ಚಿತ್ರೀಕರಣದ ವೇಳೆ ಜಲಾಶಯದಲ್ಲಿ ದೋಣಿ ಪಲ್ಟಿ
ಉಡುಪಿ : ಕಾಂತಾರ-1 ಸಿನಿಮಾ ಆರಂಭವಾದಗಿನಿಂದಲೂ ಚಿತ್ರತಂಡಕ್ಕೆ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಲೇ ಇದೆ. ಇದೀಗ ಚಿತ್ರೀಕರಣದ ವೇಳೆ ದೋಣಿ ಮಗುಚಿ ಬಿದ್ದ ಘಟನೆ ನಡೆದಿದೆ.
ಮಾಸ್ತಿಕಟ್ಟೆಯ ಮಾಣಿ ಜಲಾಶಯದಲ್ಲಿ ‘ಕಾಂತಾರ’-1 ಚಿತ್ರದ ಕೊನೆ ಹಂತದ ಚಿತ್ರೀಕರಣ ನಡೆಯುತ್ತಿದೆ. ಶನಿವಾರ ಚಿತ್ರೀಕರಣ ನಡೆಯುತ್ತಿದ್ದ ವೇಳೆ ರಿಷಬ್ ಶೆಟ್ಟಿ ಸೇರಿ 30 ಜನ ಕಲಾವಿದರಿದ್ದ ದೋಣಿ ಇದ್ದಕ್ಕಿದ್ದಂತೆ ಮಗುಚಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ. ಕಲಾವಿದರು, ತಂತ್ರಜ್ಞರು ಸೇಫ್ ಆಗಿ ದಡ ಸೇರಿದ್ದಾರೆ. ಬೋಟ್‌ನಲ್ಲಿದ್ದವರು ಬಚಾವಾದರೂ ಕ್ಯಾಮೆರಾ ಇನ್ನಿತರೆ ಸೆಟ್ ಪ್ರಾಪರ್ಟಿಗಳು ನೀರು ಪಾಲಾಗಿದೆ ಎಂದು ತಿಳಿದು ಬಂದಿದೆ.
ಕಾಂತಾರ ಚಾಪ್ಟರ್ 1 ಸಿನಿಮಾ ಸೆಟ್ನಲ್ಲಿ ಸರಣಿ ಅವಘಡಗಳು ನಡೆಯುತ್ತಲೇ ಇವೆ. ಮೊದಲಿಗೆ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಜೂನಿಯರ್ ಆರ್ಟಿಸ್ಟ್ ಒಬ್ಬರು ಈಜಲು ಹೋಗಿ ಮುಳುಗಿ ಪ್ರಾಣಬಿಟ್ಟರು. ಅದಾದ ಮೇಲೆ ಸಿನಿಮಾದಲ್ಲಿ ನಟಿಸಿದ್ದ ಕನ್ನಡದ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ಹೃದಯಾಘಾತದಿಂದ ಮೃತಪಟ್ಟರು. ಕೆಲ ದಿನಗಳ ಹಿಂದಷ್ಟೆ ಸಹ ಕಲಾವಿದ ಕೇರಳದ ವಿಜು ವಿಕೆ ಹೃದಯಾಘಾತದಿಂದ ಮೃತಪಟ್ಟರು. ಇದೆಲ್ಲದರ ಬಳಿಕ ಈಗ ದೋಣಿಯೇ ಮಗುಚಿ ಬಿದ್ದಿದೆ.































































