ದಿ. ಗೋಪಾಲ ಭಂಡಾರಿ ಪುತ್ಥಳಿ ಅನಾವರಣ – ಸ್ಮರಣ ಸಂಚಿಕೆ ಬಿಡುಗಡೆ

ಜನಪರ ಕಾರ್ಯದ ಮೂಲಕ ಜನಮಾನಸದಲ್ಲಿ ನೆಲೆಯಾದವರು – ಯು.ಟಿ. ಖಾದರ್

ಕಾರ್ಕಳ : ಜನಪರ ಕಾರ್ಯದ ಮೂಲಕವೇ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯಾದವರು ದಿ. ಗೋಪಾಲ ಭಂಡಾರಿಯವರು ಎಂದು ವಿಧಾನ ಸಭಾ ಸ್ಫೀಕರ್‌ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.
ಅವರು ಜು. 7ರಂದು ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ವತಿಯಿಂದ ಶಾಸಕ ದಿ. ಗೋಪಾಲ ಭಂಡಾರಿಯವರ ಸ್ಮರಣಾರ್ಥ ನಿರ್ಮಿಸಲಾದ ವೃತ್ತ ಹಾಗೂ ಪುತ್ಥಳಿ ಅನಾವರಣ, ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮನುಷ್ಯ ಹುಟ್ಟುವಾಗ ಹೆಸರಿರುವುದಿಲ್ಲ ಉಸಿರು ಮಾತ್ರ ಇರುತ್ತದೆ. ಆದರೆ, ಭೂಮಿ ಬಿಟ್ಟು ಹೋಗುವಾಗ ಉಸಿರು ಇರುವುದಿಲ್ಲ ಹೆಸರು ಮಾತ್ರವಿರುವುದು. ಅಂತಹ ಹೆಸರನ್ನು ಗೋಪಾಲ ಭಂಡಾರಿಯವರು ಗಳಿಸಿದ್ದಾರೆ. ಅವರ ಸಾಮಾಜಿಕ ಮತ್ತು ರಾಜಕೀಯ ಜೀವನ ಪಕ್ಷಾತೀತ ಮತ್ತು ಜಾತ್ಯಾತೀತವಾಗಿತ್ತು ಎಂಬುದಕ್ಕೆ ಇಂದಿನ ಕಾರ್ಯಕ್ರಮವೇ ಸಾಕ್ಷಿ. ಇಂದು ಬಿಡುಗಡೆಗೊಂಡ ಪುಸ್ತಕ ಗೋಪಾಲ ಭಂಡಾರಿಯವರ ಜೀವನ ಚರಿತ್ರೆಯೊಂದಿಗೆ ಈ ಭಾಗದ ಜನತೆಗೆ ಅವರು ನೀಡಿದ ಕೊಡುಗೆಯ ಭಂಡಾರವಾಗಿದೆ. ಅಧಿಕಾರ ಒಂದು ಜನಸೇವೆ ಎಂದು ಕಾರ್ಯನಿರ್ವಹಿಸಿದ ಗೋಪಾಲ ಭಂಡಾರಿಯವರು ಕಾರ್ಕಳ ಕ್ಷೇತ್ರ ಮಾತ್ರವಲ್ಲದೇ ಕರಾವಳಿಗೆ ನೀಡಿದ ಕೊಡುಗೆ ಮಹತ್ತರ.‌ ಅವರು‌ ತಮ್ಮ ಕಾರ್ಯವೈಖರಿಯ ಮೂಲಕ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಖಾದರ್ ಹೇಳಿದರು.‌

