ಕಾರ್ಕಳ : ಕಾರ್ಕಳ ತಾಲೂಕು ಆಸ್ಪತ್ರೆಗೆ ಸಾಗುವ ರಸ್ತೆಯಲ್ಲಿ ಮರದ ಗೆಲ್ಲೊಂದು ವಿದ್ಯುತ್ ತಂತಿಗೆ ಚಾಚಿಕೊಂಡಿದ್ದು ಯಾವಾಗ ಬೇಕಾದರೂ ಅವಘಡ ಸಂಭವಿಸುವ ಸಾಧ್ಯತೆಯಿದೆ. ಇನ್ನು ಮರದ ಗೆಲ್ಲು ವಿದ್ಯುತ್ ತಂತಿಗೆ ತಾಗಿ ಈ ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗುವ ಸಾಧ್ಯತೆಯೂ ಇದೆ.

ಪುರಸಭಾ ವ್ಯಾಪ್ತಿಗೊಳಪಡುವ ಈ ರಸ್ತೆಯಲ್ಲಿ ಸರಕಾರಿ ಆಸ್ಪತ್ರೆ ಹೋಗುವವರು, ಬೋರ್ಡ್ ಕಾಲೇಜಿಗೆ ವಿದ್ಯಾರ್ಥಿಗಳು ಸೇರಿದಂತೆ ಪ್ರತಿನಿತ್ಯ ಸಾವಿರಾರು ಮಂದಿ ಓಡಾಡುತ್ತಾರೆ. ಇದೇ ದಾರಿಯಲ್ಲಿ ವಾಹನ ನಿಲುಗಡೆಯನ್ನೂ ಮಾಡುತ್ತಾರೆ. ಆದ್ದರಿಂದ ಕಂಬ, ವಿದ್ಯುತ್ ಪರಿವರ್ತಕ ಸುತ್ತ ಹುಲುಸಾಗಿ ಬೆಳೆದ ಗಿಡಬಳ್ಳಿ, ಹಬ್ಬಿರುವ ಬಳ್ಳಿ, ಒಣಗಿದ ಮರಗಳನ್ನು ತೆರವುಗೊಳಿಸುವತ್ತ ಮೆಸ್ಕಾಂ ಇಲಾಖೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಸ್ಥಳೀಯ ಆಡಳಿತ ವ್ಯವಸ್ಥೆ ಮುಂದಾಗಬೇಕಾಗಿದೆ. ಈ ಮೂಲಕ ಅಪಾಯ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.






























































