ಭಾಗ್ಯಲಕ್ಷ್ಮೀ ಯೋಜನೆ – ಕಾರ್ಕಳ ತಾಲೂಕಿನಲ್ಲಿ 521 ಬಾಂಡ್‌ಗಳಿಗೆ ತುಂಬಿತು 18 ವರ್ಷ

ಕಾರ್ಕಳ : ಹೆಣ್ಣು ಮಕ್ಕಳ ಜನನವನ್ನು ಉತ್ತೇಜಿಸಲು 18 ವರ್ಷಗಳ ಹಿಂದೆ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತರಲಾಗಿದ್ದ ‘ಭಾಗ್ಯಲಕ್ಷ್ಮೀ’ ಯೋಜನೆಯ ಬಾಂಡ್‌ಗಳು ಪರಿಪಕ್ವತೆಗೆ ಸಿದ್ಧವಾಗಿದೆ. ಯೋಜನೆ ಜಾರಿಯಾದ ವರ್ಷದಲ್ಲಿ ನೋಂದಾಯಿಸಿದವರ ಪೈಕಿ ಕಳೆದ ಏಪ್ರಿಲ್‌ ನಂತರದಲ್ಲಿ 18 ವರ್ಷ ಪೂರ್ಣಗೊಂಡ ಹೆಣ್ಣು ಮಕ್ಕಳು ಹಣ ಪಡೆಯಲು ಅರ್ಹತೆ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಅರ್ಜಿ ಸ್ವೀಕಾರ ಪ್ರಕ್ರಿಯೆ ಮತ್ತು ದಾಖಲೆಗಳ ಸಂಗ್ರಹದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರತವಾಗಿದೆ.

ಭಾಗ್ಯಲಕ್ಷ್ಮೀ ಯೋಜನೆ
ಕುಸಿಯುತ್ತಿರುವ ಲಿಂಗಾನುಪಾತವನ್ನು ಏರಿಕೆ ಮಾಡಲು ಹಾಗೂ ಹೆಣ್ಣುಮಕ್ಕಳ ಜನನವನ್ನು ಉತ್ತೇಜಿಸಲು ರಾಜ್ಯ ಸರಕಾರ ಜಾರಿಗೆ ತಂದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, 31 ಮಾರ್ಚ್‌ 2006ರ ನಂತರ ಬಡತನ ರೇಖೆಯ ಕೆಳಗಿರುವ (ಬಿಪಿಎಲ್‌) ಕುಟುಂಬದಲ್ಲಿ ಜನಿಸಿದ ಇಬ್ಬರು ಹೆಣ್ಣುಮಕ್ಕಳು ಯೋಜನೆಗೆ ಅರ್ಹತೆ ಪಡೆದಿರುತ್ತಾರೆ. ತಾಯಿ-ತಂದೆ ಅಥವಾ ಪಾಲಕರು ಅರ್ಜಿ ಸಲ್ಲಿಸಿದರೆ ಎಲ್‌ಐಸಿ ಬಾಂಡ್‌ ನೀಡಲಾಗುತ್ತಿತ್ತು. ಬಾಂಡ್‌ನಲ್ಲಿ ನಮೂದಿಸಿದ ಮೊತ್ತವನ್ನು ಮಗುವಿಗೆ 18 ವರ್ಷ ತುಂಬಿದ ಬಳಿಕ ನೀಡುವ ಈ ಯೋಜನೆಯಡಿ, 32ರಿಂದ 45 ಸಾವಿರ ರುಪಾಯಿ ಮೌಲ್ಯದ ಬಾಂಡ್‌ಗಳನ್ನು ಆರಂಭದ ವರ್ಷಗಳಲ್ಲಿ ವಿತರಿಸಲಾಗಿದೆ. 2008ರಲ್ಲಿ ನಿಯಮಗಳನ್ನು ಪರಿಷ್ಕರಿಸಲಾಗಿದ್ದು, ಬಾಂಡ್‌ ಮೌಲ್ಯ ಹೆಚ್ಚಿಸಲಾಗಿದೆ. 2008ರ ಆಗಸ್ಟ್‌ನಲ್ಲಿ ಜನಿಸಿದ ಮೊದಲ ಮಗುವಿಗೆ 19,300 ರು. ಎಲ್‌ಐಸಿಯಲ್ಲಿ ಡೆಪಾಸಿಟ್‌ ಇರಿಸಿದ್ದು, 18 ವರ್ಷದ ಬಳಿಕ 1,00,097 ರು. ಹಾಗೂ ಎರಡನೇ ಮಗುವಿಗೆ 18,350 ರು. ಡೆಪಾಸಿಟ್‌ ಇರಿಸಿದ್ದು, 18 ವರ್ಷದ ಬಳಿಕ 100,052 ರು. ನೀಡಲಾಗುತ್ತದೆ. ಚೈಲ್ಡ್‌ ಟ್ರ್ಯಾಕಿಂಗ್‌ ಸಿಸ್ಟಂ ಮೂಲಕ ವಿದ್ಯಾರ್ಥಿನಿಯ ಶೈಕ್ಷಣಿಕ ಮಾಹಿತಿ, ವಲಸೆ ಮತ್ತಿತರ ಮಾಹಿತಿ ಕಲೆ ಹಾಕಲಾಗುತ್ತದೆ.