ವ್ಯಕ್ತಿ ನಿಷ್ಠೆ, ತತ್ವ ನಿಷ್ಠೆ, ಪಕ್ಷ ನಿಷ್ಠೆಯ ಪ್ರತಿರೂಪವೇ ಗೋಪಾಲ ಭಂಡಾರಿ – ಸುನಿಲ್‌ ಕುಮಾರ್‌
ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ವಿ. ಸುನಿಲ್‌ ಕುಮಾರ್‌, ಸಾರ್ವಜನಿಕ ಜೀವನದಲ್ಲಿ ವ್ಯಕ್ತಿಗೆ ತತ್ವ ನಿಷ್ಠೆ, ವ್ಯಕ್ತಿ ನಿಷ್ಠೆ, ಪಕ್ಷ ನಿಷ್ಠೆಯಿರಬೇಕು. ಅವೆಲ್ಲವೂ ಗೋಪಾಲ ಭಂಡಾರಿಯವರಲ್ಲಿತ್ತು. ಅದೇ ಗೋಪಾಲ ಭಂಡಾರಿಯವರನ್ನು ನೂರಾರು ವರ್ಷ ನೆನಪಲ್ಲಿ ಉಳಿಯುವಂತೆ ಮಾಡಲಿದೆ ಎಂದರು.
ಎರಡು ಬಾರಿ ಕಾರ್ಕಳದ ಶಾಸಕರಾಗಿ ಗೋಪಾಲ ಭಂಡಾರಿಯವರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿರುತ್ತಾರೆ. ಸರಳತೆಗೆ ಮೇಲ್ಪಂಕ್ತಿ ಹಾಕಿಕೊಟ್ಟಿರುವ ಅವರು ಜನಪರ ಕಾಳಜಿ ಹೊಂದಿದ್ದವರು. ಅವರೊಂದಿಗೆ ನಾನು 4 ಬಾರಿ ಸ್ಪರ್ಧೆ ಮಾಡಿದ್ದೆ, ಅವರು ನನಗೆ ಪ್ರತಿಸ್ಪರ್ಧಿಯಾಗಿದ್ದರೆ ಹೊರತು ವೈರಿಯಾಗಿರಲಿಲ್ಲ. ಸಿದ್ಧಾಂತ ಬೇರೆ ಇದೆ ಎಂಬ ಕಾರಣಕ್ಕೆ ನಮ್ಮ ನಡುವೆ ಗೌರವಕ್ಕೆ ಯಾವತ್ತಿಗೂ ಕೊರತೆ ಆಗಿರಲಿಲ್ಲ ಎಂದು ಸುನಿಲ್ ಕುಮಾರ್‌ ಹೇಳಿದರು.

ಗೋಪಾಲ ಭಂಡಾರಿ ಶಿಷ್ಯ ಎನ್ನಲು ಅತೀವ ಹೆಮ್ಮೆಯಿದೆ – ಮೊಯ್ಲಿ
ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ ಮಾತನಾಡಿ, ಶಿಲೆಯಂತಿದ್ದ ನನ್ನನ್ನು ಶಾಸಕ, ಮಂತ್ರಿ, ಮುಖ್ಯಮಂತ್ರಿ ಎಂಬ ಮೂರ್ತಿಯನ್ನಾಗಿ ಮಾಡುವಲ್ಲಿ ಶ್ರಮಿಸಿದ ಅನೇಕರಲ್ಲಿ ಗೋಪಾಲ ಭಂಡಾರಿಯವರು ಕೂಡ ಪ್ರಮುಖರು. ನಾನು ಜನಪರ ಕಾಳಜಿಗಾಗಿ ಕೈಗೊಂಡ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಗೋಪಾಲ ಭಂಡಾರಿ ಮತ್ತು‌ ಮಾಳ ವಸಂತ್‌ ಚಿಪ್ಲೂಣ್ಕರ್‌ ಕೊಡುಗೆ ಅಪಾರವಾದುದು. ತನ್ನ ಕೆಲಸದಲ್ಲಿ, ಬದುಕಿನಲ್ಲಿ ಒಂದು ಸಣ್ಣ ಕಪ್ಪು ಚುಕ್ಕೆಯಿರದಂತಹ ಗೋಪಾಲ ಭಂಡಾರಿವಂತಹ ಶಿಷ್ಯನನ್ನು ನಾನು ಪಡೆದಿರುವುದು ನನ್ನಲ್ಲಿ ಹೆಮ್ಮೆಯಿದೆ ಎಂದರು.

ಪುತ್ಥಳಿ ಅನಾವರಣ
ಹೆಬ್ರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದ ಎದುರಿನ ರಾಜ್ಯ ರಸ್ತೆಯ ಬಚ್ಚಪ್ಪು ತಿರುವಿನಲ್ಲಿ ನಿರ್ಮಿಸಲಾದ ದಿ. ಗೋಪಾಲ ಭಂಡಾರಿ ಅವರ ಪುತ್ಥಳಿಯನ್ನು ಡಾ. ಎಂ. ವೀರಪ್ಪ ಮೊಯ್ಲಿ ಅವರು ಅನಾವರಣಗೊಳಿಸಿದರು.

