ಮುಂಬೈ : ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ(ಎಸ್‌ಸಿಪಿ)ದ ಮುಖ್ಯಸ್ಥ ಶರದ್ ಪವಾರ್ ಮಂಗಳವಾರ ಮಹತ್ವದ ಘೋಷಣೆ ಮಾಡಿದ್ದು, ತಮ್ಮ ರಾಜ್ಯಸಭಾ ಸದಸ್ಯತ್ವದ ಅವಧಿ ಮುಕ್ತಾಯಗೊಳ್ಳುತ್ತಿರುವ ಕಾರಣ ಮುಂದೆ ಯಾವುದೇ ಚುನಾವಣೆಯಲ್ಲೂ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.
ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥರು ಇಂದು ಬಾರಾಮತಿಯಲ್ಲಿ ತಮ್ಮ ಮೊಮ್ಮಗ ಯುಗೇಂದ್ರ ಪವಾರ್ ಅವರ ಪರ ಚುನಾವಣಾ ಪ್ರಚಾರ ನಡೆಸಿದರು. ಮೂರು ಬಾರಿ ಮುಖ್ಯಮಂತ್ರಿಯಾಗಿರುವ ಶರದ್ ಪವಾರ್ ಅವರು, ಹೊಸ ಪೀಳಿಗೆಗೆ ಜವಾಬ್ದಾರಿಯನ್ನು ಹಸ್ತಾಂತರಿಸುವ ಅಗತ್ಯವನ್ನು ಒತ್ತಿ ಹೇಳಿದರು ಮತ್ತು ಜನರ ಸೇವೆಯನ್ನು ಮುಂದುವರಿಸಲು ಯಾವುದೇ ಚುನಾವಣೆಯಲ್ಲಿ ಗೆಲ್ಲುವ ಅಗತ್ಯವಿಲ್ಲ ಎಂದರು.
ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶರದ್ ಪವಾರ್ ಅವರು, ರಾಜ್ಯಸಭಾ ಸದಸ್ಯನಾಗಿ ಮುಂದುವರೆಯುವ ಆಸಕ್ತಿ ಇಲ್ಲ ಎಂದು ಒತ್ತಿ ಹೇಳಿದರು. “ನನ್ನ ಅವಧಿ ಇನ್ನೂ ಒಂದೂವರೆ ವರ್ಷ ಉಳಿದಿದೆ. ಮುಂದೆ ನಾನು ಲೋಕಸಭೆ ಚುನಾವಣೆ ಸೇರಿದಂತೆ ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನಾನು ಇಲ್ಲಿಯವರೆಗೆ 14 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದೇನೆ ಮತ್ತು ಯಾವುದೇ ಚುನಾವಣೆಯಲ್ಲೂ ನೀವು ನನ್ನನ್ನು ಮನೆಗೆ ಹೋಗಲು ಬಿಡಲಿಲ್ಲ. ಪ್ರತಿ ಬಾರಿ ನೀವು ನನ್ನನ್ನು ಗೆಲ್ಲಿಸಿದ್ದೀರಿ. ಆದರೆ ಈಗ ಹೊಸ ಪೀಳಿಗೆಗೆ ಅವಕಾಶ ನೀಡಬೇಕು. ನನಗೆ ಅಧಿಕಾರ ಬೇಡ. ಆದರೆ ನಾನು ಜನರ ಸೇವೆ ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.















































