ಅನರ್ಹತೆ
ಕುಟುಂಬವು ಮೂರು ಮಕ್ಕಳಿಗಿಂತ ಅಧಿಕ ಮಕ್ಕಳನ್ನು ಹೊಂದಿದ್ದಲ್ಲಿ, ಫಲಾನುಭವಿ ಬಾಲ ಕಾರ್ಮಿಕ ಅಥವಾ ಬಾಲ್ಯ ವಿವಾಹವಾಗಿದ್ದಲ್ಲಿ, ಸರಕಾರಿ ನೌಕರಿ ದೊರೆತ ಹೆಣ್ಣು ಮಗಳಿಗೆ ಯೋಜನೆ ಅನರ್ಹಗೊಳ್ಳುತ್ತದೆ. ಇಂತಹ ಅನೇಕ ಷರತ್ತುಗಳಿದ್ದು ಅಂಗನವಾಡಿ ಕಾರ್ಯಕರ್ತರು ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಮಾಹಿತಿ ಪಡೆಯಬಹುದಾಗಿದೆ.

ಬೇಕಾದ ದಾಖಲೆ
ಭಾಗ್ಯಲಕ್ಷ್ಮೀ ಯೋಜನೆಯ ಹೊಂದಿರುವವರು 18 ವರ್ಷ ತುಂಬಿದ್ದಲ್ಲಿ ಪರಿಪಕ್ವತೆಯ ಹಣ ಪಡೆಯಲು ಅರ್ಹತೆ ಪಡೆದಿರುತ್ತಾರೆ. ಅವರು ಅಗತ್ಯ ದಾಖಲೆಗಳೊಂದಿಗೆ ತಮ್ಮ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸಬೇಕು. ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಇಂತಿವೆ..
-ಭಾಗ್ಯಲಕ್ಷ್ಮೀ ಯೋಜನೆ ಬಾಂಡ್‌
-ಫಲಾನುಭವಿಯ ಜನನ ಪ್ರಮಾಣ ಪತ್ರ
-ವ್ಯಾಸಂಗ ದೃಢೀಕರಣ ಪತ್ರ (study certificate)
-ಬ್ಯಾಂಕ್‌ ಖಾತೆ (ಬ್ಯಾಂಕ್‌ ಖಾತೆ NPCI Maping ಹೊಂದಿರುವ ಪ್ರತಿ)
-ರೇಷನ್‌ ಕಾರ್ಡ್‌
-ತಾಯಿಯ ಪಾನ್‌ ಕಾರ್ಡ್‌ (PAN Card)
-ಫಲಾನುಭವಿ ಮತ್ತು ತಂದೆ ತಾಯಿಯ ಆಧಾರ್‌ ಕಾರ್ಡ್‌

