ರಾಜ್ಯ ಸರಕಾರದ ವಿರುದ್ಧ ಸುನಿಲ್‌ ಕುಮಾರ್‌ ಸುಳ್ಳು ಆರೋಪ – ಅನಿತಾ ಡಿಸೋಜಾ

ಕಾರ್ಕಳ : ರಾಜ್ಯ ಕಾಂಗ್ರೆಸ್ ಸರಕಾರದಿಂದ ಒಲೈಕೆ ನೀತಿ ಎಂದು ಬಣ್ಣಿಸಿರುವ ಶಾಸಕ ಸುನಿಲ್‌ ಕುಮಾರ್‌ ಜನರ ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ. ಅವರ ವಿರುದ್ಧ ಜನರು ಸ್ವಯಂ ಪ್ರೇರಿತರಾಗಿ ಧ್ವನಿ ಎತ್ತಬೇಕು ಎಂದು ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಅನಿತಾ ಡಿಸೋಜಾ ಬೆಳ್ಮಣ್ ಆಗ್ರಹಿಸಿದ್ದಾರೆ.

ಜನ ವಿರೋಧಿ ಆಡಳಿತ ನೀಡಿ ಅಧಿಕಾರವನ್ನು ಕಳೆದುಕೊಂಡ ಅನಂತರ ಬಿಜೆಪಿಯ ನಾಯಕ ಸುನಿಲ್ ಕುಮಾರ್ ಅವರು ರಾಜ್ಯ ಸರಕಾರದ ವಿರುದ್ಧ ಪದೇ ಪದೆ ಸುಳ್ಳು ಆರೋಪಗಳನ್ನು ಹೊರಿಸುತ್ತಿದ್ದಾರೆ. ಒಂದು ಕಡೆ ಸರಕಾರದ ಬೊಕ್ಕಸ ಖಾಲಿಯಾಗಿದೆ. ಅಭಿವೃದ್ಧಿಗೆ ಹಣವೇ ಇಲ್ಲ ಅಂತ ಆರೋಪ ಮಾಡುತ್ತಿದ್ದ ಅವರು ಇನ್ನೊಂದು ಕಡೆ ಕಾರ್ಕಳಕ್ಕೆ ಇಷ್ಟು ಕೋಟಿ ಬಿಡುಗಡೆಯಾಗಿದೆ ಅಂತ ಮಾಧ್ಯಗಳಲ್ಲಿ ಪ್ರಕಟಣೆ ನೀಡಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ಅನಿತಾ ಆರೋಪಿಸಿದರು.
‌
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಬಿಜೆಪಿ ತನ್ನ ಪ್ರಯೋಗ ಶಾಲೆಯನ್ನಾಗಿ ಮಾಡಿ ಜಾತಿ, ಧರ್ಮ, ಗೋ ಹತ್ಯೆ, ಹಲಾಲ್, ಜಟ್ಕಾ, ಹಿಜಾಬ್ ಎಂದು ರಾಜಕೀಯ ಮಾಡಿರುವುದು ಜನಸಾಮಾನ್ಯರ ಗಮನದಲ್ಲಿದೆ. ನಿಮ್ಮ ಆಲೋಚನೆಯಲ್ಲಿ ಎಲ್ಲ ಹಿಂದುಗಳು, ನಿಮ್ಮ ಕಪಟ ನಾಟಕ ಅರಿಯದ ಮುಗ್ದರು ಎಂದಿರಬಹುದು. ಆದರೆ, ಅವರು ಮೂರ್ಖರಂತೂ ಅಲ್ಲಾ ಅನ್ನುವುದು ನಮ್ಮ ನಂಬಿಕೆ. ನೀವು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರಿ. ಅವಿಭಜಿತ ದಕ್ಷಿಣ ಕನ್ನಡದಲ್ಲಿ ಬಹುತೇಕ ಗೋ ಹತ್ಯೆ, ಗೋ ಸಾಗಾಟದಲ್ಲಿ ಬಿಜೆಪಿ ಬೆಂಬಲಿತರೇ ಹೆಚ್ಚಾಗಿ ತೊಡಗಿಸಿಕೊಂಡಿರುವುದು ಎಂದು ಅನಿತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗೋಮಾಂಸ ರಫ್ತಿನಲ್ಲಿ ಭಾರತ ಅಗ್ರಸ್ಥಾನದಲ್ಲಿದೆ ಎಂಬುದನ್ನು ಮರೆತಿರುವ ಶಾಸಕ ಸುನಿಲ್ ಕುಮಾರ್ ಅವರು ಮಾನಸಿಕ ಅಸ್ವಸ್ಥನೊಬ್ಬನು ಕೆಚ್ಚಲು ಕೊಯ್ದ ಘಟನೆಯನ್ನು ಹಿಡಿದುಕೊಂಡು ಹಿಂದುಗಳ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ದೇಶದ ಈಶಾನ್ಯ ರಾಜ್ಯಗಳು ಮತ್ತು ಗೋವಾಳಗಳಲ್ಲಿ ಗೋಮಾಂಸ ತಿನ್ನುವವರ ಪರವಾಗಿ ಇವರದೇ ಪಕ್ಷ ಇದೆ. ಇಲ್ಲಿ ಗೋಮಾತೆಯ ಮೇಲೆ ವಿಶೇಷ ಮಮತೆ ಇರುವಂತಹ ನಾಟಕವನ್ನು ಆಡುತ್ತಿದ್ದಾರೆ. ಕರ್ನಾಟಕದಲ್ಲಿ ಇವರೇ ಬೆಳೆದು ಬಂದ ಸಂಘಟನೆಯ ಸದಸ್ಯರು ಗೋ ಸಾಗಾಟ ಪ್ರಕರಣಗಳಲ್ಲಿ ಸಿಕ್ಕಿ ಬಿದ್ದಿದಂತ ಹಲವಾರು ಪ್ರಕರಣಗಳು ದಾಖಲಾಗಿವೆ.

