ಮಾಳ : ಗುರುಕುಲ ಶಾಲೆ ಅಮೃತ ಮಹೋತ್ಸವದ ಪೂರ್ವಭಾವಿ ಸಭೆ

ಕಾರ್ಕಳ : ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇದರ ಅಮೃತ ಮಹೋತ್ಸವದ ಪೂರ್ವಭಾವಿ ಸಭೆ
ಡಿ. 29ರಂದು ಜರುಗಿತು. ಶೈಕ್ಷಣಿಕ ಕ್ಷೇತ್ರದಲ್ಲಿ 2025ನೇ ಇಸವಿಯಲ್ಲಿ 75 ವಸಂತಗಳನ್ನು ಪೂರೈಸುತ್ತಿರುವ ಗುರುಕುಲ ಶಾಲೆಯ ಅಮೃತ ಮಹೋತ್ಸವವನ್ನು ಈ ವರ್ಷದ ಡಿಸೆಂಬರ್ 26 ಮತ್ತು 27ರಂದು ನಡೆಸುವುದೆಂದು ನಿರ್ಧರಿಸಲಾಯಿತು.
ವಿದೇಶಗಳಲ್ಲಿ ನೆಲೆಸಿರುವ ಶಾಲಾ ಹಳೆ ವಿದ್ಯಾರ್ಥಿಗಳು ಮತ್ತು ಸ್ಥಳೀಯರು ಭಾಗವಹಿಸಿದ ಈ ಸಭೆಯಲ್ಲಿ ವಿವಿಧ ಸಮಿತಿಗಳ ರಚನೆ, ಹಳೆ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹ, ಅಮೃತ ಮಹೋತ್ಸವದ ಸ್ಮಾರಕ ಕಟ್ಟಡ ನಿರ್ಮಾಣ, ವರ್ಷಪೂರ್ತಿ ಆಚರಿಸುವ ಕಾರ್ಯಕ್ರಮಗಳ ರೂಪುರೇಷೆಗಳನ್ನು ಚರ್ಚಿಸಲಾಯಿತು.
ಶ್ರೀ ಗುರುಕುಲ ವಿದ್ಯಾವರ್ಧಕ ಸಂಘದ ಗೌರವ ಸಲಹೆಗಾರ ನಾಗಭೂಷಣ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಅಧ್ಯಕ್ಷ ಗಜಾನನ ಮರಾಠೆ ಕಾರ್ಯದರ್ಶಿ ಗೀತಾ ಸೇರಿಗಾರ್, ಮುಖ್ಯಶಿಕ್ಷಕಿ ಪೂರ್ಣಿಮಾ ಶೆಣೈ, ನೆಕ್ಸ್ಟ್ ಜನರೇಷನ್ ಸಂಸ್ಥೆಯ ಅಧ್ಯಕ್ಷ ಗುರುರಾಜ್ ಹೆಗಡೆ ಉಪಸ್ಥಿತರಿದ್ದರು.
ಶಾಲಾ ಮಕ್ಕಳಿಗೆ ಕಳೆದ ಎರಡು ವರ್ಷಗಳಿಂದ ಉಚಿತವಾಗಿ ವೇದಗಣಿತ ಮತ್ತು ಅಬಾಕಸ್ ತರಗತಿಗಳನ್ನು ನಡೆಸಿಕೊಡುತ್ತಿರುವ ಗುರುರಾಜ ಹೆಗಡೆ ಮತ್ತು ಲಕ್ಷ್ಮೀ ಗುರುರಾಜ ಹೆಗಡೆ ಅವರನ್ನು ಗೌರವಿಸಲಾಯಿತು. ಇತ್ತೀಚೆಗೆ ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನಡೆದ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ವಿಜೇತರಾದ ಗುರುಕುಲ ಶಾಲೆಯ ವಿದ್ಯಾರ್ಥಿಗಳಾದ ಅಪೇಕ್ಷಾ ಕಾಮತ್, ಸಮೃದ್ಧಿ ಬರ್ವೆ, ಮನ್ವಿತ್ ಜೋಶಿ ಅವರನ್ನು ಅಭಿನಂದಿಸಲಾಯಿತು. ಇತ್ತೀಚಿಗೆ ಅನುದಾನ ರಹಿತ ಶಾಲೆಗಳ ಸಂಘದಿಂದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಗುರುಕುಲ ಶಾಲಾ ಅಧ್ಯಕ್ಷ ಗಜಾನನ ಮರಾಠೆ ದಂಪತಿಯನ್ನು ಗೌರವಿಸಲಾಯಿತು.
ಇತ್ತೀಚೆಗೆ ನಿಧನರಾದ ಶಾಲೆಯ ಮಹಾ ಪೋಷಕರಾದ ಮರಾಠೆ ಮಿಲ್ಕ್ ಪ್ರಾಡಕ್ಟ್ಸ್ ನ ಮಾಲೀಕ ಗೋವಿಂದ ಮರಾಠೆ ಇವರಿಗೆ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ರಘುಪತಿ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ರಾಮ ಸೇರಿಗಾರ್ ವಂದಿಸಿದರು.





























































































































error: Content is protected !!
Scroll to Top