ಹೆಬ್ರಿ ಕಸಾಪ – ದುರ್ಗದಲ್ಲೊಂದು ಆಶು ಕವನ ಗೋಷ್ಠಿ

ಹೆಬ್ರಿ : ಕನ್ನಡ ಸಾಹಿತ್ಯ ಪರಿಷತ್ತು ಹೆಬ್ರಿ ತಾಲೂಕು ಘಟಕದ ಆಶ್ರಯದಲ್ಲಿ ಮಾ. 30ರಂದು ಅನ್ನಪೂರ್ಣೇಶ್ವರಿ ದೇವಾಲಯ ಶ್ರೀ ಕ್ಷೇತ್ರ ದುರ್ಗಕ್ಕೆ ಚಾರಣ ಮತ್ತು ದುರ್ಗದಲ್ಲೊಂದು ಆಶು ಕವನ ಗೋಷ್ಠಿ ಕಾರ್ಯಕ್ರಮ ನಡೆಯಿತು.
ಕವಿಗಳಾದ ಮಹೇಶ ಹೈಕಾಡಿ, ಶೋಭಾ ಆರ್. ಕಲ್ಕೂರ್, ನವೀನ ಶೆಟ್ಟಿ ಮಡಾಮಕ್ಕಿ, ಬಾಲಚಂದ್ರ ಸುಬ್ಬಣ್ಣ ಕಟ್ಟೆ, ಬಾಲಚಂದ್ರ ಹೆಬ್ಬಾರ್, ಪುಷ್ಪಾವತಿ ಹೆಬ್ರಿ, ಸುಮಂಗಲಾ ಭಟ್, ಶ್ರೀಜನ್ ವಿದ್ಯಾಜನಾರ್ಧನ್ ಭಾಗವಹಿಸಿ ಆಶು ಕವನಗಳನ್ನು ಪ್ರಸ್ತುತಪಡಿಸಿದರು.

ಶ್ರೀ ಕ್ಷೇತ್ರ ದುರ್ಗದ ಸತೀಶ ಬಾಯರಿ ಮಾತನಾಡಿ, ಶ್ರೀ ಕ್ಷೇತ್ರವು ಹೆಬ್ರಿ ತಾಲೂಕಿನ ಪ್ರಾಚೀನ ದೇವಾಲಯ. ಇಲ್ಲಿ ಚಾರಣದೊಂದಿಗೆ ಆಶು ಕವನ ಗೋಷ್ಠಿ ಮೂಲಕ ಸಾಹಿತ್ಯದ ಸೊಗಸನ್ನು ಪಸರಿಸಿರುವುದು ಶ್ಲಾಘನೀಯ ಎಂದರು.

ಗೋಷ್ಠಿಯ ಸಮನ್ವಯಕಾರ ಮಂಜುನಾಥ ಕೆ. ಶಿವಪುರ ಮಾತನಾಡಿ, ಮನದ ಭಾವ ಕವನವಾಗಿ ರಚಿಸಲ್ಪಡುವುದೇ ಆಶು ಕವನ. ಬರೆವಣಿಗೆ ಇಲ್ಲದ ಕಾಲದಲ್ಲಿ ಆಶು ಕವಿತೆಗಳೆ ಪ್ರಧಾನವಾಗಿದ್ದವು. ಗಾದೆ, ಒಗಟು, ಜನಪದ ಸಾಹಿತ್ಯಗಳೂ ಆಶು ರಚನೆಗಳೆ ಆಗಿದೆ. ಆಧುನಿಕ ಯುಗದಲ್ಲಿ ಆಶು ಕವಿತೆಗಳ ಸಂಖ್ಯೆ ಕಡಿಮೆಯಾಗಿವೆ. ಆಶು ಕವಿತೆಗಳು ಭಾವ, ಪಾಂಡಿತ್ಯ, ಸಮಯ ಸ್ಪೂರ್ತಿ, ಭಾಷಾ ಹಿಡಿತ ಉತ್ತಮವಿದ್ದಾಗ ಸ್ವಯಂ ಸ್ಪೂರ್ತಿಯಿಂದ ಹೊರ ಹೊಮ್ಮುತ್ತವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಹೆಬ್ರಿ ತಾಲೂಕು ಘಟಕದ ಅಧ್ಯಕ್ಷ ಮುದ್ದೂರು ಶ್ರೀನಿವಾಸ ಭಂಡಾರಿ ಮಾತನಾಡಿ, ಹಳ್ಳಿ, ಬೆಟ್ಟ, ಗುಡ್ಡ, ದುರ್ಗಗಳಲ್ಲಿ ಇಂತಹ ಕಾರ್ಯಕ್ರಮದ ಮೂಲಕ ಅಲ್ಲಿಯ ಜನಪದರನ್ನು ಸಾಹಿತ್ಯದೆಡೆಗೆ ಸೆಳೆಯುವ ಉದ್ದೇಶವನ್ನು ಹೊಂದಿದ್ದು, ಚಾರಣವನ್ನು ಸಾಹಿತ್ಯ ಪ್ರೇರಣೆಗೆ ಬಳಸಿಕೊಳ್ಳುವ ಮೂಲಕ ಸಾಹಿತ್ಯ ಪರಿಷತ್ತು ತನ್ನದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು

ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯ ರಾಧಾಕೃಷ್ಣ ರಾವ್, ಹೆಬ್ರಿ ತಾಲೂಕು ಐದನೆಯ ಸಾಹಿತ್ಯ ಸಮ್ಮೇಳನ ಸಮಿತಿಯ ಅಧ್ಯಕ್ಷರಾಗಿದ್ದ ಗಣೇಶ ಹಾಂಡ ಉಪಸ್ಥಿತರಿದ್ದರು. ಶಿಕ್ಷಕಿ ರತ್ನಾವತಿ ಪ್ರಾರ್ಥಿಸಿದರು. ಮಹೇಶ ಹೈಕಾಡಿ ಸ್ವಾಗತಿಸಿ, ಹೆಚ್. ಜನಾರ್ಧನ ವಂದಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು, ಕನ್ನಡ ಅಭಿಮಾನಿಗಳು ಮತ್ತು ಸ್ಥಳೀಯರು ಪಾಲ್ಗೊಂಡಿದ್ದರು.





























































































































error: Content is protected !!
Scroll to Top