ಅತ್ತೂರು ಬಸಿಲಿಕಾದಲ್ಲಿ ಪೋಪ್ ಫ್ರಾನ್ಸಿಸ್ ಸ್ಮರಣೆ

ಕಾರ್ಕಳ : ಅತ್ತೂರಿನ ಸೇಂಟ್ ಲಾರೆನ್ಸ್ ಬಸಿಲಿಕಾದಲ್ಲಿ ಎ. 28ರಂದು ಪೋಪ್ ಫ್ರಾನ್ಸಿಸ್ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.

ನುಡಿನಮನ ಸಲ್ಲಿಸಿದ ರಾಷ್ಟ್ರ ಮಟ್ಟದ ವಿಕಸನ ತರಬೇತುದಾರ ರಾಜೇಂದ್ರ ಭಟ್ ಕೆ. ಅವರು ಪೋಪ್ ಅವರ ಸಂದೇಶಗಳು ಮತ್ತು ಬದುಕು ಎಲ್ಲಾ ಧರ್ಮೀಯರಿಗೂ ಅನುಕರಣೀಯ. ಅವರು ಗೊಡ್ಡು ಸಂಪ್ರದಾಯಗಳ ವಿರುದ್ಧ ಸಮರ ಸಾರಿದ್ದರು ಮತ್ತು ವೈಜ್ಞಾನಿಕವಾಗಿ ಚಿಂತಿಸಿದರು. ಚರ್ಚುಗಳಲ್ಲಿ ಮಹಿಳೆಯರಿಗೆ ಹೆಚ್ಚು ಪ್ರಾತಿನಿಧ್ಯ ನೀಡಬೇಕು. ಎಲ್ಲ ಧರ್ಮಗಳ ನಡುವೆ ಸಂವಾದಗಳು ನಡೆಯಬೇಕು. ಮರಣದಂಡನೆ ಮೊದಲಾದ ಅಮಾನವೀಯ ಕೃತ್ಯಗಳು ನಿಲ್ಲಬೇಕು. ಲೈಂಗಿಕ ಅಸಮಾನತೆಗಳು ನಿಲ್ಲಬೇಕು. ಪರಿಸರ ನಾಶ, ಜಾಗತಿಕ ತಾಪಮಾನ ಏರಿಕೆ ಮೊದಲಾದ ವಿಷಯಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ನಡೆಯಬೇಕು ಎಂದರು.

ಅತ್ಯಂತ ಸರಳವಾಗಿ ಬದುಕುವುದು ಹೇಗೆ ಎಂದವರು ತೋರಿಸಿಕೊಟ್ಟಿದ್ದಾರೆ. 12 ವರ್ಷಗಳ ಪೋಪ್ ಅವಧಿಯಲ್ಲಿ ಅವರು ವ್ಯಾಟಿಕನ್ ಅರಮನೆಯಲ್ಲಿ ವಾಸ ಮಾಡದೆ ಒಂದು ತೋಟದ ಮನೆಯಲ್ಲಿ ನೌಕರರ ಜೊತೆ ವಾಸ ಮಾಡಿದರು. ತಮ್ಮ ಇಡೀ ಬದುಕಿನಲ್ಲಿ ನೊಂದವರ, ದಲಿತರ, ದೀನರ ಸೇವೆ ಮಾಡುವುದನ್ನು ದೇವರ ಸೇವೆ ಎಂದು ಕರೆದರು ಮತ್ತು ಅದರಂತೆ ಬದುಕಿದವರು. ಮಹಾ ಮಾನವತಾವಾದಿ ಆಗಿ ವಿಶ್ವಕ್ಕೇ ಮಾದರಿಯಾದರು. ಬೈಬಲ್ಲಿನ ಪ್ರತೀ ಒಂದು ವಾಕ್ಯವನ್ನು ಬೋಧನೆ ಮಾಡಿದ್ದು ಮಾತ್ರವಲ್ಲ ಅದರಂತೆ ಬದುಕಿ ತೋರಿಸಿದರು. ಅವರ ಬದುಕು ಎಲ್ಲರಿಗೂ ಮಾದರಿ ಎಂದು ಹೇಳಿದರು.

ಅತಿಥಿಯಾಗಿ ಭಾಗವಹಿಸಿದ ಕಾಂಗ್ರೆಸ್ ನಾಯಕ ಮುನಿಯಾಲು ಉದಯ ಕುಮಾರ್ ಶೆಟ್ಟಿ ಮಾತನಾಡಿ, ಪೋಪ್ ಫ್ರಾನ್ಸಿಸ್ ಅವರು ಎಲ್ಲಾ ಧರ್ಮದವರನ್ನು ಪ್ರೀತಿಸಿದರು. ಅವರ ಬೋಧನೆಗಳು ಸಾರ್ವಕಾಲಿಕ ಸತ್ಯ. ಅವರಲ್ಲಿದ್ದ ಮುಗ್ಧತೆ ಮತ್ತು ನಿರಹಂಕಾರ ಗುಣಗಳು ಎಲ್ಲರಿಗೂ ಇಷ್ಟವಾಗುತ್ತವೆ. ಪೋಪ್ ಅವರು ಬದುಕಿದ ರೀತಿ ಎಲ್ಲರಿಗೂ ಅನುಕರಣೀಯ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಸಿಲಿಕಾದ ರೆಕ್ಟರ್ ವಂದನೀಯ ಅಲ್ಬನ್ ಡಿಸೋಜಾ ಮಾತನಾಡಿ, 148 ಕೋಟಿ ಕ್ಯಾಥೋಲಿಕ್ ಕ್ರಿಶ್ಚಿಯನ್ ಬಂಧುಗಳು ಅವರು ತೋರಿದ ದಾರಿಯಲ್ಲಿ ನಡೆಯುವ ಸಂಕಲ್ಪ ಮಾಡಿಕೊಳ್ಳಬೇಕು. ಅವರು ದ್ವೇಷದ ಭಾವನೆಯನ್ನು ಹರಡದೆ ಪ್ರೀತಿಯ ಮೂಲಕ ಜಗತ್ತನ್ನು ಗೆಲ್ಲಲು ಹೊರಟವರು. ಅವರು ನಿಜವಾದ ವಿಶ್ವಮಾನವ ಎಂದು ಕಂಬನಿ ಮಿಡಿದರು.
ಅತ್ತೂರು ಬಸಿಲಿಕಾದ ಪಾಲನಾ ಮಂಡಳಿಯ ಉಪಾಧ್ಯಕ್ಷ ಸಂತೋಷ್ ಡಿಸಿಲ್ವಾ ಸ್ವಾಗತಿಸಿದರು. ಉಪನ್ಯಾಸಕ ಅಶೋಕ್ ಕ್ಲಿಫರ್ಡ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.









































































































error: Content is protected !!
Scroll to Top