ಚೆಕ್ ಬೌನ್ಸ್ (ಅಮಾನ್ಯತೆ) ಪ್ರಕರಣಗಳನ್ನು ಅತ್ಯಂತ ಶೀಘ್ರವಾಗಿ ಮತ್ತು ಪರಿಣಾಮಕಾರಿಯಾಗಿ ಇತ್ಯರ್ಥಗೊಳಿಸುವ ಉದ್ದೇಶದಿಂದ ಹಳೆಯದಾದ ಕಾನೂನುಗಳ ಪೈಕಿ ಒಂದಾಗಿರುವ ವರ್ಗಾವಣೀಯ ಲಿಖಿತಪತ್ರಗಳ ಅಧಿನಿಯಮ, 1881 (ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ ಆಕ್ಟ್ 1881) ಎಂಬ ಕಾನೂನಿನ ಕೆಲವು ಪ್ರಮುಖ ಅಂಶಗಳನ್ನು 1988ರಲ್ಲಿ ಮತ್ತು 2003ರಲ್ಲಿ ತಿದ್ದುಪಡಿಗೊಳಿಸಲಾಗಿರುತ್ತದೆ. ಈ ರೀತಿಯಾಗಿ ಸಾರ್ವಜನಿಕ ಕ್ಷೇತ್ರದಲ್ಲ್ರಿ ಅದರಲ್ಲೂ ವಾಣಿಜ್ಯ ಕ್ಷೇತ್ರದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಚಾಲ್ತಿಯಲ್ಲಿರುವ ಮೇಲ್ಕಾಣಿಸಿದ ಕಾನೂನಿನ ಕಲಂ 138 ಕೆಲವು ಪ್ರಮುಖ ಅಂಶಗಳನ್ನು ಒಳಗೊಂಡಿರುತ್ತದೆ.
ಸೂಕ್ತ ಪ್ರತಿಫಲಕ್ಕಾಗಿ ಚೆಕ್ಕನ್ನು ಹೊಂದಿರುವ ವ್ಯಕ್ತಿ ನಿಗದಿತ ಅವಧಿಯೊಳಗಾಗಿ ಚೆಕ್ಕನ್ನು ನಗದೀಕರಣಕ್ಕಾಗಿ ಹಾಜರುಪಡಿಸಿದಾಗ ಚೆಕ್ಕು ಅಮಾನ್ಯಗೊಂಡಲ್ಲಿ ಕೂಡಲೆ ಅಂದರೆ 30 ದಿವಸಗಳ ಒಳಗಾಗಿ ಚೆಕ್ಕು ನೀಡಿದ ವ್ಯಕ್ತಿಗೆ ವಿಷಯವನ್ನು ಲಿಖಿತವಾಗಿ ತಿಳಿಸಬೇಕಾಗಿರುತ್ತದೆ. ಈ ರೀತಿಯಾಗಿ ಲಿಖಿತ ಪತ್ರ ಅಥವಾ ನೋಟೀಸು ಪಡೆದ ವ್ಯಕ್ತಿ 15 ದಿನಗಳ ಒಳಗಾಗಿ ಚೆಕ್ಕಿನ ಮೊತ್ತವನ್ನು ಚೆಕ್ಕು ಹೊಂದಿರುವ ವ್ಯಕ್ತಿಗೆ ಪಾವತಿಸಿಲು ವಿಫಲನಾದಲ್ಲಿ ಅಂತಹ ವ್ಯಕ್ತಿಯ ವಿರುದ್ಧ 1 ತಿಂಗಳ ಅವಧಿಯ ಒಳಗಾಗಿ ದೂರನ್ನು ಚೆಕ್ಕು ಹೊಂದಿರುವ ವ್ಯಕ್ತಿಯು ಸಂಬಂಧಪಟ್ಟ ನ್ಯಾಯಾಲಯಕ್ಕೆ ದಾಖಲು ಮಾಡಬೇಕಾಗುತ್ತದೆ. ಒಂದು ವೇಳೆ ಯಾವುದಾದರೂ ಸಕಾರಣದಿಂದ ನಿಗದಿತ ವಾಯಿದೆಯೊಳಗಾಗಿ ದೂರನ್ನು ಸಲ್ಲಿಸಲು ಆಗದಿದ್ದಲ್ಲಿ ದೂರುದಾರ ತನ್ನ ದೂರನ್ನು ಸಲ್ಲಿಸುವಲ್ಲಿ ಆದ ವಿಳಂಬವನ್ನು ಮನ್ನಾ ಮಾಡಿ ದೂರನ್ನು ಪರಿಗಣಿಸುವಂತೆ ಕೋರಿ ನ್ಯಾಯಾಲಯಕ್ಕೆ ತನ್ನ ಅಫಿದಾವಿತ್‌ನೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಚೆಕ್ಕು ನೀಡಿದ ವ್ಯಕ್ತಿಯು ತನ್ನ ಬ್ಯಾಂಕ್ ಖಾತೆಯನ್ನು ಮುಚ್ಚಿದಾಗ, ಅಥವಾ ತನ್ನಿಂದ ಚೆಕ್ಕು ಪಡೆದಾತನಿಗೆ ಯಾವುದೇ ಮುನ್ಸೂಚನೆ ನೀಡದೆ ಚೆಕ್ಕಿಗೆ ಸಂಬಂಧಪಟ್ಟಂತೆ ಹಣ ಪಾವತಿ ತಡೆ ಹಿಡಿದಾಗ ಮೇಲ್ಕಾಣಿಸಿದ ಕಾನೂನಿನನ್ವಯ ಸಂಬಂಧಪಟ್ಟ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರಗಿಸಬಹುದಾಗಿದೆ. ಆದರೆ ಚೆಕ್ಕು ಬರೆದವನ ಸಹಿಯಲ್ಲಿ ವ್ಯತ್ಯಾಸವಿದ್ದಾಗ, ಚೆಕ್ಕಿನ ಮೇಲೆ ನಮೂದಿಸಿದ ತಾರೀಖು ಮತ್ತು ಇತರ ಅಕ್ಷರಗಳಲ್ಲಿ ವ್ಯತ್ಯಾಸವಿದ್ದಾಗ ಮತ್ತು ಚೆಕ್ಕಿನ ಮೇಲೆ ನಮೂದಿಸಿದ ಬ್ಯಾಂಕ್ ಆಸ್ತಿತ್ವದಲ್ಲಿ ಇಲ್ಲದಿರುವ ಸಂದರ್ಭಗಳಲ್ಲಿ ಚೆಕ್ಕ್ ನೀಡಿದ ವ್ಯಕ್ತಿಯ ವಿರುದ್ಧ ಮೇಲ್ಕಾಣಿಸಿದ ಕಾನೂನಿನ ಪ್ರಕಾರ ಕಾನೂನು ಕ್ರಮ ಜರುಗಿಸಲು ಅವಕಾಶವಿರುವುದಿಲ್ಲ. ಆದರೆ ಇಂತಹ ಸಂದರ್ಭಗಳಲ್ಲಿ ಚೆಕ್ಕನ್ನು ನೀಡಿದ ವ್ಯಕ್ತಿಯ ವಿರುದ್ಧ ಮೋಸ ಮತ್ತು ವಂಚನೆಯ ಅಪರಾಧಕ್ಕಾಗಿ ಭಾರತೀಯ ನ್ಯಾಯ ಸಂಹಿತೆಯ ಪ್ರಕಾರ ಕ್ರಿಮಿನಲ್ ಪ್ರಕರಣ ಮತ್ತು ಚೆಕ್ಕಿನ ಹಣ ವಸೂಲಾತಿಗಾಗಿ ಸಂಬಂಧಪಟ್ಟ ಸಿವಿಲ್ ನ್ಯಾಯಾಲಯದಲ್ಲಿ ಸಿವಿಲ್ ದಾವೆಯನ್ನು ಹೂಡಬಹುದಾಗಿದೆ.