ಕಾರ್ಕಳದಲ್ಲಿ 521 ಬಾಂಡ್‌
ಕಾರ್ಕಳ ತಾಲೂಕಿನಲ್ಲಿ 2025ರ ಫೆಬ್ರವರಿವರೆಗೆ 521 ಬಾಂಡ್‌ಗಳು ಪರಿಪಕ್ವತೆಗೆ ಸಿದ್ಧವಾಗಿದೆ. ತಾಲೂಕಿನಲ್ಲಿ ಒಟ್ಟು 232 ಅಂಗನವಾಡಿ ಕೇಂದ್ರಗಳಿದ್ದು 9 ವೃತ್ತಗಳಾಗಿ ಕಾರ್ಯನಿರ್ವಹಿಸುತ್ತಿದೆ. ಈ 9 ವೃತ್ತಗಳ ಮೇಲ್ವಿಚಾರಕರು ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರ (CDPO) ಮಾರ್ಗದರ್ಶನದಂತೆ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಯೋಜನೆಯ ಫಲಾನುಭವಿಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಕರೆದೊಯ್ದು ಅರ್ಜಿ ಸಲ್ಲಿಸುವ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಕಳೆದ 15 ದಿನಗಳಿಂದ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಅರ್ಜಿ ಸ್ವೀಕಾರ ಪ್ರಕ್ರಿಯೆ ನಡೆಯುತ್ತಿದ್ದು, ಈಗಾಗಲೇ 267 ಬಾಂಡ್‌ಗಳ ಪರಿಪಕ್ವತೆಗಾಗಿ ಅರ್ಜಿ ಸ್ವೀಕಾರ ಸಂಪೂರ್ಣಗೊಂಡಿದೆ. ಶನಿವಾರ -ಭಾನುವಾರದ ದಿನಗಳಲ್ಲೂ ಅರ್ಜಿ ಸಲ್ಲಿಸುವ ಕಾರ್ಯವಾಗುತ್ತಿದೆ.

ತಾಲೂಕು ಸಿಡಿಪಿಓ ಕಚೇರಿಗೆ ಅರ್ಜಿ ಸಲ್ಲಿಸಲು ಬಂದಿರುವ ಫಲಾನುಭವಿಗಳು

ಯೋಜನೆಯ ಫಲಾನುಭವಿಗಳಿಗೆ ಪರಿಪಕ್ವತೆಯ ಹಣವನ್ನು ತಲುಪಿಸಲು ಅಗತ್ಯವಾದ ಅರ್ಜಿ ಸಲ್ಲಿಸುವ ಕೆಲಸವನ್ನು ಅಂಗನವಾಡಿ ಕಾರ್ಯಕರ್ತರು, ಮೇಲ್ವಿಚಾರಕರು ಮತ್ತು ತಾಲೂಕು ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಿಬ್ಬಂದಿ ವಿಶೇಷ ಮುತುವರ್ತಿಯಿಂದ ಮಾಡುತ್ತಿದ್ದಾರೆ. ಬಾಂಡ್‌ ಕುರಿತು ಯಾವುದೇ ಗೊಂದಲಗಳಿದ್ದಲ್ಲಿ ತಕ್ಷಣವೇ ಮೇಲಾಧಿಕಾರಿಗಳ ಗಮನಕ್ಕೆ ತರುತ್ತಿದ್ದೇವೆ.
-ವಿಜಯ ನಾರಾಯಣ ನಾಯ್ಕ್‌
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಾರ್ಕಳ

ವರದಿ : ನಳಿನಿ ಎಸ್.‌ ಸುವರ್ಣ









































































































error: Content is protected !!
Scroll to Top