ಹಿಂದೂಗಳು-ಜೈನರು ದ್ವೇಷ ಭಾವನೆಯೊಂದಿಗೆ ಬದುಕಬೇಕು ಎಂಬ ದುರುದ್ದೇಶ
ಕಾರ್ಕಳ : ಗಣೇಶೋತ್ಸವದ ಸಾರ್ವಜನಿಕ ವೇದಿಕೆಯಲ್ಲಿ ನಿನ್ನೆ ಮಹೇಶ್ ಶೆಟ್ಟಿ ತಿಮರೋಡಿಯವರು ಜೈನ ಸಮುದಾಯದ ಕುರಿತು ನೀಡಿರುವ ಆಕ್ಷೇಪಾರ್ಹ ಹೇಳಿಕೆಯನ್ನು ಸನ್ಮಿತ್ರ ಜೈನ ಅಸೋಸಿಯೇಶನ್ ಕಾರ್ಕಳ ತೀವ್ರವಾಗಿ ಖಂಡಿಸಿದೆ.
ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಅವರೊಂದಿಗಿರುವ ಹೋರಾಟಗಾರರು ಎಂದು ಕರೆಸಿಕೊಳ್ಳುವವರು ಸೌಜನ್ಯ ಪರ ಹೋರಾಟದ ಹೆಸರಿನಲ್ಲಿ ಸುಳ್ಳು ಆಪಾದನೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳ ವಿರುದ್ಧ ಮಾಡಿ ನ್ಯಾಯಾಲಯದಲ್ಲಿ ಹಿನ್ನಡೆ ಅನುಭವಿಸಿ ಆಯಿತು. ನಂತರ ಇಡೀ ದೇಶಕ್ಕೆ ಮಾದರಿಯಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೆಸರನ್ನು ಹಾಳು ಮಾಡುವ ಪ್ರಯತ್ನ ನಡೆಸಿದರು. ನಿನ್ನೆ ಮಹೇಶ್ ಶೆಟ್ಟಿ ತಿಮರೋಡಿಯವರು ಗಣೇಶೋತ್ಸವದ ಸಾರ್ವಜನಿಕ ವೇದಿಕೆಯಲ್ಲಿ ಜೈನರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಜೈನ ಸಮಾಜಕ್ಕೆ ತೀವ್ರ ನೋವುಂಟು ಮಾಡಿದೆ.

ತುಳುನಾಡಿನ ಅನೇಕ ದೇವಸ್ಥಾನ ಹಾಗೂ ದೈವಸ್ಥಾನಗಳ ಜೀರ್ಣೋದ್ಧಾರ, ಬ್ರಹ್ಮಕಲಶ ಮುಂತಾದ ಕಾರ್ಯಕ್ರಮಗಳನ್ನು ಹಿಂದೂಗಳು ಹಾಗೂ ಜೈನರು ಒಂದಾಗಿ ಸೇರಿ ಮಾಡಿದ ಸಾವಿರಾರು ಉದಾಹರಣೆಗಳು ಇವೆ. ಇಡೀ ದೇಶದಲ್ಲಿ ಜೈನ ಧರ್ಮ ಶಾಂತಿ ಮತ್ತು ಸಹಬಾಳ್ವೆಗೆ ಹೆಸರಾಗಿದೆ. ಅಹಿಂಸಾವಾದಿ ಜೈನರು ಶಾಂತಿಪ್ರಿಯ ಹಿಂದೂಗಳೊಂದಿಗೆ ಅನಾದಿ ಕಾಲದಿಂದಲೂ ಸಹಬಾಳ್ವೆ ನಡೆಸಿಕೊಂಡು ಬಂದಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಮಹೇಶ್ ಶೆಟ್ಟಿ ತಿಮರೋಡಿಯವರಂತಹ ಧರ್ಮಸ್ಥಳ ದೇವಾಲಯಕ್ಕೆ ಜೆಸಿಬಿ ನುಗ್ಗಿಸುತ್ತೇವೆ ಎಂದು ಹೇಳಿರುವ ವ್ಯಕ್ತಿಗಳು ನೀಡುವ ಇಂತಹ ಹೇಳಿಕೆಗಳು ಸಮಾಜದಲ್ಲಿ ಹಿಂದೂಗಳು ಹಾಗೂ ಜೈನರು ದ್ವೇಷ ಭಾವನೆಯೊಂದಿಗೆ ಬದುಕಬೇಕು ಎಂಬ ದುರುದ್ದೇಶ ಹೊಂದಿವೆ. ಆದರೆ ಹಿಂದೂ ಹಾಗೂ ಜೈನರ ಐಕ್ಯತೆವನ್ನು ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ.
ಅಪ್ರಬುದ್ಧ ಹೇಳಿಕೆಗಾಗಿ ಮಹೇಶ್ ಶೆಟ್ಟಿ ತಿಮರೋಡಿಯವರು ಕ್ಷಮೆ ಯಾಚಿಸಬೇಕು ಹಾಗೂ ಇನ್ನು ಮುಂದೆ ಇಂತಹ ಭಾವನಾತ್ಮಕ ವಿಚಾರಗಳನ್ನು ಮಾತನಾಡುವಾಗ ಎಚ್ಚರಿಕೆ ವಹಿಸಬೇಕು. ಮಹೇಶ್ ಶೆಟ್ಟಿ ತಿಮರೋಡಿ ನಿನ್ನೆ ಹೇಳಿದ ಮಾತುಗಳು ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತಂದಿವೆ ಎಂದು ಸನ್ಮಿತ್ರ ಜೈನ ಅಸೋಸಿಯೇಶನ್ ಕಾರ್ಕಳದ ಅಧ್ಯಕ್ಷ ಶೀತಲ್ ಜೈನ, ಕಾರ್ಯದರ್ಶಿ ಭರತ್ ಕುಮಾರ್ ಜೈನ್, ಪ್ರಕಾಶ್ ಬಲಿಪ, ಸೂರಜ್ ಜೈನ್, ಚಿರಂಜೀವಿ ಜೈನ್ ಪ್ರಕಟಣೆಯಲ್ಲಿ ಹೇಳಿದ್ದಾರೆ.





