ಚೆಕ್ಕು ಅಮಾನ್ಯಗೊಂಡ ಸಂದರ್ಭದಲ್ಲಿ ಚೆಕ್ಕು ಹೊಂದಿರುವಾತ ಚೆಕ್ಕು ನೀಡಿದ ವ್ಯಕ್ತಿಗೆ ನೀಡಿದ ನೋಟಿಸಿಗೆ ಅಗತ್ಯವಾಗಿ ಉತ್ತರ ನೀಡಲೇಬೇಕು. ಏಕೆಂದರೆ ತಾನು ಪಡೆದ ನೋಟಿಸಿಗೆ ಉತ್ತರ ಕೊಡದೆ ಇದ್ದಾಗ ಮುಂದೆ ಚೆಕ್ಕು ಅಮಾನ್ಯತೆಯ ವಿಷಯದಲ್ಲಿ ಮತ್ತು ಚೆಕ್ಕಿಗೆ ಸಂಬಂಧಪಟ್ಟಂತೆ ಅದರ ನೈಜತೆ ಮತ್ತು ಪ್ರತಿಫಲ ಕುರಿತಂತೆ ಇನ್ನಿತರ ವಿಷಯಗಳಲ್ಲಿ ಚೆಕ್ಕು ಹೊಂದಿದ ವ್ಯಕ್ತಿಯು ನೀಡಿದ ನೋಟೀಸಿನಲ್ಲಿ ತಿಳಿಸಿದ ಅಂಶಗಳ ವಿಚಾರದಲ್ಲಿ ಪೂರ್ವ ಭಾವನೆಯು ನೋಟೀಸು ನೀಡಿದ ವ್ಯಕ್ತಿಯ ಪರವಾಗಿರುತ್ತದೆ, ಮತ್ತು ನೋಟೀಸು ಪಡೆದಾತನಿಗೆ ನಂತರ ಚೆಕ್ಕಿನ ವಿರುದ್ಧ ತನ್ನ ವಾದವನ್ನು ಸಮರ್ಥಿಸಿಕೊಳ್ಳಲು ಅಸಾಧ್ಯವಾಗಬಹುದು. ಅಲ್ಲದೆ ಚೆಕ್ಕಿನ ಧಾರಕನು ನೀಡಿರುವ ನೋಟಿಸಿನಲ್ಲಿರುವ ಅಂಶಗಳನ್ನು ಸಂಪೂರ್ಣವಾಗಿ ಒಪ್ಪಿಕೊಂಡಂತೆ ಎನ್ನುವ ಪೂರ್ವ ಭಾವನೆ ಮೂಡುತ್ತದೆ. ಉತ್ತರವನ್ನು ನಿರ್ದಿಷ್ಟಪಡಿಸಿದ ಅವಧಿಯೊಳಗೆ ಅಂದರೆ 15 ದಿನಗಳೊಳಗಾಗಿ ನೀಡಬೇಕಾಗುತ್ತದೆ. ಚೆಕ್ಕು ಅಮಾನ್ಯಕ್ಕೆ ಕಾರಣಕರ್ತನಾದ ವ್ಯಕ್ತಿಯ ವಿರುದ್ಧ ಚೆಕ್ಕು ಬರೆದ ಸ್ಥಳದ ಸರಹದ್ದಿನ ನ್ಯಾಯಾಲಯ, ಚೆಕ್ಕನ್ನು ನಗದೀಕರಣಕ್ಕಾಗಿ ಹಾಜರುಪಡಿಸಲಾದ ಸ್ಥಳದ ಸರಹದ್ದಿನ ನ್ಯಾಯಾಲಯ, ಚೆಕ್ಕು ಬ್ಯಾಂಕ್‌ನಿಂದ ಹಿಂತಿರುಗಿ ಬಂದ ಸ್ಥಳದ ಸರಹದ್ದಿನ ನ್ಯಾಯಾಲಯ, ಚೆಕ್ಕನ್ನು ಹೊಂದಿದ ವ್ಯಕ್ತಿಯು ಚೆಕ್ಕು ನೀಡಿದಾತನಿಗೆ ಹಣಪಾವತಿಸುವಂತೆ ಲಿಖಿತವಾಗಿ ನೋಟಿಸನ್ನು ಹೊರತುಡಿಸಿ ಸ್ಥಳದ ಸರಹದ್ದಿನ ನ್ಯಾಯಾಲಯ ಮತ್ತು ಚೆಕ್ಕು ಬರೆದವನು ನೋಟಿಸು ತಲುಪಿದ 15 ದಿನಗಳ ಒಳಗಾಗಿ ಎಲ್ಲಿ ಹಣವನ್ನು ಪಾವತಿಸಲು ವಿಫಲನಾಗಿದ್ದಾನೋ ಅಲ್ಲಿಯ ಸರಹದ್ದಿನ ನ್ಯಾಯಾಲಯ ಈ ರೀತಿಯಾಗಿ ಒಟ್ಟು 5 ಸರಹದ್ದಿನ ನ್ಯಾಯಾಲಯಗಳಲ್ಲಿ ಚೆಕ್ಕು ಅಮಾನ್ಯ ಮಾಡಿದ ವ್ಯಕ್ತಿಯ ವಿರುದ್ಧ ದೂರನ್ನು ದಾಖಲಿಸಿ ಸೂಕ್ತ ಪರಿಹಾರಗಳನ್ನು ಅಂದರೆ ಚೆಕ್ಕಿನ ಮೊತ್ತದ ಹಣದ ವಸೂಲಾತಿ, ಅದರ ಮೇಲಿನ ಬಡ್ಡಿ, ಆರೋಪಿಗೆ ಅಂದರೆ ಚೆಕ್ಕು ಅಮಾನ್ಯವಾಗಲು ಕಾರಣಕರ್ತನಾದ ವ್ಯಕ್ತಿಗೆ ನ್ಯಾಯಾಲಯದಿಂದ ಸೂಕ್ತ ಶಿಕ್ಷೆ ಮತ್ತು ದಂಡನೆ ಇತ್ಯಾದಿಗಳ ಕುರಿತು ಆದೇಶವನ್ನು ಪಡೆಯಬಹುದಾಗಿದೆ.
