ಉಡುಪಿ : ಕಳೆದ ನಾಲ್ಕು ದಶಕಗಳಿಂದ ಕರಾವಳಿ ಭಾಗದಲ್ಲಿ ನಡೆದಿರುವ ಎಂಡೋಸಲ್ಫಾನ್ ದುರಂತದಲ್ಲಿ ಅಂಗವಿಕಲ ಹಾಗೂ ವಿಶೇಷಚೇತನರಾಗಿ ಬಳಲುತ್ತಿರುವ ಹೆಣ್ಣು ಮಕ್ಕಳಿಗಾಗಿ ಸೇವಾಶ್ರಮವೊಂದನ್ನು ಸ್ಥಾಪಿಸಲು ಕಾರ್ಕಳ ತಾಲೂಕು ಬೈಲೂರಿನ ಹೊಸಬೆಳಕು ಟ್ರಸ್ಟ್ ನಿರ್ಧರಿಸಿದೆ.
ಈ ಬಗ್ಗೆ ಜ. 10ರಂದು ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಹೊಸಬೆಳಕು ಸಂಸ್ಥೆಯ ಮುಖ್ಯಸ್ಥೆ ತನುಲಾ ಮಾತನಾಡಿ, ಜ. 12ರ ಬೆಳಗ್ಗೆ 9.30 ಬೈಲೂರಿನ ಹೊಸಬೆಳಕು ಟ್ರಸ್ಟ್ ನ ಪಕ್ಕದ ಜಾಗದಲ್ಲಿ ನೂತನ ಕಟ್ಟಡಕ್ಕೆ ಭೂಮಿ ಪೂಜೆ ನಡೆಯಲಿದೆ. ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಮಾನವ ಹಕ್ಕುಗಳ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ್ ಶ್ಯಾನುಭಾಗ್, ಮನೋವೈದ್ಯ ಡಾ. ಪಿ. ವಿ. ಭಂಡಾರಿ ಭಾಗವಹಿಸಲಿದ್ದಾರೆ ಎಂದರು. ಎಂಡೋಸಲ್ಫಾನ್ ಪೀಡಿತ ಹೆಣ್ಣುಮಕ್ಕಳು ಸುಮಾರು 10 ರಿಂದ 40 ವರ್ಷದೊಳಗಿನವರಾಗಿದ್ದು, ಕೆಲವರು ಹೆತ್ತವರನ್ನು ಕಳೆದುಕೊಂಡಿದ್ದಾರೆ. ಅವರಲ್ಲಿ 80% ಕ್ಕೂ ಅಧಿಕ ಅಂಗವಿಕಲತೆಯುಳ್ಳ ಹೆಣ್ಣುಮಕ್ಕಳು ಮಲಗಿದ್ದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಇಂತಹವರೇ ಸುಮಾರು 900 ಮಂದಿ ಸಂತ್ರಸ್ತರಿದ್ದಾರೆ. ಹೀಗಾಗಿ ಹೊಸಬೆಳಕು ಸಂಸ್ಥೆಯಲ್ಲಿ 150 ಹೆಣ್ಣು ಮಕ್ಕಳಿಗಾಗಿ ಪುನರ್ವಸತಿ ಸೇವಾಶ್ರಮವನ್ನು ಸ್ಥಾಪಿಸಲು ಮುಂದಾಗಿದ್ದೇವೆ. ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಸಹಿತ ಅನೇಕ ಸಾರ್ವಜನಿಕ ಹಿತಾಸಕ್ತಿ ಸಂಸ್ಥೆಗಳು ಈ ಯೋಜನೆಯ ಬೆಂಬಲಕ್ಕೆ ನಿಂತಿವೆ ಎಂದರು.
ಎಂಡೋಸಲ್ಫಾನ್ ಸಂತ್ರಸ್ತರು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಅರ್ಹರಾಗಿದ್ದು, 150 ಮಂದಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಹೀಗಾಗಿ 80% ಅಧಿಕ ಅಂಗವಿಕಲತೆ ಹೊಂದಿದ ಮತ್ತು ಸಂಪೂರ್ಣ ಅಸಹಾಯಕ ಸ್ಥಿತಿಯಲ್ಲಿರುವ ಸಂತ್ರಸ್ತರಿಗೆ ಪ್ರಾಶಸ್ತ್ಯ ನೀಡಲಾಗುತ್ತದೆ. ಇವರ ಆಯ್ಕೆಗಾಗಿ ಸರಕಾರಿ ವೈದ್ಯರನ್ನೂ ಒಳಗೊಂಡಂತೆ ಪರಿಣಿತರ ಸಮಿತಿಯನ್ನು ರೂಪಿಸಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಕಾರ್ಯದರ್ಶಿ ಅನುರಾಗ್ ಕಿಣಿ, ಟ್ರಸ್ಟಿಗಳಾದ ಅನಿಲ್ ದೇವಾಡಿಗ, ಪ್ರಮುಖರಾದ ರಮೇಶ್ ಶೆಣೈ, ಸ್ವಾತಿ, ನಂದನ್, ಮುರುಳಿಧರ ಉಪಸ್ಥಿತರಿದ್ದರು.




















