ಕರ್ನಾಟಕ ಜನನ ಮರಣಗಳ ನೋಂದಣಿಯ ನಿಯಮಗಳು 1999

  1. 1969ನೇ ಇಸವಿಯಿಂದ ಜಾರಿಯಲ್ಲಿರುವ ಜನನ ಮರಣಗಳ ನೋಂದಣಿಯ ಅಧಿನಿಯಮವನ್ನು ಕರ್ನಾಟಕ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಅನುಮೋದನೆಯೊಂದಿಗೆ ಕೆಲವು ಮಹತ್ತರವಾದ ತಿದ್ದುಪಡಿ ಮಾಡಿದ್ದು ಇದರ ಪ್ರಕಾರ ಕರ್ನಾಟಕ ಜನನ ಮರಣಗಳ ನೋಂದಣಿ ನಿಯಮಗಳು 1999 ಎಂಬ ಕಾನೂನು ಕರ್ನಾಟಕ ರಾಜ್ಯದಲ್ಲಿ ದಿನಾಂಕ 01-01-2000ರಿಂದ ಜ್ಯಾರಿಗೆ ಬಂದಿರುತ್ತದೆ. ಈ ಬಗ್ಗೆ ಸರ್ಕಾರವು ದಿನಾಂಕ 30-12-1999 ರಂದು ಅಧಿಸೂಚನೆಯನ್ನು ಸಹಾಯ ಹೊರಡಿಸಿರುತ್ತದೆ.
  2. ಮೆಲ್ಕಾಣಿಸಿದ ತಿದ್ದುಪಡಿ ನಿಯಮದ ಪ್ರಕಾರ ಚಲಿಸುತ್ತಿರುವ ಯಾವುದೇ ವಾಹನದಲ್ಲಿ ಸಂಭವಿಸುವ ಜನನ ಅಥವಾ ಮರಣದ ಮಾಹಿತಿಯನ್ನು ವಾಹನಕ್ಕೆ ಸಂಬಂಧಪಟ್ಟ ವ್ಯಕ್ತಿಯು ಜನನ ಅಥವಾ ಮರಣ ಸಂಭವಿಸಿದ ಪ್ರದೇಶದ ವ್ಯಾಪ್ತಿಯ ಜನನ ಮತ್ತು ಮರಣ ನೋಂದಣಾಧಿಕಾರಿಯವರಿಗೆ ನೀಡಬೇಕಾಗುತ್ತದೆ.
  3. ಯಾವುದೇ ಜನನ ಅಥವಾ ಮರಣವು ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಯಲ್ಲಿ ಸಂಭವಿಸಿದಲ್ಲಿ ಸಂಬಂಧಪಟ್ಟ ಆಸ್ಪತ್ರೆಯ ವೈದ್ಯಾಧಿಕಾರಿಯು ನಿಗದಿತ ನಮೂನೆಯಲ್ಲಿ ವರದಿಯನ್ನು ಸಂಬಂಧಪಟ್ಟ ವ್ಯಾಪ್ತಿಯ ಜನನ ಮತ್ತು ಮರಣ ನೋಂದಣಾಧಿಕಾರಿಯವರಿಗೆ ಆಯಾ ತಿಂಗಳ 10ನೇ ತಾರೀಕಿನ ಒಳಗಾಗಿ ನೀಡಬೇಕಾಗುತ್ತದೆ. ಅದೇ ಪ್ರಕಾರ ಜನನ ಅಥವಾ ಮರಣವು ಯಾವುದೇ ಮನೆಯಲ್ಲಿ ಸಂಭವಿಸಿದಲ್ಲಿ ಈ ಬಗ್ಗೆ ಸೂಕ್ತ ಮಾಹಿತಿಯನ್ನು ಸಂಬಂಧಪಟ್ಟ ಮನೆಯ ಯಜಮಾನ ಅಥವಾ ಮನೆಯ ಸದಸ್ಯರ ಪೈಕಿ ಯಾರಾದರೂ ಸಂಬಂಧಪಟ್ಟ ಪ್ರದೇಶದ ಅಥವಾ ವ್ಯಾಪ್ತಿಯ ಜನನ ಮತ್ತು ಮರಣ ನೋಂದಣಾಧಿಕಾರಿಯವರಿಗೆ ನೇರವಾಗಿ ಮೂವತ್ತು ದಿನಗೊಳಗಾಗಿ ತಿಳಿಸಿ ನೋಂದಾಯಿಸಿ ಈ ಬಗ್ಗೆ ಸೂಕ್ತ ಜನನ ಅಥವಾ ಮರಣ ಪ್ರಮಾಣ ಪತ್ರವನ್ನು ಅವರಿಂದ ಪಡೆಯಬಹುದಾಗಿದೆ.