ಮುಚ್ಚಲಾದ ಖಾತೆಯಿಂದ ಚೆಕ್ಕನ್ನು ನೀಡಿದಾಗ ಸದರಿ ಖಾತೆ ಮುಚ್ಚಲಾದುದಕ್ಕೆ ಸೂಕ್ತವಿವರಣೆಯನ್ನು ಆರೋಪಿತನು ನೀಡದಿದ್ದಾಗ ಕಲಂ 138 ರಡಿಯಲ್ಲಿ ಶಿಕ್ಷೆಗೆ ಅರ್ಹನಾಗಿರುತ್ತಾನೆ. ಕಂಪನಿಯ ಮ್ಯಾನೇಜರನು, ದೂರನ್ನು ದಾಖಲು ಮಾಡುವ ಕಾಲದಲ್ಲಿ ಯುಕ್ತವಾದ ಅಧಿಕಾರವನ್ನು ಹೊಂದಿರದಿದ್ದರೆ ದೂರನ್ನು ನ್ಯಾಯಾಲಯಕ್ಕೆ ದಾಖಲು ಮಾಡಲು ಬರುವುದಿಲ್ಲ. ಸಂಪೂರ್ಣ ಚೆಕ್ಕನ್ನು ಚೆಕ್ಕು ನೀಡಿದಾತನೇ ಬರೆಯಬೇಕೆಂದೇನೂ ಇಲ್ಲ. ಚೆಕ್ಕು ನೀಡಿದಾತನ ಸಹಿಯು ಮುಖ್ಯವಾಗಿರುತ್ತದೆ. ನೀಡಲಾದ ಚೆಕ್ಕು ಮತ್ತು ಸಹಿಯನ್ನು ಆರೋಪಿತನು ಒಪ್ಪಿಕೊಂಡು, ನೋಟಿಸಿಗೆ ಉತ್ತರ ನೀಡದಿದ್ದಾಗ, ತದನಂತರ ಆರೋಪಿತನು ಎತ್ತಲಾದ ಯಾವುದೇ ನಿಲುವನ್ನು ಕಾನೂನಿನಲ್ಲಿ ಅಂಗೀಕರಿಸಲಾಗುವುದಿಲ್ಲ. ಭದ್ರತೆಗಾಗಿ ನೀಡಿರುವ ಚೆಕ್ಕು ಸಹ ಚೆಕ್ಕು ಅಮಾನ್ಯ ಕಾಯ್ದೆಯಡಿಯಲ್ಲಿ ಅಪರಾಧ ಎನಿಸಿಕೊಳ್ಳುತ್ತದೆ. ಚೆಕ್ಕು ಅಮಾನ್ಯ ಪ್ರಕರಣವು ಚಾಲ್ತಿಯಲ್ಲಿದ್ದಾಗ ದೂರುದಾರನು ಮೃತನಾದರೆ ಆತನ ವಾರಸುದಾರರು ಪ್ರಕರಣವನ್ನು ಮುಂದುವರೆಸಿಕೊಂಡು ಹೋಗಲು ಕಾನೂನಿನಡಿಯಲ್ಲಿ ಅವಕಾಶವಿರುತ್ತದೆ. ಆದರೆ ಪ್ರಕರಣದ ಆರೋಪಿ ತೀರಿಕೊಂಡರೆ ಆತನ ವಾರಸುದಾರರ ವಿರುದ್ಧ ಪ್ರಕರಣವನ್ನು ಮುಂದುವರೆಸಿಕೊಂಡು ಹೋಗಲು ಕಾನೂನಿನಡಿಯಲ್ಲಿ ಅವಕಾಶವಿರುವುದಿಲ್ಲ.





