ಮಾನವ ಧರ್ಮ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆಯ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಮಾತನಾಡಿ, ಗೋಪಾಲ ಭಂಡಾರಿ ಅವರ ಪಕ್ಷ ನಿಷ್ಠೆ, ಕರ್ತವ್ಯ ನಿಷ್ಠೆ ಹಾಗೂ ಪಾರದರ್ಶಕತೆ ಎಂದಿಗೂ ಮಾದರಿದಾಯಕ. ಅವರು ಮಾನವ ಧರ್ಮವನ್ನು ನಂಬಿಕೊಂಡು ಬಂದವರು. ಗೋಪಾಲ ಭಂಡಾರಿಯವರ ನೆನಪು ಇಂದು ಅದೆಷ್ಟೋ ಜನರ ಮನದಲ್ಲಿ ಬೇರೂರಿದೆ. ಅವರ ಆದರ್ಶ ವ್ಯಕ್ತಿತ್ವ, ನಡೆ ನುಡಿಯನ್ನು ಜನತೆಗೆ ತಿಳಿಸುವ ನಿಟ್ಟಿನಲ್ಲಿ ವೃತ್ತ, ಪುತ್ಥಳಿ ನಿರ್ಮಾಣ ಹಾಗೂ ಸ್ಮರಣ ಸಂಚಿಕೆಯನ್ನು ರಚಿಸಲಾಗಿದೆ ಎಂದು ಹೇಳಿದರು.

ಮಾಜಿ ಸಚಿವ ಜಯಪ್ರಕಾಶ್‌ ಹೆಗ್ಡೆ ಮಾತನಾಡಿ, ಗೋಪಾಲ ಭಂಡಾರಿಯವರು ಓರ್ವ ಉತ್ತಮ ಸಂಸದೀಯ ಪಟು. ಜನಸಾಮಾನ್ಯರ ಮನಸ್ಸಿನಲ್ಲಿ ಅವರ ಕಾರ್ಯಚಟುವಟಿಕೆಗಳು ಸದಾ ಶಾಶ್ವತವಾಗಿರಲಿ ಎಂದರು.
ವಿಧಾನ ಪರಿಷತ್‌ ಮಾಜಿ ಅಧ್ಯಕ್ಷ ಪ್ರತಾಪ್‌ ಚಂದ್ರ ಶೆಟ್ಟಿ ಮಾತನಾಡಿ, ಗೋಪಾಲ ಭಂಡಾರಿಯವರು ಹಣ ಮತ್ತು ಜಾತಿ ಬಲವಿಲ್ಲದೇ ಎರಡು ಬಾರಿ ಶಾಸಕರಾದವರು. ಸೋಲು ಗೆಲುವಿನಲ್ಲಿ ವ್ಯತ್ಯಾಸ ಕಾಣದ ಅವರು ನಿರಂತರವಾದ ಜನಸೇವೆಯ ಮೂಲಕ ಜನರ ಮನಸ್ಸು ಗೆದ್ದಿದ್ದರು ಎಂದರು.
ಮಾಜಿ ಸಚಿವ ವಿನಯ್‌ ಕುಮಾರ್‌ ಸೊರಕೆ ಮಾತನಾಡಿ, ಗೋಪಾಲ ಭಂಡಾರಿಯವರು ಸಮಾಜಕ್ಕೋಸ್ಕರ ತನ್ನನ್ನು ಮುಡಿಪಾಗಿಟ್ಟವರು. ಅವರು ವೀರಪ್ಪ ಮೊಯ್ಲಿಯವರ ಮೇಲಿಟ್ಟಿದ್ದ ಸ್ವಾಮಿ ನಿಷ್ಠೆ ಅತೀತವಾದುದು. ಜನರ ಪ್ರೀತಿ ವಿಶ್ವಾಸವೇ ಆಸ್ತಿ ಎಂಬಂತೆ ಕಾರ್ಯನಿರ್ವಹಿಸಿ ದೂರದೃಷ್ಟಿ ಯೋಜನೆ ರೂಪಿಸಿ ಕಾರ್ಕಳ ಹೆಬ್ರಿಯ ಅಭಿವೃದ್ದಿಗೆ ಶ್ರಮಿಸಿದ್ದರು ಎಂದರು.
ಮಾಜಿ ಸಚಿವ ರಮನಾಥ ರೈ ಮಾತನಾಡಿ, ಗೋಪಾಲ ಭಂಡಾರಿಯವರು ಆಳವಾದ ಜ್ಞಾನದೊಂದಿಗೆ ಯಾವುದೇ ವಿಷಯದ ಬಗ್ಗೆ ಮಾತನಾಡುವ ಸಾಮರ್ಥ್ಯ ಹೊಂದಿದ್ದರು. ನಾನು ಅವರನ್ನು ಬಹಳ ಹತ್ತಿರದಲ್ಲಿ ಕಂಡಿದ್ದೆ, ಕಾರ್ಕಳ ಕ್ಷೇತ್ರದ ಬೆಳವಣಿಗೆಗೆ ವೀರಪ್ಪ ಮೊಯ್ಲಿಯವರು ಯಾವ ಹಾದಿಯನ್ನು ಹಾಕಿದ್ದರೋ ಅದೇ ಹಾದಿಯಲ್ಲಿ ಮುಂದುವರೆದವರು ಗೋಪಾಲ ಭಂಡಾರಿಯವರು ಎಂದರು.

