ಕಾರ್ಕಳ : ಆರೋಗ್ಯ ಕ್ಷೇತ್ರದ ಸುಧಾರಣೆಗೆ ಸರಕಾರ ಎಲ್ಲವನ್ನೂ ಭರಿಸುವುದು ಕಷ್ಟಸಾಧ್ಯ. ಹೀಗಾಗಿ ಸಂಘ ಸಂಸ್ಥೆಗಳು ಸರಕಾರಿ ಆಸ್ಪತ್ರೆಗಳ ಅವಶ್ಯಕತೆಯನ್ನು ಪೂರೈಸಿದಲ್ಲಿ ಬಡಜನತೆಯ ಆರೋಗ್ಯ ರಕ್ಷಣೆಯಲ್ಲಿ ಸಹಕಾರಿಯಾಗುವುದು ಎಂದು ಶಾಸಕ ವಿ. ಸುನಿಲ್ ಕುಮಾರ್ ಅಭಿಪ್ರಾಯಪಟ್ಟರು.
ಅವರು ಫೆ. 9ರಂದು ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘ ಜೋಡುರಸ್ತೆ ಇದರ ವತಿಯಿಂದ ಕಾರ್ಕಳ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿರುವ ರೆಫ್ರಿಜರೇಟರ್ ಹಸ್ತಾಂತರಿಸಿ ಮಾತನಾಡಿದರು.
ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ರಾವ್ ಮಾತನಾಡಿ, ಕಾರ್ಕಳ ಸರಕಾರಿ ಆಸ್ಪತ್ರೆಗೆ ಕೊರೋನಾ ಕಾಲದಲ್ಲಿ ನಮ್ಮ ಸಂಘದ ವತಿಯಿಂದ ಆಮ್ಲಜನಕ ಘಟಕಕ್ಕೆ ಧನ ಸಹಾಯ ನೀಡಲಾಗಿದೆ. ಆರೋಗ್ಯ, ಶೈಕ್ಷಣಿಕ ಸೇರಿದಂತೆ ಸಂಘವು ಹತ್ತಾರು ಸಮಾಜಮುಖಿ ಕಾರ್ಯಗಳಿಗೆ ನೆರವು ನೀಡುತ್ತ ಬಂದಿದೆ ಎಂದರು.
ಸರಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಶಶಿಕಲಾ, ಡಾ. ಅನಂತ್ ಕಾಮತ್, ಡಾ. ಉದಯ ಕುಮಾರ್, ಸಂಘದ ಉಪಾಧ್ಯಕ್ಷ ವೃಷಭರಾಜ್ ಕಡಂಬ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಶ್ರೀ, ನಿರ್ದೇಶಕರಾದ ಯೋಗಿಶ್ ಸಾಲಿಯಾನ್, ಸಂದೀಪ್ ನಾಯಕ್, ದಿನೇಶ್ ಕುಮಾರ್ ವೈ., ಅನಿಲ್ ಕುಮಾರ್, ಸಂಘದ ಸಿಬ್ಬಂದಿ ಹಾಗೂ ಆಸ್ಪತ್ರೆ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.








































