ಎನ್ನುವುದು ಅವರ ಹುಕುಂ. ಯಾವುದೇ ಕಾರಣಕ್ಕೆ ಸಭೆ ಐದು ನಿಮಿಷ ಲೇಟ್ ಆದರೂ ಮೂರ್ತಿ ಸರ್ ವೇದಿಕೆಗೆ ಬರುತ್ತಿರಲಿಲ್ಲ! ಇಡೀ ಕಾರ್ಯಕ್ರಮದ ಉದ್ದಕ್ಕೂ ಅವರು ಸಭಾಂಗಣದಲ್ಲಿ ಪ್ರೇಕ್ಷಕರಾಗಿ ಕುಳಿತುಬಿಡುತ್ತಿದ್ದರು. ತಮ್ಮ ಭಾಷಣದ ಅವಕಾಶ ಬಂದಾಗ ಅವರು ವೇದಿಕೆಗೆ ಹೋಗಿ ಭಾಷಣ ಮಾಡಿ ಪುನಃ ಕೆಳಗೆ ಬಂದು ಕೂತು ಬಿಡುತ್ತಿದ್ದರು! ಎಷ್ಟೋ ಬಾರಿ ಕಾರ್ಯಕ್ರಮ ಸಂಘಟನೆ ಮಾಡಿದ ಜೇಸಿಐ ಘಟಕಗಳಿಗೆ ಇದು ಇರುಸು ಮುರುಸು ಉಂಟುಮಾಡುತ್ತಿತ್ತು. ಆದರೆ ಮೂರ್ತಿ ಸರ್ ಕಾಂಪ್ರೋ ಆಗಲಿಲ್ಲ. ಕೊನೆಗೆ ಜೇಸಿಐ ಘಟಕಗಳೇ ಕಾಂಪ್ರೋ ಆದವು!

ಕಾರಂತರೂ ಹಾಗೇ ಇದ್ದರು!

ಸಮಯದ ಶಿಸ್ತಿನಲ್ಲಿ ಸಾಹಿತಿ ಶಿವರಾಮ ಕಾರಂತರು ಎಲ್ಲರಿಗಿಂತ ಮುಂದೆ ಇದ್ದರು. ಮೂಗಿನ ತುದಿಯಲ್ಲಿ ಸಿಟ್ಟು ಬೇರೆ ಇತ್ತು. ಕಾರ್ಯಕ್ರಮ ಲೇಟ್ ಆಯ್ತು ಅಂತಾದರೆ ಮುಖ ಮೂತಿ ನೋಡದೇ ಬೈದುಬಿಡುತ್ತಿದ್ದರು. ಒಮ್ಮೆ ಏನಾಯಿತೆಂದರೆ ಕಾರ್ಯಕ್ರಮಕ್ಕೆ ಒಟ್ಟು ಒಂದೂವರೆ ಘಂಟೆ ಅವಧಿಯು ನಿಗದಿಯಾಗಿತ್ತು. ಕಾರಂತರ ಮೊದಲು ಮಾತಾಡಿದ ಎಲ್ಲ ಭಾಷಣಕಾರರೂ ಉದ್ದುದ್ದ ಮಾತಾಡಿ ಕಾರಂತರ ಸರದಿ ಬಂದಾಗ ಸಭೆ ಮುಗಿಯಲು ಒಂದೇ ಒಂದು ನಿಮಿಷ ಬಾಕಿ ಇತ್ತು. ಕಾರಂತರು ಎದ್ದರು. ಮೈಕಿನ ಮುಂದೆ ಬಂದರು. ಗಂಟಲು ಸರಿ ಮಾಡಿಕೊಂಡು ಒಂದೇ ವಾಕ್ಯ ಹೇಳಿ ಕೂತೇ ಬಿಟ್ಟರು – ಸಮಯವನ್ನು ಗೌರವಿಸದವರಿಗೆ ಭಾಷಣದ ಅಗತ್ಯ ಇಲ್ಲ. ನಿಮಗೆ ಬೇಜಾರಾದರೆ ಅದಕ್ಕೆ ನಾನು ಹೊಣೆ ಅಲ್ಲ!

ಈ ಸಮಯದ ಬದ್ಧತೆ, ಶಿಸ್ತು ನಮ್ಮಲ್ಲಿಯೂ ಬಂದರೆ ನಾವು ಕೂಡ ಲೆಜೆಂಡ್ ಆಗಬಹುದು ಅಲ್ಲವೇ?









































































































error: Content is protected !!
Scroll to Top