ಉದ್ಯಮಿ ಸತೀಶ್‌ ಪೈ ಮಾತನಾಡಿದರು. ಗೋಪಾಲ ಭಂಡಾರಿಯವರು ರಾಜಕೀಯ ರಂಗದಲ್ಲಿ ನಾನು ಕಂಡಂತಹ ಓರ್ವ ಧೀಮಂತ ನಾಯಕ. ಗೇರು ಉದ್ಯಮ ಸಮಸ್ಯೆ ಎದುರಿಸುತ್ತಿದ್ದ ಸಂದರ್ಭ ಗೋಪಾಲ ಭಂಡಾರಿ ನೆರವಾಗಿದ್ದರು ಎಂದು ಸ್ಮರಿಸಿದರು.

ಗೋಪಾಲ ಭಂಡಾರಿ ಅಭಿಮಾನಿ ವೇದಿಕೆಯ ಗೌರವಾಧ್ಯಕ್ಷ, ಮುನಿಯಾಲು ಉದಯ ಕೃಷ್ಣಯ್ಯ ಚಾರಿಟೇಬಲ್‌ ಟ್ರಸ್ಟ್‌ನ ಅಧ್ಯಕ್ಷ ಉದಯ್‌ ಕುಮಾರ್‌ ಶೆಟ್ಟಿ ಮುನಿಯಾಲು ಮಾತನಾಡಿ, ಕಾರ್ಕಳ – ಹೆಬ್ರಿಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಗೋಪಾಲ ಭಂಡಾರಿಯವರ ಕೊಡುಗೆ ಮಹತ್ತರ. ವೀರಪ್ಪ ಮೊಯ್ಲಿಯವರ ಮಾರ್ಗದರ್ಶನವನ್ನು ಸದಾ ಪಾಲಿಸುತ್ತ ಎಲ್ಲಾ ರೀತಿಯ ಜನರೊಂದಿಗೆ ಬೆರೆತಂತಹ ಅವರ ಆದರ್ಶ ತತ್ವ ನಮಗೆ ಮಾದರಿ. ಅವರು ಹಾಕಿಕೊಟ್ಟಂತಹ ದಾರಿಯಲ್ಲಿ ನಡೆಯುವುದೇ ನಾವು ಅವರಿಗೆ ನೀಡುವಂತಹ ಬಹುದೊಡ್ಡ ಗೌರವ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಪೂರ್‌, ಹಿರಿಯ ನ್ಯಾಯವಾದಿ, ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಶೇಖರ್‌ ಮಡಿವಾಳ್ ಮಾತನಾಡಿದರು.

ಸಹಾಯಧನ ವಿತರಣೆ
ಕಾರ್ಯಕ್ರಮದಲ್ಲಿ ಹೆಬ್ರಿ ಬ್ಲಾಕ್‌ನ 10 ಶಾಲೆಯ ತಲಾ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಲಾಯಿತು. ಮುನಿಯಾಲು ಉದಯ ಕೃಷ್ಣಯ್ಯ ಚಾರಿಟೇಬಲ್‌ ಟ್ರಸ್ಟ್‌ನ ಅಧ್ಯಕ್ಷ ಉದಯ್‌ ಕುಮಾರ್‌ ಶೆಟ್ಟಿ ಮುನಿಯಾಲು ವಿದ್ಯಾರ್ಥಿಗಳಿಗೆ ಸಹಾಯಧನ ಹಸ್ತಾಂತರಿಸಿದರು.

