ಕಾರ್ಕಳ : ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ ಆಧಾರದ ಶೂಶ್ರೂಷಾಧಿಕಾರಿಗಳ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯದಲ್ಲಿ ಫೆ. 24ರಿಂದ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ ನಡೆಯಲಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದ ಶುಶ್ರೂಷಾಧಿಕಾರಿಗಳಾದ ನಾವು ಸುಮಾರು 15-20 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಅತೀ ಕಡಿಮೆ ವೇತನದಲ್ಲಿ ಯಾವುದೇ ಸೌಲಭ್ಯಗಳಿಲ್ಲದೇ ಖಾಯಂ ನೌಕರರಷ್ಟೇ ಇಲಾಖೆಯು ವಹಿಸಿದ ಎಲ್ಲಾ ಕೆಲಸಗಳನ್ನು ಚಾಚೂ ತಪ್ಪದೇ ನಿರ್ವಹಿಸುತ್ತಿದ್ದೇವೆ. ಕೋವಿಡ್-19 ಸಂದರ್ಭದಲ್ಲೂ ಹೆಣ್ಣುಮಕ್ಕಳೇ ಹೆಚ್ಚಾಗಿರುವ ನಾವು ನಮ್ಮ ಕುಟುಂಬವನ್ನು ಬಿಟ್ಟು ಜೀವದ ಹಂಗೂ ತೊರೆದು ಹಗಲಿರುಳೆನ್ನದೇ ಸಾರ್ವಜನಿಕರಿಗೆ ಪ್ರಾಮಾಣಿಕ ಸೇವೆ ನೀಡಿದ್ದೇವೆ. ಅಲ್ಪ ವೇತನದಲ್ಲಿ ಇನ್ನಿತರ ಯಾವುದೇ ಸೌಲಭ್ಯಗಳಿಲ್ಲದೇ ಕೌಟುಂಬಿಕ ಜೀವನ ನಿರ್ವಹಣೆ ಕಷ್ಟಕರವಾಗಿದ್ದು, ಈಗಾಗಲೇ ಹಲವಾರು ಬಾರಿ ನಮ್ಮ ಕುಂದುಕೊರತೆಗಳು ಹಾಗೂ ಬೇಡಿಕೆಗಳ ಬಗ್ಗೆ ಸರಕಾರಕ್ಕೆ ಮತ್ತು ಅಧಿಕಾರಿಗಳಿಗೆ ಮನವರಿಕೆ ಮಾಡಿ ಮನವಿ ಅಹವಾಲುಗಳನ್ನು ಸಲ್ಲಿಸಿದ್ದರೂ ಸಹ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಆದ್ದರಿಂದ ನಮ್ಮ ರಾಜ್ಯ ಸಂಘವು ಫೆ. 24ರಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿರ್ಧಿಷ್ಟಾವಧಿವರೆಗೆ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲು ಕರೆ ನೀಡಿದ್ದೇವೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆ ಶುಸ್ರೂಷಾಧಿಕಾರಿಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.
ಪ್ರಮುಖ ಬೇಡಿಕೆಗಳು
ಗುತ್ತಿಗೆ ಶುಶ್ರೂಷಾಧಿಕಾರಿಗಳ ಸೇವೆ ಖಾಯಂಗೊಳಿಸಬೇಕು.
ಸುಪ್ರೀಂ ಕೋರ್ಟ್ನ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನಿಗಧಿಪಡಿಸಬೇಕು ಅಥವಾ ಖಾಯಂ ಮಾಡುವವರೆಗೆ ವೈಧ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಗುತ್ತಿಗೆ ಶಶ್ರೂಷಾಧಿಕಾರಿಗಳಿಗೆ ವೇತನ ಕೊಟ್ಟಂತೆ ವೇತನ ನೀಡಬೇಕು.
ಮುಂಬರುವ ವಿಶೇಷ ನೇರ ನೇಮಕಾತಿಯಲ್ಲಿ ಜೇಷ್ಠತೆಯ ಆಧಾರದ ಮೇಲೆ ಕೃಪಾಂಕ ಮತ್ತು ವಯೋಮಿತಿ ಸಡಿಲಿಕೆ ನೀಡಬೇಕು.
ಇಲಾಖೆಯ ಗುತ್ತಿಗೆ ವೈದ್ಯಾಧಿಕಾರಿಗಳಿಗೆ 30 ಕೃಪಾಂಕ ಕೊಟ್ಟಂತೆ, ಶುಶ್ರೂಷಾಧಿಕಾರಿಗಳಿಗೆ 1 ವರ್ಷದ ಗುತ್ತಿಗೆ ಸೇವೆಗೆ 3 ಕೃಪಾಂಕದಂತೆ ಗರಿಷ್ಠ 30 ಕೃಪಾಂಕ ನೀಡಬೇಕು.
8 ವರ್ಷಗಳಿಂದ ನೇಮಕಾತಿ ಆಗಿರುವುದಿಲ್ಲ
ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆ ನೀಡಬೇಕು
ಶುಶ್ರೂಷಾಧಿಕಾರಿ ತರಬೇತಿ ಪಡೆದು “PHCO [2 ANM] ಎದುರು ಹುದ್ದೆಯಲ್ಲಿ ಸೇವೆ ಮಾಡಿರುವ ಶುಶ್ರೂಷಾಧಿಕಾರಿಗಳ ಸೇವೆಯನ್ನು ನೇಮಕಾತಿಯಲ್ಲಿ ಪರಿಗಣಿಸಬೇಕು.

ಸರಕಾರಕ್ಕೆ ಹಾಗೂ ಸಾಮಾನ್ಯ ಜನರಿಗೆ ಸೇವೆ ಮಾಡುವಲ್ಲಿ ತೊಂದರೆ ಕೊಡಲು ಇಚ್ಚಿಸುವುದಿಲ್ಲ. ಆದರೆ ನಮ್ಮನ್ನ ಎಲ್ಲಾ ಸೌಲಭ್ಯಗಳಿಂದಲೂ ಕಡೆಗಣಿಸಿರುವುದರಿಂದ ನಮ್ಮ ಮೂಲಭೂತ ಹಕ್ಕುಗಳನ್ನು ಪಡೆಯಲು ನಾವು ಈ ಮುಷ್ಕರವನ್ನು ಮಾಡುವುದು ಅನಿವಾರ್ಯವಾಗಿದೆ ಎಂದು ಶುಶ್ರೂಷಾಧಿಕಾರಿಗಳು ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಶುಶ್ರೂಷಾಧಿಕಾರಿಗಳ ಬೆಂಬಲ
ಈ ಮುಷ್ಕರದಲ್ಲಿ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎನ್ಎಚ್ಎಮ್ ಶುಶ್ರೂಷಾಧಿಕಾರಿಗಳು ಭಾಗವಹಿಸುವುದಾಗಿ ಫೆ.17ರಂದು ಉಡುಪಿ ಜಿಲ್ಲಾಧಿಕಾರಿ ಮತ್ತು ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.































































