ಕಾರ್ಕಳ : ಉಡುಪಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಡುಪಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಾರ್ಕಳ ಹಾಗೂ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ 2024ನೇ ಸಾಲಿನ ಕಾರ್ಕಳ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕ- ಬಾಲಕಿಯರ ತ್ರೋಬಾಲ್ ಪಂದ್ಯಾಟ ಕಾರ್ಕಳ ಜ್ಞಾನಸುಧಾ ಆಂಗ್ಲ ಪ್ರೌಢಶಾಲೆಯಲ್ಲಿ ಸೆ. 11ರಂದು ನಡೆಯಿತು.
ಕ್ರೈಸ್ಟಕಿಂಗ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀನಾರಾಯಣ್ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಆರೋಗ್ಯವಾದ ದೇಹಕ್ಕೆ ಗಾಳಿ, ಆಹಾರ, ನೀರಿನಂತೆ ಕ್ರೀಡೆಯೂ ಕೂಡ ಮುಖ್ಯ ಪಾತ್ರವಹಿಸುತ್ತದೆ. ಆದ್ದರಿಂದ ಕ್ರೀಡೆಯು ಜೀವನದ ದಾರಿ ದೀಪವಾಗಬೇಕು ಎಂದು ನುಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಬಿ.ಎ. ಮಾತನಾಡಿ, ನೋಡಿ ತಿಳಿಯುವುದಕ್ಕಿಂತ ಮಾಡಿ ಕಲಿಯುವ ಶಿಕ್ಷಣ ಕ್ರೀಡೆ. ಕ್ರೀಡೆಯಿಂದ ದೈಹಿಕ ಸದೃಢತೆಯೊಂದಿಗೆ ಮಾನಸಿಕ ನೆಮ್ಮದಿ ದೊರಕುತ್ತದೆ ಎಂದು ಹೇಳಿದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿ ರವಿಚಂದ್ರ ಕಾರಂತ ಮಾತನಾಡಿ, ಕ್ರೀಡೆಯಲ್ಲಿ ನೀತಿ ನಿಯಮ ಪಾಲಿಸುವುದು ಮುಖ್ಯ ಎಂದರು.
ರಾಜ್ಯ ದೈಹಿಕ ಪ್ರಾಸ್ತವಿಕ ಶಿಕ್ಷಣ ಸಂಘದ ಉಪಾಧ್ಯಕ್ಷ ರಾಜಾರಾಮ್ ಶೆಟ್ಟಿ, ತಾಲೂಕು ಪ್ರೌಢಶಾಲಾ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್, ಕಾರ್ಕಳ ಜ್ಞಾನಸುಧಾದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದಿನೇಶ್ ಎಂ. ಕೊಡವೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲೆ ವಾಣಿ ಕೆ., ಸಾರ್ವಜನಿಕ ಸಂಪರ್ಕಾಧಿಕಾರಿ ಜ್ಯೋತಿ ಪದ್ಮನಾಭ ಭಂಡಿ, ಡೀನ್ ಸ್ಟುಡೆಂಟ್ ಆಫೇರ್ ಶಕುಂತಲಾ ಸುವರ್ಣ, ಅಕಾಡೆಮಿಕ್ ಅಡೈಸರ್ ಶಾರದಾ ಅಂಬರೀಶ್, ಡೀನ್ ಅಕಾಡೆಮಿಕ್ಸ್ ಡಾ. ಮಿಥುನ್ ಯು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ತಾಲೂಕು ಪ್ರೌಢಶಾಲಾ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಅಂಕಣ ಉದ್ಘಾಟಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿ ದರ್ಶಿನಿ ಕಾರ್ಯಕ್ರಮ ನಿರೂಪಿಸಿ, ದೈಹಿಕ ಶಿಕ್ಷಣ ಶಿಕ್ಷಕಿ ರೇಷ್ಮಾ ಸಲಿಸ್ ವಂದಿಸಿದರು.































