ಸಂಪಾದಕತ್ವ ಮಂಡಳಿಗೆ ಅಭಿನಂದನೆ
‌ʼನಮ್‌ ಭಂಡಾರ್ರುʼ ಸಂಸ್ಮರಣಾ ಗ್ರಂಥದ ಪ್ರಧಾನ ಸಂಪಾದಕ ಮಾತಿಬೆಟ್ಟು ಪ್ರಕಾಶ್‌ ಪೂಜಾರಿ, ಗೌರವ ಸಂಪಾದಕ ಬಿಪಿನ್‌ ಚಂದ್ರಪಾಲ್‌ ನಕ್ರೆ, ಸಂಪಾದಕ ಮಂಡಳಿಯ ಮಂಜುನಾಥ್‌ ಕುಲಾಲ್‌ ಶಿವಪುರ, ದ್ವಾರಕ್‌ ನಿರಂಜನ್‌, ಟಿ.ಜಿ.ಆಚಾರ್ಯ ಹೆಬ್ರಿ, ಆನಂದ್‌ ಪೂಜಾರಿ ಕಾಡುಹೊಳೆ, ಸುಕುಮಾರ್‌ ಮುನಿಯಾಲು, ಉದಯ್‌ ಕುಮಾರ್‌ ಶೆಟ್ಟಿ, ಬಾಲಕೃಷ್ಣ ಹೆಬ್ಬಾರ್, ಶ್ರೀನಿವಾಸ ಭಂಡಾರಿ, ಮುದ್ರಣದ ಸುನಿಲ್‌ ಸಮೃದ್ಧಿ, ಮುಖ ವಿನ್ಯಾಸ ಮಾಡಿದ ಶ್ರೇಯಸ್‌, ರೇಖಾ ಚಿತ್ರ ಮಾಡಿದ ಕಮಲ್ ಅವರನ್ನು ಅಭಿನಂದಿಸಲಾಯಿತು.

ಮಾಜಿ ಸಚಿವ ಅಭಯಚಂದ್ರ ಜೈನ್‌, ಪ್ರಕಾಶಿನಿ ಗೋಪಾಲ ಭಂಡಾರಿ, ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ, ಶ್ರೀ. ಕ್ಷೆ.ಧ.ಗ್ರಾ.ಯೋ. ಹೆಬ್ರಿ ತಾಲೂಕು ಯೋಜನಾ ಅಧಿಕಾರಿ ಲೀಲಾವತಿ, ಜಿ.ಪಂ. ಮಾಜಿ ಸದಸ್ಯ ಮಂಜುನಾಥ ಪೂಜಾರಿ ಮುದ್ರಾಡಿ, ಉಡುಪಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಕೊಡವೂರು, ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶುಭದ ರಾವ್‌, ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗೋಪಿನಾಥ್‌ ಭಟ್‌, ಚಾರ ಗ್ರಾ. ಪಂ. ಅಧ್ಯಕ್ಷ ತಾರನಾಥ ಬಂಗೇರ, ಸಹನಾ ಗ್ರೂಪ್ಸ್‌ ಅಧ್ಯಕ್ಷ ಸುರೇಂದ್ರ ಶೆಟ್ಟಿ, ಉದ್ಯಮಿ ಸತೀಶ್‌ ಪೈ, ಎಸ್‌.ಆರ್‌.ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಸ್.ಆರ್.‌ ನಾಗಾರಾಜ ಶೆಟ್ಟಿ, ಉದ್ಯಮಿ ವಾದಿರಾಜ ಶೆಟ್ಟಿ, ಶ್ರೀನಿವಾಸ್‌ ನಾಯಕ್‌ (ಅಪ್ಪು ರಾಯರು) ಸೇರಿದಂತೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನವೀನ್ ಅಡ್ಯಂತಾಯ ಸ್ವಾಗತಿಸಿದರು. ಪ್ರಕಾಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಅಭಿಮಾನಿ ವೇದಿಕೆ ಕೋಶಾಧಿಕಾರಿ ಜನಾರ್ಧನ ಹೆಚ್.‌ ವಂದಿಸಿದರು.









































































































error: Content is protected !!
Scroll to Top