ಫೆ. 19 : ದೆಹಲಿ ನೂತನ ಮುಖ್ಯಮಂತ್ರಿ ಆಯ್ಕೆ – ಫೆ. 20 ರಂದು ಪ್ರಮಾಣ ವಚನ

ದೆಹಲಿ : ದೆಹಲಿಯಲ್ಲಿ ಭಾರತೀಯ ಜನತಾ ಪಕ್ಷದ ಶಾಸಕಾಂಗ ಪಕ್ಷದ ಸಭೆ ಫೆ. 19ರಂದು ನಡೆಯಲಿದ್ದು, ನೂತನ ಮುಖ್ಯಮಂತ್ರಿ ಫೆ. 20 ರಂದು ರಾಮಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ದೆಹಲಿಯ ನೂತನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಬಿಜೆಪಿಯ ಹೊಸದಾಗಿ ಆಯ್ಕೆಯಾದ ಶಾಸಕರು ಇಂದು ಸಭೆ ಸೇರಬೇಕಿತ್ತು. ಆದರೆ, ಸಭೆಯನ್ನು ಬುಧವಾರಕ್ಕೆ ಮುಂದೂಡಲಾಗಿದೆ. ಮುಖ್ಯಮಂತ್ರಿಯ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಫೆ. 20 ರಂದು ನಡೆಯಲಿದೆ. ಕಾರ್ಯಕ್ರಮ ವ್ಯವಸ್ಥೆಗಳ ಮೇಲ್ವಿಚಾರಣೆಗಾಗಿ, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ವಿನೋದ್ ತಾವ್ಡೆ ಮತ್ತು ತರುಣ್ ಚುಗ್ ಅವರನ್ನು ನೇಮಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಎನ್‌ಡಿಎ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ಕಾರ್ಪೊರೇಟ್ ಜಗತ್ತಿನ ಕೈಗಾರಿಕೋದ್ಯಮಿಗಳು, ಚಲನಚಿತ್ರ ತಾರೆಯರು, ಕ್ರಿಕೆಟ್ ಆಟಗಾರರು, ಸಂತರು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಫೆ. 5 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ 26 ವರ್ಷಗಳ ನಂತರ ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತು. ಈ ಮೂಲಕ ಆಮ್ ಆದ್ಮಿ ಪಕ್ಷದ 10 ವರ್ಷಗಳ ಆಡಳಿತವನ್ನು ಕೊನೆಗೊಳಿಸಿತು. ರಾಜಧಾನಿಯ 70 ವಿಧಾನಸಭಾ ಸ್ಥಾನಗಳಲ್ಲಿ ಕೇಸರಿ ಪಕ್ಷ 48 ಸ್ಥಾನಗಳನ್ನು ಗೆದ್ದಿತು. ಮುಖ್ಯಮಂತ್ರಿ ಮತ್ತು ಸಚಿವರ ಹುದ್ದೆಗಳಿಗೆ ಹೊಸದಾಗಿ ಆಯ್ಕೆಯಾದ ಹಲವಾರು ಶಾಸಕರ ಹೆಸರುಗಳು ಕೇಳಿಬರುತ್ತಿವೆ.

ಎಎಪಿ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ ಪರ್ವೇಶ್ ವರ್ಮಾ ಮತ್ತು ದೆಹಲಿ ಬಿಜೆಪಿಯ ಮಾಜಿ ಅಧ್ಯಕ್ಷ ವಿಜೇಂದರ್ ಗುಪ್ತಾ ಮತ್ತು ಸತೀಶ್ ಉಪಾಧ್ಯಾಯ ಅವರ ಹೆಸರುಗಳು ಮುಖ್ಯಮಂತ್ರಿ ಹುದ್ದೆಗೆ ಕೇಳಿಬರುತ್ತಿದೆ. ಪವನ್ ಶರ್ಮಾ, ಆಶಿಶ್ ಸೂದ್, ರೇಖಾ ಗುಪ್ತಾ ಮತ್ತು ಶಿಖಾ ರೈ ಮುಂತಾದವರು ಮುಖ್ಯಮಂತ್ರಿ ಹುದ್ದೆಗೆ ಆಕಾಂಕ್ಷಿಗಳಾಗಿದ್ದಾರೆ.











































































error: Content is protected !!
Scroll to Top