  4. ಒಂದು ವೇಳೆ ನಿಗದಿತ ವಾಯ್ದೆ ಅಂದರೆ ಮೂವತ್ತು ದಿವಸಗಳ ಒಳಗಾಗಿ ಜನನ ಅಥವಾ ಮರಣದ ಮಾಹಿತಿಯನ್ನು ಮೇಲ್ಕಾಣಿಸಿದಂತೆ ವರದಿ ಮಾಡಿ ನೋಂದಾಯಿಸಿಕೊಳ್ಳಲು ಸಾಧ್ಯವಾಗದಿದ್ದಲ್ಲಿ ಜನನ ಅಥವಾ ಮರಣದ ದಿನಾಂಕದ ಒಂದು ವರ್ಷದ ಅವಧಿಯೊಳಗಾಗಿ ತಡ ಶುಲ್ಕವನ್ನು ಸಂದಾಯ ಮಾಡಿ ನೋಂದಾಯಿಸಿ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ. ಆದರೆ ಜನನ ಅಥವಾ ಮರಣ ಸಂಭವಿಸಿದ ಒಂದು ವರ್ಷದ ಅವಧಿಯ ನಂತರ ಜನನ ಅಥವಾ ಮರಣದ ವಿವರವನ್ನು ನೇರವಾಗಿ ನೋಂದಾಯಿಸುವ ಅಧಿಕಾರವನ್ನು ಯಾವುದೇ ಜನನ ಅಥವಾ ಮರಣ ನೋಂದಾಣಾಧಿಕಾರಿಯವರು ಹೊಂದಿರುವುದಿಲ್ಲ. ಈ ಸಂದರ್ಭದಲ್ಲಿ ಸಂಬಂಧಪಟ್ಟ ವ್ಯಾಪ್ತಿಯ ಮ್ಯಾಜೆಸ್ಟ್ರೆಟ್‌ರ ಅನುಮತಿಯ ಅಗತ್ಯವಿರುತ್ತದೆ.
  5. ಯಾವುದೇ ಮಗುವಿನ ಜನನ ವಿವರದ ನೋಂದಣಿ ಸಂದರ್ಭದಲ್ಲಿ ಸಂಬಂಧಪಟ್ಟ ರಿಜಿಸ್ತ್ರಿಯಲ್ಲಿ ಮಗುವಿನ ಹೆಸರು ನಮೂದಾಗದೇ ಉಳಿದು ಕೊಂಡಲ್ಲಿ ಅಂತಹ ಮಗುವಿನ ತಂದೆ, ತಾಯಿ ಅಥವಾ ಪಾಲಕರು ಮಗುವಿನ ಜನನದ ನೋಂದಣಿ ದಿನಾಂಕದಿಂದ ಹನ್ನೆರಡು ತಿಂಗಳೊಳಗೆ ಆ ಮಗುವಿನ ಹೆಸರನ್ನು ಸಂಬಂಧಪಟ್ಟ ನೋಂದಾಣಾಧಿಕಾರಿಯವರಿಗೆ ಮೌಖಿಕವಾಗಿ ಅಥವಾ ಲಿಖಿತವಾಗಿ ತಿಳಿಸಿ ಮಗುವಿನ ಹೆಸರನ್ನು ಜನನ ರಿಜಿಸ್ತ್ರಿಯಲ್ಲಿ ನಮೂದಿಸಿ ಪರಿಷ್ಕೃತ ಜನನ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ.
