ನಕ್ಸಲ್‌ ಶರಣಾಗತಿ ಬಗ್ಗೆ ಸುನಿಲ್‌ ಕುಮಾರ್‌ ಸರಣಿ ಪ್ರಶ್ನೆ

ಕಾರ್ಕಳ : ನಕ್ಸಲ್ ಶರಣಾಗತಿ ವಿಚಾರದಲ್ಲಿ ಪ್ರಶ್ನೆಗಳಿವೆ. ಪ್ರಶ್ನಿಸುತ್ತೇವೆ. ಉತ್ತರಿಸಬೇಕಾದವರಿಗೆ ಉತ್ತರದಾಯಿತ್ವ ಇದೆ ಎಂದು ಭಾವಿಸಿದ್ದೇನೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ, ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಮೊದಲನೆಯದಾಗಿ ಈ ನಕ್ಸಲ್ ಶರಣಾಗತಿ ಡ್ರಾಮಾ ಇಷ್ಟು ಕ್ಷಿಪ್ರವಾಗಿ ಅಂತ್ಯ ಕಂಡಿದ್ದು ಹೇಗೆ ? ಇದ್ದಕ್ಕಿದ್ದಂತೆ ಸಿದ್ದರಾಮಯ್ಯ ಸ್ವಯಂ ಪ್ರೇರಿತವಾಗಿ ಕೊಟ್ಟ ಕರೆಗೆ ನಕ್ಸಲರು ಇಷ್ಟು ವೇಗವಾಗಿ ಸ್ಪಂದಿಸುತ್ತಾರೆಂದರೆ ಇದೊಂದು ಪೂರ್ವ ಯೋಜಿತ ಸ್ಟೇಜ್ ಶೋ ಅಲ್ಲವೇ ?
ನಕ್ಸಲರೇನೋ ಶರಣಾದರು, ಆದರೆ ಅವರ ಬಳಿ ಇದ್ದ ಬಂದೂಕುಗಳು ಏನಾದವು ? ಶರಣಾಗತಿ ಪ್ರಕ್ರಿಯೆ ಎಂದರೆ ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಬೇಕಲ್ಲವೇ ? ಇಲ್ಲೇಕೆ ಈ ನಿಯಮ ಪಾಲಿಸಿಲ್ಲ ? ಹಾಗಾದರೆ ಈ ಶಸ್ತ್ರಾಸ್ತ್ರಗಳನ್ನು ಯಾರಿಗೆ ನೀಡಲಾಗಿದೆ ? ಬೇಕಾಬಿಟ್ಟಿ ಕಾಡಿನಲ್ಲಿ ಎಸೆದು ಬರಲು ಸಾಧ್ಯವಿಲ್ಲ. ಹಾಗಾದರೆ ಯಾವ ನಗರ ನಕ್ಸಲರ ಮನೆಯಲ್ಲಿ ಈ ಬಂದೂಕುಗಳನ್ನು ಗುಬ್ಬಿಗೂಡು ಕಟ್ಟುವುದಕ್ಕೆ ಇಟ್ಟಿದ್ದೀರಿ ?
ನಕ್ಸಲ್ ವಿಕ್ರಮ್ ಗೌಡ ಎನ್ಕೌಂಟರ್ ಬಗ್ಗೆ ಈಗ ಅನುಮಾನ ಹೆಚ್ಚಿದೆ. ಆತ ಶರಣಾಗತಿ ಪ್ಯಾಕೇಜ್ ಬಗೆ ವಿರೋಧ ವ್ಯಕ್ತಪಡಿಸಿದ್ದ. ಹೀಗಾಗಿ ಶರಣಾಗತಿ ಪ್ರಹಸನದ ರೂವಾರಿಗಳೇ ವಿಕ್ರಮ್ ಗೌಡನ ಇರುವಿಕೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರಲೂಬಹುದಲ್ಲವೇ ? ಹೀಗಾಗಿ ಈ ಬಗ್ಗೆ ತನಿಖೆ ಅನಿವಾರ್ಯ. ಕರ್ನಾಟಕ ನಕ್ಸಲ್ ಚಳುವಳಿಯಿಂದ ಮುಕ್ತ ವಾಗಿದೆ ಎಂದು ಸರಕಾರ ಯಾವ ಮಾನದಂಡದ ಆಧಾರದಿಂದ ಹೇಳುತ್ತಿದೆ ? ಈ ಬಗ್ಗೆ ಎಎನ್ಎಫ್ ಕಮಾಂಡರ್ ಅಥವಾ ಪೊಲೀಸ್ ಮಹಾನಿರ್ದೇಶಕರು ಅಧಿಕೃತ ಘೋಷಣೆ ಮಾಡಬಲ್ಲರೇ ?
ಅದೇ ರೀತಿ ಅರಣ್ಯದಂಚಿನ ನಿವಾಸಿಗಳ ಪುನರ್ವಸತಿಗೆ ರಾಜ್ಯ ಸರಕಾರ ಇದುವರೆಗೆ ಎಷ್ಟು ಹಣ ಖರ್ಚು ಮಾಡಿದೆ ಎಂಬುದನ್ನೂ ಸ್ಪಷ್ಟಪಡಿಸಿ ಎಂದು ಸುನಿಲ್‌ ಕುಮಾರ್‌ ಆಗ್ರಹಿಸಿದ್ದಾರೆ.







































error: Content is protected !!
Scroll to Top