ವಕ್ಫ್ ಮಸೂದೆಗೆ ರಾಜ್ಯಸಭೆಯಲ್ಲೂ ಅಂಗೀಕಾರ

ದೆಹಲಿ: ತೀವ್ರ ಚರ್ಚೆಗೆ ಗ್ರಾಸವಾಗಿರುವ 1995 ವಕ್ಫ್ ಮಸೂದೆಯು ರಾಜ್ಯಸಭೆಯಲ್ಲೂ ಅಂಗೀಕಾರಗೊಂಡಿದೆ. ಇನ್ನು ಈ ಮಸೂದೆಗೆ ರಾಷ್ಟ್ರಪತಿಗಳ ಸಹಿ ಬೀಳುವುದೊಂದೇ ಬಾಕಿಯಿದ್ದು, ರಾಷ್ಟ್ರಪತಿಯವರ ಅಂಗೀಕಾರ ಸಿಕ್ಕ ಕೂಡಲೇ ಇದು ಕಾನೂನಾಗಿ ಜಾರಿಗೊಳ್ಳಲಿದೆ. ಕಾನೂನಾಗಿ ಜಾರಿಯಾಗಬೇಕಾದರೆ ಇದಕ್ಕೆ ಏಕೀಕೃತ ವಕ್ಫ್ ನಿರ್ವಹಣೆ ಸಬಲೀಕರಣ ದಕ್ಷತೆ ಹಾಗೂ ಅಭಿವೃದ್ಧಿ ಕಾಯ್ದೆ (UMEED – ಉಮೀದ್) ಎಂದು ಕರೆಯಲಾಗುತ್ತದೆ.

ಎ. 3ರಂದು ರಾಜ್ಯಸಭಾ ದಿನಾಚರಣೆ ಆಚರಿಸಲಾಯಿತು. ಇದೇ ದಿನ ಮಧ್ಯರಾತ್ರಿಯವರೆಗೆ ನಡೆದ ಚರ್ಚೆಯಲ್ಲಿ ಮಸೂದೆಗೆ ಅಂಗೀಕಾರ ಸಿಕ್ಕಿದೆ.

ಎ.2ರಂದು ಲೋಕಸಭೆಯಲ್ಲಿ ಈ ಮಸೂದೆ ಅಂಗೀಕಾರಗೊಂಡಿದ್ದು, ಅದರ ಮುಂದಿನ ಹಂತವಾಗಿ ಎ. 3ರಂದು ರಾಜ್ಯಸಭೆಯಲ್ಲಿ ಮಂಡಿಸಲಾಗಿತ್ತು. ರಾತ್ರಿ ಒಂದು ಗಂಟೆಯವರೆಗೆ ನಡೆದ‌ ಚರ್ಚೆಯ ನಂತರ ರಾಜ್ಯಸಭೆಯ ಸಭಾಪತಿ, ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಈ ಮಸೂದೆಯನ್ನು ಮತದಾನಕ್ಕೆ ಒಡ್ಡಿದರು. ಡಿವಿಷನ್ ಆಧಾರದಲ್ಲಿ ನಡೆದ ಮತದಾನದಲ್ಲಿ ಮಸೂದೆಯ ಪರವಾಗಿ 128 ಮತಗಳು ಬಂದರೆ, ವಿರುದ್ಧವಾಗಿ 95 ಮತಗಳು ಬಂದವು. ಈ ಮೂಲಕ, ಆಡಳಿತಾರೂಢ ಬಿಜೆಪಿಯು ತನ್ನ ಪಾಲಿಗೆ ಬಂದೊದಗಿದ್ದ ದೊಡ್ಡ ಸವಾಲನ್ನು ಗೆದ್ದಂತಾಗಿದೆ. ಲೋಕಸಭೆಯಲ್ಲಿ ಈ ಮಸೂದೆಗೆ 288 ಮತಗಳು ಹಾಗೂ ಇದರ ವಿರುದ್ಧವಾಗಿ 232 ಮತಗಳು ಬಂದಿದ್ದವು.

ರಾಜ್ಯಸಭೆಯಲ್ಲಿ ಬಿಜೆಪಿಯ 98 ಸಂಸದರು, ಮಿತ್ರಪಕ್ಷ ಜೆಡಿಯು ಪಕ್ಷದ ನಾಲ್ವರು, ಎನ್‌ಸಿಪಿಯ ಮೂವರು, ಟಿಡಿಪಿಯ ಇಬ್ಬರು ಮತ್ತು ಆರು ನಾಮನಿರ್ದೇಶಿತ ಸದಸ್ಯರು ಸೇರಿದಂತೆ ಎನ್‌ಡಿಎ ಮೈತ್ರಿಕೂಟದ 125 ಸಂಸದರಿದ್ದಾರೆ. ಪ್ರತಿಪಕ್ಷ ಇಂಡಿಯಾ ಮೈತ್ರಿಕೂಟ ಕಾಂಗ್ರೆಸ್‌ನ 27 ಸಂಸದರು, ತೃಣಮೂಲ ಕಾಂಗ್ರೆಸ್‌ನ 13 ಸೇರಿದಂತೆ 88 ಸಂಸದರನ್ನು ಹೊಂದಿದೆ. ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಪಕ್ಷವು 7 ಸಂಸದರನ್ನು ಹೊಂದಿದೆ.





























































































































error: Content is protected !!
Scroll to Top