  6. ಒಂದು ವೇಳೆ ನಿಗದಿತ ವಾಯ್ದೆಯೊಳಗಾಗಿ ಮಗುವಿನ ಹೆಸರನ್ನು ನೋಂದಾಯಿಸದಿದ್ದಲ್ಲಿ ಮಗುವಿನ ಹೆಸರನ್ನು ಮಗು ಜನಿಸಿದ ಹನ್ನೆರಡು ತಿಂಗಳ ನಂತರ ಆದರೆ ಹದಿನೈದು ವರ್ಷಗೊಳಗಾಗಿ ಐದು ರೂಪಾಯಿ ತಡ ಶುಲ್ಕದೊಂದಿಗೆ ಸಂಬಂಧಪಟ್ಟ ಜನನ ರಿಜಿಸ್ತ್ರಿಯಲ್ಲಿ ನೋಂದಣಾಧಿಕಾರಿಯು ನೋಂದಾಯಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಸಂಬಂಧಪಟ್ಟ ಜನನ ರಿಜಿಸ್ಟರ್ (ವಹಿ) ಸಂಬಂಧಪಟ್ಟ ಜನನ ನೋಂದಣಾಧಿಕಾರಿಯ ವಶದಲ್ಲಿ ಇರದಿದ್ದರೆ ವರದಿ ಪಡೆದ ನೋಂದಣಾಧಿಕಾರಿಯು ಮಾಹಿತಿದಾರರಿಂದ ಐದು ರೂಪಾಯಿ ತಡ ಶುಲ್ಕವನ್ನು ಪಡೆದು ಆವಶ್ಯಕ ನಮೂದನ್ನು ಮಾಡುವುದಕ್ಕಾಗಿ ಸಂದರ್ಭಾನುಸಾರ ತಹಶೀಲ್ದಾರರಿಗೆ ಅಥವಾ ಆಯಾ ಮುನಿಸಿಪಾಲಿಟಿಯ ಮುಖ್ಯಾಧಿಕಾರಿಗೆ ಅಥವಾ ಕಮೀಷನ್‌ರಿಗೆ ಕಳುಹಿಸಬೇಕಾಗುತ್ತದೆ.
  7. ಜನನ ಮತ್ತು ಮರಣ ರಿಜಿಸ್ತಿçಯ ನಮೂದುಗಳ ಪೈಕಿ ಯಾವುದೇ ಬರವಣಿಗೆ ಅಥವಾ ಔಪಚಾರಿಕ ತಪ್ಪು ಸಂಬಂಧಪಟ್ಟ ಜನನ ಅಥವಾ ಮರಣ ನೋಂದಣಾಧಿಕಾರಿಯ ಗಮನಕ್ಕೆ ತಂದಲ್ಲಿ ಅಂತಹ ತಪ್ಪನ್ನು ತಿದ್ದುವ ಅಥವಾ ರದ್ದುಗೊಳಿಸುವ ಅಧಿಕಾರವನ್ನು ಸಂಬಂಧಪಟ್ಟ ಜನನ ಮತ್ತು ಮರಣ ನೋಂದಾಣಾಧಿಕಾರಿ ಹೊಂದಿರುತ್ತಾರೆ. ಈ ಕುರಿತು ನೋಂದಾಣಾಧಿಕಾರಿಯು ತನ್ನ ಅಧಿಕಾರವನ್ನು ಚಲಾಯಿಸಲು ಯಾವುದೇ ನಿರ್ದಿಷ್ಟ ವಾಯ್ದೆ ಅಥವಾ ಅವಧಿಯ ಮಿತಿ ಇರುವುದಿಲ್ಲ.










































error: Content is protected !!
Scroll to Top