ಬಡವರು ಮನೆ ಕಟ್ಟಲು ಆಗುತ್ತಿರುವ ಸಮಸ್ಯೆ, ನಿಮ್ಮ ಸರಕಾರ ಇರುವಾಗಲೂ ಇತ್ತು. ಮಂತ್ರಿ ಸ್ಥಾನದಲ್ಲಿ ಇದ್ದ ನೀವು ಯಾಕೆ ಆ ಸಮಸ್ಯೆ ಹೋಗಲಾಡಿಸಲು ಪ್ರಯತ್ನಿಸಲಿಲ್ಲ. ರೇಷನ್ ಕಾರ್ಡ್ ತೊಂದರೆಯಾಗಿರುವುದು ನಿಮ್ಮ ಕೇಂದ್ರ ಸರಕಾರದ ನೀತಿಯಿಂದ ಹೊರತು ರಾಜ್ಯ ಸರಕಾರದ ನೀತಿಯಿಂದಲ್ಲ. ಆದರೂ ರಾಜ್ಯ ಕಾಂಗ್ರೆಸ್ ಸರಕಾರ ರೇಷನ್ ಕಾರ್ಡ್ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದು ಅನಿತಾ ತಿಳಿಸಿದ್ದಾರೆ.
ಕಾಂಗ್ರೆಸ್ ಸರಕಾರ ಬಂದಮೇಲೆ ಹಾಲಿನ ದರ ಏರಿಕೆಯಾಗಿಲ್ಲ. ನೀವು ಹಾಲಿನ ದರ ಏರಿಕೆಯಾಗಿದೆಯಂತ ಜನರಿಗೆ ಸುಳ್ಳು ಹೇಳುತ್ತಿದ್ದೀರಿ. ರಾಜ್ಯ ಸರಕಾರದ ಅಭಿವೃದ್ಧಿ ಮತ್ತು ಜನಪರ ಯೋಜನೆಗಳನ್ನು ಜಾರಿ ಮಾಡಿ ಜನರಿಗೆ ತಲುಪಿಸುವ ಕೆಲಸವನ್ನು ಸರಕಾರ ಉತ್ತಮವಾಗಿ ಮಾಡುತ್ತಿದೆ. ಇದನ್ನು ಕಂಡು ಸಹಿಸದ ನೀವು ಜನರನ್ನು ದಿಕ್ಕು ತಪ್ಪಿಸುವ ಕೆಲಸದಲ್ಲಿ ನಿರತರಾಗಿದ್ದೀರಿ ಎಂದು ಅನಿತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





























































































































error: Content is protected !!
Scroll to Top